Saturday, 27th July 2024

ದೇವರೇ ನನಗೆ ಹೆಣ್ಣು ಮಗಳು ಜನಿಸದಿರಲಿ!

ನಾನೀಗ ಎಂಟೂವರೆ ತಿಂಗಳ ತುಂಬು ಗರ್ಭಿಣಿ. ಉದರದಲ್ಲಿರುವ ಕಂದ ಮಗನೋ, ಮಗಳೋ ತಿಳಿಯದು. ಏನೇ ಇರಲಿ, ಜೀವಾತ್ಮ ನೀಡುತ್ತಿರುವ
ಸುಖಾನುಭೂತಿ ಅಸದಳ. ಹೊಟ್ಟೆಯೊಳಗೆ ಮಗು ಪುಟ್ಟ ಕಾಲಿನಿಂದ ಒದ್ದಾಗ ಅಸೀಮ ಪುಳಕ. ಅದರ ಉಸಿರಿನ ಝೇಂಕಾರ ಕರ್ಣಗಳಿಗೆ ಇಂಚರ.

ಅಹರ್ನಿಶಿ ಎದೆಯಲಿ ಕಿಂಕಿಣಿನಾದ. ನಮ್ಮಿಬ್ಬರಲ್ಲಿಯೂ ಟಿಸಿಲೊಡೆದಿರುವ ಬಯಕೆ ಮಗಳೇ ಆಗಲಿ ಎಂದು. ಏಕೆಂದರೆ ಮಗಳು ಲಕುಮಿ, ಸದಾ
ವತ್ಸಲೇ. ಅವಳು ನಕ್ಕರೆ ಮನೆ ತುಂಬ ಮಲ್ಲಿಗೆ. ಅತ್ತರೆ ಸ್ವಾತಿ ಮುತ್ತಿನ ಮಳೆ. ಅವಳು ತನ್ನಸುತ್ತಲಿನ ಪರಿಸರ ವನ್ನು ಸಂತಸದ ಸುನಾಮಿಯಾಗಿಸುವಳು. ಈ ಬೆಳದಿಂಗಳ ಬಾಲೆ ಅಪ್ಪನ ಅಪದಮನಿ, ಅಮ್ಮನ ಅಭಿದಮನಿ. ಕೆಲವೊಮ್ಮೆ ಎಲ್ಲೋ ಏನೋ ಎಡವಟ್ಟಾಗಿ ಯೋಚಿಸುತ್ತಿರುವೆನೇನೋ ಎಂದು ಭಾಸವಾಗುತ್ತದೆ.

ಈ ಕ್ರೂರಿ ಸಮಾಜದಲ್ಲಿ ನನ್ನ ಮಗಳು ಬಾಳಬಲ್ಲಳೇ? ಅಜ್ಜಿ, ತಾಯಿ ಕೊನೆಗೆ ೩ ವರ್ಷದ ಎಳೆಗಲ್ಲದ ಹಸುಳೆ ಕಂದಮ್ಮನನ್ನೂ ಬಿಡದೇ ಅತ್ಯಾಚಾರ ಗೈದು ಕೊಲೆ ಮಾಡುವ ಪರಮ ಪಿಶಾಚಿಗಳಿರುವ ಪ್ರಪಂಚವಿದು. ಹಾಡ ಹಗಲೇ ನಾಲ್ಕೈದು ಪುಂಡರಿಂದ ಶಾಲಾ ಬಾಲಕಿಯ ಅಪಹರಣ, ಮನೆಯ ಮುಂದೆ ಆಡುತ್ತಿದ್ದ ಮಗುವಿನ ಕಿಡ್ನಾಪ್, ಚಾಕಲೇಟ್ ಆಸೆ ತೋರಿಸಿ ೬೦ರ ವೃದ್ಧನಿಂದ ೫ ವರ್ಷದ ಬಾಲೆಗೆ ಲೈಂಗಿಕ ದೌರ್ಜನ್ಯ, ಪ್ರಿಯಕರ ಹಾಗೂ ಗೆಳೆಯನಿಂದ ಯುವತಿಯ ಗ್ಯಾಂಗ್ ರೇಪ್, ಕೊಲೆ, ಬುದ್ಧಿಮಾಂದ್ಯ ಯುವತಿಗೆ ಮದ್ಯ ಕುಡಿಸಿ ರೇಪ್, ಪ್ರತಿನಿತ್ಯ ಇಂತಹ ಕನಿಷ್ಠ ಹತ್ತು ಪ್ರಕರಣಗಳು ನಮ್ಮ ಮಾಧ್ಯಮಗಳಲ್ಲಿ ವರದಿಯಾಗುತ್ತವೆ.

