Thursday, 12th December 2024

ಸಮಾಜಘಾತುಕ ಶಕ್ತಿಗಳನ್ನು ನಿಗ್ರಹಿಸಿ

ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಮುನ್ನೆಲೆಗೆ ಬರಲು ಹಪಹಪಿಸುವ ವಿಕೃತ ಮನಸ್ಸುಗಳ
ಸಮಾಜದಲ್ಲಿ ಹೆಚ್ಚುತ್ತಿರುವುದು ದುರಾದೃಷ್ಟಕರ.

ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಅಂತಲೋ, ಗಂಜಿ ಕಾಸಿನ ಆಸೆಗೋ ಹೇಳಿಕೆ ನೀಡುವ ಕೆಲ ಸಮಾಜ ಕಂಟಕರನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಸಮಾಜದಲ್ಲಿ ಶಾಂತಿ ಕದಡಿ ಅಶಾಂತಿ ತಾಂಡವ ವಾಡುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ-ಜಾತಿಗಳಿಗೆ ಸ್ಥಾನಮಾನ
ನೀಡಿದ್ದಾರೆ.

ಆದರೆ ಇದನ್ನು ತಿರುಚಿ ಮುಗ್ಧ ಮನಸುಗಳಲ್ಲಿ ದ್ವೇಷ ಅಸೂಯೆ ಹುಟ್ಟಿಸುವ ಹುನ್ನಾರ ನಟ ಚೇತನ್ ಅವರಂತಹ ಸಮಾಜ ಘಾತುಕ ಶಕ್ತಿ ಮಾಡುತ್ತಿರುವುದು ಖಂಡನೀಯ. ಇಂತಹ ಸಮಾಜಘಾತುಕ ಶಕ್ತಿಗಳನ್ನು ಸಮಾಜದಲ್ಲಿ ಬೇರು ಸಮೇತ ಕಿತ್ತೆಸೆ ಯಬೇಕಾಗಿದೆ. ಇತ್ತೀಚೆಗೆ ಕನ್ನಡ ಚಿತ್ರರಂಗದ ನಟ ಚೇತನ್ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ವಿರುದ್ಧ ಅವಹೇಳನ ಕಾರಿಯಾಗಿ, ಪ್ರಚೋದನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಈಗಾಗಲೇ ಚೇತನ್ ವಿರುದ್ಧ ಎರಡು
ಎಫ್ಐಆರ್ ದಾಖಲಾಗಿದ್ದರೂ ಅವರು ಪದೇಪದೆ ಬ್ರಾಹ್ಮಣ ಸಮುದಾಯದ ವಿರುದ್ಧ ಹೇಳಿಕೆ ನೀಡುತ್ತಿರುವುದು ಖಂಡನೀಯ.

ಅಮೆರಿಕದ ನಾಗರಿಕತ್ವ ಹೊಂದಿರುವ ಚೇತನ್ ಅವರನ್ನು ಗಡಿಪಾರು ಮಾಡಬೇಕು. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ರೊಬ್ಬರು ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್ಆರ್‌ಆರ್‌ಒ) ಮನವಿ ಸಲ್ಲಿಸಿದ್ದು ಸ್ವಾಗತಾರ್ಹ. ನಟ ಚೇತನ್ ಯುನೈಟೆಡ್ ಸ್ಟೇಟ್ಸ್‌ನ ನಾಗರಿಕರಾಗಿzರೆ ಮತ್ತು ತಾತ್ಕಾಲಿಕವಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಚೇತನ್ ಕೋಮುಭಾವನೆಗಳನ್ನು ಮತ್ತು ಜಾತಿಗಳ ಸಂಘರ್ಷವನ್ನು ಉಂಟುಮಾಡುತ್ತಿದ್ದಾರೆ. ನಟ ಚೇತನರವರ ಬ್ರಾಹ್ಮಣ ವಾದವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮನೋಭಾವವನ್ನು ನಿರಾಕರಿಸಿದೆ. ಬ್ರಾಹ್ಮಣ ಧರ್ಮವನ್ನು ಬೇರುಸಹಿತ ಕಿತ್ತುಹಾಕಬೇಕು ಮತ್ತು ಬ್ರಾಹ್ಮಣರು ಮಾತ್ರ ಉನ್ನತರು ಹಾಗೂ ಉಳಿದವರೆಲ್ಲರೂ ಕಡಿಮೆ ಎಂದು ನಟ ಚೇತನ್ ಹೇಳುತ್ತಿರುವುದು ಸಂಪೂರ್ಣ ಅಸಂಬದ್ಧ. ಹೀಗಾಗಿ ಇಂತಹ ಸಮಾಜ ಘಾತುಕ ಶಕ್ತಿಗಳನ್ನು ನಿಗ್ರಹಿಸಲು ಸರಕಾರ ಬೇಗನೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.
– ವಿಜಯಕುಮಾರ್ ಎಚ್. ಕೆ. ರಾಯಚೂರು

