ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GT vs SRH: ಟೈಟಾನ್ಸ್‌ ಆಟಕ್ಕೆ ಬೆದರಿದ ಸನ್‌ರೈಸರ್ಸ್‌; 38 ರನ್‌ ಸೋಲು

ಕಳೆದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಶುಭಮನ್‌ ಗಿಲ್‌ ಮತ್ತು ಜಾಸ್‌ ಬಟ್ಲರ್‌ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್‌ ಪ್ರತಾಪ ಮುಂದುವರಿಸಿ ಅರ್ಧಶತಕ ಬಾರಿಸಿದರು. ಅಬ್ಬರಿಸಿದ ಗಿಲ್ 76 ರನ್ (33 ಎಸೆತ)ಗಳಿಸಿ ಔಟಾದರು.‌ 10 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು.

ಟೈಟಾನ್ಸ್‌ ಆಟಕ್ಕೆ ಬೆದರಿದ ಸನ್‌ರೈಸರ್ಸ್‌; 38 ರನ್‌ ಸೋಲು

Profile Abhilash BC May 2, 2025 11:33 PM

ಹೈದರಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್(IPL 2025) ಪಂದ್ಯದಲ್ಲಿ ಆತಿಥೇಯ ಗುಜರಾತ್‌ ಟೈಟಾನ್ಸ್‌(GT vs SRH) ತಂಡ 38 ರನ್‌ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದೆ. 10ನೇ ಪಂದ್ಯದಲ್ಲಿ 7 ನೇ ಪಂದ್ಯ ಸೋತ ಸನ್‌ರೈಸರ್ಸ್‌ ಹೈದರಾಬಾದ್‌(Sunrisers Hyderabad) ಬಹುತೇಕ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಇನ್ನುಳಿದ 4 ಪಂದ್ಯ ಗೆದ್ದು, ಪವಾಡವೊಂದು ಸಂಭವಿಸಿದರೆ ಮಾತ್ರ ಕಮಿನ್ಸ್‌ ಪಡೆಗೆ ಪ್ಲೇ ಆಫ್‌ ಪ್ರವೇಶಿಸುವ ಅವಕಾಶ ಇರಲಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಗುಜರಾತ್‌ ತಂಡ ನಾಯಕ ಶುಭಮನ್‌ ಗಿಲ್‌ ಮತ್ತು ಜಾಸ್‌ ಬಟ್ಲರ್‌ ಅವರ ಅರ್ಧಶತಕದ ನೆರವಿನಿಂದ 6 ವಿಕೆಟ್‌ಗೆ 224 ರನ್‌ ಪೇರಿಸಿತು. ಜವಾಬಿತ್ತ ಹೈದರಾಬಾದ್‌ 6 ವಿಕೆಟ್‌ಗೆ 186 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ದೊಡ್ಡ ಗುರಿ ಬೆನ್ನತ್ತಿದ ಹೈದರಾಬಾದ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಅಪಾಯಕಾರಿ ಟ್ರಾವಿಸ್‌ ಹೆಡ್‌(20) ವಿಕೆಟ್‌ ಬೇಗನೆ ಬಿತ್ತು. ಆ ಬಳಿಕ ಬಂದ ಇಶಾನ್‌ ಕಿಶನ್‌ (13) ರನ್‌ಗೆ ಆಟ ಮಗಿಸಿದರು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಗೆಲುವಿಗೆ ಶಕ್ತಿ ಮೀರಿ ಬ್ಯಾಟಿಂಗ್‌ ಹೋರಾಟ ನಡೆಸಿದ ಅಭಿಷೇಕ್‌ ಶರ್ಮ 74 (6 ಸಿಕ್ಸರ್‌, 4 ಬೌಂಡರಿ) ರನ್‌ ಗಳಿಸಿ ಔಟಾದರು. ಇವರ ವಿಕೆಟ್‌ ಬೀಳುತ್ತಿದ್ದಂತೆ ಹೈದರಾಬಾದ್‌ ಸೋಲು ಕೂಡ ಖಚಿತಗೊಂಡಿತು. ಹೆನ್ರಿಚ್‌ ಕ್ಲಾಸೆನ್‌(23) ರನ್‌ ಗಳಿಸಿದರು. ಗುಜರಾತ್‌ ಪರ ಘಾತಕ ಬೌಲಿಂಗ್‌ ದಾಳಿ ನಡೆಸಿದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಮತ್ತು ಮೊಹಮ್ಮದ್‌ ಸಿರಾಜ್‌ ತಲಾ 2 ವಿಕೆಟ್‌ ಉರುಳಿಸಿದರು. ಇದೇ ವೇಳೆ ಪ್ರಸಿದ್ಧ್‌ ಕೃಷ್ಣ ಅವರು ಹ್ಯಾಜಲ್‌ವುಡ್‌ ಹಿಂದಿಕ್ಕಿ ಪರ್ಪಲ್‌ ಕ್ಯಾಪ್‌ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಗುಜರಾತ್‌ ಪರ ಸಾಯಿ ಸುದರ್ಶನ್‌ ಮತ್ತು ಶುಭಮನ್‌ ಗಿಲ್‌ ಪವರ್‌ ಪ್ಲೇಯಲ್ಲಿ ಅಬ್ಬರದ ಬ್ಯಾಟಿಂಗ್‌ ನಡೆಸಿ 82 ರನ್‌ ಕಲೆಹಾಕಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಸುದರ್ಶನ್‌ ಕೇವಲ 23 ಎಸೆತಗಳಿಂದ 9 ಬೌಂಡರಿ ಸಿಡಿಸಿ 48 ರನ್‌ ಬಾರಿಸಿದರು. ಈ ವೇಳೆ ಸೂರ್ಯಕುಮಾರ್‌(475) ಮತ್ತು ವಿರಾಟ್‌ ಕೊಹ್ಲಿ(443) ಹಿಂದಿಕ್ಕಿ ಆರೆಂಜ್‌ ಕ್ಯಾಪ್‌ ವಶಪಡಿಸಿಕೊಂಡರು. ಅಗ್ರಸ್ಥಾನಿ ಸುದರ್ಶನ್‌(504) ರನ್‌ ಗಳಿಸಿದ್ದಾರೆ.

