ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Angelo Mathews: ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್

Angelo Mathews Test Retire: 118 ಟೆಸ್ಟ್ ಪಂದ್ಯಗಳಲ್ಲಿ ಮ್ಯಾಥ್ಯೂಸ್ 44.62 ಸರಾಸರಿಯಲ್ಲಿ 8,167 ರನ್ ಗಳಿಸಿದ್ದಾರೆ. ಇದರಲ್ಲಿ 16 ಶತಕಗಳು ಮತ್ತು 45 ಅರ್ಧಶತಕಗಳು ಸೇರಿವೆ. ಅವರ ಅತ್ಯಧಿಕ ಸ್ಕೋರ್ ಅಜೇಯ 200. 2020 ರಲ್ಲಿ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಂಬಾಬ್ವೆ ವಿರುದ್ಧ ಈ ಮೊತ್ತ ಬಾರಿಸಿದ್ದರು.

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್

Profile Abhilash BC May 23, 2025 3:34 PM

ಕೊಲಂಬೊ: ಶ್ರೀಲಂಕಾದ ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 17 ವರ್ಷಗಳ ಟೆಸ್ಟ್‌ ಕ್ರಿಕೆಟ್‌ಗೆ ತೆರೆ ಎಳೆಯಲು ನಿರ್ಧರಿಸಿದ್ದಾರೆ. 37 ವರ್ಷದ ಮ್ಯಾಥ್ಯೂಸ್, ಜೂನ್‌ನಲ್ಲಿ ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯ ಕೊನೆಯ ಪಂದ್ಯವಾಗಲಿದೆ ಎಂದು ದೃಢಪಡಿಸಿದ್ದಾರೆ. ಆದರೆ ವೈಟ್-ಬಾಲ್ ಸ್ವರೂಪಗಳಲ್ಲಿ ಆಯ್ಕೆಗೆ ಲಭ್ಯ ಇರುವುದಾಗಿ ತಿಳಿಸಿದ್ದಾರೆ.

ಶುಕ್ರವಾರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡುವ ಮೂಲಕ ಮ್ಯಾಥ್ಯೂಸ್ ಟೆಸ್ಟ್‌ ನಿವೃತ್ತಿ ಪ್ರಕಟಿಸಿದರು. ಮ್ಯಾಥ್ಯೂಸ್ 2009 ರಲ್ಲಿ ಪಾಕಿಸ್ತಾನ ವಿರುದ್ಧ ಗಾಲೆಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 16 ವರ್ಷಗಳ ವೃತ್ತಿಜೀವನದಲ್ಲಿ, ಅವರು ಶ್ರೀಲಂಕಾದ ಪರ ಟೆಸ್ಟ್ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಕುಮಾರ್ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ಮೊದಲಿಬ್ಬರು.

118 ಟೆಸ್ಟ್ ಪಂದ್ಯಗಳಲ್ಲಿ ಮ್ಯಾಥ್ಯೂಸ್ 44.62 ಸರಾಸರಿಯಲ್ಲಿ 8,167 ರನ್ ಗಳಿಸಿದ್ದಾರೆ. ಇದರಲ್ಲಿ 16 ಶತಕಗಳು ಮತ್ತು 45 ಅರ್ಧಶತಕಗಳು ಸೇರಿವೆ. ಅವರ ಅತ್ಯಧಿಕ ಸ್ಕೋರ್ ಅಜೇಯ 200. 2020 ರಲ್ಲಿ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಂಬಾಬ್ವೆ ವಿರುದ್ಧ ಈ ಮೊತ್ತ ಬಾರಿಸಿದ್ದರು.

"ಕೃತಜ್ಞತಾಪೂರ್ವಕ ಮತ್ತು ಮರೆಯಲಾಗದ ನೆನಪುಗಳೊಂದಿಗೆ. ದಿ ರಿಯಲ್ ಕ್ರಿಕೆಟ್ ಎಂದು ಕರೆಯಲ್ಪಡುವ, ದೀರ್ಘ ಕಾಲದ ಟೆಸ್ಟ್ ಕ್ರಿಕೆಟ್‌ಗೆ ನಾನು ವಿದಾಯ ಹೇಳುವ ಸಮಯ ಇದು! ಕಳೆದ 17 ವರ್ಷಗಳ ಕಾಲ ಶ್ರೀಲಂಕಾ ಪರ ಕ್ರಿಕೆಟ್ ಆಡಿದ್ದು ನನ್ನ ಅತ್ಯುನ್ನತ ಗೌರವ ಮತ್ತು ಹೆಮ್ಮೆಯಾಗಿದೆ. ರಾಷ್ಟ್ರೀಯ ಜೆರ್ಸಿ ಧರಿಸಿದಾಗ ಕಾಣುವ ದೇಶಭಕ್ತಿ ಮತ್ತು ದಾಸ್ಯದ ಭಾವನೆಗೆ ಯಾವುದೂ ಸಾಟಿಯಿಲ್ಲ. ನಾನು ಕ್ರಿಕೆಟ್‌ಗೆ ನನ್ನ ಎಲ್ಲವನ್ನೂ ನೀಡಿದ್ದೇನೆ ಮತ್ತು ಕ್ರಿಕೆಟ್ ನನಗೆ ಪ್ರತಿಯಾಗಿ ಎಲ್ಲವನ್ನೂ ನೀಡಿದೆ" ಎಂದು ಮ್ಯಾಥ್ಯೂಸ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ Virat Kohli: ವಿರಾಟ್‌ ಕೊಹ್ಲಿಗೆ ಭಾರತ ರತ್ನ ನೀಡಬೇಕು: ಕೇಂದ್ರಕ್ಕೆ ಸುರೇಶ್‌ ರೈನಾ ಮನವಿ

“ನನ್ನ ವೃತ್ತಿಜೀವನದುದ್ದಕ್ಕೂ ನನ್ನ ಎಲ್ಲ ಕಷ್ಟ ಸುಖದಲ್ಲಿ ಜತೆಗಿದ್ದ ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳಿಗೆ ಕೃತಜ್ಞನಾಗಿದ್ದೇನೆ. ಜೂನ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯವು ನನ್ನ ದೇಶಕ್ಕಾಗಿ ನನ್ನ ಕೊನೆಯ ಕೆಂಪು ಚೆಂಡಿನ ಪ್ರದರ್ಶನವಾಗಿರುತ್ತದೆ. ಆಯ್ಕೆದಾರರೊಂದಿಗೆ ಚರ್ಚಿಸಿದಂತೆ, ನನ್ನ ದೇಶಕ್ಕೆ ನನ್ನ ಅಗತ್ಯವಿದ್ದಾಗ ಮತ್ತು ಅಗತ್ಯವಿದ್ದರೆ, ನಾನು ಬಿಳಿ ಚೆಂಡಿನ ಸ್ವರೂಪಗಳಿಗೆ ಆಯ್ಕೆಗೆ ಲಭ್ಯವಿರುತ್ತೇನೆ" ಎಂದು ಮ್ಯಾಥ್ಯೂಸ್ ಹೇಳಿದ್ದಾರೆ.