Friday, 13th December 2024

IND vs AUS: ʻಬೌನ್ಸರ್‌ನಿಂದ ದಾಳಿ ನಡೆಸುತ್ತೇವೆʼ-ಭಾರತಕ್ಕೆ ಪ್ಯಾಟ್‌ ಕಮಿನ್ಸ್‌ ವಾರ್ನಿಂಗ್‌!

IND vs AUS: 'Pat Cummins warns India of another bouncer barrage', reveals Gabba pitch prediction

ಬ್ರಿಸ್ಬೇನ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ (IND vs AUS) ಬ್ರಿಸ್ಬೇನ್‌ನ ದಿ ಗಬ್ಬಾ ಸ್ಟೇಡಿಯಂನಲ್ಲಿ ಶನಿವಾರ ಆರಂಭವಾಗಲಿದೆ. ಈ ಪಂದ್ಯದ ನಿಮಿತ್ತ ಮಾತನಾಡಿದ ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌, ಅಡಿಲೇಡ್‌ ಟೆಸ್ಟ್‌ ಪಂದ್ಯದ ರೀತಿ ಮೂರನೇ ಟೆಸ್ಟ್‌ ಪಂದ್ಯದಲ್ಲಿಯೂ ಭಾರತ ತಂಡದ ಬ್ಯಾಟ್ಸ್‌ಮನ್‌ಗಳ ಮೇಲೆ ಬೌನ್ಸರ್‌ ದಾಳಿ ನಡೆಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.

ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 295 ರನ್‌ಗಳ ಗೆಲುವು ಪಡೆದ ಬಳಿಕ ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಆದರೆ, ಅಡಿಲೇಡ್‌ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಅವರು ಐದು ವಿಕೆಟ್‌ ಸಾಧನೆ ಮಾಡಿದ್ದರು ಹಾಗೂ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಬೌನ್ಸರ್‌ ಮೂಲಕ ಟಾರ್ಗೆಟ್‌ ಮಾಡಿದ್ದರು. ಇದರ ಪರಿಣಾಮ ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 175 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ಯಾಟ್‌ ಕಮಿನ್ಸ್‌ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮೂರನೇ ಟೆಸ್ಟ್‌ ಪಂದ್ಯದಲ್ಲಿಯೂ ಬೌನ್ಸರ್‌ಗಳ ಮೂಲಕ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಟಾರ್ಗೆಟ್‌ ಮಾಡುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮಿನ್ಸ್‌, “ಹೌದು, ಬೌನ್ಸರ್‌ ದಾಳಿ ನಡೆಸುತ್ತೇನೆ,” ಎಂದು ಹೇಳಿದ್ದಾರೆ.

IND vs AUS: ಮೂರನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ 2 ಬದಲಾವಣೆ ಸಾಧ್ಯತೆ!

“ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ ಬೌನ್ಸರ್‌ ನಮಗೆ ವರ್ಕ್‌ಔಟ್‌ ಆಗಿದೆ. ನಮ್ಮ ಪ್ಲ್ಯಾನ್‌ ‘ಎ’ ಅನ್ನು ಸಮರ್ಥವಾಗಿ ಎದುರಿಸಲು ಎದುರಾಳಿ ಬ್ಯಾಟ್ಸ್‌ಮನ್‌ಗಳು ಸಿದ್ದರಾಗಿದ್ದರೆ ಅಥವಾ ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಿಲ್ಲವಾದರೆ, ನಮ್ಮ ಬಳಿ ಯಾವಾಗಲೂ ಪ್ಲ್ಯಾನ್‌ ಬಿ ಇದ್ದೇ ಇರುತ್ತದೆ,” ಎಂದು ಪ್ಯಾಟ್‌ ಕಮಿನ್ಸ್‌ ತಿಳಿಸಿದ್ದಾರೆ.

ದಿ ಗಬ್ಬಾ ಪಿಚ್‌ ಬಗ್ಗೆ ಮಾತನಾಡಿದ ಪ್ಯಾಟ್‌ ಕಮಿನ್ಸ್‌, “ನಾನು ನಿನ್ನೆ ಬ್ರಿಸ್ಬೇನ್‌ ಪಿಚ್‌ ಅನ್ನು ನೋಡಿದ್ದೇನೆ ಹಾಗೂ ಕಳೆದ ಹಲವು ವರ್ಷಗಳಂತೆ ಇಲ್ಲಿನ ವಿಕೆಟ್‌ ತುಂಬಾ ಚೆನ್ನಾಗಿದೆ. ಕಳೆದ ಎರಡು ದಿನಗಳಿಂದ ಬ್ರಿಸ್ಬೇನ್‌ನಲ್ಲಿ ಬಿಸಿಲು ಇದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ಸಂದರ್ಭದಲ್ಲಿದ್ದ ಹಸಿರು ವಿಕೆಟ್‌ ಈಗ ಅಷ್ಟೊಂದು ಇಲ್ಲ,” ಎಂದು ಅವರು ಹೇಳಿದ್ದಾರೆ.

ದಿ ಗಬ್ಬಾ ಸ್ಟೇಡಿಯಂನಲ್ಲಿ ಕಳೆದ 33 ವರ್ಷಗಳಿಂದ ಆಸ್ಟ್ರೇಲಿಯಾ ತಂಡವನ್ನು ಭಾರತ ತಂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸೋಲಿಸಿಲ್ಲ. ಆದರೆ, 2020-21ರ ಸಾಲಿನಲ್ಲಿ ಭಾರತ ತಂಡ, ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿತ್ತು. ಅಲ್ಲದೆ ವೆಸ್ಟ್‌ ಇಂಡೀಸ್‌ ವಿರುದ್ಧದ ಆಸ್ಟ್ರೇಲಿಯಾ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿಯೂ ಸೋತಿತ್ತು.

ಈ ಸುದ್ದಿಯನ್ನು ಓದಿ: IND vs AUS: ಮೂರನೇ ಟೆಸ್ಟ್‌ ಗೆಲ್ಲಲು ಭಾರತಕ್ಕೆ ಅಗತ್ಯ ಸಲಹೆ ನೀಡಿದ ಮ್ಯಾಥ್ಯೂ ಹೇಡನ್‌!