Sunday, 15th December 2024

ಇಂಥ ಔಷಧಿಗಳಿಂದ ಮುಕ್ತಿ ಎಂದು ?

ಅನಿಸಿಕೆ

ಡಾ.ಕರವೀರಪ್ರಭು, ಕ್ಯಾಲಕೊಂಡ

ಇಂದು ಜಾಹೀರಾತು ಜಗತ್ತು ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆದಿದೆ. ಸ್ನಾನಕ್ಕೆ ಸೋಪು, ಬಟ್ಟೆಗೆ ಡಿಟರ್ಜಂಟ್, ಹಲ್ಲುಜ್ಜಲು ಬ್ರಶ್, ಪೇಸ್ಟ್, ಅಡುಗೆ ಉಪ್ಪು, ಎಣ್ಣೆ, ಉಡುವ ಬಟ್ಟೆ, ಬಳಸುವ ತಟ್ಟೆ…… ಯಾವುದು ಇರಬೇಕೆಂಬುದನ್ನು ಅದು ನಿರ್ದೇಶಿಸು ತ್ತದೆ.

ಜಾಹಿರಾತು ಮೋಡಿಗೆ ಮರುಳಾಗದ ಜನರೇ ಇಲ್ಲ. ಅದು ಜನರು ಬಳಸುವ ಔಷಧಗಳ ಬಗ್ಗೆ ಪ್ರಚಾರ ಮಾಡುವಲ್ಲೂ ಹಿಂದೆ  ಬಿದ್ದಿಲ್ಲ. ನೆಗಡಿ, ಶೀತ, ಕೆಮ್ಮು ಇತ್ಯಾದಿಗಳಿಗೆ ಬಳಸುವ ಔಷಧಗಳ ರಂಗುರಂಗಿನ ಮನಮೋಹಕ ಜಾಹಿರಾತಿಗೆ ಮರುಳಾಗಿ, ಔಷಧ ಅಂಗಡಿಗೆ ಹೋಗಿ ಅವುಗಳನ್ನು ಕೊಂಡು ಗುಳಿಗೆ ನುಂಗುವ, ಔಷಧ ಕುಡಿಯುವ ಜನರಿಗೇನೂ ಕಡಿಮೆ ಇಲ್ಲ.

‘ನೆಗಡಿ ಕಡಿಮೆಯಾಗಲು ಔಷಧ ಸೇವಿಸಿದರೆ ಏಳು ದಿನ ಬೇಕು. ಇಲ್ಲದಿದ್ದರೆ ಒಂದು ವಾರ ಸಾಕು’ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಮೂಗಿರುವವರೆಗೆ ನೆಗಡಿ ತಪ್ಪಿದ್ದಲ್ಲ. ನಿಜ, ಹಾಗೆಂದು ಮೂಗನ್ನೇ ತೆಗೆಯಲು ಬರುವುದಿಲ್ಲ. ನೆಗಡಿ ನೆಮ್ಮದಿ ಕೆಡಿಸುವುದು. ಅದಕ್ಕಾಗಿ ನೆಗಡಿ ನಿವಾರಕಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಇವೆ. ಮನಮೋಹಕ ಪ್ಯಾಕುಗಳಲ್ಲಿದ್ದು, ಗ್ರಾಹಕ ರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ.

ಜಾಹಿರಾತು ಜಗತ್ತು ಅಬ್ಬರದ ಪ್ರಚಾರ ಮಾಡಿ, ಇಡೀ ಸಮುದಾಯಕ್ಕೆ ಸಮೂಹ ಸನ್ನಿಯನ್ನುಂಟು ಮಾಡಿದೆ. ಔಷಧಗಳು ರೋಗಿಯನ್ನು ರೋಗದಿಂದ ಮುಕ್ತಗೊಳಿಸಬೇಕು. ಕೈ ಕಾಲು ನೋವಿನಿಂದ ನರಳುವವರು, ನೋವು ನಿವಾರಣೆಗಾಗಿ ಬೇಕಾಬಿಟ್ಟಿ ಔಷಧ ಸೇವಿಸುವುದು ಸರ್ವೇ ಸಾಮಾನ್ಯ ಆದರೆ ಇಂದಿನ ಕೆಲವು ಔಷಧಿಗಳು ರೋಗಿಗಳ ಜೀವನವನ್ನೆ ಮುಕ್ತಗೊಳಿಸಲು ಹೊರಟಿವೆ. ಬೆಚ್ಚಿ ಬೀಳಬೇಡಿ. ಇದು ಸತ್ಯ.

