ಅಭಿಮತ
ಆದರ್ಶ್ ಶೆಟ್ಟಿ ಉಪ್ಪಿನಂಗಡಿ
ಇಂದು ಜಾತಿ ಎಂಬ ವ್ಯವಸ್ಥೆ ಎಲ್ಲಾ ಕ್ಷೇತ್ರದಲ್ಲಿ ತಾಂಡವವಾಡುತ್ತಿದೆ. ಈ ಜಾತಿ ಎಂಬ ಅಂಧಾನುಕರಣೆ ನಮ್ಮ ಹಿರಿಯರ ಕಾಲದಲ್ಲಿ ತುಸು ಹೆಚ್ಚೇ ಇತ್ತು.
ಇದರ ಪರಾಕಾಷ್ಠೆಗೆ ಮೇಲ್ವರ್ಗ, ಕೆಳವರ್ಗ, ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳು ಮಿತಿ ಮೀರಿತ್ತು. ಉಡುವಬಟ್ಟೆ, ಪಡೆಯುವ ಶಿಕ್ಷಣ, ತಿನ್ನುವ ಆಹಾರ, ಸಾರ್ವಜನಿಕ ರಂಗದಲ್ಲಿ ತಾರತಮ್ಯ ಎಸಗುವ ಆ ದಿನಗಳಿತ್ತು. ಎಲ್ಲಾ ವರ್ಗದ ಯುವಕರು, ಯುವತಿಯರು ಶಿಕ್ಷಣ ಪಡೆದು ಸಾಮಾಜಿಕ ಜೀವನ, ಸಾರ್ವಜನಿಕ ರಂಗದಲ್ಲಿ ಉನ್ನತ ಸ್ಥಾನಕ್ಕೆ ಬಂದಂತೆ ತಕ್ಕಮಟ್ಟಿನ ಅಸ್ಪ್ರಶ್ಯತೆಗೆ ಅಂಕುಶ ಬಿದ್ದಿತ್ತು. ಆದರೆ ಈಗಲೂ ಜಾತಿ ವ್ಯವಸ್ಥೆಗಳು ನಮ್ಮ ಕಣ್ಣ ಮುಂದಿವೆಯೇ ಅಂದರೆ ಖಂಡಿತವಾಗಿಯೂ ಈಗಲೂ ಇದೆ.
ಜಾತಿಗೊಂದು ಮಠ, ಜಾತಿಗೊಂದು ಮಠಾಧಿಪತಿಗಳು, ಜಾತಿಗೊಂದು ರಾಜಕಾರಣಿಗಳು ಈಗಲೂ ಈ ವ್ಯವಸ್ಥೆಯನ್ನು ಜೀವಂತ ವಾಗಿರಿಸಿದ್ದಾರೆಂದರೆ ತಪ್ಪಾಗಲಾರದು. ಉದಾಹರಣೆಗೆ ನಮ್ಮ ದೈನಂದಿನ ಜೀವನದಲ್ಲಿ ಗಮನಿಸುವುದಾದರೆ ಬಾಡಿಗೆಗೆ ವಾಹನವನ್ನು ಪಡೆಯುವಾಗ,ಮಕ್ಕಳಿಗೆ ಶಿಕ್ಷಣ ಕೊಡಿಸುವಾಗ,ದಿನಸಿ ಸಾಮಾಗ್ರಿ ಖರೀದಿಸುವಾಗ, ಮನೆಯ ಇನ್ನಿತರ ಅಗತ್ಯ ಕೆಲಸಗಳನ್ನು ಮಾಡಿಸುವಾಗಲೂ ಜಾತಿ ಬಾಂಧವರನ್ನು ಹುಡುಕುವಷ್ಟರ ಮಟ್ಟಿಗೆ ಜಾತಿಯತೆ ಬೆಳೆದು ನಿಂತಿದೆ.
