ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Arvind Kejriwal: ದಿಲ್ಲಿ ಚುನಾವಣೆಯಲ್ಲಿ ಸೋತ ಅರವಿಂದ್‌ ಕೇಜ್ರಿವಾಲ್‌ ರಾಜ್ಯಸಭೆಗೆ? ಆಪ್‌ ನೀಡಿದ ಸ್ಪಷ್ಟನೆಯಲ್ಲಿ ಏನಿದೆ?

ಇತ್ತೀಚೆಗೆ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ಮಾಜಿ ಮುಖ್ಯಮಂತ್ರಿ, ಆಮ್‌ ಆದ್ಮಿ ಪಕ್ಷದ ನಾಯಕ ರಾಜ್ಯಸಭೆಗೆ ಹೋಗುತ್ತಾರೆ ಎನ್ನಲಾಗಿದೆ. ಆದರೆ ಈ ಸಾಧ್ಯತೆಯನ್ನು ಆಪ್‌ ನಿರಾಕರಿಸಿದೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆಯೇ ನಡೆದಿಲ್ಲ ಎಂದು ತಿಳಿಸಿದೆ.

ದಿಲ್ಲಿ ಚುನಾವಣೆಯಲ್ಲಿ ಸೋತ ಅರವಿಂದ್‌ ಕೇಜ್ರಿವಾಲ್‌ ರಾಜ್ಯಸಭೆಗೆ?

ಅರವಿಂದ್‌ ಕೇಜ್ರಿವಾಲ್‌.

Profile Ramesh B Feb 26, 2025 2:13 PM

ಹೊಸದಿಲ್ಲಿ: ಇತ್ತೀಚೆಗೆ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ಮಾಜಿ ಮುಖ್ಯಮಂತ್ರಿ, ಆಮ್‌ ಆದ್ಮಿ ಪಕ್ಷ (Aam Aadmi Party)ದ ನಾಯಕ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ರಾಜ್ಯಸಭೆಗೆ ಹೋಗುತ್ತಾರೆ ಎನ್ನುವ ವದಂತಿ ಕೆಲವು ದಿನಗಳಿಂದ ದಟ್ಟವಾಗಿ ಹರಡಿದೆ. ಕೊನೆಗೂ ಈ ಬಗ್ಗೆ ಮೌನ ಮುರಿದ ಆಪ್‌ ಈ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ. ಆಪ್‌ ರಾಜ್ಯಸಭಾ ಸಂಸದ ಸಂಜೀವ್‌ ಅರೋರ (Sanjiv Arora) ಅವರಿಗೆ ಪಂಜಾಬ್‌ನ ಲುಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಟಿಕೆಟ್‌ ನೀಡಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನವನ್ನು ಅರವಿಂದ್‌ ಕೇಜ್ರಿವಾಲ್‌ ತುಂಬಲಿದ್ದಾರೆ ಎನ್ನಲಾಗಿತ್ತು.

ಕಳೆದ ತಿಂಗಳು ಆಕಸ್ಮಿಕವಾಗಿ ಪಿಸ್ತೂಲಿನಿಂದ ಗುಂಡು ಸಿಡಿದು ಲುಧಿಯಾದ ಪಶ್ಚಿಮ ಕ್ಷೇತ್ರದ ಆಪ್‌ ಶಾಸಕ ಗುರ್‌ಪ್ರೀತ್‌ ಗೋಗಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿ ಉಪಚುನಾವಣೆ ನಡೆಯಲಿದ್ದು, ಬುಧವಾರ ಆಪ್‌ ಸಂಜೀವ್‌ ಅರೋರ ಅವರನ್ನು ನಾಮ ನಿರ್ದೇಶನ ಮಾಡಿದೆ.



ಉದ್ಯಮಿ ಸಂಜೀವ್‌ ಅರೋರ 2022ರಲ್ಲಿ ಪಂಜಾಬ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅವರ ಕಾಲಾವಧಿ 2028ರವರಗೆ ಇದೆ. ಕಾನೂನು ಪ್ರಕಾರ ಓರ್ವ ವ್ಯಕ್ತಿ 2 ಹುದ್ದೆಗಳನ್ನು ಹೊಂದಲು ಸಾಧ್ಯವಿಲ್ಲ. ಹೀಗಾಗಿ ಅವರು ಉಪಚುನಾವಣೆಯಲ್ಲಿ ಗೆದ್ದರೆ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆಗ ಅರವಿಂದ್‌ ಕೇಜ್ರಿವಾಲ್‌ ರಾಜ್ಯಸಭೆಗೆ ಪ್ರವೇಶಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಸಾಧ್ಯತೆಯನ್ನು ಪಕ್ಷ ನಿರಾಕರಿಸಿದೆ.

