ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Parliament Security Breach: ಸಂಸತ್‌ನಲ್ಲಿ ʻಸ್ಮೋಕ್‌ ಬಾಂಬ್‌ʼ ಸಿಡಿಸಿ ದಾಂಧಲೆ ಎಬ್ಬಿಸಿದ್ದ ಇಬ್ಬರಿಗೆ ಜಾಮೀನು

ಸಂಸತ್‌ನಲ್ಲಿ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಆರೋಪಿಗಳಾದ ನೀಲಂ ಆಜಾದ್ ಮತ್ತು ಮಹೇಶ್ ಕುಮಾವತ್‌ಗೆ ಜಾಮೀನು ನೀಡಿದೆ. ಮಾಧ್ಯಮಗಳಿಗೆ ಯಾವುದೇ ಸಂದರ್ಶನಗಳನ್ನು ನೀಡಬಾರದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಏನನ್ನೂ ಪೋಸ್ಟ್ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಖಡಕ್‌ ಸೂಚನೆ ನೀಡಿದೆ.

ಸಂಸತ್‌ನಲ್ಲಿ ʻಸ್ಮೋಕ್‌ ಬಾಂಬ್‌ʼ ಸ್ಫೋಟ-ಆರೋಪಿಗಳಿಗೆ ಜಾಮೀನು

Profile Rakshita Karkera Jul 2, 2025 11:07 AM

ನವದೆಹಲಿ: ಎರಡು ವರ್ಷಗಳ ಹಿಂದೆ ಸಂಸತ್‌ನಲ್ಲಿ ಸ್ಮೋಕ್‌ ಕ್ಯಾನ್‌ ಸಿಡಿಸಿ(Parliament Security Breach) ಕೆಲ ಕಾಲ ಆತಂಕ ಸೃಷ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಆರೋಪಿಗಳಿಬ್ಬರಿಗೆ ಇಂದು ಜಾಮೀನು ಮಂಜೂರು ಮಾಡಿದೆ. 50,000ರೂ. ದಂಡ ವಿಧಿಸುವ ಮೂಲಕ ಕೋರ್ಟ್‌ ಇಬ್ಬರು ಆರೋಪಿಗಳಾದ ನೀಲಂ ಆಜಾದ್ ಮತ್ತು ಮಹೇಶ್ ಕುಮಾವತ್‌ಗೆ ಷರತ್ತುಬದ್ಧ ಜಾಮೀನು ಜಾರಿಗೊಳಿಸಿದೆ.

ದೆಹಲಿ ಹೈಕೋರ್ಟ್ ತನ್ನ ಆದೇಶದಲ್ಲಿ, ನೀಲಂ ಆಜಾದ್ ಮತ್ತು ಮಹೇಶ್ ಕುಮಾವತ್ ಮಾಧ್ಯಮಗಳಿಗೆ ಯಾವುದೇ ಸಂದರ್ಶನಗಳನ್ನು ನೀಡಬಾರದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಏನನ್ನೂ ಪೋಸ್ಟ್ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಹೇಳಿದೆ. ಅಲ್ಲದೇ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪೊಲೀಸರ ಮುಂದೆ ಹಾಜರಾಗುವಂತೆ ನ್ಯಾಯಾಲಯವು ಆರೋಪಿಗಳಿಗೆ ಸೂಚಿಸಿದೆ.

ಈ ಸುದ್ದಿಯನ್ನೂ ಓದಿ: ಪ್ರಧಾನಿ ಭದ್ರತಾ ವೈಫಲ್ಯ ಪ್ರಕರಣಕ್ಕೆ ಎಸ್ಪಿ ಲೋಪವೇ ಕಾರಣ

ಮೇ 21 ರಂದು, ನ್ಯಾಯಮೂರ್ತಿಗಳಾದ ಸುಬ್ರಮೋನಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರ ಪೀಠವು ನೀಲಂ ಆಜಾದ್ ಮತ್ತು ಮಹೇಶ್ ಕುಮಾವತ್ ಅವರ ಜಾಮೀನು ಅರ್ಜಿಗಳ ಮೇಲಿನ ಆದೇಶವನ್ನು ಕಾಯ್ದಿರಿಸಿತ್ತು. ಆರೋಪಿಗಳು ತಮ್ಮ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದರು.

