Monday, 28th October 2024

Kannada Rajyotsava: ರಾಜ್ಯೋತ್ಸವದಂದು ಕನ್ನಡ ಬಾವುಟ ಹಾರಿಸುವುದು ಕಡ್ಡಾಯ! ವಿನಾಯಿತಿ ಇಲ್ಲ

kannada flag

ಬೆಂಗಳೂರು: ಈ ಬಾರಿ ರಾಜ್ಯ ಸರ್ಕಾರವು ಕನ್ನಡ ರಾಜ್ಯೋತ್ಸವಕ್ಕೆ (Kannada Rajyotsava 2024) ಹೊಸ ನಿಯಮವನ್ನು ಕಡ್ಡಾಯಗೊಳಿಸಿದೆ. ಎಲ್ಲ ಶಾಲಾ, ಕಾಲೇಜುಗಳು, ಕಾರ್ಖಾನೆಗಳು ಮತ್ತು ಐಟಿಬಿಟಿ ಕಂಪನಿಗಳಲ್ಲಿ ಕನ್ನಡ ಬಾವುಟವನ್ನು(Kannada flag) ಕಡ್ಡಾಯವಾಗಿ ಹಾರಿಸಲೇಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ಕನ್ನಡಿಗರ ಹಬ್ಬ ರಾಜ್ಯೋತ್ಸವಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಪ್ರತಿ ನವೆಂಬರ್‌ ಒಂದರಂದು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸುವ ಜೊತೆಗೆ ತಿಂಗಳಿಡೀ ಹಬ್ಬದ ರೀತಿಯಲ್ಲೇ ಸಂಭ್ರಮಿಸಲಾಗುತ್ತದೆ. ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಎಲ್ಲೆಡೆಯೂ ಆಚರಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಡಿಕೆಶಿ, ನವೆಂಬರ್ 1 ಎಂದರೆ ನಮ್ಮ ಕರ್ನಾಟಕಕ್ಕೆ ಬಹಳ ಹೆಮ್ಮೆಯ ದಿನ. ಹಾಗಾಗಿ ಎಲ್ಲ ಕಂಪನಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಕನ್ನಡದ ಧ್ವಜಾರೋಹಣ ಮಾಡಬೇಕು. ಈ ಬಗ್ಗೆ ಆದೇಶ ಕೂಡ ಹೊರಡಿಸಲಾಗುವುದು ಎಂದಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಶೇ 50ರಷ್ಟು ಮಂದಿ ಹೊರಗಿನವರೇ ಇದ್ದಾರೆ. ಅವರು ಕೂಡ ನಮ್ಮ ಕನ್ನಡವನ್ನು ಕಲಿತುಕೊಳ್ಳಬೇಕು. ಆ ದಿನ ಕನ್ನಡಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಆಯೋಜಿಸಬೇಕು. ನಮ್ಮ ರಾಷ್ಟ್ರಧ್ವಜದ ರೀತಿಯಲ್ಲೇ ಕನ್ನಡದ ಬಾವುಟಕ್ಕೂ ಗೌರವ ಕೊಡಬೇಕು. ಈ ಮೂಲಕ ಕನ್ನಡಕ್ಕೆ ಶ್ರದ್ಧೆ ಹಾಗೂ ಗೌರವವನ್ನು ತೋರಬೇಕು ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ರಾಜ್ಯಕ್ಕೆ ಜನ ಎಲ್ಲಿಂದಾದರೂ ಬಂದಿರಲಿ, ಈ ನವೆಂಬರ್ 1 ರಂದು ಕರ್ನಾಟಕದ ಹೆಮ್ಮೆಯ ಧ್ವಜವನ್ನು ಕಡ್ಡಾಯವಾಗಿ ಹಾರಿಸಲೇಬೇಕು. ನಮಗೆ ಕನ್ನಡ ದಿನಾಚರಣೆ ಮುಖ್ಯವಾದದ್ದು. ಆ ದಿನ ಎಲ್ಲಾ ಸಂಸ್ಥೆಗಳಲ್ಲಿ, ಖಾಸಗಿ ಕಂಪನಿಗಳು ಈ ನೆಲದ ಕನ್ನಡ ಧ್ವಜವನ್ನು ಹಾರಿಸುವುದು ಕಡ್ಡಾಯ ಎಂದಿದ್ದಾರೆ.

ಕನ್ನಡ ಸಂಘಟನೆಗಳಿಗೆ ಎಚ್ಚರಿಕೆ

ಕನ್ನಡ ರಾಜ್ಯೋತ್ಸವದ ಹೆಸರಿನಲ್ಲಿ ಯಾವ ಸಂಘಟನೆಗಳು ಕೂಡ ಯಾರ ಮೇಲೂ ಒತ್ತಡ ಹೇರಬಾರದು. ಆಚರಣೆ ಬಗ್ಗೆ ರಾಜ್ಯ ಸರ್ಕಾರವೇ ಆದೇಶ ನೀಡಲಿದೆ. ರಾಜ್ಯೋತ್ಸವ ಆಚರಣೆಗೆ ಯಾವ ಕನ್ನಡ ಸಂಘಟನೆಗಳು ಕೂಡ ಒತ್ತಡ ಹೇರಬಾರದು. ಸರ್ಕಾರವೇ ಆದೇಶಿಸುವಂತೆ ರಾಜ್ಯೋತ್ಸವ ಆಚರಣೆ ನಡೆಯಲಿದೆ. ನಿಯಮ ಪಾಲನೆ ಮಾಡದಿದ್ದರೆ ಅಂತಹ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸಲಿದೆ. ಈ ವಿಚಾರವಾಗಿ ಕನ್ನಡ ಸಂಘಟನೆಗಳು ಖಾಸಗಿ ಸಂಸ್ಥೆಗಳಿಗೆ ಧಮಕಿ ಹಾಕುವುದು, ಗಲಾಟೆ ಮಾಡುವುದು ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: DK Shivakumar: ಬೆಂಗಳೂರಿನ ಇನ್ನೂ 110 ಹಳ್ಳಿಗಳಿಗೆ ಕಾವೇರಿ ನೀರು; ಅ.16ರಂದು ಉದ್ಘಾಟನೆ