ಹಾಲಿನ ಪ್ಯಾಕೆಟ್ ಪುನರ್ ಬಳಕೆಯಾಗಲಿ
ಹಿಂದಿನ ಕಾಲದಲ್ಲಿ ಜನರು ಪರಿಸರಕ್ಕೆ ಪೂರಕವಾದ ದೈನಂದಿನ ವಸ್ತುಗಳನ್ನು ಬಳಸುತ್ತಿದ್ದರು. ಅಂದು ನೀರು ಇಡಲು
ತಾಮ್ರದ ಹಂಡೆ, ಬಿಂದಿಗೆ, ಮಡಿಕೆ ಬಳಸುತ್ತಿದ್ದರು. ಅಂದು ಇಂದಿನಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿರಲಿಲ್ಲ. ಆದರೆ ಇಂದು ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೂ ಪ್ಲಾಸ್ಟಿಕ್ ಅನ್ನು ಹೆಚ್ಚೆಚ್ಚು ಬಳಸುತ್ತಿದ್ದೇವೆ. ಅದರಲ್ಲೂ ಕೆಲವೇ ಹಳ್ಳಿಯವರನ್ನು ಹೊರತುಪಡಿಸಿ, ಬಹುತೇಕ ಪಟ್ಟಣವಾಸಿಗಳು, ಕೆಲ ಹಳ್ಳಿಗರೂ ಕೂಡ ಪ್ಯಾಕೇಟ್ ಹಾಲನ್ನು ಬಳಸುತ್ತಿದ್ದಾರೆ. ಇದರಿಂದ ಪ್ರತಿದಿನ ಏನಿಲ್ಲವೆಂದರೂ ಸರಿಸುಮಾರು ಒಂದು ಕೋಟಿಗೂ ಅಧಿಕ ಹಾಲಿನ ಹಾಗೂ ಅದರ ಉತ್ಪನ್ನಗಳ ಖಾಲಿ ಪ್ಯಾಕೇಟುಗಳು ಪರಿಸರಕ್ಕೆ ಕಸದ ರೂಪದಲ್ಲಿ ಸೇರುತ್ತವೆ. ಇವುಗಳ ಮರುಬಳಕೆ ಮಾಡುವ ಬಗ್ಗೆ ಯಾರೂ ಯೋಚಿಸುವುದಿಲ್ಲ. ಪರಿಸರದ ಸ್ವಚ್ಛತೆಯ ಬಗ್ಗೆ ಮಾತಾಡುವವರಿಗೂ ಇದರ ಬಳಕೆ ಅನಿವಾರ್ಯವಾಗಿದೆ.

ಇದನ್ನು ತಪ್ಪಿಸಲು ಒಂದು ಉಪಾಯ ಮಾಡಬೇಕಿದೆ. ಏನೆಂದರೆ ಪ್ಯಾಕೇಟ್ ಹಾಲಿನ ದರವನ್ನು  ರುಪಾಯಿಗೆ ಏರಿಸುವುದು. ತದನಂತರದಲ್ಲಿ ಹಾಲು ಮಾರುವವರಿಗೆ, ಯಾರು ಆ ಖಾಲಿ ಹಾಲಿನ ಪ್ಯಾಕೇಟನ್ನು ವಾಪಾಸ್ಸು ಕೊಡುತ್ತಾರೋ ಅವರಿಗೆ ಆ   ರು.ಯನ್ನು ವಾಪಾಸು ಕೊಡುವಂತಹ ನಿಯಮವನ್ನು ಮಾಡಬೇಕು.ಇದರಿಂದ ಪ್ಯಾಕೆಟ್ ಹಾಲನ್ನು ಕೊಳ್ಳುವವರು ಹಣದ
ಆಸೆಗಾಗಿ ಎಂದರಲ್ಲಿ ಖಾಲಿ ಪ್ಯಾಕೇಟನ್ನು ಎಸೆಯುವುದು ತಪ್ಪುತ್ತದೆ. ಕಸದ ಸಮಸ್ಯೆಯೂ ನಿವಾರಣೆಯಾಗುತ್ತದೆ.ಪರಿಸರವೂ ಉಳಿಯುತ್ತದೆ.

– ಬಸವನಗೌಡ ಹೆಬ್ಬಳಗೆರೆ ಚನ್ನಗಿರಿ.

