Team India: ಬ್ರಿಟನ್ ದೊರೆ ಚಾರ್ಲ್ಸ್ ಭೇಟಿಯಾದ ಭಾರತ ಕ್ರಿಕೆಟ್ ತಂಡ
King Charles III: ಭಾರತ ಮಹಿಳಾ ತಂಡ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 3-2 ಅಂತರದ ಗೆಲುವು ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಬುಧವಾರದಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.


ಲಂಡನ್: ಇಂಗ್ಲೆಂಡ್ ಕ್ರಿಕೆಟ್ ಸರಣಿಯ ಪ್ರವಾಸದಲ್ಲಿರುವ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು(Team India) ಸೆಂಟ್ ಜೇಮ್ಸ್ ಅರಮನೆಯಲ್ಲಿ ಬ್ರಿಟನ್ ದೊರೆ ಮೂರನೇ ಚಾರ್ಲ್ಸ್(King Charles III) ಅವರನ್ನು ಭೇಟಿಯಾಗಿ ಕ್ರಿಕೆಟ್ ಬಗ್ಗೆ ಚರ್ಚಿಸಿದವು. ಭೇಟಿಯ ಫೋಟೊಗಳನ್ನು ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದೆ.
ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್, ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸೇರಿದಂತೆ ಎಲ್ಲ ಆಟಗಾರರ ಮತ್ತು ತಂಡದ ಸಿಬ್ಬಂದಿ ಕೈಕುಲುಕಿದ ಚಾರ್ಲ್ಸ್, ಕೆಲಕಾಲ ತಮಾಷೆ ಮಾಡಿ ನಕ್ಕಿದ್ದಾರೆ. ಈ ವೇಳೆ ಕ್ರಿಕೆಟ್ ಬಗ್ಗೆಯೂ ಚರ್ಚಿಸಿ ಮುಂಬರುವ ಪಂದ್ಯಗಳಿಗೆ ಶುಭ ಹಾರೈಸಿದ್ದಾರೆ. ಕೊನೆಯಲ್ಲಿ ಭಾರತ ತಂಡದೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡ ಉಪಸ್ಥಿತರಿದ್ದರು.
ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗಿರುವುದರ ಬಗ್ಗೆ ಶುಭಮನ್ ಗಿಲ್ ಸಂತೋಷ ವ್ಯಕ್ತಪಡಿಸಿದ್ದಾರೆ. ಮುಂದಿನ ಎರಡು ಪಂದ್ಯಗಳಲ್ಲಿ ಅದೃಷ್ಟ ನಿಮ್ಮದಾಗಲಿದೆ ಎಂದು ಚಾರ್ಲ್ಸ್ ಅವರು ಹಾರೈಸಿದ್ದಾಗಿ ಗಿಲ್ ಹೇಳಿದರು.
ಭಾರತ ಮಹಿಳಾ ತಂಡ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 3-2 ಅಂತರದ ಗೆಲುವು ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಬುಧವಾರದಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.
ಭಾರತ ಪುರುಷರ ತಂಡ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸದ್ಯ 1-2 ಹಿನ್ನಡೆಯಲ್ಲಿದೆ. ಸೋಮವಾರ ಮುಕ್ತಾಯಗೊಂಡಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ 22 ರನ್‌ಗಳ ಸೋಲು ಕಂಡಿತ್ತು.
ಇದನ್ನೂ ಓದಿ IND vs ENG: ಲಾರ್ಡ್ಸ್ ಟೆಸ್ಟ್‌ನಲ್ಲಿ ವಿವಾದಾತ್ಮಕ ತೀರ್ಪು ನೀಡಿದ ಅಂಪೈರ್ ವಿರುದ್ಧ ಆರ್ ಅಶ್ವಿನ್ ಕಿಡಿ!