India And Pakistan Conflict: ಹಿಂದಿನ ಭಾರತ-ಪಾಕ್ 4 ಯುದ್ಧಗಳು ಎಷ್ಟು ದಿನಗಳ ಕಾಲ ನಡೆದಿದ್ದವು? ಇಲ್ಲಿದೆ ನಿಮಗೆ ಗೊತ್ತಿಲ್ಲದ ಮಾಹಿತಿ
ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಗಡಿಯಾಚೆಗಿನ ಸಂಘರ್ಷ 4 ದಿನಗಳ ಕಾಲ ಮಾತ್ರ ಇತ್ತು. ಅಣ್ವಸ್ತ್ರ ಶಕ್ತಿಯ ನೆರೆಯ ರಾಷ್ಟ್ರಗಳ ನಡುವೆ ತೀವ್ರ ಗುಂಡಿನ ದಾಳಿ ಮತ್ತು ಡ್ರೋನ್ ಚಟುವಟಿಕೆ ನಡೆದರೂ, ಮೇ 11ರಿಂದ 12ರ ರಾತ್ರಿಯವರೆಗೆ ಗಡಿರೇಖೆಯಲ್ಲಿ ಯಾವುದೇ ಸಂಘರ್ಷ ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಸಾಂಧರ್ಬಿಕ ಚಿತ್ರ.

ನವದೆಹಲಿ: ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವಿನ ಇತ್ತೀಚಿನ ಗಡಿಯಾಚೆಗಿನ ಸಂಘರ್ಷ ಕೇವಲ ನಾಲ್ಕು ದಿನಗಳ ಕಾಲ ಮಾತ್ರ ಇತ್ತು. ಅಣ್ವಸ್ತ್ರ ಶಕ್ತಿಯ ನೆರೆಯ ರಾಷ್ಟ್ರಗಳ (Nuclear-Armed Neigbours) ನಡುವೆ ತೀವ್ರ ಗುಂಡಿನ ದಾಳಿ ಮತ್ತು ಡ್ರೋನ್ (Drone) ಚಟುವಟಿಕೆ ನಡೆದರೂ, ಮೇ 11ರಿಂದ 12ರ ರಾತ್ರಿಯವರೆಗೆ ಭಾರೀ ಸೇನಾಸನ್ನದ್ಧವಾಗಿರುವ ಗಡಿರೇಖೆಯಲ್ಲಿ (LoC) ಯಾವುದೇ ಘಟನೆಗಳು ವರದಿಯಾಗಿಲ್ಲ. ಮೇ 10ರಂದು ಎರಡೂ ರಾಷ್ಟ್ರಗಳು ಭೂಮಿ, ಆಕಾಶ ಮತ್ತು ಸಮುದ್ರದಲ್ಲಿ ಎಲ್ಲ ಸೈನಿಕ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡವು. ಇದರಿಂದ ಸಂಭವಿಸಬಹುದಾದ ಮತ್ತಷ್ಟು ಸಂಘರ್ಷವನ್ನು ತಪ್ಪಿಸಲಾಯಿತು.
1947ರಿಂದ ಇದುವರೆಗಿನ ಯುದ್ಧಗಳ ಇತಿಹಾಸ
1947ರಿಂದ ಇದುವರೆಗೆ ಭಾರತ ಮತ್ತು ಪಾಕಿಸ್ತಾನ ನಾಲ್ಕು ಪ್ರಮುಖ ಯುದ್ಧಗಳನ್ನು ಎದುರಿಸಿವೆ. ಆದರೆ ಈ ಇತ್ತೀಚಿನ ಸಂಘರ್ಷವು ಅತ್ಯಂತ ಸಂಕ್ಷಿಪ್ತವಾಗಿತ್ತು.
ಮೊದಲ ಯುದ್ಧ (1947-48)-15 ತಿಂಗಳು
ಕಾಶ್ಮೀರ ಯುದ್ಧ ಎಂದು ಕರೆಯಲ್ಪಡುವ ಮೊದಲ ಯುದ್ಧವು 1947ರ ಅಕ್ಟೋಬರ್‌ನಿಂದ 1949ರ ಜನವರಿವರೆಗೆ 15 ತಿಂಗಳ ಕಾಲ ನಡೆಯಿತು. ಪಾಕಿಸ್ತಾನದ ಬೆಂಬಲಿತ ಬುಡಕಟ್ಟು ದಾಳಿಕೋರರು ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ಕಾಶ್ಮೀರದ ಮಹಾರಾಜ ಹರಿ ಸಿಂಗ್ ಭಾರತದೊಂದಿಗೆ ವಿಲೀನಗೊಂಡು ಅರ್ಧ ಕಾಶ್ಮೀರವನ್ನು ಉಳಿಸಿದರು. ಆದರೆ ಉಳಿದ ಭಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿತು. ಅದನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಎಂದು ಕರೆಯಲಾಯಿತು. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ಕದನ ವಿರಾಮದೊಂದಿಗೆ ಈ ಯುದ್ಧ ಕೊನೆಗೊಂಡಿತು.
