IND vs ENG: ಇಂಗ್ಲೆಂಡ್ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿದ ಸೂರ್ಯವಂಶಿ
Vaibhav Suryavanshi: ಬಿರುಸಿನ ಬ್ಯಾಟಿಂಗ್ ನಡೆಸಿದ ಸೂರ್ಯವಂಶಿ 31 ಎಸೆತಗಳಿಂದ ಒಟ್ಟು 86 ರನ್ ಗಳಿಸಿದರು. ಮಳೆಯಿಂದಾಗಿ 40 ಓವರ್‌ಗೆ ಸೀಮಿತಗೊಳಿಸಿದ ಪಂದ್ಯದಲ್ಲಿ 269 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಸೂರ್ಯವಂಶಿ ನೆರವಾದರು.


ಲಂಡನ್: ಇತ್ತೀಚೆಗೆ ಮುಕ್ತಾಯ ಕಂಡಿದ್ದ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದಲ್ಲಿ ಬೆರಗು ಮೂಡಿಸಿದ್ದ 14 ರ ಹರೆಯದ ಬ್ಯಾಟರ್ ವೈಭವ್ ಸೂರ್ಯವಂಶಿ(Vaibhav Suryavanshi) ಇಂಗ್ಲೆಂಡ್(IND vs ENG) ವಿರುದ್ಧದ 19 ವರ್ಷದೊಳಗಿನವರ(Under-19 ODI) ಏಕದಿನ ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
ಬುಧವಾರ ನಾರ್ಥಾಂಪ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಯೂತ್ ಏಕದಿನ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ವೈಭವ್ ಸೂರ್ಯವಂಶಿ, ಅಂಡರ್-19 ಏಕದಿನ ಪಂದ್ಯದಲ್ಲಿ ಎರಡನೇ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದಾಖಲೆ ರಿಷಭ್ ಪಂತ್ ಹೆಸರಿನಲ್ಲಿದೆ. ಪಂತ್ - 2016 ರ ಅಂಡರ್ -19 ವಿಶ್ವಕಪ್‌ನಲ್ಲಿ ನೇಪಾಳ ವಿರುದ್ಧ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.
ಬಿರುಸಿನ ಬ್ಯಾಟಿಂಗ್ ನಡೆಸಿದ ಸೂರ್ಯವಂಶಿ 31 ಎಸೆತಗಳಿಂದ ಒಟ್ಟು 86 ರನ್ ಗಳಿಸಿದರು. ಅವರ ಈ ಬ್ಯಾಟಿಂಗ್ ಆರ್ಭಟದ ವೇಳೆ 9 ಸಿಕ್ಸರ್, 6 ಬೌಂಡರಿ ಸಿಡಿಯಿತು. ಮಳೆಯಿಂದಾಗಿ 40 ಓವರ್‌ಗೆ ಸೀಮಿತಗೊಳಿಸಿದ ಪಂದ್ಯದಲ್ಲಿ 269 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಸೂರ್ಯವಂಶಿ ನೆರವಾದರು.
Vaibhav Suryavanshi smashes back to back sixes! 🥶🔥 pic.twitter.com/lyIURNP84q
— Sports Culture (@SportsCulture24) July 2, 2025
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಿತು. ನಾಯಕ ಥಾಮಸ್ ರೆವ್ ಕೇವಲ 44 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 76 ರನ್ ಗಳಿಸಿ ತಂಡದ ಮುನ್ನಡೆಗೆ ಕಾರಣರಾದರು. ಆರಂಭಿಕ ಆಟಗಾರ ಬಿಜೆ ಡಾಕಿನ್ಸ್ 62 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರೆ, ಐಸಾಕ್ ಮೊಹಮ್ಮದ್ 41 ರನ್ ಗಳಿಸಿದರು. ಭಾರತ ಪರ ಕನಿಷ್ಕ್ ಚೌಹಾಣ್ 38 ರನ್‌ಗೆ 3 ವಿಕೆಟ್ ಕಿತ್ತರು.