Shashi Tharoor: ಬಿಜೆಪಿ ಸೇರ್ಪಡೆ ವದಂತಿ; ಕುತೂಹಲಕ್ಕೆ ತೆರೆ ಎಳೆದ ಶಶಿ ತರೂರ್
ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಹಿರಿಯ ನಾಯಕ, ತಿರುವನಂತಪುರಂನ ಸಂಸದ ಶಶಿ ತರೂರ್ ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಭಾರೀ ಕೇಳಿ ಬಂದಿತ್ತು. ಇದೀಗ ಈ ಕುತೂಹಲಕ್ಕೆ ಸ್ವತಃ ಅವರೇ ತೆರೆ ಎಳೆದಿದ್ದು, ತಮ್ಮ ರಾಜಕೀಯ ನಿಲುವಿನ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.


ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಬಳಿಕ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್(Shashi Tharoor) ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎಂಬ ಮಾತುಗಳು ರಾಜಕೀಯ ರಂಗದಲ್ಲಿ ಭಾರೀ ಕೇಳಿಬರುತ್ತಿವೆ. ಈ ವದಂತಿಯ ಕಿಚ್ಚಿಗೆ ನಿನ್ನೆ ವೈರಲಾಗಿದ್ದ ಕೇಂದ್ರ ಸಚಿವ ಪಿಯೂಶ್ ಗೋಯಲ್ ಜತೆಗಿನ ಅವರ ಫೊಟೋ ಮತ್ತಷ್ಟು ತಪ್ಪ ಸುರಿದಿತ್ತು. ಈ ಎಲ್ಲಾ ವದಂತಿ ನಡುವೆ ಸ್ವತಃ ಶಶಿ ತರೂರ್ ಅವರೇ ಪ್ರತಿಕ್ರಿಯೆ ನೀಡಿದ್ದು, ಅವರ ರಾಜಕೀಯ ಭವಿಷ್ಯದ ನಡೆ ಬಗ್ಗೆ ಜನರ ಕುತೂಹಲಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, ಶಶಿ ತರೂರ್, ಭಾರತೀಯ ಜನತಾ ಪಕ್ಷ ಸೇರುವ ವದಂತಿಯನ್ನು ಸೈದ್ಧಾಂತಿಕ ಭಿನ್ನತೆಗಳನ್ನು ಉಲ್ಲೇಖಿಸಿ ತಳ್ಳಿಹಾಕಿದರು.
ಶಶಿ ತರೂರ್ ಹೇಳಿದ್ದೇನು?
ಇಲ್ಲ, ಪ್ರತಿಯೊಂದು ಪಕ್ಷಕ್ಕೂ ತನ್ನದೇ ಆದ ನಂಬಿಕೆ ಮತ್ತು ಇತಿಹಾಸವಿದೆ. ನೀವು ಅವರ ನಂಬಿಕೆಯನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೆ ಇತರ ಪಕ್ಷಕ್ಕೆ ಸೇರುವುದು ಸರಿಯಲ್ಲ. ಅದು ಸರಿ ಎಂದು ನಾನು ಭಾವಿಸುವುದಿಲ್ಲ. ಆದರೆ ಸ್ವತಂತ್ರವಾಗಿರಲು ಯಾವಾಗಲೂ ಒಂದು ಆಯ್ಕೆ ಇರುತ್ತದೆ. ಇಂದಿನ ಕಾಲದಲ್ಲಿ ಆ ಮೌಲ್ಯಗಳನ್ನು ಮುಂದಕ್ಕೆ ಕೊಂಡೊಯ್ಯಲು ಸಂಘಟನಾತ್ಮಕ ಶಕ್ತಿಯನ್ನು ಸಾಗಿಸಲು ಅಗತ್ಯವಿರುವ ಪಕ್ಷವು ಒಂದು ವಾಹನವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ, ಬಿಜೆಪಿ ಇದನ್ನು ಮುಂದಿಡುವ ಸಾಮರ್ಥ್ಯವನ್ನು ತೋರಿಸಿದೆ. ಈ ವಿಚಾರದಲ್ಲಿ ನಾವು ಸೋತಿದ್ದೇವೆ.