ʼʼಕೇಜ್ರಿವಾಲ್‌ ರಾಜ್ಯಗೆ ಪ್ರವೇಶಿಸಲಿದ್ದಾರೆ ಎನ್ನುವ ವದಂತಿ ಹರಡಿದೆ. ಆದರೆ ಇಂತಹ ಯಾವುದೇ ಚರ್ಚೆ ನಡೆದಿಲ್ಲ. ಇಂತಹ ವರದಿ ಸಂಪೂರ್ಣವಾಗಿ ಸುಳ್ಳು. ಕೇಜ್ರಿವಾಲ್ ಅವರು ಕೇವಲ ಒಂದು ಸ್ಥಾನಕ್ಕೆ ಸೀಮಿತವಾಗಿಲ್ಲʼʼ ಎಂದು ಪಕ್ಷದ ವಕ್ತಾರೆ ಪ್ರಿಯಾಂಕಾ ಕಕ್ಕರ್ ಹೇಳಿದ್ದಾರೆ.

"ಅರವಿಂದ್ ಕೇಜ್ರಿವಾಲ್ ರಾಜ್ಯಸಭೆಗೆ ಹೋಗುತ್ತಿಲ್ಲ. ಈ ಹಿಂದೆ ಅವರು ಪಂಜಾಬ್‌ನ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಈಗ ಅವರು ರಾಜ್ಯಸಭೆಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ಈ ಎರಡು ಸುದ್ದಿಗಳಲ್ಲಿ ಯಾವುದೇ ಹುರುಳಿಲ್ಲ. ಅರವಿಂದ್ ಕೇಜ್ರಿವಾಲ್ ಆಪ್‌ನ ರಾಷ್ಟ್ರೀಯ ಸಂಚಾಲಕರು. ಅವರು ಯಾವುದೇ ಒಂದು ಸ್ಥಾನಕ್ಕೆ ಸೀಮಿತವಾಗಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Shashi Tharoor: ಬಿಜೆಪಿ ಸೇರ್ಪಡೆ ವದಂತಿ; ಕುತೂಹಲಕ್ಕೆ ತೆರೆ ಎಳೆದ ಶಶಿ ತರೂರ್‌

ಆಪ್‌ಗೆ ಧನ್ಯವಾದ ತಿಳಿಸಿದ ಅರೋರ

ಈ ಮಧ್ಯೆ ಲುಧಿಯಾನ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಪಡೆದ ಅರೋರ ಧನ್ಯವಾದ ತಿಳಿಸಿದ್ದಾರೆ. "ಲುಧಿಯಾನ ಪಶ್ಚಿಮ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಆಪ್‌ನ ನಾಯಕತ್ವಕ್ಕೆ ಕೃತಜ್ಞನಾಗಿದ್ದೇನೆ. ನನ್ನ ಜನರಿಗೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಲು ನಾನು ಉತ್ಸುಕನಾಗಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

ಒಂದುವೇಳೆ ಅರೋರ ಉಪಚುನಾವಣೆಯಲ್ಲಿ ಜಯ ಗಳಿಸಿದರೆ ಭಗವತ್‌ ಮಾನ್‌ ಸರ್ಕಾರದಲ್ಲಿ ಸಚಿವ ಹುದ್ದೆ ಅಲಂಕರಿಸಲಿದ್ದಾರೆ ಎನ್ನಲಾಗುತ್ತಿದೆ. ತಿಂಗಳಾರಂಭದಲ್ಲಿ ದಿಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪ್ರರ್ವೇಶ್‌ ವರ್ಮಾ ವಿರುದ್ಧ ಅರವಿಂದ್‌ ಕೇಜ್ರಿವಾಲ್‌ ಸೋತಿದ್ದರು. ಅಲ್ಲದೆ ದಿಲ್ಲಿಯಲ್ಲಿ 10 ವರ್ಷಗಳ ಆಪ್‌ ಆರಳಿತ ಕೊನೆಯಾಗಿತ್ತು.