Thursday, 25th July 2024

ಶಿಕ್ಷಣ ನೀತಿ ಜಾರಿಯ ಸವಾಲುಗಳು

ಅಭಿವ್ಯಕ್ತಿ
ಡಾ.ಎನ್. ಸತೀಶ್ ಗೌಡ

ಭಾರತ ಸರಕಾರ, ಮಾನವ ಸಂಪನ್ಮೂಲ ಸಚಿವಾಲಯದಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಮೋದನೆಗೊಂಡಿದ್ದು, 34 ವರ್ಷದ ಹಳೆಯ ಶಿಕ್ಷಣ ಪದ್ಧತಿಗೆ ತಿಲಾಂಜಲಿ ಹಾಡಿ ಮುಂದಿನ ಶೈಕ್ಷಣಿಕ ವರ್ಷಗಳಿಗೆ ಈ ನೀತಿಯಲ್ಲಿ ಬರುವ ಎಲ್ಲಾ ಅಂಶ ಗಳನ್ನು ಅನುಷ್ಠಾನಗೊಳಿಸಲು ಭಾರತ ಸರಕಾರ ಹಾಗೂ ವಿಶೇಷವಾಗಿ ಕರ್ನಾಟಕ ರಾಜ್ಯ ಸರಕಾರ ಸಜ್ಜಾಗುತ್ತಿರುವುದು ಹಾಗೂ ಕಾಳಜಿ ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಈ ಶಿಕ್ಷಣ ನೀತಿಯಲ್ಲಿ, ಪ್ರಾಥಮಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಂಬಂಧ ಸಮಗ್ರವಾಗಿ ಚರ್ಚಿಸಿ  ಉತ್ತಮ ಯೋಜನೆಗಳನ್ನು ರೂಪಿಸಿರುವುದು ನಿಜಕ್ಕೂ ಅರ್ಥಪೂರ್ಣ ವಿಚಾರವೇ ಹೌದು. ಈ ನೀತಿಯಲ್ಲಿ ಕೇವಲ ಬೋಧನಾ ಕಲಿಕೆಗೆ ಒತ್ತು ಕೊಡದೆ, ಕೌಶಲ್ಯ ಆಧಾರಿತ ಶಿಕ್ಷಣಕ್ಕೆ, ಕಲೆ, ಮನರಂಜನೆ ಮಕ್ಕಳ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಕ್ರಿಯಾಶೀಲ ಯೋಜನೆಗಳು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವನ್ನು ಅಭಿವೃದ್ಧಿಪಡಿಸುವುದು, ಸಾಹಿತ್ಯ, ಬಹು ವಿಷಯಗಳ ಅಧ್ಯಯನ, ಹಲವು ವೃತ್ತಿಪರ ಶಿಕ್ಷಣಗಳ ವಿಲೀನ, ಶಿಕ್ಷಣದ ಅಂತಾರಾಷ್ಟ್ರೀಕರಣ, ಪ್ರಾದೇಶಿಕ ಭಾಷೆಗೆ ಮಹತ್ವ, ಯೋಗ, ಹೀಗೆ ಹಲವಾರು ವಿಚಾರಗಳ ಬಗ್ಗೆ
ಗಮನಹರಿಸಿರುವುದು ಪರಿಪೂರ್ಣ ಶಿಕ್ಷಣದ ತಳಹದಿಗೆ ನಾಂದಿಯಾಗಿದೆ ಎಂದರೆ ಅತಿಶಯೋಕ್ತಿಯಾಗದು.