ಕೇರಳದಲ್ಲಿ, ಸಿಪಿಐಎಂ ಕಳೆದ ಎರಡು ಚುನಾವಣೆಗಳಲ್ಲಿ ಸಾಮರ್ಥ್ಯವನ್ನು ತೋರಿಸಿದೆ ಮತ್ತು ಅದನ್ನು ಉಲ್ಲೇಖಿಸುವುದರಲ್ಲಿ ನನಗ್ಯಾವ ತಪ್ಪು ಕಾಣುತ್ತಿಲ್ಲ. ನಮಗೆ (ಕಾಂಗ್ರೆಸ್) ಪ್ರತಿ ಬೂತ್‌ನಲ್ಲಿ ಸಂಘಟನೆಯ ಕೊರತೆಯಿದೆ ಮತ್ತು ಕಾರ್ಯಕರ್ತರ ಕೊರತೆಯಿದೆ. ನಾವು ಕೇಡರ್ ಆಧಾರಿತ ಪಕ್ಷವಲ್ಲ. ನಮಗೆ ಅನೇಕ ನಾಯಕರಿದ್ದಾರೆ ಆದರೆ ನಮಗೆ ಕಾರ್ಯಕರ್ತರ ಕೊರತೆಯಿದೆ. ಆದರೆ ಭಾರತವನ್ನು 'ಹಿಂದೂ ರಾಷ್ಟ್ರ'ವಾಗಿ ಬದಲಾಯಿಸುವ ಯೋಜನೆಗೆ ನಾನು ವಿರೋಧಿಯಾಗಿದ್ದೇನೆ. ಅದು ನಮ್ಮ ಸಂವಿಧಾನಕ್ಕೆ ವಿರುದ್ಧವಾಗಿದೆ" ಎಂದು ತರೂರ್ ಹೇಳಿದರು.
ಈ ಸುದ್ದಿಯನ್ನೂ ಓದಿ:Shashi Tharoor: ಸಚಿವ ಪಿಯೂಷ್ ಗೋಯಲ್ ಜೊತೆ ಶಶಿ ತರೂರ್ ಸೆಲ್ಫಿ; "ಕೈ" ಕೊಡ್ತಾರಾ ಸಂಸದ?
ಕಾಂಗ್ರೆಸ್ ಮತ್ತು ಶಶಿ ತರೂರ್ ನಡುವೆ ಬಿರುಕು ಮೂಡಿದೆ ಎನ್ನುವ ವರದಿಗಳ ನಡುವೆ, ಶಶಿ ತರೂರ್ ಪೋಸ್ಟ್ ಒಂದನ್ನು ಮಾಡಿದ್ದು, ಮತ್ತೆ ಚರ್ಚೆ ಹುಟ್ಟು ಹಾಕಿತ್ತು. ಭಾರತ - ಬ್ರಿಟಿಷ್ ವ್ಯಾಪಾರ ಒಪ್ಪಂದದ ಕುರಿತು ಚರ್ಚೆಯ ನಂತರ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್ ಅವರೊಂದಿಗೆ ಇರುವ ಸೆಲ್ಫಿ ಒಂದನ್ನು ಪೋಸ್ಟ್ ಮಾಡಿದ್ದಾರೆ. ಬಿಜೆಪಿ ನಾಯಕನೊಂದಿಗೆ ತರೂರ್ ಅವರ ಈ ಫೊಟೋ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.
ಕೇರಳದ ತಿರುವನಂತಪುರಂನಿಂದ ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಸಂಸದರಾಗಿರುವ ತರೂರ್ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಬ್ರಿಟನ್‌ನ ವ್ಯವಹಾರ ಮತ್ತು ವ್ಯಾಪಾರದ ವಿದೇಶಾಂಗ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್ ಹಾಗೂ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ FTA ಮಾತುಕತೆಗಳನ್ನು ನಡೆಸಲಾಯಿತು ಎಂದು ಹೇಳಿದ್ದರು.