Saturday, 14th December 2024

ಇವರಿಗೂ ಪ್ಯಾಕೇಜ್ ಘೋಷಿಸಿ

ಕೋವಿಡ್ ಎರಡನೇ ಅಲೆಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹದಗೆಟ್ಟಿರುವ ಜನರ ಪರಿಸ್ಥಿತಿಯನ್ನು ಸುಧಾರಿಸಲು ರಾಜ್ಯ ಸರಕಾರ ಆರ್ಥಿಕ ಪುನಶ್ಚೇತನ ನೀಡುವ ಸಲುವಾಗಿ 1250 ಕೋಟಿ ರು. ಗಳಷ್ಟು ವಿಶೇಷ ಪ್ಯಾಕೇಜ್ ಘೋಷಿಸಿರುವದು ಜನಸಾಮಾನ್ಯರ ಜೀವನ ಸುಧಾರಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ ಸ್ವಾಗತಾರ್ಹ.

ಆದರೆ ರಾಜ್ಯ ಸರಕಾರ ಈ ಯೋಜನೆಯಿಂದ ಇನ್ನೂ ಕೆಲವರ್ಗಗಳ ಜನರನ್ನು ಗುರುತಿಸುವಲ್ಲಿ ವಿಫಲವಾಗಿರುವುದೇ ಬೇಸರದ ಸಂಗತಿ. ಅರ್ಚಕರು, ಅಡುಗೆ ಮಾಡುವವರು, ಖಾಸಗಿ ಶಾಲಾ ಶಿಕ್ಷಕರು, ಅತಿಥಿ ಉಪನ್ಯಾಸಕರು, ಲಾರಿ-ಬಸ್ ಚಾಲಕರು, ಬ್ಯೂಟಿ ಪಾರ್ಲರ್, ಹೋಟೆಲ್‌ ,ಬಾರ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಅಲೆಮಾರಿ ಜನಾಂಗದವರು, ಪತ್ರಿಕಾ ವಿತರಕರು, ನೇಕಾರರು, ರೈತಾಪಿ ವರ್ಗದವರು, ತೃತೀಯಲಿಂಗಿಗಳು, ಜಿಮ/ಈಜುಕೊಳ ತರಬೇತುದಾರರು, ಸಣ್ಣಪುಟ್ಟ ಕೆಲಸ ಮಾಡಿ ಕೊಂಡು ಜೀವನ ಸಾಗಿಸುತ್ತಿರುವ ವಿಶೇಷಚೇತನರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ಧನ ಸೇರಿದಂತೆ ಇನ್ನೂ ಹತ್ತು ಹಲವಾರು ವಲಯಗಳಿಗೆ ಆರ್ಥಿಕ ಪುನಶ್ಚೇತನವೆಂಬ ಆಕ್ಸಿಜನ್ ನೀಡಬೇಕಾಗಿದೆ.

ಜನಪ್ರತಿನಿಧಿಗಳೇ ಜನರ ತೆರಿಗೆ ಹಣವನ್ನು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರಿಗೆ ಕೊಡಲು ನಿಮಗೇನು ಕಷ್ಟ? ನೀವೇನು ನಿಮ್ಮ ಮನೆಯಿಂದ ಕೊಡುತ್ತಿ ದ್ದೀರಾ? ಮಠ-ಮಂದಿರ, ಕೆಲಸಕ್ಕೆ ಬಾರದ ಅನ್ಯ ಯೋಜನೆಗಳು, ಜನಪ್ರತಿನಿಧಿಗಳ ಭತ್ಯೆಗಳಿಗೆ ಸಾವಿರಾರು ಕೋಟಿ ಕೊಡುವಷ್ಟು ಇದ್ದಂತಹ ಆಸಕ್ತಿ ಇಂಥ ಕಠಿಣ ಪರಿಸ್ಥಿತಿಯಲ್ಲಿ ಯಾಕೆ ತೋರಿಸುತ್ತಿಲ್ಲ, ಇವರೂ ಕೂಡ ಇತರರಂತೆಯೇ ಮನುಷ್ಯರಲ್ಲವೇ? ಚುನಾವಣೆ ಸಮಯದಲ್ಲಿ ನಿಮಗೆ ಮತ ಹಾಕಲು ಸಣ್ಣ ಪುಟ್ಟ ವರ್ಗದವರೂ ಸೇರಿದಂತೆ ಎಲ್ಲರೂ ಬೇಕು.

ಆದರೆ ಇಂತಹ ಕಠಿಣ ಸಮಯದಲ್ಲಿ ಮಾತ್ರ ಕೆಲವೇ ಕೆಲವು ವರ್ಗದವರನ್ನು ಓಲೈಸುತ್ತೀರಿ, ಯಾಕೆ ಇಂತಹ ಮಲತಾಯಿ
ಧೋರಣೆ. ಸಂದಿಗ್ಧ ಪರಿಸ್ಥಿತಿಯಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಪ್ರಜೆಗಳಿಗೆ ಪ್ರೋತ್ಸಾಹ ನೀಡಿದರೆ ಆಗ ಮಾತ್ರ ಅವರ ಋಣ ತೀರಿಸಲು ಸಾಧ್ಯ. ದಯಮಾಡಿ ರಾಜ್ಯ ಸರಕಾರ ಮೇಲೆ ತಿಳಿಸಿರುವ ಎಲ್ಲಾ ವರ್ಗದವರಿಗೂ ಸೇರಿದಂತೆ ಸಣ್ಣ ಪುಟ್ಟ ವರ್ಗದವರಿಗೂ ವಿಶೇಷ ಪ್ಯಾಕೇಜ್ ಘೋಷಿಸಿ ಅವರ ಹಿತ ಕಾಯಬೇಕಾಗಿದೆ.
– ಮುರುಗೇಶ.ಡಿ ದಾವಣಗೆರೆ