Banu Mushtaq: ಬಾನು ಮುಷ್ತಾಕ್‌ಗೆ ಜಿ ಕೆಟಗರಿ ನಿವೇಶನ ನೀಡಲು ಮುಂದಾದ ಕರ್ನಾಟಕ ಸರಕಾರ
ಸಚಿವ ಸಂಪುಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಲೇಖಕಿ ಬಾನು ಮುಷ್ತಾಕ್ (Banu Mushtaq) ಅವರು ಬಯಸಿದರೆ, ನಮ್ಮ ನಿಯಮಗಳ ಪ್ರಕಾರ ಬೆಂಗಳೂರಿನಲ್ಲಿ ‘ಜಿ’ ವರ್ಗದ ಸೈಟ್ ಅನ್ನು ಒದಗಿಸುತ್ತೇವೆ ಎಂದಿದ್ದಾರೆ.


ಬೆಂಗಳೂರು: ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ (International Booker Prize 2025) ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ (Banu Mushtaq) ಅವರಿಗೆ ಬೆಂಗಳೂರಿನಲ್ಲಿ ‘ಜಿ’ ಕೆಟಗರಿ ನಿವೇಶನ ( g category site) ನೀಡಿ ಗೌರವಿಸಲು ರಾಜ್ಯ ಸಚಿವ ಸಂಪುಟ (Karnataka Cabinet) ಗುರುವಾರ ನಿರ್ಧರಿಸಿದೆ. ದೀಪಾ ಭಾಸ್ತಿ ಅವರು ಇಂಗ್ಲಿಷ್‌ಗೆ ಅನುವಾದಿಸಿದ ಬಾನು ಅವರ ಕನ್ನಡ ಕೃತಿ ‘ಎದೆಯ ಹಣತೆ’ 2025ರ ಬೂಕರ್ ಪ್ರಶಸ್ತಿಯನ್ನು ಗೆದ್ದಿದೆ. ಬಾನು ಮತ್ತು ದೀಪಾ ಇಬ್ಬರನ್ನೂ ಅಭಿನಂದಿಸಲು ಕ್ಯಾಬಿನೆಟ್ ನಿರ್ಣಯವನ್ನು ಅಂಗೀಕರಿಸಿತು.
ಸಚಿವ ಸಂಪುಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, “ಬಾನು ಮುಷ್ತಾಕ್ ಅವರು ಬಯಸಿದರೆ, ನಮ್ಮ ನಿಯಮಗಳ ಪ್ರಕಾರ ಬೆಂಗಳೂರಿನಲ್ಲಿ ‘ಜಿ’ ವರ್ಗದ ಸೈಟ್ ಅನ್ನು ಒದಗಿಸುತ್ತೇವೆ. ಅನುವಾದಕರನ್ನು ಸಹ ನಾವು ಅಭಿನಂದಿಸುತ್ತೇವೆ” ಎಂದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, "ಈ ಪ್ರಶಸ್ತಿಯು ಕನ್ನಡ, ಕರ್ನಾಟಕ ಮತ್ತು ಇಡೀ ದೇಶದ ಘನತೆಯನ್ನು ಹೆಚ್ಚಿಸಿದೆ. ನಮ್ಮ ಕ್ಯಾಬಿನೆಟ್ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರನ್ನು ಅಭಿನಂದಿಸುತ್ತದೆ” ಎಂದಿದ್ದಾರೆ.
ಬಾನು ಮುಷ್ತಾಕ್ ಅವರ ಬೂಕರ್ ಗೆಲುವಿನ ನಂತರ ಬೆಂಗಳೂರಿನ ಪುಸ್ತಕ ಮಳಿಗೆಗಳಲ್ಲಿ ‘ಹಾರ್ಟ್ ಲ್ಯಾಂಪ್’ಗೆ ಬೇಡಿಕೆ ಹೆಚ್ಚಾಗಿದೆ. ಇಂಗ್ಲಿಷ್ ಕೃತಿ ಹಾಗೂ ಕನ್ನಡದ ಮೂಲ ʼಹಸೀನಾ ಮತ್ತು ಇತರ ಕತೆಗಳುʼ ಕೃತಿಗೂ ಬೇಡಿಕೆ ಕಂಡುಬಂದಿದೆ. ಆನ್‌ಲೈನ್‌ನಲ್ಲೂ ಇದು ಹೆಚ್ಚಿನ ಬೇಡಿಕೆಯಿಂದ ಮಾರಾಟವಾಗುತ್ತಿದೆ.
ಈ ನಡುವೆ ʼಹಾರ್ಟ್ ಲ್ಯಾಂಪ್ʼನ ಪಿಡಿಎಫ್ ಕೂಡ ಕೆಲವು ಕಡೆ ಆನ್‌ಲೈನ್‌ನಲ್ಲಿ ಉಚಿತವಾಗಿ ಶೇರ್ ಆಗಿದೆ ಎಂದು ತಿಳಿದುಬಂದಿದೆ. ಇದು ಲೇಖಕರ ಹಾಗೂ ಪ್ರಕಾಶಕರ ಕಾಪಿರೈಟ್ ಅನ್ನು ಉಲ್ಲಂಘಿಸಿದಂತಾಗಲಿದೆ. ಇದರ ಕಾಪಿಗಳನ್ನು ಉಚತವಾಗಿ ಹಂಚುವುದು, ಇಟ್ಟುಕೊಳ್ಳುವುದು ಕಾಯಿದೆಬಾಹಿರ ಎಂದು ತಿಳಿಸಲಾಗಿದೆ.