ಗಿಲ್‌-ಬಟ್ಲರ್‌ ಸತತ ಅರ್ಧಶತಕ

ಕಳೆದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಶುಭಮನ್‌ ಗಿಲ್‌ ಮತ್ತು ಜಾಸ್‌ ಬಟ್ಲರ್‌ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್‌ ಪ್ರತಾಪ ಮುಂದುವರಿಸಿ ಅರ್ಧಶತಕ ಬಾರಿಸಿದರು. ಅಬ್ಬರಿಸಿದ ಗಿಲ್ 76 ರನ್ (33 ಎಸೆತ)ಗಳಿಸಿ ಔಟಾದರು.‌ 10 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು. ಬಟ್ಲರ್‌ 37 ಎಸೆತಗಳಿಂದ 64 ರನ್ ಬಾರಿಸಿದರು. ಅವರ ಈ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 4 ಸಿಕ್ಸರ್‌ ಮತ್ತು 3 ಬೌಂಡರಿ ಒಳಗೊಂಡಿತ್ತು. ಇದೇ ವೇಳೆ ಬಟ್ಲರ್‌ ಐಪಿಎಲ್‌ನಲ್ಲಿ 4 ಸಾವಿರ ರನ್‌ ಪೂರೈಸಿದರು.

ಅಂತಿಮ ಹಂತದಲ್ಲಿ ವಾಷಿಂಗ್ಟನ್‌ ಸುಂದರ್‌ 21 ರನ್‌ ಕೊಡುಗೆ ನೀಡಿದರು. ಹೈದರಾಬಾದ್‌ ಪರ ಎಡಗೈ ವೇಗಿ ಜೈದೇವ್‌ ಉನಾದ್ಕತ್‌ 35 ಕ್ಕೆ 3 ವಿಕೆಟ್‌ ಕಿತ್ತು ಮಿಂಚಿದರು. ಉಳಿದಂತೆ ನಾಯಕ ಪ್ಯಾಟ್‌ ಕಮಿನ್ಸ್‌ ಮತ್ತು ಅನ್ಸಾರಿ ತಲಾ ಒಂದು ವಿಕೆಟ್‌ ಪಡೆದರು. ಆದರೆ ಉಭಯ ಬೌಲರ್‌ಗಳು ದುಬಾರಿಯಾದರು.