ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Attack: ರಾಜಸ್ತಾನದಲ್ಲಿ ಗಡಿ ದಾಟಿ ಬಂದ ಪಾಕ್‌ ರೇಂಜರ್‌ನನ್ನು ವಶಕ್ಕೆ ಪಡೆದ ಬಿಎಸ್‌ಎಫ್‌

ರಾಜಸ್ಥಾನದ ಭಾರತ-ಪಾಕಿಸ್ತಾನ ಗಡಿಯಲ್ಲಿ ಬಾರ್ಡರ್‌ ಕ್ರಾಸ್‌ ಮಾಡಿದ ಪಾಕಿಸ್ತಾನಿ ರೇಂಜರ್‌ನನ್ನು ಬಿಎಸ್‌ಎಫ್ ವಶಕ್ಕೆ ಪಡೆದಿದೆ. ಭಾರತದ ಬಿಎಸ್‌ಎಫ್ ಯೋಧನನ್ನು ಪಂಜಾಬ್‌ ಗಡಿಯಲ್ಲಿ ಪಾಕಿಸ್ತಾನ ವಶಕ್ಕೆ ಪಡೆದ ಸುಮಾರು 10 ದಿನಗಳ ಬಳಿಕ ಈ ಘಟನೆ ನಡೆದಿದೆ.

ಗಡಿ ದಾಟಿ ಬಂದ ಪಾಕ್‌ ರೇಂಜರ್‌ನನ್ನು ವಶಕ್ಕೆ ಪಡೆದ ಬಿಎಸ್‌ಎಫ್‌

ಸಾಂದರ್ಭಿಕ ಚಿತ್ರ.

Profile Ramesh B May 3, 2025 11:32 PM

ಜೈಪುರ: ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ (Pahalgam Attack) ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಬಲಿಯಾದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ. ಈ ಮಧ್ಯೆ ರಾಜಸ್ಥಾನದ ಭಾರತ-ಪಾಕಿಸ್ತಾನ ಗಡಿಯಲ್ಲಿ ಬಾರ್ಡರ್‌ ಕ್ರಾಸ್‌ ಮಾಡಿದ ಪಾಕಿಸ್ತಾನಿ ರೇಂಜರ್‌ (Pakistani Ranger)ನನ್ನು ಬಿಎಸ್‌ಎಫ್ (BSF) ವಶಕ್ಕೆ ಪಡೆದಿದೆ ಎಂದು ಮೂಲಗಳು ಶನಿವಾರ (ಮೇ 3) ತಿಳಿಸಿವೆ. ಭಾರತದ ಬಿಎಸ್‌ಎಫ್ ಯೋಧನನ್ನು ಪಾಕಿಸ್ತಾನ ವಶಕ್ಕೆ ಪಡೆದ ಸುಮಾರು 10 ದಿನಗಳ ಬಳಿಕ ಈ ಘಟನೆ ನಡೆದಿದೆ.

ಗಡಿ ದಾಟಿ ಬಂದ ಪಾಕಿಸ್ತಾನಿ ರೇಂಜರ್‌ನನ್ನು ರಾಜಸ್ಥಾನ ಗಡಿ ಪಡೆ ವಶಕ್ಕೆ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಿಎಸ್ಎಫ್ ಜವಾನ್ ಪೂರ್ಣಮ್ ಕುಮಾರ್ ಶಾ ಅವರನ್ನು ಏ. 23ರಂದು ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ರೇಂಜರ್‌ಗಳು ಬಂಧಿಸಿದ್ದರು. ಭಾರತದ ಬಲವಾದ ಮನವಿಯ ಹೊರತಾಗಿಯೂ ಪಾಕ್‌ ಅವರನ್ನು ಹಸ್ತಾಂತರಿಸಲು ನಿರಾಕರಿಸಿದೆ.



ಈ ಸುದ್ದಿಯನ್ನೂ ಓದಿ: BSF Soldiers: 7 ದಿನ... 7ಮೀಟಿಂಗ್‌...ನೋ ರೆಸ್ಪಾನ್ಸ್‌! ಪಾಕ್‌ ವಶದಲ್ಲಿರುವ BSF ಯೋಧನ ಗತಿಯೇನು?

ತಪ್ಪಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ಪ್ರವೇಶಿಸಿದ ಬಿಎಸ್ಎಫ್ ಕಾನ್ಸ್‌ಟೇಬಲ್‌ ಪೂರ್ಣಮ್ ಕುಮಾರ್ ಶಾ ಅವರ ಸುರಕ್ಷಿತ ಬಿಡುಗಡೆಗೆ ಸಂಬಂಧಿಸಿದಂತೆ 8 ದಿನಗಳಿಂದ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಇಲ್ಲಿಯವರೆಗೆ ಯಾವುದೇ ನಿರೀಕ್ಷಿತ ಫಲಿತಾಂಶ ಕಂಡು ಬಂದಿಲ್ಲ.

