Wednesday, 6th November 2024

IND vs AUS: ಆಸ್ಟ್ರೇಲಿಯಾ ಟೆಸ್ಟ್‌ ಸರಣಿ ಗೆಲ್ಲಲು ಭಾರತಕ್ಕೆ ಉಪಯುಕ್ತ ಸಲಹೆ ನೀಡಿದ ಮೈಕಲ್‌ ವಾನ್‌!

ಹೊಸದಿಲ್ಲಿ: ನ್ಯೂಜಿಲೆಂಡ್‌ ವಿರುದ್ದ ಟೆಸ್ಟ್‌ ಸರಣಿ ವೈಟ್‌ವಾಷ್‌ ಆಘಾತ ಅನುಭವಿಸಿರುವ ಭಾರತ ಕ್ರಿಕೆಟ್‌ ತಂಡಕ್ಕೆ ಮುಂಬರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿ ನಿಮಿತ್ತ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ ಉಪಯುಕ್ತ ಸಲಹೆಯನ್ನು ನೀಡಿದ್ದಾರೆ. ಕಾಂಗರೂ ನಾಡಿನಲ್ಲಿ ಭಾರತ ತಂಡ ಟೆಸ್ಟ್‌ ಸರಣಿ ಗೆಲ್ಲಬೇಕೆಂದರೆ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರು ದೊಡ್ಡ ಮೊತ್ತದ ರನ್‌ಗಳನ್ನು ಕಲೆ ಹಾಕಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ೨-೦ ಅಂತರದಲ್ಲಿ ಟೆಸ್ಟ್‌ ಸರಣಿ ಗೆದ್ದಿದ್ದ ಭಾರತ ತಂಡ, ನಂತರ ಟಾಮ್‌ ಲೇಥಮ್‌ ನಾಯಕತ್ವದ ನ್ಯೂಜಿಲೆಂಡ್‌ ಎದುರು ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ೦-೩ ಅಂತರದಲ್ಲಿ ವೈಟ್‌ ವಾಷ್‌ ಆಘಾತ ಅನುಭವಿಸಿತ್ತು. ಈ ಸರಣಿಯಲ್ಲಿ ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಅದರಲ್ಲಿಯೂ ಕಿವೀಸ್‌ ಸ್ಪಿನ್‌ ಪಡೆಯ ಎದುರು ಟೀಮ್‌ ಇಂಡಿಯಾ ಬ್ಯಾಟರ್‌ಗಳು ಮಕಾಡೆ ಮಲಗಿದ್ದರು. ಈ ಕಾರಣದಿಂದ ಭಾರತ ತಂಡ ಟೆಸ್ಟ್‌ ಸರಣಿಯನ್ನು ಸೋತಿತ್ತು.

ಕಿವೀಸ್‌ ವಿರುದ್ಧ ಟೆಸ್ಟ್‌ ಸರೆಣಿಯ ಸೋಲಿನಿಂದ ಭಾರತ ತಂಡಕ್ಕೆ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯಲು ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿ ಅತ್ಯಂತ ನಿರ್ಣಾಯಕವಾಗಿದೆ. ಈ ಸರಣಿಯಲ್ಲಿ ಭಾರತ ತಂಡ ಕನಿಷ್ಠ ೪ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಇಲ್ಲವಾದಲ್ಲಿ ರೋಹಿತ್‌ ಶರ್ಮಾ ಪಡೆಯ ಫೈನಲ್‌ ಅರ್ಹತೆಯು ಇತರೆ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ.