ಹಿಂದಿನ ದಿನಗಳಲ್ಲಿ, ಗುರುಕುಲ ಶಿಕ್ಷಣವನ್ನು ನೆನಪಿಸಿಕೊಂಡಾಗ ಮೌಲ್ಯಕ್ಕೆ ಹೆಚ್ಚು ಹೊತ್ತು ಕೊಡಲಾಗುತ್ತಿತ್ತೇ ಹೊರತು ವಾಣಿಜ್ಯಕರಣಕ್ಕಲ್ಲ. ಅಲ್ಲಿ ಮೂಲಸೌಕರ್ಯ ಹಾಗೂ ಡೊನೇಷನ್ ಗೌಣ. ಜ್ಞಾನಾರ್ಜನೆ, ವೈಚಾರಿಕತೆ, ವಸ್ತುವಿಷಯಗಳ ಪಾಂಡಿತ್ಯ ಕೃತಜ್ಞತೆಯ ಬಗ್ಗೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಗಮನ ವಹಿಸಲಾಗುತ್ತಿತ್ತು. ಆದರೆ ಪ್ರಸ್ತುತ ಶಿಕ್ಷಣ ವ್ಯವಸ್ಥೆೆಯಲ್ಲಿ ಅದರಲ್ಲೂ ವಿಶೇಷವಾಗಿ ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಮೂಲಸೌಕರ್ಯ ಜತೆಗೆ ಹೈಟೆಕ್ ಸೌಲಭ್ಯ ಗಳಿದ್ದರೂ ಸೇವಾಮನೋಭಾವ ಮರೆಯಾಗುತ್ತಿದ್ದು, ಶಿಕ್ಷಣದ ಮೌಲ್ಯಗಳನ್ನು ವಾಣಿಜ್ಯಕರಣ ನುಂಗಿ ಹಾಕುತ್ತಿರುವ ಪರಿಸ್ಥಿತಿಗೆ ಎಲ್ಲರೂ ಕಾರಣಕರ್ತರಾಗಿದ್ದೇವೆ.

ಆದರೆ, ಹೊಸ ಶಿಕ್ಷಣ ನೀತಿಯನ್ನು ಗಮನಿಸಿದಾಗ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಮೌಲ್ಯಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವುದರ ಜತೆಗೆ ಇವುಗಳ ಅನುಷ್ಠಾನಕ್ಕೆ, ಹಣಕಾಸಿನ ಸೌಲಭ್ಯ ಅನುದಾನ ಅಷ್ಟೇ ಪ್ರಮುಖವಾಗಿದೆ. ಹಣಕಾಸಿನ ನೆಪದಲ್ಲಿ, ವಾಣಿಜ್ಯ ಕಾರಣವಾದರೆ, ಈ ಹೊಸ ಶಿಕ್ಷಣ ನೀತಿಯ ಮೂಲ ಸ್ವರೂಪ ಹಾಗೂ ಉದ್ದೇಶ ವಿಫಲವಾಗಿಬಿಡುತ್ತದೆ.
ಯಾವುದೇ ನೀತಿಗಳು ಕೇವಲ ಬರವಣಿಗೆಗೆ ಸೀಮಿತವಾಗದೆ, ಅನುಷ್ಠಾನಕ್ಕೆ ಹತ್ತಿರವಾಗಿದ್ದಲ್ಲಿ ಅದರ ಪ್ರಯೋಜನ, ಪ್ರಾಮುಖ್ಯತೆ ಹಾಗೂ ಉದ್ದೇಶಗಳು ಸಫಲವಾಗುತ್ತದೆ. ನಮ್ಮ ರಾಜ್ಯದಲ್ಲಿ ಪ್ರಸ್ತುತ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಗಳನ್ನು ಅವಲೋಕನ ಮಾಡಿದಂಥ ಸಂದರ್ಭದಲ್ಲಿ, ಮೊದಲ ಚಿತ್ರಣಕ್ಕೆ ಬರುವುದು, ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಅದರಲ್ಲೂ ಸರಕಾರದ ಅಧೀನದಲ್ಲಿರುವ ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮಾನವ ಸಂಪನ್ಮೂಲಗಳ (ಅಧ್ಯಾಪಕರ ಹಾಗೂ ಅಧ್ಯಾಪಕೇತರರ ನೇಮಕಾತಿ ವಿಚಾರ ಸಂಬಂಧ)ಹಾಗೂ ಮೂಲಸೌಕರ್ಯಗಳ ಕೊರತೆ ಬಹಳ ಎದ್ದುಕಾಣುತ್ತಿದೆ.