ನೆಗಡಿ, ಶೀತ, ಗಂಟಲಲ್ಲಿ ಕಿರಿಕಿರಿಯಾದಾಗ ಕೀಲುಗಳಲ್ಲಿ ನೋವು ಕಾಣಿಸಿಕೊಂಡಾಗ ದೂರದರ್ಶನದ ಜಾಹೀರಾತುಗಳು ಕಣ್ಮುಂದೆ ಬಿಚ್ಚಿಕೊಳ್ಳುತ್ತವೆ. ತಕ್ಷಣ ಸಮೀಪದ ಔಷಧ ಅಂಗಡಿಗೆ ನುಗ್ಗಿ ವಿಕ್ಸ್ ಆಕ್ಷ್ಯನ್ 500, ಡಿ-ಕೋಲ್ಡ್… ಗುಳಿಗೆಗಳನ್ನು ನುಂಗುವುದು ಸಾಮಾನ್ಯ. ವೈದ್ಯರಲ್ಲಿಗೆ ಹೋದಾಗ ಬರೆದು ಕೊಡುವ ಔಷಧಗಳೆಂದರೆ ಮಕ್ಕಳಿಗಾಗಿ ಡೆಲ್ಕಾನ್ ಪ್ಲಸ್, ವಿಕೊರಿಲ್ ಡ್ರಾಪ್ಸ್/ಸಿರಪ್, ಫೆಬ್ರೆಕ್ಸ್ ಪ್ಲಸ್, ಕೊಲರೆಕ್ಸ್, ಫ್ಲೂಕೋಲ್ಡ್ ಡ್ರಾಪ್ಸ್, ಸೈನಸ್-77, ಡಿ-ಕೋಲ್ಡ್, ಆಕ್ಟಿಫೆಡ್, ಕೋಲ್ಡಾರಿನ್, ಕಾಸೊಮ್, ನೈಸ್, ನಿಮುಸಿಲೈಡ್, ಸೆಟ್ರಜೆಟ್-ಡಿ ಇತ್ಯಾದಿ,..ಇವೆಲ್ಲಾ ಹೆಸರಾಂತ ಕಂಪನಿಗಳ ಔಷಧಗಳೇ.

ಆದರೆ, ’ಈ ಔಷಧಗಳಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಉಂಟುಮಾಡುವ ರಾಸಾಯನಿಕ ವಸ್ತು- ಫಿನೈಲ್ ಪ್ರೊಪೆನಾಲ್ ಅಮೈನ್’ ಇರುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇದು ಮಾನವನನ್ನು ಸಾವಿನ ದವಡೆಗೆ ಸದ್ದಿಲ್ಲದೆ ಕರೆದೊಯ್ಯುತ್ತವೆ. ಇದನ್ನು ಯೇಲ್ ವೈದ್ಯಕೀಯ ಔಷಧ ವಿಶ್ವವಿದ್ಯಾಲಯ ಅಧ್ಯಯನದ ಮೂಲಕ ಸಾಬೀತು ಮಾಡಿದೆ. ಜಾಗತಿಕ ಆರೋಗ್ಯ ಸಂಸ್ಥೆ ಇದನ್ನು ಒಪ್ಪಿ ಕೊಂಡು ಇಂತಹ ಅಪಾಯಕಾರಿ ವಸ್ತುವನ್ನು ಔಷಧ ತಯಾರಿಕೆಯಲ್ಲಿ ಬಳಸಬಾರದು ಎಂದು ನಿರ್ಬಂಧ ಹೇರಿದೆ. ಅಮೆರಿಕಾ ದಲ್ಲಿ ಈ ಔಷಧಗಳನ್ನು ನಿಷೇಧಿಸಿ ಜನರ ಜೀವದೊಡನೆ ಚೆಲ್ಲಾಟವಾಡುವುದಕ್ಕೆ ತಡೆಯಾಗಿದೆ.