ರಾಜಕೀಯ, ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿ ಆಯ್ಕೆಯಲ್ಲೂ ಜಾತಿ ಲಾಬಿ, ತಮ್ಮ ಸ್ವಜಾತಿಯವರಿಗೆ ಟಿಕೆಟ್ ನೀಡಿ ಎಂದು ಒತ್ತಡ ಹೇರುವ ಜಾತಿ ಸಂಘಟನೆ ಪ್ರಮುಖರು ಒಂದೆಡೆ, ಇನ್ನು ಸಚಿವ ಸ್ಥಾನ ನೀಡುವಾಗಲೂ ಮಠ, ಮಾನ್ಯರಿಂದ ಒತ್ತಡ ಹೇರಿಸುವ ರಾಜಕಾರಣಿಗಳು ಒಂದೆಡೆ, ತೆರೆಯ ಹಿಂದೆ ನಿಂತು ರಾಜಕಾರಣವನ್ನು ನಿಯಂತ್ರಿಸುವ ಕೆಲ ಮಠಾಧೀಶರು ಕೂಡ ನಮ್ಮ ಸಮಾಜದಲ್ಲಿದ್ದಾರೆ.
ಇನ್ನು ತಮ್ಮ ಸಮಾಜದ ಶಾಸಕನಿಗೋ ಅಥವಾ ಮುಖಂಡನಿಗೆ ಸ್ಥಾನಮಾನಕ್ಕಾಗಿ ಹೈಕಮಾಂಡ್ ಕದ ತಟ್ಟುವ ಕೆಲ ಸಂತರನ್ನು ಕೂಡ ಕಂಡಿದ್ದೇವೆ. ಜಾತಿ ವ್ಯವಸ್ಥೆ ಎಂಬುದು ಸ್ವಸ್ಥ ಸಮಾಜಕ್ಕೆ ಮಾರಕ.ಜಾತಿ ಎಂಬ ವಿಚಾರ ಕೇವಲ ಕೌಟುಂಬಿಕ, ಸಂಬಂಧ ವಿಚಾರಗಳಿಗೆ ಮಾತ್ರ ಸೀಮಿತವಾಗಬೇಕೇ ವಿನಹ ಅದನ್ನು ಬೀದಿಗೆ ಎಳೆದು ತರಬಾರದು. ಕೆಲ ತಿಂಗಳ ಹಿಂದೆ ಉತ್ತರ ಕರ್ನಾ ಟಕದ ಜಿಯೊಂದರಲ್ಲಿ ನಡೆದ ಜಾತಿ ಸಮಾವೇಶದಲ್ಲಿ ಆ ಸಮುದಾಯಕ್ಕೆ ಸೇರಿದ ಸ್ವಾಮೀಜಿಯೋರ್ವರು ಅದೇ ವೇದಿಕೆ ಯಲ್ಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪರನ್ನುದ್ದೇಶಿಸಿ ನಮ್ಮ ಸಮುದಾಯದಲ್ಲಿ ಇಂತಿಷ್ಟು ಜನಸಂಖ್ಯೆಯಿದ್ದು, ರಾಜಕೀಯ ದಲ್ಲಿ ಇಂತಿಷ್ಟು ಸ್ಥಾನಮಾನಗಳನ್ನು ತಮ್ಮ ಸಮುದಾಯಕ್ಕೆ ನೀಡಬೇಕೆಂದು ಮುಖ್ಯಮಂತ್ರಿಯವರನ್ನು ಬೆದರಿಸುವ ದಾಟಿ ಯಲ್ಲಿ ಮಾತನಾಡಿದ್ದರು.
