ರಾಜಕೀಯ ಪಕ್ಷಗಳ ಸಿದ್ಧಾಂತ, ಆಚಾರ, ವಿಚಾರ ಆಲೋಚನೆಗಳು ಏನೇ ಇರಲಿ. ಪ್ರಜಾಪ್ರಭುತ್ವದಲ್ಲಿ ಅವುಗಳೆಲ್ಲವೂ ಪ್ರಜಾಹಿತದ ಮುಂದೆ ತಲೆ ಬಾಗಲೇ ಬೇಕಾದ್ದು ನೀತಿ. ಆದರೆ ಇಂದು ಭಾರತದಲ್ಲಿ ಯಾವ ಪಕ್ಷವನ್ನೇ ಹೆಸರಿಸಿ- ಅದು ಬೇಕಾದರೆ ಪ್ರಜಾಹಿತವನ್ನು ಕೊಂದೀತು; ತನ್ನ ಭಂಡ
ನಿಲುವುಗಳನ್ನು ಪ್ರಜಾಸುಭೀಕ್ಷೆಗಾಗಿ ಬದಿಗಟ್ಟಲಾರವು. ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷವೆಂದು ಕೊಚ್ಚಿಕೊಳ್ಳುವ ಕಾಂಗ್ರೆಸ್ ಅತ್ಯಂತ ಹಳೆಯ ರಾಜಕೀಯ ಪಕ್ಷವೂ ಹೌದು, ಭಾರತದ ದಾಸ್ಯ ವಿಮೋಚನೆಯಲ್ಲಿ ಆ ಪಕ್ಷದ ಪಾತ್ರವೂ ಸಾಕಷ್ಟಿದೆ ಎನ್ನುವುದು ಅಲ್ಲಗಳೆಯುವಂತಹದ್ದಲ್ಲ.
ಆದರೆ ಬರಬರುತ್ತ ಕಾಂಗ್ರೆಸ್ ಪ್ರಜಾಹಿತವನ್ನೇ ಮರೆತಂತೆ ಭಾಸವಾಗುತ್ತಿದೆ. ಇದಕ್ಕೆ ಕರ್ನಾಟಕದ ರಾಜಕೀಯ ಬೆಳವಣಿಗೆಯೇ ಉತ್ತಮ ಉದಾಹರಣೆ. ಸಚಿವ ಕೆ.ಎಸ್ ಈಶ್ವರಪ್ಪನವರ ಹೇಳಿಕೆ ವಿರೋಧಿಸಿ ಕಳೆದ ಕೆಲ ದಿನ ಗಳಿಂದ ಕಾಂಗ್ರೆಸ್ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ಕುತೀದೆ. ಈ ಕಾರಣದಿಂದ ಸದನದ ಯಾವ ಕಾರ್ಯ ಕಲಾಪಗಳೂ ನಡೆಯದೇ ಉಭಯ ಸದನಗಳು ಮುಂದೂಡಲ್ಪಟ್ಟಿವೆ. ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮಾತುಗಳನ್ನೂ ವಿರೋಧ ಪಕ್ಷದ ನಾಯಕರು- ಸಭಾಧ್ಯಕ್ಷರ ಕರೆಯ ಮೇರೆಗೂ ಆಡದೆ ಉಳಿದದ್ದು ಸಂಸದೀಯ ವ್ಯವಸ್ಥೆಯಲ್ಲಿ ಅನುಕರಣೀಯವಲ್ಲ.
ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವೊಂದರ ರಾಜ್ಯದ ಅಧ್ಯಕ್ಷ ತಾನು ಎನ್ನುವುದನ್ನು ಮರೆತ ಡಿ.ಕೆ ಶಿವಕುಮಾರ್ ಸದನದ ದಾದಾಗಿರಿ ಮಾಡಲು ಹೋಗಿ ಕಾಂಗ್ರೆಸ್ ಪಕ್ಷದ ಮಾನ ಹರಾಜು ಹಾಕಿದ್ದು ಒಂದು ಕಡೆಯಾದರೆ, ಆರೂವರೆ ಕೋಟಿ ಕನ್ನಡಿಗರನ್ನು ಪ್ರತಿನಿಧಿಸುವ ಪ್ರಜಾಸದನದಲ್ಲಿ ಅವರು ತೋರಿದ ವರ್ತನೆ ಸಮಸ್ತ ಕನ್ನಡಿ ಗರ ಕಪಾಳಕ್ಕೆ ಹೊಡೆದು ಮಾಡಿದ ಅಪಮಾನವೆನ್ನುವುದು ಇನ್ನೊಂದು ಕಡೆ. ಪ್ರತಿಭಟನೆ ಮಾಡಬೇಡಿ, ಧರಣಿ ಕೂಡಬೇಡಿ ಅಂತ ಯಾರಾದರೂ ಹೇಳಿದರೆ ಅವರು ಪ್ರಜಾಪ್ರಭುತ್ವ ವಿರೋಧಿಗಳು ಅಂತಲೇ ಅನ್ನುತ್ತೇನೆ. ಆದರೆ ಸದನದಲ್ಲಿ ಅದನ್ನು ಮಾಡಬೇಡಿ.
ಸದನವು ಒಂದು ಪಕ್ಷದ ರಾಜಕೀಯ ಅಜೆಂಡಾಗಳನ್ನು ಪ್ರದರ್ಶಿಸಲಿರುವ ವೇದಿಕೆಯಲ್ಲ. ಅ ಹಗಲು ರಾತ್ರಿ ವಾಸ್ತವ್ಯ ಹೂಡಲು ಅದೇನು ಯಾರ ಶಯನ ಕೋಣೆಯೂ ಅಲ್ಲ, ಹೋಟೆಲು ರೆಸ್ಟೋರೆಂಟೂ ಅಲ್ಲ. ಇದನ್ನು ಅರಿಯದ ಯಾರೂ ಆ ಸದನದ ಸದಸ್ಯರಾಗಿರಲು ಅರ್ಹರಲ್ಲ. ಪ್ರಜೆಗಳನ್ನು- ನೀವು ಶಾಸಕರುಗಳು ಪ್ರಭುಗಳೆಂದು ಮನಸಾ ನಂಬುವುದಾದರೆ ಆ ಪ್ರಭುವಿನ ಸೇವಾ ಪೂರೈಕೆಗಿರುವ ಸ್ಥಳವಾದ ಸದನದಲ್ಲಿ ಮಲಗಿ ಹರಟುತ್ತಿರಲಿಲ್ಲ. ಅಷ್ಟಕ್ಕೂ ಯಾವ ಘನಂದಾರಿ ಕಾರ್ಯಪ್ರಾಪ್ತಿಗೆ ಈ ಧರಣಿ? ಈಶ್ವರಪ್ಪ ರಾಜೀನಾಮೆ ಕೊಟ್ಟರೆ ಅದರಿಂದ ಕಾಂಗ್ರೆಸ್ಸಿಗೆ ಲಾಭವಿದ್ದರೂ ಇದ್ದೀತು!
ಪ್ರಜೆಗಳಿಗೆಂತು ಲಾಭ? ಸ್ವಲಾಭಕ್ಕೆ ಪ್ರಜಾಸದನವನ್ನು ದುರುಪಯೋಗ ಮಾಡಿಕೊಳ್ಳುವ ಮಟ್ಟಿಗೆ ಕರ್ನಾಟಕದ ರಾಜಕಾರಣಿಗಳು ಹೋಗಿದ್ದಾರೆಂದರೆ ಏನು ಹೇಳೋಣ? ಈಶ್ವರಪ್ಪ ನವರ ರಾಜೀನಾಮೆಯನ್ನು ಬೇಕಾದರೆ ಅವರ ಮನೆ ಮುಂದೆ ಹೋಗಿ ಕೂತು ಕೇಳಲಿ- ಯಾರು ಬೇಡೆಂದಾರು? ರಾಜ್ಯದ
ಹಳ್ಳಿಹಳ್ಳಿಗಳಲ್ಲೂ ಕಾಂಗ್ರೆಸ್ ಈಶ್ವರಪ್ಪನವರ ಹೇಳಿಕೆ ವಿರೋಧದಲ್ಲಿ ಪ್ರತಿಭಟಿಸಿ ರಾಜೀನಾಮೆಗೆ ಆಗ್ರಹಿಸಲಿ- ತಡೆಯುವವರಾರು? ಅದನ್ನು ಬಿಟ್ಟು ಪ್ರಜಾಲಯದಲ್ಲಿ ಸ್ವಲಾಭಕ್ಕಾಗಿ ಧರಣಿ ಕೂರುತ್ತೀರೆ? ಅದೆಷ್ಟು ಧೈರ್ಯ, ಅದೇನು ಭಂಡತನ!