ಹೀಗಿದ್ದಾಗ ನನ್ನ ಮಗಳನ್ನು ಹೇಗೆ ಕಾಯಲಿ? ನಿಮ್ಮ ಮಗವಿಗೆ ಉತ್ತಮ ಭವಿಷ್ಯ ಒದಗಿಸಲಿ ಎನ್ನುವುದು ಆಡಳಿತಶಾಹಿಗೆ ನನ್ನ ಪ್ರಶ್ನೆ. ಇಂತಹ ಹೊಲಸು ವಾತಾವರಣದಲ್ಲಿ ಹೇಗೆ ರಕ್ಷಣೆ ಒದಗಿಸಲಿ? ಹೆಣ್ಣೊಂದು ಕಲಿತರೆ ಶಾಲೆ ತೆರೆದಂತೆ. ನಿಜ, ಯಾವ ಧೈರ್ಯದ ಮೇಲೆ ಶಾಲೆಗೆ ಕಳಿಸಲಿ? ಕಾಯುವ ದೈವವೇ ಕೊಲೆಗೈದಂತೆ ಕಲಿಸುವ ಶಿಕ್ಷಕರೇ ಕಾಮುಕರಾದರೇನು ಗತಿ? ದೆಹಲಿಯಲ್ಲಿ ಒಂದಿನಿತೂ ಭಯವಿಲ್ಲದ ರಾಕ್ಷಸರು ನಿರ್ಭಯಾಳನ್ನು ಕ್ರೂರವಾಗಿ ಹಿಂಸಿಸಿ ಕೊಂದರು.

ಇದಕ್ಕೆ ಕಾರಣ ನಮ್ಮ ಕಾನೂನಿನಲ್ಲಿರುವ ದುರ್ಬಲತೆಯ ತೂತುಗಳು. ಅಪರಾಧಿಗಳು ಸಿಕ್ಕಿ ಬಿದ್ದರೂ ಅವರು ದೊಡ್ಡವರು ಅಥವಾ ರಾಜಕಾರಣಿಗಳ ಮಕ್ಕಳೇ ಆಗಿರುತ್ತಾರೆ. ಹಾಗಾಗಿ ಎಫ್ಐಆರ್ ಆಗುವುದೇ ಇಲ್ಲ. ಹಣದ ಕಿಂಕಿಣಿ ನಾದದಿಂದ ಜಾಮೀನು ಪಡೆದು ಹೊರಬರುತ್ತಾರೆ. ಎರಡು ದಿನ ವಿಶ್ರಾಂತಿ, ಮತ್ತದೇ ಹೊಲಸು ಕಾಯಕ, ಮತ್ತೊಬ್ಬ ಬಲಿಪಶುವಿಗಾಗಿ ಅನ್ವೇಷಣೆ! ಇಂತಹ ಮಜಾವಾದಿಗಳಿಗೆ ಪೋರ್ನ್ ಸೈಟ್‌ಗಳು, ಮದಿರೆ, ಗಾಂಜಾ, ಡ್ರಗ್ಸ್ ಮೊದಲಾದ ವ್ಯಸನಗಳು ಸಹಪಾಠಿಗಳು. ಇಂತಹ ರಕ್ಕಸರೂಪಿ ಮಾನವರೇ ತುಂಬಿರುವ ಈ ಜಗತ್ತಿನಲ್ಲಿ ನಾನು ನನ್ನ ಮಗಳನ್ನು ದಿನದ ೨೪ ಗಂಟೆ ಸಂರಕ್ಷಿಸಿಕೊಳ್ಳಬಲ್ಲೆನೇ? ಖಂಡಿತ ಅಸಾಧ್ಯ.