ಸೈನಿಕರು ಅಥವಾ ನಾಗರಿಕರು ಆಕಸ್ಮಿಕವಾಗಿ ಗಡಿ ದಾಟುವುದು ಸಾಮಾನ್ಯ. ಈ ಪ್ರಕರಣಗಳನ್ನು ಮಾತುಕತೆಗಳ ಮೂಲಕ ಪರಿಹರಿಸಲಾಗುತ್ತದೆ. ಅಧಿಕಾರಿಗಳ ನಡುವಿನ ಔಪಚಾರಿಕ ಸಭೆಗಳ ನಂತರ ಅವರನ್ನು ವಾಪಸ್ ಕಳುಹಿಸಲಾಗುತ್ತದೆ. ಆದರೆ ಇದುವರೆಗೆ ಪಾಕಿಸ್ತಾನ ಅವರನ್ನು ಕಳುಹಿಸಿಲ್ಲ.

ಪೂರ್ಣಮ್ ಕುಮಾರ್ ಶಾ ಅವರ ಪತ್ನಿ ರಜನಿ ಪಶ್ಚಿಮ ಬಂಗಾಳದ ರಿಶ್ರಾದಲ್ಲಿರುವ ತಮ್ಮ ನಿವಾಸದಿಂದ ಪಂಜಾಬ್‌ನ ಪಠಾಣ್ಕೋಟ್‌ಗೆ ಪ್ರಯಾಣಿಸಿ ಮಾಹಿತಿ ಕೋರಿದ್ದರು. ಈ ವೇಳೆ ಪೂರ್ಣಮ್ ಕುಮಾರ್ ಅವರ ಸುರಕ್ಷಿತ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡಲಾಗುತ್ತಿದೆ ಎಂದು ಬಿಎಸ್ಎಫ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಪಾಕಿಸ್ತಾನ ಭೂಪ್ರದೇಶದ ಕೇವಲ 1- 2 ಮೀಟರ್‌ಗಳೊಳಗೆ ದಾಟಿದ್ದ ಪೂರ್ಣಮ್ ಕುಮಾರ್ ಶಾ ಅವರನ್ನು ತಕ್ಷಣವೇ ಪಾಕಿಸ್ತಾನ ಬಿಡುಗಡೆ ಮಾಡಬಹುದಿತ್ತು. ಈ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಪರಿಹರಿಸಬಹುದಿತ್ತು. ಆದರೆ ಒಂದು ವಾರದ ಅನಂತರವೂ ಅವರ ಬಿಡುಗಡೆ ಮಾಡದೇ ಇರುವುದು ಆತಂಕ ಉಂಟು ಮಾಡಿದೆ.

ನಿತ್ಯವೂ ಪಾಕಿಸ್ತಾನಿ ರೇಂಜರ್‌ಗಳನ್ನು ಭೇಟಿಯಾಗುತ್ತಿದ್ದೇವೆ. ಆದರೆ ಪ್ರತಿದಿನ ಅವರು ಒಂದೇ ಮಾತನ್ನು ಪುನರಾವರ್ತಿಸುತ್ತಿದ್ದಾರೆ. ಬಿಎಸ್‌ಎಫ್ ಜವಾನನ ಬಿಡುಗಡೆ ಮಾಡಲು ಹಿರಿಯ ಅಧಿಕಾರಿಗಳಿಂದ ಆದೇಶಗಳು ಬಂದಿಲ್ಲ ಎನ್ನುತ್ತಿದ್ದಾರೆ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಅವರು ಪ್ರತಿದಿನ ಕೇಳುತ್ತಿದ್ದಾರೆ ಎನ್ನುತ್ತಿದ್ದಾರೆ. ಆದರೆ ಅವರ ಉನ್ನತ ನಾಯಕತ್ವದಿಂದ ಯಾವುದೇ ನಿರ್ದೇಶನ ಬಂದಿಲ್ಲ ಎನ್ನುತ್ತಾರೆ ಎಂದು ಅಧಿಕಾರಿ ಹೇಳಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅನಂತರ ಎರಡು ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಉದ್ದೇಶಪೂರ್ವಕವಾಗಿಯೇ ಪೂರ್ಣಮ್ ಕುಮಾರ್ ಶಾ ಅವರನ್ನು ಬಂಧನದಲ್ಲಿ ಇರಿಸುವಂತೆ ತೋರುತ್ತಿದೆ ಎನ್ನಲಾಗುತ್ತಿದೆ. ಇದೀಗ ಪಾಕ್‌ ರೇಂಜರ್‌ನನ್ನು ಭಾರತ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.