ಸರಕಾರವೇ ರಚಿಸಿದ ಕಾಂಟ್ರಾಕ್ಟ್ ಲೇಬರ್ ರೆಗ್ಯುಲೇಶನ್ ಕಾಯ್ದೆ ವಿರುದ್ಧವಾಗಿಯೇ, ಸರಕಾರಿ ಸಂಸ್ಥೆಗಳಲ್ಲಿ ಹೊರಗುತ್ತಿಗೆ
ನೇಮಕಾತಿ ಪ್ರತಿವರ್ಷವೂ ಮುಂದುವರಿಯುತ್ತಲೇ ಇದೆ. ಅತಿಥಿ ಉಪನ್ಯಾಸಕರುಗಳು ತರಬೇತಿಗಳಿಂದ ವಂಚಿತರಾಗಿ ಸುಮಾರು ವರ್ಷಗಳಿಂದ ಪಾಠಪ್ರವಚನಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳು ಕೇವಲ ಖಾಯಂ ಪ್ರಾಧ್ಯಾಪಕರುಗಳಿಗೆ ತರಬೇತಿ ನೀಡುತ್ತಿದೆ ಹೊರತು ತಾತ್ಕಾಲಿಕವಾಗಿ ನೇಮಕವಾಗಿರುವ ಅತಿಥಿ  ಉಪನ್ಯಾಸಕರು ಗಳಿಗಿಲ್ಲ. ಇದು ಉನ್ನತ ಶಿಕ್ಷಣ ಗುಣಮಟ್ಟತೆಗೆ ಒಂದು ಸವಾಲೇ ಹೌದು. ಈ ಉಪನ್ಯಾಸಕರುಗಳು ಈಗಾಗಲೇ 10-15 ವರ್ಷಗಳಿಂದ ಬೋಧನೆ ಮಾಡಿಕೊಂಡೆ ಬಂದಿರುತ್ತಾರೆ.

ತಂತ್ರಜ್ಞಾನ ಹಾಗೂ ಡಿಜಿಟಲ್ ತರಗತಿಗಳ ಬಗ್ಗೆೆ ಮಾತನಾಡುತ್ತೇವೆ. ಆದರೆ ವಾಸ್ತವವಾಗಿ ನೋಡಿದಾಗ ಸರಕಾರಿ ಅಧೀನ ಶಿಕ್ಷಣ ಸಂಸ್ಥೆಗಳಲ್ಲಿ ಶೌಚಾಲಯ ವ್ಯವಸ್ಥೆಯಿಂದ ತರಗತಿ ಕಟ್ಟಡಗಳ ವ್ಯವಸ್ಥೆಗಳವರೆವಿಗೂ ಮೂಲಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಇಂದಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳುಗಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸುವ ಬದಲಾಗಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದುಕೊಳ್ಳುವುದಕ್ಕೆೆ ಹೆಚ್ಚಿನ ಒತ್ತುಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿಯೂ, ಸಾಂಪ್ರದಾಯಿಕ ರಾಜ್ಯಮಟ್ಟದ ವಿಶ್ವವಿದ್ಯಾಲಯಗಳು ಕೂಡ ಸರಕಾರಿ ಶಾಲೆಗಳ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇಂದು ಎಷ್ಟೋ ಶಾಲಾ – ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದು, ಯಾವುದೇ ಉತ್ಸಾಹ ಇಟ್ಟು ಕೊಳ್ಳದೆ, ಕೇವಲ ಯಾಂತ್ರಿಕವಾಗಿ ಹಾಗೂ ಬೋಧನಾ ಕಲಿಕೆಗಳಲ್ಲಿ ಕೌಶಲ್ಯತೆಯನ್ನು ಕರಗತ ಮಾಡಿಕೊಳ್ಳದೆ, ಶೈಕ್ಷಣಿಕ
ಚಟುವಟಿಕೆಗಳು ನಡೆಸುತ್ತಿರುವುದು ಶಿಕ್ಷಣ ಗುಣಮಟ್ಟಕ್ಕೆ ಬಾರಿ ಹೊಡೆತ ಹಾಗೂ ಪೆಟ್ಟು ಕೊಟ್ಟಂತಾಗಿದೆ.

