ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heavy Rain: ಶ್ರೀನಗರದಲ್ಲಿ ಭಾರಿ ಮಳೆ, ಗಾಳಿ, ಭೂಕುಸಿತ: ಮೂವರು ಸಾವು, 40 ಮನೆಗಳಿಗೆ ಹಾನಿ

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರಿ ಮಳೆ, ಭೂಕುಸಿತದ ಕಾರಣದಿಂದ ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೆ ಭಾರಿ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಕೆಲವು ಪ್ರದೇಶಗಳಲ್ಲಿ ದಿಢೀರ್ ಪ್ರವಾಹ ಕಾಣಿಸಿಕೊಂಡಿದ್ದು, ಮೂವರು ಮೃತಪಟ್ಟಿದ್ದಾರೆ.

ಶ್ರೀನಗರದಲ್ಲಿ ಭಾರಿ ಗಾಳಿ ಮಳೆ: ಮೂವರು ಸಾವು

ಶ್ರೀನಗರ: ಭಾರಿ ಮಳೆ (Heavy Rain), ಭೂಕುಸಿತದ (Landslide) ಕಾರಣದಿಂದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ (jammu and kashmir) ಶ್ರೀನಗರದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಅಲ್ಲದೇ ದಿಢೀರ್ ಪ್ರವಾಹ ಕಾಣಿಸಿಕೊಂಡಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭೂಕುಸಿತ ಮತ್ತು ಪ್ರವಾಹದ ಕಾರಣದಿಂದ ಶ್ರೀನಗರ ಮತ್ತು ಜಮ್ಮುವಿನ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ದಾರಿಯಲ್ಲಿ ಟ್ರಕ್‌ಗಳು ಸಿಲುಕಿಕೊಂಡಿದ್ದು, ಭೂಕುಸಿತದ ಕಾರಣ ವಾಹನಗಳು ಮಣ್ಣಿನ ಅಡಿಯಲ್ಲಿ ಹೂತು ಹೋಗಿವೆ.

ಮಳೆ, ಪ್ರವಾಹ, ಭೂಕುಸಿತದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ರಾಂಬನ್ ಕೂಡ ಒಂದು. ಇಲ್ಲಿ ಹಲವಾರು ಮರಗಳು ಧರೆಗೆ ಉರುಳಿವೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗಿದ್ದು, ಈ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ.



ರಾಂಬನ್ ಪ್ರದೇಶದಲ್ಲಿ ಭಾನುವಾರ ತೀವ್ರ ಗಾಳಿ ಮಳೆಯಾಗಿದೆ. ಬಳಿಕ ಹಠಾತ್ ಪ್ರವಾಹ ಉಂಟಾಗಿದೆ. ಇದರಿಂದ ವ್ಯಾಪಕ ನಷ್ಟವಾಗಿದೆ ಎಂದು ಉಧಮ್‌ಪುರದ ಸತೇನಿ ಪಂಚಾಯತ್‌ನ ಮಾಜಿ ಸರಪಂಚ ಪರ್ಶೋತ್ತಮ್ ಗುಪ್ತಾ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಸಂಚಾರ ವ್ಯತ್ಯಯವಾಗಿದ್ದು, ವಿದ್ಯುತ್ ಕಡಿತಗೊಂಡಿದೆ. 4- 5 ವರ್ಷಗಳ ಅನಂತರ ಇಲ್ಲಿ ಈ ರೀತಿ ತೀವ್ರವಾದ ಮಳೆ, ಗಾಳಿಯಾಗಿದೆ ಎಂದು ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ರಾಂಬನ್‌ನ ಧರಮ್ ಕುಂಡ್ ಗ್ರಾಮದಲ್ಲಿ ಸುಮಾರು 40 ಮನೆಗಳಿಗೆ ಹಾನಿಯಾಗಿದ್ದು, ಇದರಲ್ಲಿ ಸಿಲುಕಿದ್ದ 100ಕ್ಕೂ ಹೆಚ್ಚು ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಗ್ರಾಮಸ್ಥರ ರಕ್ಷಣಾ ಕಾರ್ಯದಲ್ಲಿ ತೊಡಗಿದರು.

ಇದನ್ನೂ ಓದಿ: IPL 2025: ಪಂಜಾಬ್‌ ಪಂದ್ಯಕ್ಕೆ ಆರ್‌ಸಿಬಿ ಲಿಯಾಮ್‌ ಲಿವಿಂಗ್‌ಸ್ಟೋನ್‌ರನ್ನು ಕೈ ಬಿಡಲು ಕಾರಣವೇನು?

ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಶ್ರಿ ಮತ್ತು ಬನಿಹಾಲ್ ನಡುವೆ ಸುಮಾರು 12ಕ್ಕೂ ಹೆಚ್ಚು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ ಎಂದು ಸಂಚಾರ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಇಲ್ಲಿನ ಹವಾಮಾನ ಸುಧಾರಣೆ ಆಗುವವರೆಗೆ ಮತ್ತು ರಸ್ತೆ ಸ್ವಚ್ಛವಾಗುವವರೆಗೆ ಪ್ರಮುಖ ಹೆದ್ದಾರಿಯಲ್ಲಿ ಯಾರೂ ಪ್ರಯಾಣಿಸದಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.