Rekha Gupta: ಪ್ರಧಾನಿ ಮೋದಿಯನ್ನು ಭೇಟಿಯಾದ ದಿಲ್ಲಿ ಸಿಎಂ ರೇಖಾ ಗುಪ್ತಾ
ದಿಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 2 ದಿನಗಳ ಬಳಿಕ ರೇಖಾ ಗುಪ್ತಾ ಶನಿವಾರ (ಫೆ. 22) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಇದಕ್ಕೂ ಮೊದಲು ರೇಖಾ ಅವರು ಪಿಡಬ್ಲ್ಯುಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಾಳಾದ ರಸ್ತೆಗಳನ್ನು ದುರಸ್ತಿಗೊಳಿಸಲು ಸೂಚನೆ ನೀಡಿದರು.

ರೇಖಾ ಗುಪ್ತಾ.

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 2 ದಿನಗಳ ಬಳಿಕ ರೇಖಾ ಗುಪ್ತಾ (Rekha Gupta) ಶನಿವಾರ (ಫೆ. 22) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾದರು. ಮೋದಿ ಅವರ ನಿವಾಸಕ್ಕೆ ತೆರಳಿದ ರೇಖಾ ಗುಪ್ತಾ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ಫೆ. 20ರಂದು ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಎನ್‌ಡಿಎ ನಾಯಕರು ಭಾಗವಹಿಸಿದ್ದರು.
ಇದಕ್ಕೂ ಮೊದಲು ರೇಖಾ ಅವರು ಪಿಡಬ್ಲ್ಯುಡಿ (Public Works Department) ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಾಳಾದ ರಸ್ತೆಗಳನ್ನು ದುರಸ್ತಿಗೊಳಿಸಲು ಸೂಚನೆ ನೀಡಿದರು. ಈ ಬಗ್ಗೆ ಮಾಹಿತಿ ನೀಡಿದ ಬಿಜೆಪಿ, ʼʼದಿಲ್ಲಿಯ ಮೂಲ ಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು ಮತ್ತು ದಿಲ್ಲಿಯಲ್ಲಿ ಅಗೆದ, ಹಾನಿಗೊಳಗಾದ ರಸ್ತೆಗಳು ಮತ್ತು ಸಂಚಾರಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗ್ಗೆ ವಿವರವಾಗಿ ಚರ್ಚೆ ನಡೆಸಿರು. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನೂ ನೀಡಿದರು" ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದೆ.
आज प्रधानमंत्री आवास में यशस्वी प्रधानमंत्री माननीय @narendramodi जी से शिष्टाचार भेंट की।
— Rekha Gupta (@gupta_rekha) February 22, 2025
आपके मार्गदर्शन और नेतृत्व में भाजपा की डबल इंजन सरकार लोक कल्याण और सुशासन के पथ पर चलते हुए दिल्लीवासियों के सपनों को एक विकसित दिल्ली में बदलने को प्रतिबद्ध है।… pic.twitter.com/W6hVfVaEjl
ಈ ಮಧ್ಯೆ ದಿಲ್ಲಿಯ ಪಿಡಬ್ಲ್ಯುಡಿ ಸಚಿವ ಪರ್ವೇಶ್ ವರ್ಮಾ ಅವರು ಭೈರೋನ್ ಮಾರ್ಗದಿಂದ ರಿಂಗ್ ರಸ್ತೆಯ ಸರೈ ಕಾಲೆ ಖಾನ್‌ವರೆಗಿನ ಇಲಾಖೆಯ ಯೋಜನೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಅವರು ಇಲಾಖೆಯ ಕುಂದು ಕೊರತೆಗಳ ಬಗ್ಗೆ ಮಾತನಾಡಿದರು. 4 ಕಿ.ಮೀ. ಉದ್ದದ ರಸ್ತೆ ದುರಸ್ತಿ ಮಾಡಲಾಗುತ್ತಿರುವ ವೇಳೆ ಸಂಚಾರ ದಟ್ಟಣೆಯನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬ ಬಗ್ಗೆ ಅಧಿಕಾರಿಗಳ ಬಳಿ ವಿಚಾರಿಸಿದರು. ಪ್ರತಿ ಲೇನ್‌ನಲ್ಲಿ ಕೆಲಸ ನಡೆಯುತ್ತಿದೆ ಮತ್ತು ಮುಖ್ಯವಾಗಿ ರಾತ್ರಿಯಲ್ಲಿ ಮಾಡಲಾಗುತ್ತದೆ ಎಂದು ಅಧಿಕಾರಿ ವರ್ಮಾ ಅವರಿಗೆ ಮಾಹಿತಿ ನೀಡಿದರು.
ಈ ಸುದ್ದಿಯನ್ನೂ ಓದಿ: CM Rekha Gupta: ದಿಲ್ಲಿ ಮುಖ್ಯಮಂತ್ರಿಯಾಗಿ ರೇಖಾ ಗುಪ್ತ ಪ್ರಮಾಣ ವಚನ: ಬಿಜೆಪಿ ಕೊಟ್ಟ ಸಂದೇಶವೇನು?
ಪತ್ರ ಬರೆದ ಅತಿಶಿ
"ನಿಮ್ಮ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆ ಫೆ. 20ರಂದು ನಡೆಯಿತು. ಆದರೆ ಮಹಿಳೆಯರಿಗೆ 2,500 ರೂ. ನೀಡುವ ಯೋಜನೆಯನ್ನು ಅಂಗೀಕರಿಸಿಲ್ಲ. ದಿಲ್ಲಿಯ ತಾಯಂದಿರು ಮತ್ತು ಸಹೋದರಿಯರು ಮೋದಿ ಅವರ ಭರವಸೆಯನ್ನು ನಂಬಿದ್ದರು ಮತ್ತು ಈಗ ಅವರು ಮೋಸ ಹೋಗಿದ್ದಾರೆ ಎಂದು ಭಾವಿಸುತ್ತಾರೆ" ಎಂದು ಮಾಜಿ ಸಿಎಂ, ಆಪ್ ಮುಖಂಡ ಅತಿಶಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಪ್ರಧಾನ ಮಂತ್ರಿ ಅವರನಿವಾಸಕ್ಕೆ ತೆರಳುವ ಮೊದಲು ರೇಖಾ ಗುಪ್ತಾ ಅವರು ಬೆಳಗ್ಗೆ ಶಾಲಿಮಾರ್ ಬಾಗ್‌ನಲ್ಲಿರುವ ತಮ್ಮ ಮನೆಯ ಮೊದಲ ಮಹಡಿಯ ಬಾಲ್ಕನಿಯಿಂದ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ದಿಲ್ಲಿ ಸಿಎಂ ಆಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಪ್ರಧಾನಿ ಮೋದಿ ಅವರ ಆಯುಷ್ಮಾನ್ ಭಾರತ್ ಯೋಜನೆಯನ್ನು ಅನುಮೋದಿಸಿದ್ದಾಗಿ ತಿಳಿಸಿದರು. ಜತೆಗೆ ಒಂದು ದಿನವೂ ವ್ಯರ್ಥ ಮಾಡದೆ ಜನರ ಸೇವೆಯನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು.