ಮುಂಬಯಿ: ಐಪಿಎಲ್ 18ನೇ ಆವೃತ್ತಿಯ(IPL 2025) ಆಟಗಾರರ ಮೆಗಾ ಹರಾಜು ಪ್ರಕ್ರಿಯೆ(IPL Auction) ನವೆಂಬರ್ 3 ಅಥವಾ 4ನೇ ವಾರದಲ್ಲಿ ವಿದೇಶಿ ನೆಲದಲ್ಲಿ ಆಯೋಜಿಸುವ ಯೋಜನೆಯನ್ನೂ ಬಿಸಿಸಿಐ(BCCI) ಹಾಕಿಕೊಂಡಿದೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಹರಾಜು ಪ್ರಕ್ರಿಯೆ ಸೌದಿಯಲ್ಲಿ 2 ದಿನಗಳ ನಡೆಯಲಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.
ಕಳೆದ ವರ್ಷ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ವಿದೇಶಿ ನೆಲದಲ್ಲಿ ಅಂದರೆ ದುಬೈನಲ್ಲಿ ನಡೆದಿತ್ತು. ಈ ಸಲವೂ ಮಧ್ಯಪ್ರಾಚ್ಯ ದೇಶದಲ್ಲೇ ಹರಾಜು ನಡೆಸಲು ಬಿಸಿಸಿಐ ಮುಂದಾಗಿದೆ. ಗಲ್ಫ್ ನಗರಗಳಾದ ದೋಹಾ, ಮಸ್ಕತ್, ಸೌದಿ ಅಥವಾ ಅಬುಧಾಬಿಯಲ್ಲಿ ನಡೆಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿತ್ತು. ಅಂತಿಮವಾಗಿ ಬಿಸಿಸಿಐ ಸೌದಿಯನ್ನು ಆಯ್ಕೆ ಮಾಡಿದೆ ಎಂದು ಕ್ರಿಕ್‌ಬಜ್ ವರದಿಯಾಗಿದೆ. ಸೌದಿ ಇತ್ತೀಚೆಗೆ ಕ್ರೀಡೆಯಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದೆ. ಇದೇ ಕಾರಣಕ್ಕೆ ಇಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಆಟಗಾರರ ರಿಟೇನ್ ನಿಯಮಾವಳಿಯನ್ನು ಬಿಸಿಸಿಐ ಕಳೆದ ವಾರ ಪ್ರಕಟಿಸಿತ್ತು. ಸದ್ಯ ಎಲ್ಲ ತಂಡಗಳು ಮೆಗಾ ಹರಾಜಿಗೆ ಸಿದ್ಧತೆ ಆರಂಭಿಸಿದೆ. ರಿಟೇನ್ ಪಟ್ಟಿ ಅಂತಿಮಗೊಳಿಸಲು ತಂಡಗಳಿಗೆ ಬಿಸಿಸಿಐ ನವೆಂಬರ್ 15ರವರೆಗೆ ಸಮಯ ನೀಡುವ ನಿರೀಕ್ಷೆ ಇದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಡಿಸೆಂಬರ್ 1ರಂದು ಐಸಿಸಿಯ ಹೊಸ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹೀಗಾಗಿ ಇದಕ್ಕೂ ಮುನ್ನ ನವೆಂಬರ್ನಲ್ಲೇ ಆಟಗಾರರ ಹರಾಜು ಪ್ರಕ್ರಿಯೆ ಮುಗಿಸುವುದು ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಯ ಯೋಜನೆಯಾಗಿದೆ.
ಇದನ್ನೂ ಓದಿ IPL 2025: ಆರ್ಟಿಎಂ ನಿಯಮ ಬದಲಾವಣೆಗೆ ಬಿಸಿಸಿಐಗೆ ಪತ್ರ ಬರೆದ ಫ್ರಾಂಚೈಸಿ ಮಾಲಕರು
ಪ್ರತಿ ತಂಡಗಳ ಬಜೆಟ್ ಮಿತಿ 120 ಕೋಟಿ ರೂ.ಗೆ ಏರಿಸಲಾಗಿದೆ. ಆದರೆ ಗರಿಷ್ಠ 5 ಆಟಗಾರರನ್ನು ರಿಟೇನ್ ಮಾಡಿದರೆ ಒಟ್ಟು 75 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಯಾಕೆಂದರೆ 5 ಆಟಗಾರರ ರಿಟೇನ್ಗೆ ಕ್ರಮವಾಗಿ 18, 14, 11, 18, 14 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು 3 ಆಟಗಾರರನ್ನಷ್ಟೇ ರಿಟೇನ್ ಮಾಡಿದರೆ, ಹರಾಜಿನಲ್ಲಿ 3 ಆರ್ಟಿಎಂ ಬಳಸಬಹುದಾಗಿದೆ. 4 ಮತ್ತು 5ನೇ ಆಟಗಾರರನ್ನು ಉಳಿಸಿಕೊಳ್ಳಬೇಕಾದರೆ ಮತ್ತೆ 18 ಮತ್ತು 14 ಕೋಟಿ ರೂ.ಗಳನ್ನು ನೀಡಬೇಕಾಗುತ್ತದೆ! ಹೀಗಾಗಿ ಫ್ರಾಂಚೈಸಿಗಳಿಗೆ ಹರಾಜಿನ ವೇಳೆ ಕಡಿಮೆ ಮೊತ್ತ ಉಳಿಯಲಿದೆ.
ಈ ಬಾರಿಯ ಐಪಿಎಲ್ ಆಡುವ ಆಟಗಾರರಿಗೆ ಹೆಚ್ಚುವರಿ ವೇತನ ಸಿಗಲಿದೆ. ತಾವು ಆಡುವ ಪ್ರತಿ ಪಂದ್ಯಕ್ಕೆ 7.5 ಲಕ್ಷ ಪಡೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ. ಆಟಗಾರರು ಹರಾಜಾಗುವ ಮೊತ್ತವನ್ನು ಹೊರತುಪಡಿಸಿ ಈ ಹೆಚ್ಚಿವರಿ ಹಣ ಸಿಗಲಿದೆ. ಒಬ್ಬ ಆಟಗಾರ ಆವೃತ್ತಿಯ ಎಲ್ಲ 14 ಲೀಗ್ ಪಂದ್ಯಗಳನ್ನು ಆಡಿದರೆ ಆತನಿಗೆ ಒಟ್ಟು 1.05 ಕೋಟಿ ಹೆಚ್ಚುವರಿ ವೇತನ ಸಿಗಲಿದೆ. ಕಡಿಮೆ ಮೊತ್ತಕ್ಕೆ ಹರಾಜಾಗಿ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರಿಗೆ ಈ ನಿಯಮದಿಂದ ಹೆಚ್ಚಿನ ಅನುಕೂಲ ಸಿಗಲಿದೆ.