ಆದರೆ ನಮ್ಮ ದೇಶದಲ್ಲಿ ಇದನ್ನು ಇನ್ನೂ ಉಪಯೋಗ ಮಾಡುತ್ತಿರುವುದು ವಿಪರ್ಯಾಸವಾಗಿದೆ. ಸರ್ವೋಚ್ಚ ನ್ಯಾಯಾಲಯ ಇವುಗಳ ಬಳಕೆ ನಿಷೇಧಿಸಿ ಆಜ್ಞೆ ಹೊರಡಿಸಿದ್ದರು, ಔಷಧ ಕಂಪನಿಗಳ ನೋಟಿನ ಕಟ್ಟುಗಳು ತಡೆಯಾಜ್ಞೆ ತರುವಲ್ಲಿ ಯಶಸ್ವಿ ಯಾಗಿವೆ. ಹೀಗಾಗಿ ಜನರ ಜೀವಕ್ಕೆ ಈ ದೇಶದಲ್ಲಿ ಬೆಲೆಯೇ ಇಲ್ಲವೇನೊ ಅನಿಸುತ್ತದೆ!

ವೈದ್ಯರು ಸಹ ಈ ರಾಸಾಯನಿಕ ವಸ್ತುಗಳನ್ನೊಳಗೊಂಡ ಔಷಧಗಳನ್ನು ರೋಗಿಗಳಿಗೆ ಎಂದೂ ಬರೆದುಕೊಡಬಾರದು. ‘ಊದುವುದನ್ನು ಕೊಟ್ಟು ಒದರುವುದನ್ನು ತೆಗೆದುಕೊಂಡಂತೆ’ ಎಂಬ ಗಾದೆ ಈ ಔಷಧಗಾಗಿ ಹೇಳಿ ಮಾಡಿಸಿದಂತಿದೆ. ಸಾಧಾರಣ ನೆಗಡಿ, ಶೀತ, ಕೆಮ್ಮು, ಮೈ ಕೈ ನೋವು ನಿವಾರಿಸಲು ಇಂಥ ಔಷಧ ಬಳಸಿ, ಮೆದುಳಿನ ರಕ್ತಸ್ರಾವವನ್ನು ಆಹ್ವಾನಿಸುವುದು ಒಳ್ಳೆಯದಲ್ಲ.

ಸದ್ದಿಲ್ಲದೆ ಕೊಲ್ಲುವ ಇಂಥ ಔಷಧಗಳಿಂದ ಜನರೂ ಸಹ ಜಾಗೃತರಾಗಲು ಇದು ಸಕಾಲ. ತಮಗೆ ಬರೆದುಕೊಟ್ಟ ಔಷಧಯಲ್ಲಿ ಪಿನೈಲ್ ಪ್ರೊಪೆನಾಲ್ ಅಮೈನ್ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಜನರಿಗಿದೆ. ಅಂಥ ವಿಷ ರಸಾಯನ ಗಳಿದ್ದ ಔಷಧಗಳನ್ನು ಸೇವಿಸುವುದನ್ನು ಜನರು ನಿಲ್ಲಿಸಬೇಕು. ಆಗಲಾದರೂ ಔಷಧ ತಯಾರಕರಿಗೆ ಬುದ್ದಿ ಬಂದೀತು!

ಇಂಥ ಔಷಧಗಳಿಂದ ಮುಕ್ತಿ ಸಿಕ್ಕೀತು!!