Friday, 22nd November 2024

Modi Visit Russia : ರಷ್ಯಾ- ಉಕ್ರೇನ್‌ ಸಂಘರ್ಷಕ್ಕೆ ಶಾಂತಿಯುತ ಪರಿಹಾರ; ಪುಟಿನ್‌ಗೆ ಪ್ರಧಾನಿ ಮೋದಿ ಭರವಸೆ

ನವದೆಹಲಿ: ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ತೆರಳಿದ್ದು (Modi Visit Russia) ಅಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ರಷ್ಯಾ- ಉಕ್ರೇನ್ ಸಂಘರ್ಷಕ್ಕೆ ಶಾಂತಿಯುವ ಪರಿಹಾರವಿದೆ ಎಂದು ಪುಟಿನ್‌ಗೆ ಹೇಳಿದ್ದಾರೆ. ಭೇಟಿಯ ಸಮಯದಲ್ಲಿ ಇಬ್ಬರೂ ನಾಯಕರು ಪರಸ್ಪರ ತಬ್ಬಿಕೊಂಡು ಶುಭಾಶಯ ಕೋರಿಕೊಂಡರು.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (ಬ್ರಿಕ್ಸ್) ಒಳಗೊಂಡ ರಾಷ್ಟ್ರಗಳ ಶೃಂಗಸಭೆ ರಷ್ಯಾದ ಕಜಾನ್ ನಲ್ಲಿ ನಡೆಯುತ್ತಿದೆ. ಬ್ರಿಕ್ಸ್ ಗುಂಪಿನ ಯಶಸ್ಸಿನ ಕುರಿತು ಪ್ರಧಾನಿ ಮೋದಿ ಅಭಿನಂದಿಸಿದರು. ಸಭೆಯಲ್ಲಿ ಇನ್ನೂ ಅನೇಕ ದೇಶಗಳು ಭಾಗಿಯಾಗಲಿವೆ.

ರಷ್ಯಾ- ಉಕ್ರೇನ್ ಸಮಸ್ಯೆ ಪರಿಹಾರಕ್ಕಾಗಿ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಸಂಘರ್ಷಗಳನ್ನು ಮಾತುಕತೆಯಿಂದ ಪರಿಹರಿಸಬಹುದು ಎಂಬುದು ನಮ್ಮ ನಿಲುವಾಗಿದೆ. ಸಂಘರ್ಷಗಳಿಗೆ ಶಾಂತಿಯುತ ಪರಿಹಾರಗಳು ಇರಬೇಕು ಎಂದು ನಾವು ನಂಬುತ್ತೇವೆ. ಶಾಂತಿ ಸ್ಥಾಪನೆಗೆ ಭಾರತ ಯಾವಾಗಲೂ ಸಿದ್ದ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬ್ರಿಕ್ಸ್ ಸಭೆಯಲ್ಲಿ ಹಲವು ಮಾತುಕತೆ

ಮಾಸ್ಕೋ: 16 ನೇ ಬ್ರಿಕ್ಸ್‌ ಶೃಂಗಸಭೆಯಲ್ಲಿ( Brics Summit) ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಇಂದು ರಷ್ಯಾಕ್ಕೆ(Russia) ತೆರಳಿದ್ದಾರೆ. ರಷ್ಯಾದ ಕಜಾನ್‌( Kazan) ನಗರದಲ್ಲಿ ಈ ಶೃಂಗಸಭೆ ನಡೆಸಯುತ್ತಿದ್ದು, ಈ ಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ ಪಿಂಗ್‌, ಭಾರತದ ಪ್ರಧಾನಿ ನರೇಂದ್ರ ಮೋದಿ, ಟರ್ಕಿಯ ಅಧ್ಯಕ್ಷ ರೆಪೆಸ್‌ ತಯ್ಯಿಸ್‌ ಎರ್ಡೋಗನ್‌, ಇರನ್‌ ಅಧ್ಯಕ್ಷ ಡಾ. ಮಸೂದ್‌ ಪೆಜೆಶ್ಕಿಯಾನ್‌ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Brics Summit: 16ನೇ ಬ್ರಿಕ್ಸ್‌ ಶೃಂಗಸಭೆ; ರಷ್ಯಾಗೆ ಮೋದಿ ಪ್ರಯಾಣ- ಪುಟಿನ್‌ ಜತೆ ಮಹತ್ವದ ಮಾತುಕತೆ ಸಾಧ್ಯತೆ

