ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಇನ್ನಷ್ಟು ಜಟಿಲ
ಶಿಸ್ತಿನ ಪಕ್ಷ ಎಂದೇ ತನ್ನನ್ನು ಗುರುತಿಸಿಕೊಂಡ ಬಿಜೆಪಿಯಲ್ಲಿ ಶಿಸ್ತು ಪದೇ ಪದೆ ಶಿಸ್ತು ಉಲ್ಲಂಘನೆ ಯಾಗುತ್ತಿದೆ ಎಂಬುದು ನೊಂದ ಕಾರ್ಯಕರ್ತರ ಅಳಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಹೈಕಮಾಂಡ್ ಅಷ್ಟೊಂದು ಪ್ರಬಲವಾಗಿದ್ದರೂ ನಾಯಕರು ಕರ್ನಾಟಕದ ಕುರಿತಾಗಿ ನಿರ್ಧಾರ ಕೈಗೊಳ್ಳಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಕೂಡ ಕಗ್ಗಂಟಾಗಿ ಉಳಿದಿದೆ.


ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿದ ಪಕ್ಕದಲ್ಲಿನ ಆಂತರಿಕ ಕಚ್ಚಾಟ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಗೊಂದಲ ಜಟಿಲವಾಗುತ್ತಿದ್ದು, ಪಕ್ಷದ ಮುಖಂಡರ ನಿರೀಕ್ಷೆಗೆ ಕಾಲ ಕೂಡಿ ಬರುತ್ತಿಲ್ಲ. ಇತರ ರಾಜ್ಯಗಳ ಅಧ್ಯಕ್ಷರನ್ನು ವರಿಷ್ಠರು ಘೋಷಣೆ ಮಾಡುತ್ತಿದ್ದರೂ ಕರ್ನಾಟಕದಲ್ಲಿ ಯಾರಿಗೆ ಪಟ್ಟ ಎಂಬ ಕುರಿತಾಗಿ ಗಟ್ಟಿ ನಿರ್ಧಾರ ಕೈಗೊಳ್ಳಲು ಈ ಕ್ಷಣದವರೆಗೂ ವರಿಷ್ಠರಿಗೆ ಸಾಧ್ಯವಾಗದಿರುವುದು ಕೂಡ ಅನುಮಾನ ಹುಟ್ಟು ಹಾಕಿದೆ.
ಶಿಸ್ತಿನ ಪಕ್ಷ ಎಂದೇ ತನ್ನನ್ನು ಗುರುತಿಸಿಕೊಂಡ ಬಿಜೆಪಿಯಲ್ಲಿ ಶಿಸ್ತು ಪದೇ ಪದೆ ಶಿಸ್ತು ಉಲ್ಲಂಘನೆ ಯಾಗುತ್ತಿದೆ ಎಂಬುದು ನೊಂದ ಕಾರ್ಯಕರ್ತರ ಅಳಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಹೈಕಮಾಂಡ್ ಅಷ್ಟೊಂದು ಪ್ರಬಲವಾಗಿದ್ದರೂ ನಾಯಕರು ಕರ್ನಾಟಕದ ಕುರಿತಾಗಿ ನಿರ್ಧಾರ ಕೈಗೊಳ್ಳಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಕೂಡ ಕಗ್ಗಂಟಾಗಿ ಉಳಿದಿದೆ.
ಬಿ.ವೈ.ವಿಜಯೇಂದ್ರ ಅವರನ್ನು ಮುಂದುವರಿಸಬೇಕೋ, ಬೇಡವೋ ಎಂಬುದು ಕೂಡ ಹೈ ಕಮಾಂಡ್ ನಾಯಕರಿಗೆ ಕಾಡುತ್ತಿದೆ ಎಂಬುದು ಕಾರ್ಯಕರ್ತರ ಅನಿಸಿಕೆಯಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರ ನೆಲೆ ಇರುವುದು ಕರ್ನಾಟಕದಲ್ಲಿ ಮಾತ್ರ. ಇದು ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು. ಬೇರೆ ಯಾವ ರಾಜ್ಯದಲ್ಲೂ ಬಿಜೆಪಿ ಅಧಿಕಾರ ಗಳಿಸಿಲ್ಲ.
ಇದನ್ನೂ ಓದಿ: Suresh Balachandran Column: ಉತ್ತರ ಇಲ್ಲದಾದಾಗ ವಿಷಯಾಂತರದ ಕಸರತ್ತು
ಆದರೆ ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಪ್ರಯತ್ನದಿಂದ ಬಿಜೆಪಿ ಆಡಳಿತ ನಡೆಸಿದೆ. ಆದರೆ ಅದೇ ಯಡಿಯೂರಪ್ಪ ಅವರನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂಲೆ ಗುಂಪಾಗಿ ಮಾಡಲಾಗಿತು. ಇದರ ಪರಿಣಾಮ ಪಕ್ಷ ಎದುರಿಸಬೇಕಾಗಿ ಬಂದಿತ್ತು. ಮತ್ತೆ ಬಿಎಸ್ ವೈ ಕುಟುಂಬಕ್ಕೆ ಮಣೆ ಹಾಕಿರುವುದಕ್ಕೆ ಭುಗಿಲೆದ್ದಿರುವ ಅಸಮಾಧಾನ ಹೈಕಮಾಂಡ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎನ್ನಲಾಗಿದೆ.
