ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srinidhi Shetty: ತಮಿಳು ಸೂಪರ್‌ ಸ್ಟಾರ್‌ ಅಜಿತ್‌ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ? ʼಕೆಜಿಎಫ್‌ʼ ಬೆಡಗಿಗೆ ಮತ್ತೊಂದು ಬಂಪರ್‌ ಆಫರ್‌

Ajith Kumar: ಪ್ರಶಾಂತ್‌ ನೀಲ್‌-ಯಶ್‌ ಕಾಂಬಿನೇಷನ್‌ನ ʼಕೆಜಿಎಫ್‌' ಸರಣಿ ಚಿತ್ರದ ಮೂಲಕ ಇಡೀ ದೇಶದ ಗಮನ ಸೆಳೆದ ಶ್ರೀನಿಧಿ ಶೆಟ್ಟಿ ಸದ್ಯ ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇದೀಗ ಅಜಿತ್‌ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ತಮಿಳು ಸೂಪರ್‌ ಸ್ಟಾರ್‌ ಅಜಿತ್‌ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ?

ಶ್ರೀನಿಧಿ ಶೆಟ್ಟಿ-ಅಜಿತ್‌ ಕುಮಾರ್‌.

Profile Ramesh B Jul 2, 2025 6:34 PM

ಬೆಂಗಳೂರು: ಸ್ಯಾಂಡಲ್‌ವುಡ್‌ ಕಲಾವಿದರು ಇತ್ತೀಚಿನ ವರ್ಷಗಳಲ್ಲಿ ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಅದರಲ್ಲಿಯೂ ನಾಯಕಿಯರಿಗೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ರುಕ್ಮಿಣಿ ವಸಂತ್‌ ಮತ್ತಿತರ ಅಪ್ಪಟ ಕನ್ನಡದ ಪ್ರತಿಭಾನ್ವಿತರು ತೆಲುಗು, ತಮಿಳು, ಹಿಂದಿ ಚಿತ್ರರಂಗಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಶ್ರೀನಿಧಿ ಶೆಟ್ಟಿ (Srinidhi Shetty). ʼಕೆಜಿಎಫ್‌ʼ (KGF) ಸರಣಿ ಚಿತ್ರಗಳ ಮೂಲಕ ದೇಶದ ಗಮನ ಸೆಳೆದ ಅವರು ಅಳೆದೂ ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಟಾಲಿವುಡ್‌ ಸೂಪರ್‌ ಸ್ಟಾರ್‌ ನಾನಿ ಜತೆಗಿನ 'ಹಿಟ್‌: ದಿ ಥರ್ಡ್‌ ಕೇಸ್‌' ಹಿಟ್‌ ಲಿಸ್ಟ್‌ ಸೇರಿದ್ದು, ಶ್ರೀನಿಧಿ ಅವರ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ʼಜೈಲರ್‌ 2' ಸಿನಿಮಾದಲ್ಲಿ ಶ್ರೀನಿಧಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಕೇಳಿ ಬಂದಿತ್ತು. ಈ ಮಧ್ಯೆ ಅಜಿತ್‌ ಕುಮಾರ್‌ (Ajith Kumar) ನಟನೆಯ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ವದಂತಿಯೂ ಹಬ್ಬಿದೆ. ಒಂದು ವೇಳೆ ಈ ಸುದ್ದಿ ನಿಜವಾದರೆ ಕನ್ನಡದ ಬೆಡಗಿಗೆ ಬಂಪರ್‌ ಅವಕಾಶ ಸಿಕ್ಕಂತಾಗುತ್ತದೆ.

ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ತಮಿಳು ನಟ ಅಜಿತ್‌ ಕುಮಾರ್‌ ಅವರ ಚಿತ್ರ ಘೋಷಣೆಯಾಗುತ್ತಲೇ ನಿರೀಕ್ಷೆ ಗರಿಗೆದರುತ್ತದೆ. ಸದ್ಯ ಅಂತಹದ್ದೊಂದು ಕುತೂಹಲವನ್ನು ಅವರ ಮುಂದಿನ ಚಿತ್ರ ಹುಟ್ಟು ಹಾಕಿದೆ. ಅಜಿತ್‌ ಅವರ 64ನೇ ಸಿನಿಮಾ ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆ ಇದ್ದು, ಇದರಲ್ಲಿ ನಾಯಕಿಯಾಗುವ ಚಾನ್ಸ್‌ ಶ್ರೀನಿಧಿ ಶೆಟ್ಟಿಗೆ ಒಲಿದಿದೆ ಎನ್ನಲಾಗುತ್ತಿದೆ.

