ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Rajinikanth: ಚೆನ್ನೈಯ ರಸ್ತೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ಓಡಾಡಿದ ಸೂಪರ್‌ ಸ್ಟಾರ್‌ ರಜನಿಕಾಂತ್‌; ತಲೈವಾ ಸರಳತೆಗೆ ಫ್ಯಾನ್ಸ್‌ ಫಿದಾ

ತಮಿಳು ಸೂರ್‌ ಸ್ಟಾರ್‌, ಅಭಿಮಾನಿಗಳ ಪಾಲಿನ ತಲೈವಾ ಸದ್ಯ ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಅವರು ಬರ್ಮುಡಾ, ಟೀ ಶರ್ಟ್‌ ತೊಟ್ಟು ಸಾಮಾನ್ಯ ವ್ಯಕ್ತಿಯಂತೆ ರಸ್ತೆಯಲ್ಲಿ ಓಡಾಡಿದ್ದು, ಫೋಟೊ ವೈರಲ್‌ ಆಗಿದೆ. ಜತೆಗೆ ಅವರ ಸರಳತೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಚೆನ್ನೈಯ ರಸ್ತೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ಓಡಾಡಿದ ರಜನಿಕಾಂತ್‌

Profile Ramesh B Jul 16, 2025 4:26 PM

ಚೆನ್ನೈ: 74 ವರ್ಷವಾದರೂ ಈಗಲೂ ಲವಲವಿಕೆಯಿಂದಿರುವ ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ (Actor Rajinikanth) ಸದ್ಯ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಲೋಕೇಶ್‌ ಕನಗರಾಜ್‌ (Lokesh Kanagaraj) ನಿರ್ದೇಶನದಲ್ಲಿ ರಜನಿಕಾಂತ್‌ ಮೊದಲ ಬಾರಿ ನಟಿಸಿದ ʼಕೂಲಿʼ (Coolie) ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಮಾತ್ರವಲ್ಲ ರಜನಿಕಾಂತ್‌ ʼಜೈಲರ್‌ 2ʼ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇದರ ಜತೆಗೆ ಮಣಿರತ್ನಂ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಅವರು ಚೆನ್ನೈಯ ಪೋಯಸ್ ಗಾರ್ಡನ್‌ನಲ್ಲಿ ಏಕಾಂಗಿಯಾಗಿ ವಾಕಿಂಗ್‌ ಮಾಡುತ್ತಿರುವ ಫೋಟೊ ಹೊರ ಬಿದ್ದು ನೆಟ್ಟಿಗರ ಗಮನ ಸೆಳೆದಿದೆ. ಸೂಪರ್‌ ಸ್ಟಾರ್‌ ಆಗಿದ್ದರೂ ಸಾಮಾನ್ಯ ವ್ಯಕ್ತಿಯಂತೆ ಓಡಾಡಿರುವ ಅವರ ಸರಳತೆಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ರಜನಿಕಾಂತ್‌ ಬರ್ಮುಡಾ ಮತ್ತು ಸಾದಾ ಟೀ ಶರ್ಟ್‌ ಧರಿಸಿ ಶಾಂತ ಚಿತ್ತದಿಂದ ಪೋಯಸ್ ಗಾರ್ಡನ್‌ನಲ್ಲಿ ವಾಕ್‌ ಮಾಡಿದ್ದಾರೆ. ಜು. 16ರ ಬೆಳಗ್ಗೆ ಅವರು ವಾಕಿಂಗ್‌ ಮಾಡುತ್ತಿರುವುದನ್ನು ಗಮನಿಸಿದ ನೆರೆಹೊರೆಯವರೊಬ್ಬರು ಫೋಟೊ ಕ್ಲಿಕ್ಕಿಸಿದ್ದಾರೆ ಎಂದು ಇಂಡಿಯಾ ಟುಡೇ ತಿಳಿಸಿದೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೊ ಹರಿದಾಡುತ್ತಿದೆ. ಪೋಯಸ್ ಗಾರ್ಡನ್‌ ಎನ್ನುವುದು ಚೆನ್ನೈಯ ಐಷಾರಾಮಿ ವಸತಿ ಪ್ರದೇಶಗಳಲ್ಲಿ ಒಂದು. ಇಲ್ಲಿ ಅನೇಕ ಸಿನಿಮಾ ತಾರೆಯರು ಮತ್ತು ರಾಜಕಾರಣಿಗಳು ವಾಸವಾಗಿದ್ದಾರೆ.