ಸದನದ ಉದ್ದೇಶ ಆಶಯಗಳೇನು ಎನ್ನುವುದನ್ನು ಸ್ವಲ್ಪ ಗಮನಕ್ಕೆ ತಂದುಕೊಳ್ಳುವುದು ಪ್ರತಿಯೊಬ್ಬ ಕನ್ನಡ ಪ್ರಜೆಯೂ ಪ್ರಕೃತದಲ್ಲಿ ಮಾಡಬೇಕಾದ ಮುಖ್ಯ ಕಾರ್ಯ. ಬಹಳ ಸ್ಪಷ್ಟವಾಗಿ ಹೇಳುತ್ತೇನೆ- ಸದನದ ಏಕಮಾತ್ರ ಉದ್ದೇಶ ಮತ್ತು ಆಶಯ ಪ್ರಜಾಹಿತಚಿಂತನೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆಲ್ಲರೂ ಕಲೆತು ಒಂದೆಡೆ ಕೂಡಿ- ತಮ್ಮ ತಮ್ಮ ಹಿತಾಭಿವೃದ್ಧಿಗೆ ಬೇಕಾದ ಎಲ್ಲವನ್ನೂ ಸ್ವಪ್ರಯತ್ನ ಮಾತ್ರದಿಂದಲೇ ಮಾಡಿಕೊಳ್ಳುವುದು ಅಸಾಧ್ಯವಾದ ಮಾತು. ಆ ಕಾರಣಕ್ಕೆ ಇರುವುದು ಚುನಾವಣಾ ಪದ್ಧತಿ. ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಸರ್ಕಾರಗಳು ರಚನೆಯಾಗುತ್ತವೆ.
ನಮ್ಮ ಲೌಕಿಕ ಹಿತಗಳನ್ನು ಸಾಧ್ಯ ಮಾಡುವುದಕ್ಕೆ ಈ ವ್ಯಕ್ತಿ ಸೂಕ್ತ, ಇವನು ನಮ್ಮನ್ನು ಸರ್ಕಾರದಲ್ಲಿ ಅಥವಾ ಆಡಳಿತದಲ್ಲಿ ಪ್ರತಿನಿಧಿಸಲು ಯೋಗ್ಯ ವ್ಯಕ್ತಿ ಎಂದು ಪ್ರಜೆಗಳು ನಿರ್ಧರಿಸಿ ಚುನಾವಣೆಗಳಲ್ಲಿ ಯಾರಿಗೆ ಬಹು ಮತ ಕೊಡುತ್ತಾರೋ- ಅವನು ಆ ಮಂದಿಯ ಪ್ರತಿನಿಧಿಯಾಗಿ ಸದನ ಪ್ರವೇಶಿಸು ತ್ತಾನೆ. ಅಲ್ಲಿ ಅವನ ಕೆಲಸ ಏನು? ತನ್ನ ಪ್ರಜೆಗಳ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ತ್ವರಿತವಾಗಿ ಆ ಸಮಸ್ಯೆಯ ಪರಿಹಾರವನ್ನು ಪ್ರಜೆಗಳಿಗೆ ಒಯ್ದುಕೊಡುವುದು. ಮತ್ತು ರಾಜ್ಯದ ಶಾಂತಿ ಸುವ್ಯವಸ್ಥೆ, ನಾಡಿನ ಎಲ್ಲ ಪ್ರಜೆಗಳ ಸಾಮಾಜಿಕ ಮತ್ತು ಆರ್ಥಿಕ ಶ್ರೇಯೋಭಿವೃದ್ಧಿಗೆ ಕಾನೂನು ಗಳನ್ನು ಮಾಡುವುದು, ಶಾಸನಗಳನ್ನು ರಚಿಸುವುದು ಎಲ್ಲ ಪ್ರಜಾಪ್ರತಿನಿಽಗಳ ಪ್ರಧಾನ ಕೆಲಸ.