ಎರಡನೇ ಯುದ್ಧ (1965)-22 ದಿನ
1965ರ ಆಗಸ್ಟ್ 5ರಿಂದ ಸೆಪ್ಟೆಂಬರ್ 23ರವರೆಗೆ 22 ದಿನಗಳ ಕಾಲ ನಡೆದ ಎರಡನೇ ಯುದ್ಧವು ಪಾಕಿಸ್ತಾನದ ‘ಆಪರೇಷನ್ ಜಿಬ್ರಾಲ್ಟರ್’ನಿಂದ ಆರಂಭವಾಯಿತು. ಇದರಲ್ಲಿ ಭಾರತ ಪ್ರಾಬಲ್ಯ ಸಾಧಿಸಿತು. ಕದನ ವಿರಾಮದ ಬಳಿಕ 1966ರ ಜನವರಿಯಲ್ಲಿ ತಾಷ್ಕೆಂಟ್ ಒಪ್ಪಂದದ ಪ್ರಕಾರ ಯುದ್ಧಕ್ಕಿಂತಲೂ ಮೊದಲಿದ್ದ ಸ್ಥಿತಿ ಮರಳಿ ಜಾರಿಗೆ ಬಂತು.
ಮೂರನೇ ಯುದ್ಧ (1971)- 13 ದಿನ
1971ರ ಡಿಸೆಂಬರ್ 3ರಿಂದ 16ರವರೆಗೆ 13 ದಿನಗಳ ಕಾಲ ನಡೆದ ಮೂರನೇ ಯುದ್ಧವು ಬಾಂಗ್ಲಾದೇಶದ ಸ್ವಾತಂತ್ರ್ಯ ಯುದ್ಧವಾಗಿತ್ತು. ಈ ಯುದ್ಧದಲ್ಲಿ ಪಾಕಿಸ್ತಾನವು ಐತಿಹಾಸಿಕ ಸೋಲನ್ನು ಎದುರಿಸಿ, 93,000 ಸೈನಿಕರು ಶರಣಾದರು. ಶಿಮ್ಲಾ ಒಪ್ಪಂದದ ಮೂಲಕ ಗಡಿರೇಖೆ (LoC) ಸ್ಥಾಪನೆಯಾಯಿತು. ಭಾರತ ವಶಪಡಿಸಿಕೊಂಡ ಭೂಪ್ರದೇಶವನ್ನು ಪಾಕಿಸ್ತಾನಕ್ಕೆ ವಾಪಸ್ ನೀಡಲಾಯಿತು.
ಕಾರ್ಗಿಲ್ ಯುದ್ಧ (1999): 2 ತಿಂಗಳು 20 ದಿನ
1999ರ ಕಾರ್ಗಿಲ್ ಯುದ್ಧ ಮೇಯಿಂದ ಜುಲೈ 26ರವರೆಗೆ ಸುಮಾರು 2 ತಿಂಗಳು 20 ದಿನಗಳ ಕಾಲ ನಡೆಯಿತು. ಪಾಕಿಸ್ತಾನದ ಸೇನೆ ಕಾರ್ಗಿಲ್ ಪ್ರದೇಶಕ್ಕೆ ಒಳನುಗ್ಗಿತ್ತು. ಭಾರತವು ತನ್ನ ಭೂಪ್ರದೇಶವನ್ನು ವಾಪಸ್ ಪಡೆದು ವಿಜಯ ಸಾಧಿಸಿತು. ಇದರಿಂದ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಯಿತು. ಅಲ್ಲದೆ ಜನರಲ್ ಪರ್ವೇಜ್ ಮುಷರಫ್‌ರಿಂದ ಸೇನಾ ದಂಗೆ ಉಂಟಾಯಿತು.
ಈ ಸುದ್ದಿಯನ್ನು ಓದಿ: Operation Sindoor: ಪಾಕ್‌ನ ಯಾವುದೇ ಯುದ್ಧ ವಿಮಾನ ದೇಶದೊಳಗೆ ಪ್ರವೇಶಿಸಿಲ್ಲ; ಭಾರತೀಯ ಸೇನೆ
ಇತರ ಪ್ರಮುಖ ಸಂಘರ್ಷಗಳು ಮತ್ತು ಕಾರ್ಯಾಚರಣೆಗಳು
ರಾನ್ ಆಫ್ ಕಚ್ ಸಂಘರ್ಷ (1965): 1965ರ ಏಪ್ರಿಲ್‌ನಲ್ಲಿ ಗುಜರಾತ್‌ನ ಕಚ್ ಪ್ರದೇಶದಲ್ಲಿ ಗಡಿ ಘರ್ಷಣೆಗಳು ಸುಮಾರು ಒಂದರಿಂದ ಎರಡು ವಾರಗಳ ಕಾಲ ನಡೆದವು.
