Viral Video: ಶಾಲೆಯಿಂದ ತಪ್ಪಿಸಿಕೊಂಡು ಓಡಿದ ಪುಟ್ಟ ಬಾಲಕ; ನಮ್ಮ ಬಾಲ್ಯ ನೆನಪಿಸುವ ವಿಡಿಯೊ ನೋಡಿ
ಅರುಣಾಚಲ ಪ್ರದೇಶದ ಪುಟ್ಟ ಬಾಲಕನೊಬ್ಬ ಅಳುತ್ತಾ ಶಾಲೆಯಿಂದ ಓಡಿಹೋಗಿದ್ದು, ಆತನನ್ನು ಪುಸಲಾಯಿಸಿ ಮತ್ತೆ ಕರೆದುಕೊಂಡು ಬರಲು ಶಿಕ್ಷಕರು ಮಾಡಿದ ಹರಸಾಹಸದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ನೆಟ್ಟಿಗರನ್ನು ನಗೆಯ ಕಡಲಿನಲ್ಲಿ ಮುಳುಗಿಸಿದೆ.


ಇಟಾನಗರ: ಶಾಲೆಗೆ ಹೋಗುವಾಗ ಚಿಕ್ಕಮಕ್ಕಳು ಇಲ್ಲಸಲ್ಲದ ನೆಪವೊಡ್ಡಿ ತಪ್ಪಿಸಿಕೊಳ್ಳಲು ನೋಡುತ್ತಾರೆ. ಮಗುವನ್ನು ಪುಸಲಾಯಿಸಿ ಶಾಲೆಗೆ ಕಳುಹಿಸುವುದೇ ಪೋಷಕರಿಗೆ ದೊಡ್ಡ ತಲೆನೋವು. ಇನ್ನು ಶಾಲೆಗೆ ಹೋದ ಮಕ್ಕಳು ಕೂಡ ಹೊಟ್ಟೆನೋವು, ತಲೆನೋವಿನ ನೆಪವೊಡ್ಡಿ ಶಿಕ್ಷಕರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಬಾಲಕನೊಬ್ಬನ ವಿಡಿಯೊ ವೈರಲ್ (Viral Video) ಆಗಿದ್ದು ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸಿದೆ. ಅರುಣಾಚಲ ಪ್ರದೇಶದ ಪುಟ್ಟ ಬಾಲಕನೊಬ್ಬ ಶಾಲೆಯಿಂದ ಓಡಿಹೋಗುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹೊಟ್ಟೆ ಹುಣ್ಣಾಗುವ ಹಾಗೇ ನಕ್ಕಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ತನ್ನ ಶಾಲಾ ಬ್ಯಾಗ್ ಅನ್ನು ಬಿಗಿಯಾಗಿ ಹಿಡಿದುಕೊಂಡು, ಆ ಪುಟ್ಟ ಮಗು ಶಾಲಾ ಆವರಣದಿಂದ ವೇಗವಾಗಿ ಓಡಿಹೋಗುವುದು ಸೆರೆಯಾಗಿದೆ. ಶಿಕ್ಷಕರು ಬಾಲಕನ್ನು ತರಗತಿಗೆ ಮರಳಿ ಕರೆತರಲು ಆತನ ಬೆನ್ನಟ್ಟಿದ್ದಾರೆ. ಆದರೆ ಬಾಲಕ ಜೋರಾಗಿ ಅಳುತ್ತಾ ರಸ್ತೆಯಲ್ಲಿ ಕುಳಿತಿದ್ದಾನೆ. ಅವನ ಮನವೊಲಿಸಲು ಶಿಕ್ಷಕರು ಅವನಿಗೆ ಮಫಿನ್‌ಗಳ ಪ್ಯಾಕೆಟ್, ಊಟದ ಡಬ್ಬಿ, ಸ್ವಿಟ್ಸ್ ನೀಡಿ ಪುಸಲಾಯಿಸಿದ್ದಾರೆ. ಬಾಲಕನು ಅವುಗಳನ್ನು ತೆಗೆದುಕೊಂಡಿದ್ದಾನೆ. ಆದರೆ ಶಾಲೆಗೆ ಬರಲು ಮಾತ್ರ ಹಿಂದೇಟು ಹಾಕಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಮಂದಿ ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಕೆಲವರು ವಿಡಿಯೊ ನೋಡಿ ನಗು ತಡೆಯಲಾಗುತ್ತಿಲ್ಲ ಎಂದು ಹೇಳಿದರೆ, ಇನ್ನು ಕೆಲವರು ತಾವು ಒಮ್ಮೆಯೂ ಶಾಲೆಯಿಂದ ಓಡಿಬರುವ ಪ್ರಯತ್ನ ಮಾಡಲಿಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಇವ್ನೇ ನಿಜವಾದ ಹೀರೋ! ನೀರಿಗೆ ಬಿದ್ದ ಮಗಳ ಜೀವ ಉಳಿಸಲು ತಂದೆ ಮಾಡಿದ್ದೇನು ಗೊತ್ತಾ?
"ಒಬ್ಬ ನರ್ಸರಿ ಶಿಕ್ಷಕಿಯಾಗಿ, ನಾನು ಮೊದಲ ತಿಂಗಳಲ್ಲಿ ಪ್ರತಿದಿನ ಇಂತಹ ವಿಷಯಗಳನ್ನು ನೋಡುತ್ತೇನೆ. ಕೊನೆಗೆ ಅವರು ಅದಕ್ಕೆ ಒಗ್ಗಿಕೊಂಡ ನಂತರ, ಅಳುವುದನ್ನು ನಿಲ್ಲಿಸಿ ಶಾಲೆಗೆ ಬರುತ್ತಾರೆ" ಎಂದು ಕಾಮೆಂಟ್ ಮಾಡಿದ್ದಾರೆ. "ಶಾಲೆಯಿಂದ ತಪ್ಪಿಸಿಕೊಳ್ಳುವ ಸಮಯದಲ್ಲಿಯೂ ತನ್ನ ಬ್ಯಾಗ್ ಹೊತ್ತುಕೊಂಡು ಹೋದ ಮಗು ಬಹಳ ಬುದ್ಧಿವಂತ" ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ."ಅವನು ಸಿಕ್ಕಿಬಿದ್ದ ಕ್ಷಣ, ತುಂಬಾ ಮುದ್ದಾಗಿತ್ತು" ಎಂದು ಒಂದು ಕಾಮೆಂಟ್‍ನಲ್ಲಿ ಬರೆಯಲಾಗಿದೆ. "ಇದು ನನ್ನ ನರ್ಸರಿ ದಿನಗಳನ್ನು ನೆನಪಿಸುತ್ತದೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.