ಶಿಕ್ಷಕರಿಗೆ ಬೋಧನಾ ತರಬೇತಿ ಕಾರ್ಯಕ್ರಮ ಬಹಳ ಹಾಗೂ ಅತ್ಯವಶ್ಯಕವಾಗಿದೆ. ಉನ್ನತ ಶಿಕ್ಷಣಗಳಲ್ಲಿ ಬಹುಮುಖ್ಯವಾಗಿ, ಸ್ವಾಯತ್ತತೆ ದಿನೇ ದಿನೇ ಕುಸಿಯುತ್ತಿದೆ. ಪ್ರಾಧ್ಯಾಪಕರುಗಳು ನಡೆಸುತ್ತಿರುವ ಸಂಶೋಧನೆ ಹಾಗೂ ಸಂಶೋಧನಾ ವಿಚಾರಗಳು ಕಸದಬುಟ್ಟಿಗೆ ಸೇರುತ್ತಿರುವುದು ವಿಪರ್ಯಾಸವೇ ಹೌದು. ಉತ್ತಮ ಶಿಕ್ಷಣ ನೀತಿ ಅನುಷ್ಠಾನವು ಬಹುಮುಖ್ಯವಾಗಿ, ಸರಕಾರ ನೀಡುವ ಹಣಕಾಸು ಹಾಗೂ ಗುಣಮಟ್ಟದ ನೇಮಕಾತಿಗಳ ಮೇಲೆ ಅವಲಂಬಿತವಾಗಿದೆ. ಸರಕಾರಗಳು ಕಾಲಕಾಲಕ್ಕೆ ನೇಮಕಾತಿ ಮಾಡದೆ ಹಾಗೂ ಸರಿಯಾದ ಸಂದರ್ಭಕ್ಕೆ ಹಣಕಾಸನ್ನು ಬಿಡುಗಡೆ ಮಾಡದಿದ್ದರೆ, ಸಾಮಾನ್ಯವಾಗಿ ಪೋಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡುತ್ತಾರೆ ಹಾಗೂ ಮಾಡುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಸರಕಾರಿ ಅಧೀನ ಶಿಕ್ಷಣ ಸಂಸ್ಥೆಗಳಲ್ಲಿ ಮೂಲ ಸೌಕರ್ಯ ಕೊರತೆ ಎದ್ದು ಕಾಣುವಾಗ, ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ಪರಿಸ್ಥಿತಿ ಹೇಗಿರಬಹುದೆಂದು ಉಳಿಸಿಕೊಳ್ಳಲು ಅಸಾಧ್ಯ.

ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸಬೇಕಾದರೆ ಎಲ್ಲಾ
ರೀತಿಯ ಸೌಕರ್ಯಗಳು ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಬೇಕು. ಬಹುಮುಖ್ಯ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಿ ಕೊಂಡು, ಈ ರೀತಿಯ ಶಿಕ್ಷಣ ನೀತಿಗಳನ್ನು ಅನುಷ್ಠಾನಗೊಳಿಸಿದರೆ ಅದರ ಅರ್ಥಪೂರ್ಣತೆಯನ್ನು ಕಂಡುಕೊಳ್ಳಬಹುದು. ಇಲ್ಲವಾದಲ್ಲಿ ಎರಡು ಕಾಲು ಕೈಗಳಿಲ್ಲದ ಯೋಧ ಯುದ್ಧಕ್ಕೆ ಸಿದ್ಧವಾದಂತೆ ಭಾಸವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!