ರೋಹಿತ್‌-ಕೊಹ್ಲಿ ದೊಡ್ಡ ಮೊತ್ತ ಕಲೆ ಹಾಕಬೇಕು: ಮೈಕಲ್‌ ವಾನ್‌

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಟೆಸ್ಟ್‌ ಸರಣಿಯ ನಿಮಿತ್ತ ಫಾಕ್ಸ್‌ ಕ್ರಿಕೆಟ್‌ ಜೊತೆ ಮಾತನಾಡಿದ ಮೈಕಲ್‌ ವಾನ್‌ ಅವರು, “ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಟೆಸ್ಟ್‌ ಸೆರಣಿ ಗೆಲ್ಲಬೇಕೆಂದರೆ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ದೊಡ್ಡ ಮೊತ್ತದ ರನ್‌ಗಳನ್ನು ಕಲೆ ಹಾಕಬೇಕಾಗಿದೆ ಹಾಗೂ ಇವರು ಈ ಕೆಲಸವನ್ನು ಕಾಂಗರೂ ನಾಡಿನಲ್ಲಿ ಪರಿಪೂರ್ಣವಾಗಿ ನಿರ್ವಹಿಸಲಿದ್ದಾರೆಂಬ ಬಗ್ಗೆ ಭರವಸೆ ನನಗಿದೆ. ಒಂದು ವೇಳೆ ಇವರಿಬ್ಬರೂ ವೈಫಲ್ಯ ಅನುಭವಿಸಿದರೆ ಭಾರತ ತಂಡ ಸೋಲುವುದು ಖಚಿತ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಆಸ್ಟ್ರೇಲಿಯಾದ ಫಾಸ್ಟ್‌ ಬೌಲಿಂಗ್‌ ಪಿಚ್‌ಗಳಲ್ಲಿ ಆಸೀಸ್‌ ವೇಗಿಗಳು ಅತ್ಯಂತ ಬಲಿಷ್ಠವಾಗಿದ್ದಾರೆ ಹಾಗೂ ಅವರು ಅತ್ಯುತ್ತಮ ರಣ ತಂತ್ರದೊಂದಿಗೆ ಕಣಕ್ಕೆ ಇಳಿಯಲಿದ್ದಾರೆ. ಹಾಗಾಗಿ ಆಸ್ಟ್ರೇಲಿಯಾ ಮಾರಕ ವೇಗದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸುವುದು ಭಾರತ ತಂಡಕ್ಕೆ ಅಷ್ಟೊಂದು ಸುಲಭವಲ್ಲ. ಈ ಹಿನ್ನೆಲೆ ಪ್ರವಾಸಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಕೌಶಲ ಹಾಗೂ ಮಾನಸಿಕವಾಗಿ ಉತ್ತಮ ತಯಾರಿಯೊಂದಿಗೆ ಬರಬೇಕಾಗುತ್ತದೆ,” ಎಂದು ಇಂಗ್ಲೆಂಡ್‌ ಮಾಜಿ ನಾಯಕ ಸಲಹೆ ನೀಡಿದ್ದಾರೆ.

ಫಾರ್ಮ್‌ ಕಳೆದುಕೊಂಡಿರುವ ವಿರಾಟ್‌ ಕೊಹ್ಲಿ

“ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ, ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿತ್ತು. ಅದರಲ್ಲಿಯೂ ಬ್ರಿಸ್ಬೇನ್‌ನ ಗಬ್ಬಾದಲ್ಲಿ ೩೨ ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿ ಆಸ್ಟ್ರೇಲಿಯಾ ಟೆಸ್ಟ್‌ ಪಂದ್ಯವನ್ನು ಸೋತಿತ್ತು. ಆದರೆ, ಈ ಬಾರಿ ವಿರಾಟ್‌ ಕೊಹ್ಲಿ ಫಾರ್ಮ್‌ ಬಗ್ಗೆ ಹೆಚ್ಚಿನ ಕಾಳಜಿ ಇದೆ. ಕಿವೀಸ್‌ ಟೆಸ್ಟ್‌ ಪಂದ್ಯದಲ್ಲಿ ಮಿಚೆಲ್‌ ಸ್ಯಾಂಟ್ನರ್‌ ಫುಲ್‌ ಟಾಸ್‌ ಎಸೆತದಲ್ಲಿ ಕೊಹ್ಲಿ ಕ್ಲೀನ್‌ ಬೌಲ್ಡ್‌ ಆಗಿದ್ದರು. ಕೊಹ್ಲಿ ಸದ್ಯ ಬ್ಯಾಟಿಂಗ್‌ ಫಾರ್ಮ್‌ಗೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ,” ಎಂದು ಮೈಕಲ್‌ ವಾನ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Virat Kohli Birthday: ವಿರಾಟ್‌ ಕೊಹ್ಲಿಗೆ ಜನ್ಮದಿನದ ಶುಭ ಹಾರೈಸಿದ ಪಾಕಿಸ್ತಾನ