ಬದುಕಿ ಬಾಳಲು ಇದೊಂದೇ ದಾರಿ 
ಪ್ರಧಾನಿಯವರು ಆರಂಭದಲ್ಲಿ ಸ್ಪಷ್ಟ ಮಾತುಗಳಲ್ಲಿ ಕರೋನಾ ಸಂಗಡ ಬದುಕುವುದನ್ನು ಕಲಿಯಿರಿ ಎಂದು ಹೇಳಿದ್ದಾರೆ. ಮತ್ತು ಹೇಳುತ್ತಲೇ ಇದ್ದಾರೆ. ಜತೆಯಲ್ಲಿ ಬದುಕುವುದು ಎಂದರೆ ಅದು ಇದ್ದರೂ ಆ ಸೋಂಕು ತಗುಲದಂತೆ ಇರುವುದು. ಇದಕ್ಕೆ ಏಕೈಕ ಉಪಾಯ ಮಾಸ್ಕ್ ಧಾರಣ. ಅಂತರ ಪಾಲನೆ ಮತ್ತು ಹೊರಗಿಂದ ಬಂದಾಗ ಕೈ ತೊಳೆಯುವುದು. ಇವೆಲ್ಲದರ ಪೂರಕವಾಗಿ ವ್ಯಾಕ್ಸಿನ್. ಮೊದಲ ಅಲೆಯನ್ನು ಎದುರಿಸಿ ಗೆದ್ದ ಹೆಮ್ಮೆ ಭಾರತದ್ದು.

ಇದೇ ಅಹಂಕಾರವಾಗಿ ಎರಡನೆಯ ಅಲೆಯ ಬಗ್ಗೆ ಎಚ್ಚರ ತಪ್ಪಿದರೆ ಪರಿಣಾಮ ಸಾಕ್ಕಷ್ಟು ನಷ್ಟ ಕಷ್ಟ ಅನುಭವಿಸುವಂತಾ ಯಿತು. ಆಸ್ಪತ್ರೆಗಳು ತುಂಬಿ ತುಳುಕಿ ಅನೇಕ ಸೋಂಕಿತರು ಚಿಕಿತ್ಸೆ ದೊರಕದೆ ಬಲಿಯಾದರು. ಕೆಲವು ಕುಟುಂಬಗಳಲ್ಲಿ
ಸೋಂಕು ತಗುಲಿ ತಂದೆತಾಯಿ ಒಟ್ಟಿಗೆ ಬಲಿಯಾಗಿ ಮಕ್ಕಳು ಅನಾಥರಾದ ದುರಂತ ಸಂಭವಿಸಿದೆ. ಇದಕ್ಕೆಲ್ಲ ಮುಖ್ಯ ಕಾರಣ ಸಾರ್ವಜನಿಕರಲ್ಲಿ ಕೆಲವರ ಭಂಡ ಧೈರ್ಯ.

ಈಗ ಲಾಕ್‌ಡೌನ್ ಸಡಿಲಗೊಳ್ಳುತ್ತಿರುವುದರಿಂದ ಕರೋನಾ ಇಲ್ಲವೇ ಇಲ್ಲ ಎನ್ನುವಂತೆ ಕೋವಿಡ್ ನಿಯಮ ಪಾಲನೆ ಮಾಡದಿದ್ದರೆ ಇನ್ನು ಹೆಚ್ಚು ಭೀಕರವಾಗಿ ಹೊಂಚು ಹಾಕಿ ಕಾದಿರುವ ಕರೋನಾ ಮತ್ತೊಮ್ಮೆ ಎರಗುವುದಂತೂ ಖಂಡಿತ. ಈ ಲಾಕ್‌ಡೌನ್ ಒಂದು ರೀತಿ ತರಬೇತಿ ಶಿಬಿರ ಆಗಿರಬೇಕು. ಈಗಲಾದರೂ ವಾಕ್ಸಿನ್ ಹಾಕಿಸಿಕೊಂಡು ಮೂರು ನಿಯಮಗಳನ್ನು ಅಳವಡಿಸಿಕೊಂಡು ಬದುಕುವ ಜೀವನ ಶೈಲಿ ಅಳವಡಿಸಿಕೊಳ್ಳುವುದು ಅಗತ್ಯ.

ಲಾಕ್‌ಡೌನ್ ಇಲ್ಲ ಎಂದು ನಿಯಮ ಮರೆತು ಗುಂಪು ಸೇರುವುದು ಮಾಸ್ಕ್ ಧರಿಸದೇ ನಿಯಮ ಉಲ್ಲಂಸಿದವರನ್ನು ಕಠಿಣ ಶಿಕ್ಷೆಗೆ
ಒಳಪಡಿಸಲು ಪೋಲೀಸರು ಮುಂದಾಗಬೇಕು. ಪ್ರಭಾವಿಗಳ ಮುಖ ನೋಡಿ ಮಣೆ ಹಾಕುವ ಕೆಲಸ ಇಲ್ಲಿ ಮಾಡಿದರೆ ಜನ ಮೌನವಾಗಿ ಸಹಿಸಬಹುದು. ಆದರೆ ಕರೋನಾ ಮಾತ್ರ ಅಟ್ಟಹಾಸ ಮಾಡದೇ ಇರುವುದಿಲ್ಲ. ಮೈ ಮರೆತರೆ ಮತ್ತೆ ಲಾಕ್ ಡೌನ್ ಅನಿವಾರ್ಯವಾಗುತ್ತದೆ.