ಆಗಸ್ಟ್‌ನಲ್ಲಿ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈ ವರ್ಷ ಅಜಿತ್‌ ಅಭಿನಯದ ʼವಿಡಾಮುಯರ್ಚಿʼ ಮತ್ತು ʼಗುಡ್‌ ಬ್ಯಾಡ್‌ ಅಗ್ಲಿʼ ಚಿತ್ರಗಳು ತೆರೆಕಂಡು ಸಾಧಾರಣ ಯಶಸ್ಸು ಪಡೆದಿದ್ದವು. ಹೀಗಾಗಿ ಅವರ ಮುಂದಿನ ಚಿತ್ರದ ಬಗ್ಗೆ ಕುತೂಹಲ ಮೂಡಿದೆ. ಅಜಿತ್‌ ಕಾರ್‌ ರೇಸರ್‌ ಕೂಡ ಹೌದು. ಹೀಗಾಗಿ ಅವರ ಈ ಬಾರಿಯ ರೇಸಿಂಗ್‌ ಸೀಸಂಗ್‌ ಮುಗಿದ ಬಳಿಕ ಈ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ.

ಈ ಸುದ್ದಿಯನ್ನೂ ಓದಿ: HIT The Third Case: ಹಿಟ್‌ ಲಿಸ್ಟ್‌ಗೆ ಸೇರ್ತಾ ನಾನಿ-ಶ್ರೀನಿಧಿ ಶೆಟ್ಟಿ ಜೋಡಿಯ ʼಹಿಟ್ 3ʼ? ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟಾಯ್ತು?

ಮುಖ್ಯ ಪಾತ್ರದಲ್ಲಿ ಮೋಹನ್‌ಲಾಲ್‌?

ಈ ಸಿನಿಮಾವನ್ನು ರೋಮಿಯೋ ಪಿಕ್ಚರ್ಸ್‌ ನಿರ್ಮಿಸಲಿದೆ. ಈ ನಿರ್ಮಾಣ ಸಂಸ್ಥೆಯ ಈ ಹಿಂದಿನ ʼವಿಶ್ವಾಸಂʼ ಮತ್ತು ʼವಿವೇಗಂʼ ಚಿತ್ರಗಳಲ್ಲಿ ಅಜಿತ್‌ ನಟಿಸಿದ್ದರು. ಮೂಲಗಳ ಪ್ರಕಾರ ʼಗುಡ್‌ ಬ್ಯಾಡ್‌ ಅಗ್ಲಿʼ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ಅಧಿಕ್‌ ರವಿಚಂದ್ರನ್‌ ಅವರೇ ಅಜಿತ್‌ ಅವರ ಮುಂದಿನ ಚಿತ್ರವನ್ನು ನಿರ್ದೇಶಿಸಲಿದ್ದಾರಂತೆ. ವಿಶೇಷ ಎಂದರೆ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅಜಿತ್‌-ಮೋಹನ್‌ಲಾಲ್‌-ಶ್ರೀನಿಧಿ ಶೆಟ್ಟಿ ಪಾತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇರಲಿದೆಯಂತೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

ಎಲ್ಲವೂ ಅಂದುಕೊಂಡಂತಾದರೆ ಇದು ಶ್ರೀನಿಧಿ ಶೆಟ್ಟಿ ಅವರ 2ನೇ ತಮಿಳು ಚಿತ್ರ ಇದಾಗಲಿದೆ. ಈ ಹಿಂದೆ ಅವರು 2022ರಲ್ಲಿ ತೆರೆಕಂಡ ʼಕೋಬ್ರಾʼ ತಮಿಳು ಚಿತ್ರದಲ್ಲಿ ವಿಕ್ರಂಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಭಾರಿ ನಿರೀಕ್ಷೆಯೊಂದಿಗೆ ತೆರೆಕಂಡಿದ್ದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಹೀಗಾಗಿ ಅವರು ಪವರ್‌ಫುಲ್‌ ಪಾತ್ರದೊಂದಿಗೆ ಕಾಲಿವುಡ್‌ಗೆ ಕಂಬ್ಯಾಕ್‌ ಮಾಡುವ ಸಿದ್ಧತೆಯಲ್ಲಿದ್ದಾರೆ.