Heart Attack: ಹೃದಯಾಘಾತಕ್ಕೆ ಮತ್ತೊಂದು ಯುವಜೀವ ಬಲಿ, ಕ್ಲಾಸಿನಲ್ಲೇ ವಿದ್ಯಾರ್ಥಿ ಸಾವು
Heart Attack: ರಾಜ್ಯದಲ್ಲಿ ಹಠಾತ್ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಬುಧವಾರ ಹಾವೇರಿಯಲ್ಲಿ ಇಬ್ಬರು, ಹಾಸನ, ಹುಬ್ಬಳ್ಳಿ, ಚಾಮರಾಜನಗರ, ಬೆಂಗಳೂರು ಹೊರವಲಯದ ಹೊಸಕೋಟೆಯಲ್ಲಿ ತಲಾ ಒಬ್ಬರು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ.


ಬೆಂಗಳೂರು : ರಾಜ್ಯದಲ್ಲಿ ಯುವಕರಲ್ಲಿ ಹೃದಯಾಘಾತದ (Heart attack) ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ತರಗತಿಯಲ್ಲಿ ಕುಳಿತಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬ (Student) ಕುಸಿದುಬಿದ್ದು (Heart Failure) ಹೃದಯಸ್ತಂಭನದಿಂದ ಮೃತಪಟ್ಟಿದ್ದಾನೆ. ಹುಬ್ಬಳ್ಳಿಯಲ್ಲಿ (Hubballi news) ಜೆಜಿ ಕಾಮರ್ಸ್ ಕಾಲೇಜಿನಲ್ಲಿ ರಾಹುಲ್ (17) ಎಂಬ ವಿದ್ಯಾರ್ಥಿ ಬುಧವಾರ ತರಗತಿಯಲ್ಲಿ ಕುಳಿತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದು, ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ.
ರಾಜ್ಯದಲ್ಲಿ ಹೀಗೆ ಹಠಾತ್ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಬುಧವಾರ ಹಾವೇರಿಯಲ್ಲಿ ಇಬ್ಬರು, ಹಾಸನ, ಹುಬ್ಬಳ್ಳಿ, ಚಾಮರಾಜನಗರ, ಬೆಂಗಳೂರು ಹೊರವಲಯದ ಹೊಸಕೋಟೆಯಲ್ಲಿ ತಲಾ ಒಬ್ಬರು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಹಾಸನದ ಮುಟ್ಟನಹಳ್ಳಿಯಲ್ಲಿ ಮನೆ ಮುಂದೆ ಕುಳಿತಿದ್ದ ರೈತ ಸಣ್ಣಪ್ಪ ಕುಳಿತಲ್ಲೇ ಹೃದಯಾಘಾತದಿಂದ ಮೃಟಪಟ್ಟಿದ್ದಾರೆ. ಹಾವೇರಿಯ ಹಾನಗಲ್‌ನ ಅಕ್ಕಿಆಲೂರಿನ ನಿಂಗಪ್ಪ ಆಸ್ಪತ್ರೆಗೆ ಹೋಗುವಾಗ ಮೃತಪಟ್ಟಿದ್ದಾರೆ. ಹಾವೇರಿಯ ಗೀತಾ ಹೊಸಕೋಟೆ ಕೋನಪ್ಪ ಹೃದಯಾಘಾತಕ್ಕೊಳಗಾಗಿ ತಪಾಸಣೆಗೆ ಆಸ್ಪತ್ರೆಗೆ ಬಂದಾಗ ಕುಸಿದು ಸಾವನ್ನಪ್ಪಿದ್ದಾರೆ.
ಹೆಚ್ಚುತ್ತಿರುವ ಹೃದಯಾಘಾತಗಳಿಗೂ ಕೋವಿಡ್ ಲಸಿಕೆಗೂ ಸಂಬಂಧವಿಲ್ಲ: ಕೇಂದ್ರ ಸ್ಪಷ್ಟನೆ
ನವದೆಹಲಿ: ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಸಾವುಗಳಿಗೆ ಕೋವಿಡ್ ಲಸಿಕೆ ಕಾರಣ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಿಕರಣ ನೀಡಿದ್ದು, ಕೊರೊನಾ ಲಸಿಕೆ ಮತ್ತು ಹಠಾತ್ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ದೃಢೀಕರಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ನಡೆಸಿದ ಅಧ್ಯಯನಗಳು COVID-19 ಲಸಿಕೆ ಮತ್ತು ದೇಶದಲ್ಲಿನ ಹಠಾತ್ ಸಾವುಗಳ ವರದಿಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂದು ಹೇಳಿದೆ ಎಂದಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪತ್ರಿಕಾ ಪ್ರಕಟಣೆಯ ಪ್ರಕಾರ, ಹಠಾತ್ ವಿವರಿಸಲಾಗದ ಸಾವುಗಳ ವಿಷಯವನ್ನು ದೇಶದ ಹಲವಾರು ಸಂಸ್ಥೆಗಳ ಮೂಲಕ ತನಿಖೆ ಮಾಡಲಾಗಿದೆ. COVID-19 ಲಸಿಕೆ ಮತ್ತು ದೇಶದಲ್ಲಿನ ಹಠಾತ್ ಸಾವುಗಳ ವರದಿಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂದು ಈ ಅಧ್ಯಯನಗಳು ನಿರ್ಣಾಯಕವಾಗಿ ಸ್ಥಾಪಿಸಿವೆ ಎಂದಿದೆ.
ಇದನ್ನೂ ಓದಿ: ಹುಟ್ಟಿನಿಂದಲೇ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 9 ವರ್ಷದ ಬಾಲಕನಿಗೆ ಯಶಸ್ವಿ "ಹೃದಯ ಕಸಿ"