ಇದರಿಂದ ಕೆಂಡಾಮಂಡಲವಾದ ಮುಖ್ಯಮಂತ್ರಿಗಳು ವೇದಿಕೆಯ ಸ್ವಾಮೀಜಿಯವರನ್ನು ತರಾಟೆಗೆತ್ತಿಕೊಂಡ ಪ್ರಸಂಗವೂ ನಡೆದಿತ್ತು. ಇದೀಗ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬೇಕೆಂಬ ಕೂಗು ಬಲವಾಗಿ ಕೇಳಿ ಬರುತ್ತಿದ್ದು,ಇದಕ್ಕೆ ಪೂರಕವಾಗಿ ಬೃಹತ್ ಕಾಲ್ನಡಿಗೆ ಜಾಥಾವು ಕೂಡ ನಡೆಯುತ್ತಿದೆ. ಜತೆಗೆ ಬೃಹತ್ ಸಂಖ್ಯೆಯನ್ನು ಸೇರಿಸಿ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಬೆಂಗಳೂರಿನಲ್ಲಿ ವೇದಿಕೆಯೂ ಸಿದ್ದಗೊಳ್ಳುತ್ತಿದೆ. ಇದಕ್ಕೆ ಇದೇ ಸಮುದಾಯದ ಮತ್ತೊಂದು ಗುಂಪು ಬಲವಾಗಿ ವಿರೋಧ ವ್ಯಕ್ತಪಡಿಸಿದೆ.
ಈ ಜಾತಿ ಮೀಸಲಿನ ಹೋರಾಟ ಇದೀಗ ಎ ಸಮುದಾಯದಲ್ಲಿ ಸಂಚಲನ ಮೂಡಿಸಿದ್ದು, ಕುರುಬ, ಒಕ್ಕಲಿಗ, ವಾಲ್ಮೀಕಿ ಸೇರಿದಂತೆ ಇನ್ನಿತರ ಸಮುದಾಯಗಳು ಕೂಡ ಸ್ಥಾನಮಾನಕ್ಕಾಗಿ ಬೇಡಿಕೆಯಿಟ್ಟಿವೆ. ಒಟ್ಟಾರೆಯಾಗಿ ಜಾತಿ ಮೀಸಲು ಕಾವು ಏರುತ್ತಿರು ವಂತೆಯೇ ಸರಕಾರ ಒಂದೊಮ್ಮೆ ತಿದ್ದುಪಡಿಯಂತಹ ದುಸ್ಸಾಹಸಕ್ಕೆ ಕೈ ಹಾಕಿದರಂತೂ ಎಲ್ಲಾ ಸಮುದಾಯಗಳಿಂದಲೂ ಸ್ಥಾನಮಾನಕ್ಕಾಗಿ ಕೂಗೇಳುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.
ಒಂದರ್ಥದಲ್ಲಿ ಇದೊಂದು ರೀತಿಯಲ್ಲಿ ಸರಕಾರಕ್ಕೆ ಮುಳ್ಳಿನ ಹಾದಿಯ ನಡಿಗೆಯೆಂದರೂ ತಪ್ಪಾಗಲಾರದು. ಒಟ್ಟಿನಲ್ಲಿ ಸಮಾಜದಲ್ಲಿ ಪಿಡುಗಿನಂತೆ ಪರಿಣಮಿಸುತ್ತಿರುವ ಜಾತಿ ವ್ಯವಸ್ಥೆಗೆ ಇತಿಶ್ರೀ ಹಾಡಬೇಕೆಂದರೆ ಎಲ್ಲಾ ಸಮಾಜವು ಉತ್ತಮ ಶಿಕ್ಷಣ
ಪಡೆಯುವ ಅವಶ್ಯಕತೆಯಿದೆ. ಶಿಕ್ಷಣ ಹೊಂದಿದ ಯಾವುದೇ ಒಬ್ಬ ವ್ಯಕ್ತಿಯನ್ನು ಭಾವನಾತ್ಮಕವಾಗಿ ಮರುಳುಗೊಳಿಸುವ ಪ್ರಮೇಯಗಳೇ ಇರುವುದಿಲ್ಲ. ಸರಿ, ತಪ್ಪುಗಳನ್ನು ಪ್ರಶ್ನೆ ಮಾಡುವ ಮನೋಭಾವ ಮನುಷ್ಯನಲ್ಲಿ ಬೆಳೆಯಬೇಕೆಂದರೆ ಶಿಕ್ಷಣದ ಅವಶ್ಯಕತೆ ಖಂಡಿತವಾಗಿಯೂ ಇದೆ.