ದೇಶದ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದರೂ, ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದರೂ ಸಾಮಾನ್ಯ ವ್ಯಕ್ತಿಯಂತೆ ತಲೈವಾ ಇಲ್ಲಿ ಓಡಾಡಿದ್ದಾರೆ. ಅವರ ಈ ಸರಳತೆಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಭದ್ರತಾ ಸಿಬ್ಬಂದಿ ಇಲ್ಲದೆ ಅವರು ಹೊರಗಿಳಿದಿದ್ದು, ಅವರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸುದ್ದಿಯನ್ನೂ ಓದಿ: Actor Rajinikanth: ಮತ್ತೊಂದು ದಾಖಲೆ ಬರೆದ ರಜನಿಕಾಂತ್‌; ಬಿಡುಗಡೆ ಮುನ್ನವೇ ಬರೋಬ್ಬರಿ 120 ಕೋಟಿ ರೂ.ಗೆ ʼಕೂಲಿʼ ಒಟಿಟಿ ಹಕ್ಕು ಸೇಲ್‌?

ಸದ್ಯದ ಪ್ರಾಜೆಕ್ಟ್‌

ಸದ್ಯ ದೇಶದ ಸಿನಿಪ್ರಿಯರ ಗಮನ ಸೆಳೆದಿರುವ ʼಕೂಲಿʼ ಚಿತ್ರ ಆ. 14ರಂದು ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಹೊಸ ಬಗೆಯ ಚಿತ್ರಗಳ ಮೂಲಕ ಕಾಲಿವುಡ್‌ನ ಗಮನ ಸೆಳೆದಿರುವ ಲೋಕೇಶ್‌ ಕನಗರಾಜ್‌ ಮೊದಲ ಬಾರಿಗೆ ರಜನಿಕಾಂತ್‌ಗೆ ಆ್ಯಕ್ಷನ್‌ ಕಟ್ ಹೇಳುತ್ತಿರುವುದರಿಂದ ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗಿದೆ. ಜತೆಗೆ ಈ ಚಿತ್ರದಲ್ಲಿ ವಿವಿಧ ಚಿತ್ರರಂಗ ಘಟಾನುಘಟಿಗಳಿ ಬಣ್ಣ ಹಚ್ಚಿದ್ದಾರೆ. ಬಾಲಿವುಡ್‌ನಿಂದ ಆಮೀರ್‌ ಖಾನ್‌, ಸ್ಯಾಂಡಲ್‌ವುಡ್‌ನಿಂದ ಉಪೇಂದ್ರ, ಟಾಲಿವುಡ್‌ನಿಂದ ನಾಗಾರ್ಜುನ್‌, ಮಾಲಿವುಡ್‌ನಿಂದ ಸೌಬಿನ್‌ ಶಾಹಿರ್‌ ಮತ್ತಿತರರು ನಟಿಸಿದ್ದಾರೆ. ಜತೆಗೆ ಶ್ರುತಿ ಹಾಸನ್‌, ಸತ್ಯರಾಜ್‌, ಬೆಬಾ ಮೋನಿಕಾ ಜಾನ್‌ ಮತ್ತಿತರರು ಅಭಿನಯಿಸಿದ್ದಾರೆ. ಪೂಜಾ ಹೆಗ್ಡೆ ವಿಶೇಷ ಹಾಡಿಗೆ ಸೊಂಟ ಬಳುಕಿಸಿದ್ದಾರೆ.

ಇದರ ಜತೆಗೆ ರಜಿನಿಕಾಂತ್‌ ʼಜೈಲರ್‌ 2' ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅವರು ಸದ್ಯ ಚಿಕ್ಕ ಬ್ರೇಕ್‌ ತೆಗೆದುಕೊಂಡಿದ್ದಾರೆ. ನೆಲ್ಸನ್‌ ದಿಲೀಪ್‌ಕುಮಾರ್‌ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್‌ ಮಗಳ ಪಾತ್ರದಲ್ಲಿ ಕನ್ನಡತಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ ಎನ್ನುವ ಗಾಳಿ ಸುದ್ದಿ ಹಬ್ಬಿದೆ. ಅದಾಗ್ಯೂ ರಜನಿಕಾಂತ್‌ ಹೊರತುಪಡಿಸಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ನಟ ಶಿವ ರಾಜ್‌ಕುಮಾರ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.