ಈ ನಡುವೆ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಶಮನ ಮಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಸಭೆಗಳು ನಡೆದಿದ್ದವು. ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಅವರ ನಿವಾಸದಲ್ಲಿ ನಡೆದ ಸಂಧಾನ ಮಾತುಕತೆಗಳು ಫಲ ಕೊಡಲಿಲ್ಲ. ಎರಡು ಸಭೆ ನಡೆಸಿದರೂ ಅದರಿಂದ ಅನುಕೂಲ ಆಗಿಲ್ಲ.
ಈ ಎಲ್ಲ ವರದಿಗಳು ಕೇಂದ್ರದ ವರಿಷ್ಠರಿಗೆ ತಲುಪಿವೆ. ಇದನ್ನೆಲ್ಲ ಪರಿಗಣಿಸಿ ಒಂದು ನಿರ್ಧಾರಕ್ಕೆ ಬರಬೇಕಾಗಿದ್ದ ಕೇಂದ್ರ ಬಿಜೆಪಿ ಇನ್ನೂ ಮೀನಮೇಷ ಎಣಿಸುತ್ತಿರುವುದು ಕೂಡ ಬಿಎಸ್ವೈ ಪಾಳಯದಲ್ಲಿ ಹಲವು ಅನುಮಾನ ಹುಟ್ಟುಹಾಕಿದೆ.
ಬತ್ತಿದ ಉತ್ಸಾಹ: ಪ್ರತಿಪಕ್ಷವಾಗಿ ಈ ಹಿಂದೆ ಸದ್ದು ಮಾಡಿದ್ದ ಬಿಜೆಪಿ ಇದೀಗ ಸೊರಗಿ ಹೋಗುತ್ತಿದೆ. ಪಕ್ಷದ ಕಾರ್ಯಕರ್ತರಲ್ಲೂ ಉತ್ಸಾಹ ಬತ್ತುತ್ತಿದೆ. ಪ್ರತಿಪಕ್ಷವಾಗಿ ಬಿಜೆಪಿ ಯಾವತ್ತೂ ಸಕ್ಸಸ್ ಎಂಬ ವಾತಾವರಣ ಇತ್ತು. ಆಡಳಿತ ಪಕ್ಷದ ವಿರುದ್ಧ ಹೋರಾಟ ರೂಪಿಸುವಲ್ಲಿ ಹಾಗೂ ತಂತ್ರಗಾರಿಕೆ ರೂಪಿಸುವಲ್ಲಿ ಬಿಜೆಪಿ ಪರಿಣಾಮಕಾರಿ ಎಂಬ ಅಭಿಪ್ರಾಯ ಇತ್ತು. ಆದರೆ ಅದು ಇದೀಗ ಇಲ್ಲವಾಗಿದೆ.
ಬಿಜೆಪಿ ಪ್ರತಿಪಕ್ಷವಾಗಿ ಸಂಪೂರ್ಣ ವಿಫಲವಾಗಿ ರಾಜ್ಯ ಸರಕಾರದ ವಿರುದ್ಧ ಹಲವು ಸಂದರ್ಭದಲ್ಲಿ ಹೋರಾಟ ನಡೆಸುವ ಅವಕಾಶ ಇದ್ದಾಗಲೂ ಕೈಚೆಲ್ಲಿ ಕುಳಿತುಕೊಂಡಂತಿದೆ. ಬಿಜೆಪಿ ಕಾರ್ಯಕರ್ತ (ಕೇಡರ್) ಆಧಾರಿತ ಪಕ್ಷ. ಪಕ್ಷದ ನಾಯಕತ್ವ ಕೊಟ್ಟ ಸೂಚನೆಯನ್ನು ಕೇಡರ್ಗಳು ತಳಮಟ್ಟದಲ್ಲಿ ಯಶಸ್ವಿಯಾಗಿ ಜಾರಿಗೊಳಿಸುತ್ತವೆ. ಆದರೆ ಇದೀಗ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಬತ್ತಿದೆ. ಪಕ್ಷದಲ್ಲಿರುವ ಗೊಂದಲಗಳು ನಮ್ಮನ್ನು ಧೃತಿಗೆಡಿಸಿವೆ. ಪ್ರತಿಪಕ್ಷವಾಗಿ ನಾವು ವಿಫಲವಾಗುತ್ತಿದ್ದೇವೆ. ನಾಯಕರ ನಡುವಿನ ಕಚ್ಚಾಟದಲ್ಲಿ ಪಕ್ಷ ದುರ್ಬಲವಾಗುತ್ತಿದೆ. ಹೀಗೇ ಮುಂದುವರಿದರೆ ಭವಿಷ್ಯ ದಲ್ಲಿ ಮತ್ತಷ್ಟು ಹಿನ್ನಡೆ ಆಗುವುದು ಖಚಿತ ಎನ್ನುತ್ತಾರೆ ನೊಂದ ಕಾರ್ಯಕರ್ತರು.
ಅಲ್ಲದೆ, ಬಿಜೆಪಿ ನಾಯಕರಲ್ಲೂ ಪಕ್ಷದಲ್ಲಿ ಕಾಣಿಸಿಕೊಳ್ಳುತ್ತಿರುವ ಗೊಂದಲಗಳು ನಿರಾಸಕ್ತಿ ಮೂಡಿಸಿದೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ ಹಾಗೂ ಬಿಜೆಪಿಯ ರಾಜ್ಯ ಕಚೇರಿಯ ಉತ್ಸಾಹ ಕಾಣದೆ ಪಕ್ಷದ ನಾಯಕರು ಕಚೇರಿಯ ಕಡೆಗೆ ಮುಖ ಮಾಡದೆ ಎಂದಿನ ಕಳೆ ಕಾಣದಂತಾಗಿದೆ.