ಏನಿದು ಘಟನೆ?

2023 ಡಿಸೆಂಬರ್‌ನಲ್ಲಿ ಸಂಸತ್‌ನಲ್ಲಿ ಚಳಿಗಾಲದ ಅಧಿವೇಶನ ನಡೆಸಯುತ್ತಿದ್ದ ವೇಳೆ ಈ ಸ್ಮೋಕ್‌ ಬಾಂಬ್‌ ಸ್ಫೋಟಗೊಂಡಿತ್ತು.ಪಾಸ್ ಪಡೆದಿದ್ದ ಇಬ್ಬರು ದುಷ್ಕರ್ಮಿಗಳು ಲೋಕಸಭೆಯ ಗ್ಯಾಲರಿಯಿಂದ ಸಂಸದರು ಕುಳಿತಿದ್ದ ಸ್ಥಳಕ್ಕೆ ಧುಮುಕಿ ಬಣ್ಣದ ಹೊಗೆ ಬರುವ ವಸ್ತುಗಳನ್ನು ಸ್ಫೋಟಿಸಿದ್ದರು. ಇದೇ ವೇಳೆ ಸಂಸತ್‌ನ ಹೊರಗೆ ಇದ್ದ ಓರ್ವ ಯುವತಿ ಹಾಗೂ ಯುವಕ ಕೂಡಾ ಬಣ್ಣದ ಹೊಗೆ ಬರುವ ಸ್ಮೋಕ್ ಬಾಂಬ್, ಕಲರ್ ಸ್ಪ್ರೇ ಮಾದರಿಯ ವಸ್ತುಗಳನ್ನು ಸ್ಫೋಟಿಸಿದ್ದರು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇನ್ನು ಲೋಕಸಭೆ ಒಳಗೆ ಅಕ್ರಮವಾಗಿ ಪ್ರವೇಶಿಸಿದ ಇಬ್ಬರ ಪೈಕಿ ಓರ್ವನನ್ನು ಮಹಾರಾಷ್ಟ್ರದ ಸಾಗರ್ ಶರ್ಮಾ ಎಂದು ಗುರುತಿಸಲಾಗಿತ್ತು. ಮತ್ತೊಬ್ಬ ಮೈಸೂರಿನ ಮನೋರಂಜನ್. ಇನ್ನು ಸಂಸತ್‌ನ ಹೊರಗೆ ಬಣ್ಣದ ಹೊಗೆ ಹಾಕಿದ ಆರೋಪಿಗಳ ಪೈಕಿ 42 ವರ್ಷ ವಯಸ್ಸಿನ ನೀಲಂ ಆಜಾದ್‌ ಹರ್ಯಾಣದವರು ಹಾಗೂ 25 ವರ್ಷ ವಯಸ್ಸಿನ ಅಮೋಲ್ ಶಿಂಧೆ ಮಹಾರಾಷ್ಟ್ರದ ಲಾತೂರಿನ ಮೂಲದವನು. ಇವರ ಜೊತೆ ಮಹೇಶ್‌ ಕುಮಾವತ್‌ ಕೂಡ ಕೈ ಜೋಡಿಸಿದ್ದ ಎನ್ನಲಾಗಿದೆ. ಇದೀಗ ಪ್ರಕರಣದಲ್ಲಿ ನೀಲಂ ಮತ್ತು ಮಹೇಶ್‌ ಕುಮಾವತ್‌ ಜಾಮೀನು ಸಿಕ್ಕಿದೆ.