ಹಾಗಾಗಿ ಆ ಜಗದೊಡೆಯನಲ್ಲಿ  ನನ್ನದೊಂದೇ ಪ್ರಾರ್ಥನೆ. ಹೇದೇವಾ, ಖಂಡಿತ ನನಗೆ ಮಗಳು ಜನಿಸದಿರಲಿ!

(ಒಬ್ಬ ಗರ್ಭಿಣಿಯ ಮನದಳಲು)
-ಕೆ.ಲೀಲಾ ಶ್ರೀನಿವಾಸ್ ಹರಪನಹಳ್ಳಿ

ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದಲಾವಣೆ ಟಾನಿಕ್ ಬೇಕೆ?
ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜನರಿಂದ, ಜನರಿಗಾಗಿ ಮತ್ತು ಜನರಿಂದಲೇ ನೆಡೆಯಲ್ಪಡುವ
ಒಂದು ವ್ಯವಸ್ಥೆ. ಆದರೆ ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ ಈ ಹೇಳಿಕೆ ಬರಿಯ ಪುಸ್ತಕದ ಬದನೆಕಾಯಿ ಅನಿಸುತ್ತದೆ. ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ನಂತರ ಜನರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಸರ್ವಾಧಿಕಾರಿ ಧೋರಣೆ ತೋರುವುದನ್ನು ನೋಡಿದರೆ, ನಿಜವಾಗಿಯೂ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆಯೋ? ಎಂಬ ಸಂಶಯ ಮೂಡುತ್ತದೆ.

ತಾವು ಜನರಿಂದ ಆಯ್ಕೆಯಾದವರು ಎಂಬುದನ್ನು ಚುನಾವಣೆ ನಂತರ ಸಂಪೂರ್ಣ ಮರೆತವರಂತೆ ವರ್ತಿಸುವ ಇವರು ಇನ್ನೊಂದು ಚುನಾವಣೆ ಬರುವವರೆಗೂ ಜನರನ್ನು ಕಡೆಗಣಿಸುತ್ತಾರೆ. ಇದನ್ನೆಲ್ಲ ನೋಡಿದಾಗ, ಈಗಿನ ವ್ಯವಸ್ಥೆಯಲ್ಲಿ ಸುಧಾರಣೆ ಅವಶ್ಯ ಎಂದೆನಿಸುತ್ತದೆ. ಜನರಿಗೆ ತಾವು ಆರಿಸಿದ ಪ್ರತಿನಿಽಗಳನ್ನು ವಾಪಸ್ ಕರೆಯುವ ಒಂದು ಪ್ರಕ್ರಿಯೆ ಬಂದರೆ ಅಹಂಕಾರದಿಂದ ಮೆರೆಯುವ ರಾಜಕೀಯ ಧುರೀಣರು ಸರಿಹೋಗುವ
ಸಾಧ್ಯತೆ ಇದೆ. ಇಂತಹ ಒಂದು ಪ್ರಯೋಗಕ್ಕೆ ನುರಿತ ಸಂವಿಧಾನ ಮತ್ತು ಕಾನೂನು ತಜ್ಞರ ಸಲಹೆ ಬೇಕಾಗುತ್ತದೆ.

ಜನರೇ ಇದನ್ನು ಒಂದು ಸಂಘಟಿತ ಚಳವಳಿಯಂತೆ ನಡೆಸಿದರೆ ಇದನ್ನು ಜಾರಿಗೆ ತರಲು ಸಾಧ್ಯವಾಗಬಹುದು. ವ್ಯವಸ್ಥೆಯ ಬದಲಾವಣೆಗಾಗಿ ಪ್ರಯತ್ನಿಸ ಬೇಕಾದ ಇನ್ನೊಂದು ಮಾರ್ಗವೆಂದರೆ ನಿಗದಿತ ಸಮಯದಲ್ಲಿ ಜನಪ್ರತಿನಿಧಿಗಳ ಸಾಧನೆಯ ಅವಲೋಕನ. ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಆಯಾ ಪ್ರದೇಶದ ಚುನಾಯಿತ ಪ್ರತಿನಿಧಿಗಳ ಕೆಲಸಗಳನ್ನು ಅಲ್ಲಿಯ ಜನರೇ ಅವಲೋಕಿಸಿ ಶ್ರೇಣಿಯನ್ನು ನೀಡುವಂತಹ ಪದ್ಧತಿಯನ್ನು ಜಾರಿಗೆ ತಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಲು ಸಹಾಯವಾಗಬಹುದು.