ರಷ್ಯಾಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ನಾನು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾದ ಕಜಾನ್‌ಗೆ ಹೊರಟಿದ್ದೇನೆ. ಭಾರತವು ಬ್ರಿಕ್ಸ್‌ಗೆ ಅಪಾರ ಪ್ರಾಮುಖ್ಯತೆಯನ್ನು ನೀಡುತ್ತದೆ ಮತ್ತು ನಾನು ಪ್ರಮುಖ ವಿಷಯಗಳ ಕುರಿತು ವ್ಯಾಪಕವಾದ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ. ಅಲ್ಲಿ ವಿವಿಧ ದೇಶಗಳ ನಾಯಕರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಎಂದಿದ್ದಾರೆ.

ಸಭೆಯ ಪ್ರಮುಖಾಂಶಗಳು

  • ರಷ್ಯಾ ಅಧ್ಯಕ್ಷತೆಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪಾಲ್ಗೊಳ್ಳಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ. ಆದರೆ, ಜಿನ್‌ಪಿಂಗ್‌ ಮತ್ತು ಮೋದಿ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆಯೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
  • ಶೃಂಗಸಭೆಗೆ ಆಹ್ವಾನಿಸಲಾದ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಮತ್ತು ಇತರ ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
  • ಭಾರತದ ಜತೆಗಿನ ಪಾಲುದಾರ ರಾಷ್ಟ್ರಗಳೊಂದಿಗೆ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿತ ಮಾತುಕತೆ ನಡೆಸಲು ಸಾಧ್ಯತೆ ಇದೆ.
  • ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ವಿನಯ್ ಕುಮಾರ್, ಭಾರತವು ಬ್ರಿಕ್ಸ್‌ ರಾಷ್ಟ್ರಗಳ ಜತೆ ಆರ್ಥಿಕ ಸಹಕಾರಕ್ಕೆ ಬದ್ಧವಾಗಿದೆ ಎಂದು ಒತ್ತಿಹೇಳಿದರು.
  • ಉಕ್ರೇನ್‌ನಲ್ಲಿ ತನ್ನ ಸೈನ್ಯವನ್ನು ನಿಯೋಜಿಸಿದ ನಂತರ ರಷ್ಯಾದಲ್ಲಿ ನಡೆಯುತ್ತಿರುವ ಅತಿದೊಡ್ಡ ಸಭೆ ಇದಾಗಿದೆ.
  • ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಅವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಏಪ್ರಿಲ್ 2022ರ ನಂತರ ರಷ್ಯಾಕ್ಕೆ ಅವರ ಮೊದಲ ಪ್ರವಾಸ ಇದಾಗಿದೆ. ಅಧಿಕೃತ ಮೂಲಗಳ ಪ್ರಕಾರ ಅವರು ಗುರುವಾರ ಪುಟಿನ್ ಅವರನ್ನು ಭೇಟಿಯಾಗಲಿದ್ದಾರೆ.
  • ಬ್ರಿಕ್ಸ್ ಗುಂಪು ಈಗ ವಿಶ್ವದ ಜನಸಂಖ್ಯೆಯ 45 ಪ್ರತಿಶತ ಮತ್ತು ಅದರ ಆರ್ಥಿಕತೆಯ 35 ಪ್ರತಿಶತವನ್ನು ಪ್ರತಿನಿಧಿಸುತ್ತದೆ.