– ಸತ್ಯಬೋಧ ಬೆಂಗಳೂರು

ಉತ್ತಮ ಸಮಾಜವನ್ನು ರೂಪಿಸಿ 

ಸುದ್ದಿ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಇಂದು ಸಮಾಜದ ಒಂದು ಭಾಗವಾಗಿವೆ. ಈಗಂತೂ ಪತ್ರಿಕೆ, ಟಿವಿ ಇಲ್ಲದೆ ಜನ ಇರಲಾರರು. ಪ್ರತಿ ದಿನದ ಕಾಫಿ/ಟೀ ಶುರುವಾಗುವುದೇ ದಿನ ಪತ್ರಿಕೆ ಮತ್ತು ಟಿವಿ ಚಾನೆಲ್ ನ್ಯೂಸ್ ನೋಡುವುದರಿಂದ. ಆದರೆ ಸುದ್ದಿಯನ್ನು ವೈಭವೀಕರಿಸುವ, ವಿಕೃತಿಸುವ ಮೂಲಕ ಕೆಲವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ.

ಪತ್ರಿಕೆಗಳು ನೈಜ ಸುದ್ದಿಯನ್ನು ಪ್ರಕಟಿಸುವ ಮೂಲಕ ಜನತೆಯಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡರೆ, ವಿದ್ಯುನ್ಮಾನ
ಮಾಧ್ಯಮಗಳು ಸುದ್ದಿಯನ್ನು ಅತಿಯಾಗಿ ವೈಭವೀಕರಿಸುವ ಮೂಲಕ ಜನರನ್ನು ರಂಜಿಸುತ್ತೇವೆ ಎನ್ನುವುದು ಶುದ್ಧ ಸುಳ್ಳು. ಈ ಮೂಲಕ ಸಮಾಜಕ್ಕೆ ತಪ್ಪು ಸಂದೇಶವನ್ನು ಕೊಡುತ್ತವೆ. ಅದರಲ್ಲೂ ಸುದ್ದಿಯ ಅತಿಯಾದ ವೈಭವೀಕರಣ, ವಿಕೃತತೆಯಿಂದ ಇಲಿ ಹೋಯಿತೆಂದರೆ, ಹುಲಿ ಹೋಯಿತು ಎನ್ನುವ ಹಾಗೆ ಟಿವಿ ಚಾನೆಲ್‌ಗಳು ಸುದ್ದಿಯನ್ನು ಬಿತ್ತರಿಸುವ ಮೂಲಕ ಜನರನ್ನು ಹೆದರಿಸುವ ಕೆಲಸ ಮಾಡುತ್ತಿವೆ.

ಕೋವಿಡ್ ಸಾಂಕ್ರಾಮಿಕದಿಂದ ಬಳಲುತ್ತಿರುವವರು ಇಂತಹ ಸುದ್ದಿಯ ವೈಭವೀಕರಣದಿಂದ ಹೆದರಿ, ಭಯಪಟ್ಟು ಸಾವನ್ನಪ್ಪಿದ ಘಟನೆಗಳು ನಡೆದಿವೆ. ಆದ್ದರಿಂದ ಮಾಧ್ಯಮ, ಸಮಾಜದ ನಾಲ್ಕನೇ ಅಂಗ ಎನ್ನುವುದು ಜನಜನಿತವೂ, ಜಗಜ್ಜಾಹಿರಾಗಿದೆ.
ಇಂತಹ ಸಂದರ್ಭದಲ್ಲಿ ನ್ಯೂಸ್ ಚಾನಲ್‌ಗಳು ಸುದ್ದಿಯನ್ನು ಅತಿಯಾಗಿ ವೈಭವೀಕರಿಸುವ ಆ ಮೂಲಕ ಜನರಿಗೆ ರೇಜಿಗೆ ಹುಟ್ಟಿಸುವುದನ್ನು ಬಿಡಬೇಕು. ಉತ್ತಮ ಸಮಾಜ,ಸ್ವಸ್ಥ ಸಮಾಜದ ನಿರ್ಮಾಣದ ಪಾಲಿನಲ್ಲಿ ಇಂದು ಮಾಧ್ಯಮಗಳ ಪಾಲು ದೊಡ್ಡದಿದೆ.ಆದ ಕಾರಣ ಮಾಧ್ಯಮಗಳು ಈ ನಿಟ್ಟಿನಲ್ಲಿ ಯೋಚಿಸಲಿ.