ಇಂತಹ ಪ್ರಕ್ರಿಯೆ ಮೂಲಕ ಕಳಪೆ ಸಾಧನೆ ಮಾಡಿದ ಜನ ಪ್ರತಿನಿಧಿಗಳನ್ನು ಎಚ್ಚರಿಸುವ ಮತ್ತು ಮುಂದಿನ ಚುನಾವಣೆಯಲ್ಲಿ ಉಮೇದುವಾರಿಕೆಗೆ ಅನರ್ಹರಾಗುವಂತೆ ಮಾಡುವ ಅವಕಾಶವನ್ನು ಜನರಿಗೆ ಕೊಡಬಹುದಾಗಿದೆ. ಇದು ಸುಲಭದ ಕೆಲಸವಲ್ಲ, ಇರುವ ವ್ಯವಸ್ಥೆಗೆ ತಿದ್ದುಪಡಿ ತರಲು ಜನಪ್ರತಿನಿಽಗಳೇ ತೊಂದರೆ ತರುತ್ತಾರೆ. ಒಂದು ವೇಳೆ ಇಂತಹ ಬದಲಾವಣೆ ಬಂದರೆ ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ದಾರಿಗಳನ್ನು
ಕಂಡುಕೊಳ್ಳುತ್ತಾರೆ. ಭಾರತಂದಹ ವೈವಿಧ್ಯಮಯ ದೇಶದಲ್ಲಿ ಚಿಕ್ಕ ಬದಲಾವಣೆಯೂ ಕಷ್ಟ ಎನ್ನುವಂತೆ ತೋರಿದರೂ ಇಂತಹ ಬದಲಾವಣೆ ತರಲೇಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.

ರಾಜ್ಯದ ಮತ್ತು ದೇಶದ ಚುಕ್ಕಾಣಿ ಹಿಡಿದ ನಾಯಕರುಗಳ ನಿರ್ಧಾರಗಳು ದೇಶದ ಮುಂದಿನ ನಡೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವು ದರಿಂದ ಪ್ರಚಲಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವದು ತುಂಬ ಮುಖ್ಯವಾಗುತ್ತದೆ. ಇಂತಹ ಬದಲಾವಣೆಯನ್ನು ಜನರೇ ಒತ್ತಾಯಿಸಿ ಕಾರ್ಯರೂಪಕ್ಕೆ
ತರಬೇಕಾಗಿದೆ. ಯಾರು ಅಧಿಕಾರಕ್ಕೆ ಬಂದರೆ ನಮಗೇನು ಎನ್ನುವ ಅಸಡ್ಡೆಯ ಧೋರಣೆ ಇಂದು, ಅಯೋಗ್ಯರಾದ ಅನೇಕ ವ್ಯಕ್ತಿಗಳು ಗುರುತರ ಜವಾ ಬ್ದಾರಿಯ ಸ್ಥಾನದಲ್ಲಿ ಕುಳಿತಿರುವದಕ್ಕೆ ಕಾರಣವಾಗಿದೆ. ನಾವು ಎಚ್ಚೆತ್ತುಕೊಳ್ಳದೇ ಹೋದರೆ, ಮಂಗನ ಕೈಲಿ ಮಾಣಿಕ್ಯ ಎಂಬಂತೆ ದೇಶ ಹರಾಜಿಗೆ ಬಂದರೂ ಆಶ್ಚರ್ಯವಿಲ್ಲ.

-ವಿದ್ಯಾಶಂಕರ್ ಶರ್ಮ ಬೆಂಗಳೂರು

error: Content is protected !!