ಆಪರೇಷನ್ ಪರಾಕ್ರಮ (2001-2002): 2001ರ ಡಿಸೆಂಬರ್ 13ರ ಸಂಸತ್ ದಾಳಿಯ ಬಳಿಕ, ಭಾರತ ಮತ್ತು ಪಾಕಿಸ್ತಾನದ ಸೇನೆಗಳು ಗಡಿಯಲ್ಲಿ 10 ತಿಂಗಳ ಕಾಲ ಉದ್ವಿಗ್ನ ಸ್ಥಿತಿಯಲ್ಲಿದ್ದವು. ಪೂರ್ಣ ಪ್ರಮಾಣದ ಯುದ್ಧ ತಪ್ಪಿತಾದರೂ, ಇದು ಎರಡೂ ರಾಷ್ಟ್ರಗಳ ನಡುವಿನ ಅತಿ ದೀರ್ಘ ಸೈನಿಕ ಸನ್ನದ್ಧತೆ ಆಗಿತ್ತು.
ಉರಿ ಸರ್ಜಿಕಲ್ ಸ್ಟ್ರೈಕ್ (2016): 2016ರ ಸೆಪ್ಟೆಂಬರ್ 18ರ ಉರಿ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಭಾರತೀಯ ಸೇನೆಯು ಸೆಪ್ಟೆಂಬರ್ 29-30ರ ರಾತ್ರಿ LoC ದಾಟಿ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಈ ಕಾರ್ಯಾಚರಣೆ ಕೆಲವೇ ಗಂಟೆಗಳಲ್ಲಿ ಮುಗಿಯಿತು.
ಬಾಲಕೋಟ್ ಏರ್ ಸ್ಟ್ರೈಕ್ (2019): 2019ರ ಫೆಬ್ರವರಿ 14ರ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ, ಭಾರತೀಯ ವಾಯುಸೇನೆಯು ಫೆಬ್ರವರಿ 26ರಂದು ಬಾಲಕೋಟ್‌ನಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಈ ದಾಳಿಯು ಕೆಲವೇ ನಿಮಿಷಗಳಲ್ಲಿ ಮುಕ್ತಾಯವಾಯಿತು.
ಇತ್ತೀಚಿನ ನಾಲ್ಕು ದಿನಗಳ ಸಂಘರ್ಷ
ನಾಲ್ಕು ದಿನಗಳ ಸಂಘರ್ಷವು ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರಿಂದ ಭಾರತೀಯ ಪ್ರವಾಸಿಗರ ಮೇಲೆ ನಡೆದ ದಾಳಿಯಿಂದ ಆರಂಭವಾಯಿತು. ಇದರಲ್ಲಿ 26 ಜನರು ಮೃತಪಟ್ಟಿದ್ದರು. ಎರಡು ವಾರಗಳ ಬಳಿಕ, ಭಾರತವು ‘ಆಪರೇಷನ್ ಸಿಂದೂರ್’ ಆರಂಭಿಸಿ, ಪಾಕಿಸ್ತಾನ ಮತ್ತು PoKಯಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನವು ಜಮ್ಮು ಮತ್ತು ಪಂಜಾಬ್‌ನ ಭಾರತೀಯ ಸೇನಾ ನೆಲೆಗಳ ಮೇಲೆ ವಿಫಲ ದಾಳಿಯನ್ನು ನಡೆಸಿತು. ಜತೆಗೆ ಸಾಮಾನ್ಯ ನಾಗರಿಕರ ಪ್ರದೇಶಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಆರಂಭಿಸಿತು. ಭಾರತವು ಈ ದಾಳಿಗಳನ್ನು ಯಶಸ್ವಿಯಾಗಿ ತಡೆಗಟ್ಟಿ, ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ಭಾರೀ ಹಾನಿ ಮಾಡಿ ಪ್ರತೀಕಾರ ತೀರಿಸಿತು. ಮೇ 10ರ ಸಂಜೆ 5 ಗಂಟೆಗೆ ಕದನ ವಿರಾಮ ಘೋಷಿಸುವವರೆಗೆ LoCಯಲ್ಲಿ ತೀವ್ರ ಶೆಲ್ ದಾಳಿಗಳು ಮುಂದುವರಿದಿದ್ದವು.