ಅದಕ್ಕೆಂದೇ ಪ್ರಶ್ನೋತ್ತರ ಅವಧಿ, ಶೂನ್ಯವೇಳೆ, ಸಾರ್ವಜನಿಕ ಮಹತ್ವವುಳ್ಳ ವಿಷಯದ ಮೇಲೆ ಸದನದ ಗಮನ ಸೆಳೆಯುವುದು, ವಿಧೇಯಕ ಮಂಡಿಸು ವುದು, ಇತ್ಯಾದಿಗಳೆ ಸದನದ ಕಾರ್ಯಕಲಾಪ ಪುಸ್ತಕದಲ್ಲಿರುವುದು.
ಕಾಂಗ್ರೆಸ್ಸಿನ ಈ ಹಾಳು ಧರಣಿಯ ಕಾರಣದಿಂದ ಉಭಯ ಸದನಗಳ ಯಾವ ಕಲಾಪಗಳೂ ಸುಸೂತ್ರವಾಗಿ ನಡೆದಿಲ್ಲ. ಪಾಪ ಆಸಕ್ತಿಯಿಂದ ಸದನದ ಮುಂದೆ ವಿಷಯ ಪ್ರಸ್ತಾಪ ಮಾಡಲು ಕಾದು ಕುಳಿತಿರುವ ಜೆ.ಡಿ.ಎಸ್ ಇಷ್ಟು ದಿನ ಕಾದದ್ದಷ್ಟೇ ಆಯಿತು. ಕಾಂಗ್ರೆಸ್ಸಿನ ಧರಣಿಯಿಂದ ಯಾವ ಸಾರ್ವಜನಿಕ ಸಮಸ್ಯೆಗಳೂ ಸದನದಲ್ಲಿ ಚರ್ಚೆಯಾಗಲು ಸಾಧ್ಯವಾಗಿಲ್ಲ. ಒಂದು ಪತ್ರಿಕೆಗೆ ಓದುಗರೊಬ್ಬರು ಪತ್ರ ಬರೆಯುತ್ತಾರೆ, ’ಕಾಂಗ್ರೆಸ್ ಸಾರ್ವಜನಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೀಗೆ ಧರಣಿ ಮಾಡಿದ್ದಿದ್ದರೆ ಕರ್ನಾಟಕ ಅಭಿವೃದ್ಧಿಯಾದರೂ ಆಗುತ್ತಿತ್ತು’ ಎಂದು. ಬಾಯಿಬಿಟ್ಟರೆ
ಸದನದ ನಿಯಮ ನೀತಿಗಳ ಬಗ್ಗೆ ಮಾತನಾಡುವ ಸಿದ್ಧರಾಮಯ್ಯ ಮತ್ತು ರಮೇಶ ಕುಮಾರ್ ಕೂಡ ತಮ್ಮ ಅಜೆಂಡಾ ಸ್ಥಾಪನೆಗೆ ಸದನದ ನೀತಿ ನಿಯಮಗಳನ್ನು, ಉದ್ದೇಶ ಆಶಯಗಳನ್ನು ಗಾಳಿಗೆ ತೂರಿದ್ದು ಯಾರನ್ನಾದರೂ ಕೆರಳಿಸುತ್ತದೆ.
ಇವರೂ ಬದನೆಕಾಯನ್ನೇ ತಿನ್ನೋದು, ಮಾತಾಡೋದು ಮಾತ್ರ ಘನ ತತ್ವಗಳನ್ನು. ಇನ್ನು ಆಡಳಿತಾರೂಢ ಭಾಜಪಾದ ವಿಷಯಕ್ಕೆ ಬರುವುದಾದರೆ ಅದಕ್ಕೆ ರಾಜ್ಯದಲ್ಲಿ ಒಬ್ಬ ಗಟ್ಟಿ ನಾಯಕ ಅಂತ ಯಾರೂ ಇಲ್ಲ. ಅದಕ್ಕಾಗೇ ಈಶ್ವರಪ್ಪನವರಂತಹ ಅನೇಕ ಮಾತಾಳಿಗಳು ಬಾಯಿಗೆ ಬಂದಂತೆ ಮಾತನಾಡುತ್ತಾ, ಮನಸ್ಸಿಗೆ ತೋಚಿದ್ದನ್ನೇ ಹೇಳಿಕೊಳ್ಳುತ್ತಾ ಅಡ್ಡಾಡುವುದು. ಅವರ ಹೇಳಿಕೆ ಸರಿಯೋ ತಪ್ಪೊ ಅದನ್ನು ಜನ ನೋಡಿಕೊಳ್ಳುತ್ತಾರೆ. ವಿರೋಧ ಪಕ್ಷವಾಗಿ ಕಾಂಗ್ರೆಸ್ಸಂತೂ ಅವರದು ದೇಶದ್ರೋಹದ ಮಾತು ಅನ್ನೊ ತಿರ್ಮಾನಕ್ಕೆ ಬಂದಾಗಿದೆ. ಆದರೆ ಜನರ ತಿರ್ಮಾನ ಏನು? ಅದು ಮುಂದಿನ ಚುನಾವಣೆಯ ತಿಳಿಯುವುದು.
