Saturday, 23rd November 2024

IPL 2025: ಡೆಲ್ಲಿ ತೊರೆದು ಗುರುವಿನ ತಂಡ ಸೇರಲು ಮುಂದಾದ ಶಿಷ್ಯ ಪಂತ್‌

ಚೆನ್ನೈ: ಮುಂಬರುವ ಐಪಿಎಲ್‌(IPL 2025) ಮೆಗಾ ಹರಾಜಿಗೂ ಮುನ್ನವೇ ಕೆಲ ತಂಡದ ಸ್ಟಾರ್‌ ಆಟಗಾರರು ತಮ್ಮ ಮೂಲ ತಂಡ ತೊರೆದು ಬೇರೆ ತಂಡ ಸೇರುವ ಯೋಜನೆಯಲ್ಲಿದ್ದಾರೆ. ಈ ಸಾಲಿಗೆ ರಿಷಭ್‌ ಪಂತ್‌ ಕೂಡ ಸೇರಿದಂತಿದೆ. ರಿಷಭ್​ ಪಂತ್​ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ರಿಟೇನ್​ ಮಾಡಿಕೊಂಡರೂ ನಾಯಕತ್ವ ನೀಡದಿರಲು ನಿರ್ಧರಿಸಿದೆ. ಇದರಿಂದಾಗಿ ಪಂತ್​ ಡೆಲ್ಲಿ ತಂಡದಿಂದ ಹೊರನಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಪಂತ್​ ಸಾಮಾಜಿಕ ಜಾಲತಾಣದಲ್ಲಿ ಡೆಲ್ಲಿ ತಂಡವನ್ನು ಅನ್​ಫಾಲೋ ಮಾಡಿದ್ದರು. ಅಲ್ಲದೆ ಹರಾಜಿನಲ್ಲಿ ಪಾಲ್ಗೊಂಡರೆ ನನಗೆ ಎಷ್ಟು ಮೊತ್ತ ಸಿಗಬಹುದು? ಎಂದು ಟ್ವೀಟ್‌ ಮಾಡಿದ್ದರು. ಹೀಗಾಗಿ ಪಂತ್‌ ಡೆಲ್ಲಿ ತೊರೆಯುವುದು ಖಚಿತ ಎನ್ನುವಂತಿದೆ. ಪಂತ್​ಗೆ ಪ್ರಮುಖವಾಗಿ ಪಂಜಾಬ್​ ಕಿಂಗ್ಸ್​, ಆರ್​ಸಿಬಿ ತಂಡಗಳಿಂದ ಆಫರ್​ ಹೋಗಿದೆ ಎನ್ನಲಾಗುತ್ತಿದೆ. ಆದರೆ ಪಂತ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಹೌದು, ನೆಟ್ಟಿಗರೊಬ್ಬರು ಪಂತ್‌ ಅವರನ್ನು ಚೆನ್ನೈ ತಂಡ ಹರಾಜಿನಲ್ಲಿ ಪಂತ್‌ಗೆ 20 ರಿಂದ 25 ಕೋಟಿ ರೂ. ವ್ಯಯಿಸಲು ಮುಂದಾಗಲಿದೆ ಎಂದು ತಿಳಿಸಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ ಮುಂದಿನ ಐಪಿಎಲ್​ ಆಡುವ ಬಗ್ಗೆ ಖಚಿತತೆ ಇಲ್ಲ. ಈ ಬಾರಿಯೇ ಧೋನಿ ನಿವೃತ್ತಿಯಾಗಬೇಕಿತ್ತು. ಆದರೆ ಅವರು ಇನ್ನೂ ನಿವೃತ್ತಿ ಪ್ರಕಟಿಸಿಲ್ಲ. ತಂಡದಲ್ಲಿ ಸೂಕ್ತ ವಿಕೆಟ್​ ಕೀಪರ್​ ಇಲ್ಲದ ಕಾರಣ ಧೋನಿ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್​ ನಡೆಸಿದ್ದರು. ಧೋನಿಗೆ ಆತ್ಮೀಯರಾಗಿರುವ ಪಂತ್‌ ಅವರನ್ನೇ ಚೆನ್ನೈಗೆ ಸೇರಿಸಲು ಧೋನಿ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ IPL 2025 Players Retention: ರಿಟೇನ್​ ಪಟ್ಟಿ ಸಲ್ಲಿಸಲು ಅಕ್ಟೋಬರ್​ 31 ಅಂತಿಮ ಗಡುವು

ಮಹೇಂದ್ರ ಸಿಂಗ್​ ಧೋನಿ ಮನೆಯ ಯಾವುದೇ ವಿಶೇಷ ಕಾರ್ಯಕ್ರಮದಲ್ಲೂ, ರಿಷಭ್​ ಪಂತ್​ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅಣ್ಣನ ಸ್ಥಾನದಲ್ಲಿ ನಿಂತು ಧೋನಿ ಅವರು ಪಂತ್​ಗೆ ಸಲಹೆ ನೀಡುತ್ತಾರೆ. ಪಂತ್​ ಕೂಡ ಧೋನಿ ಪರಿವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಧೋನಿಯೇ ಪಂತ್​ ಅವರನ್ನು ಸಿಎಸ್​ಕೆ ತಂಡಕ್ಕೆ ಆಹ್ವಾನಿಸಬಹುದು. ಪಂತ್​ ಚೆನ್ನೈ ಸೇರಿದರೆ ಕೀಪಿಂಗ್​ ನಡೆಸಬಹುದು. ಧೋನಿ ಇಂಪ್ಯಾಕ್ಟ್​ ಆಟಗಾರನಾಗಿ ಬ್ಯಾಟಿಂಗ್​ ಮಾತ್ರ ನಡೆಸುವ ಸಾಧ್ಯತೆ ಇದೆ. ಮಹೇಂದ್ರ ಸಿಂಗ್‌ ಧೋನಿ ಅವರು ಈ ಬಾರಿ ಮುಂದುವರಿಯಲು ಒಪ್ಪಿದರೆ ಅವರನ್ನು ಅನ್‌ ಕ್ಯಾಪ್ಡ್‌ ಆಟಗಾರ ಪಟ್ಟಿಯಲ್ಲಿ 4 ಕೋಟಿ ರೂ. ಗೆ ಸಿಎಸ್‌ಕೆ ಉಳಿಸಿಕೊಳ್ಳಲಿದೆ.