ಸದನದಲ್ಲಿ ಧರಣಿ ಮಾಡಿದರೆ ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆಂದು ಕಾಂಗ್ರೆಸ್ ಭಾವಿಸಿದ್ದರೆ ಅವರು ಆ ಭ್ರಮೆಯಿಂದ ಹೊರಬರಲಿ. ಎಲ್ಲರಿಗೂ ಗೊತ್ತಿರುವಂತೆ ಕಾಂಗ್ರೆಸ್ಸಿನವರಿಗೂ ಗೊತ್ತು ಈ ಧರಣಿಯ ಫಲಿತಾಂಶ ಶೂನ್ಯ ಅಂತ. ಆದರೂ ಮಾಡುತ್ತಿದ್ದಾರೆಂದರೆ ಅದಕ್ಕೆ ಕಾರಣ ಅವರ ರಾಜಕೀಯ ಅಜೆಂಡಾ. ರಾಜಕೀಯ ಅಜೆಂಡಾಗಳು ಸದನದ ಹೊರಗೆ ಧರಣಿ, ಪಾದಯಾತ್ರೆ, ಪ್ರತಿಭಟನೆ, ಸತ್ಯಾಗ್ರಹ ಇತ್ಯಾದಿ ಯಾವುದೇ ರೂಪಗಳನ್ನು ಬೇಕಾದರೂ ತಾಳಲಿ. ಸದನದ ಘನತೆ ಗೌರವಗಳನ್ನು ಎತ್ತಿ ಹಿಡುದು ಕಾಪಾಡಬೇಕು ಎನ್ನುವ ಕಾಳಜಿ ಕಾಂಗ್ರೆಸ್ಸಿನ ಎಲ್ಲಾ ಹಿರಿಯ ನಾಯಕರುಗಳಿಗಿದ್ದರೆ ತಕ್ಷಣಕ್ಕೆ ಸದನದ ಅಹೋರಾತ್ರಿ ಧರಣಿ ಕೈಬಿಡಬೇಕು. ಬೇಕಾದರೆ ಹೊರಗೆ ಮಾಡಿಕೊಳ್ಳಿ.
ಸಾರ್ವಜನಿ ಕರಿಗೆ ಸರಿ ಎನಿಸಿದರೆ ಅವರೂ ಸಾಥ್ ಕೊಡುತ್ತಾರೆ. ಸದನದ ಒಳಗೆ ಬೇಡ. ಸಿದ್ಧರಾಮಯ್ಯ, ರಮೇಶ ಕುಮಾರ, ಎಚ.ಕೆ ಪಾಟೀಲ, ಡಿ.ಕೆ ಶಿವಕುಮಾರ್,ಎಮ.ಬಿ ಪಾಟೀಲ ರಂತಹ ಹಿರಿಯರು ಸದನ ಸರಿದಾರಿಯಲ್ಲಿ ನಡೆಯಲು ಮಾರ್ಗ ತೋರಬೇಕೇ ಹೊರತು ಮಾರ್ಗ ತಪ್ಪಿಸಬಾರದು.
ಸದನ ತಪ್ಪಿದ ಮಾರ್ಗ ಪ್ರಜಾ ಪಯಣಕ್ಕೆ ಮಾರಕ ಎನ್ನುವುದು ನೆನಪಿರಲಿ. ಧರಣಿ ಬಿಟ್ಟು ಸಾರ್ವಜನಿಕರ ಕೈ ಹಿಡಿಯಿರಿ.
– ಹೃತಿಕ್ ಕುಲಕರ್ಣಿ, ಧಾರವಾಡ