Sunday, 15th December 2024

ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ

ಅಭಿಮತ 

ಲತಾ ಆರ್‌.

ಆರನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಪರವಾಗಿ ಮುಂದಾಳತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ರವರು ‘ಕಲ್ಲು ಹೊಡೆಯುವುದಿಲ್ಲ, ಬೆಂಕಿ ಹಚ್ಚೋಲ್ಲ, ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟ ಮಾಡೋದಿಲ್ಲ, ನಮ್ಮದು ಶಾಂತಿಯುವ ಪ್ರತಿಭಟನೆ’ ಎಂದು ಹೇಳುವ ಮೂಲಕ ರಾಜ್ಯಾದ್ಯಾಂತ ಸಾರಿಗೆ ಮುಷ್ಕರಕ್ಕೆ ಕರೆಕೊಟ್ಟಿದ್ದರು.

ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವುದರಿಂದ ಪ್ರಯಾಣಿಕರು ಬಸ್ ಸಿಗದೇ ಸಂಕಷ್ಟಕೊಳ್ಳಕ್ಕಾಗಿ ಪರದಾಡುವಂತಾಗಿದೆ. ಸಾಕಷ್ಟು ಜನರು ತಮ್ಮ ಓಡಾಟಕ್ಕೆ ಸರ್ಕಾರಿ ಬಸ್‌ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಇಂಥ ಮುಷ್ಕರದಿಂದ ಸಾರ್ವಜನಿಕರು ಸಾಕಷ್ಟು ತೊಂದರೆಗಳಿಗೆ ಒಳಪಟ್ಟಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಸೇವಾ ಮನೋಭಾವದಿಂದ ಕೆಲ ಸಾರಿಗೆ ನೌಕರರು ಬಸ್ ಸಂಚಾರ ಪ್ರಾರಂಭಿಸಿದ್ದಾರೆ. ಅಂಥ ಬಸ್‌ಗಳ ಮೇಲೆ ಕೆಲವು ಕಿಡಿಗೇಡಿ ನೌಕರರು ಕಲ್ಲು ತೂರಿದ್ದಾರೆ. ಅಷ್ಟೇ ಅಲ್ಲ ತಮ್ಮ ಹೆಂಗಸರನ್ನು ಮುಂದೆ ಬಿಟ್ಟು
ಕಾರ್ಯನಿರತ ಚಾಲಕರ ಮೇಲೆ ದೈಹಿಕ ಹಲ್ಲೆ ಕೂಡ ನಡೆಸಿದ್ದಾರೆ. ಇಷ್ಟೂ ಸಾಲದೆಂಬಂತೆ ಈಗಾ ಪ್ರಯಾಣಿಕರನ್ನು ಕರೆದು ಕೊಂಡು ಹೋಗುತ್ತಿದ್ದ ಬಸ್‌ಗಳಿಗೆ ಕಲ್ಲು ತೂರುವುದರ ಮೂಲಕ ಚಾಲಕ ನಬಿರಸೂಲ್‌ರವರ ಪ್ರಾಣ ತೆಗೆದಿದ್ದಾರೆ.

ಚಾಲಕನ ಸಾವಿಗೆ ಸಂತಾಪ ಸೂಚಿಸುವುದನ್ನು ಬಿಟ್ಟು, ಚಾಲಕನ ಸಾವಿಗೆ ಸರಕಾರವೇ ನೇರ ಹೊಣೆ. ನೌಕರರು ಹತಾಶೆಯಿಂದ ಬಸ್‌ಗಳ ಮೇಲೆ ಕಲ್ಲು ಹೊಡೆಯುತ್ತಿದ್ದಾರೆ ಎಂದು ಹೇಳುವ ಮೂಲಕ ರಾಜ್ಯ ರಸ್ತೆ ಸಾರಿಗೆ ನೌಕರರ ಕಾರ್ಯದರ್ಶಿ ಆನಂದ್ ರವರು ಚಾಲಕನ ಸಾವಿಗೆ ಕಾರಣರಾದ ಕಿಡಿಗೇಡಿಗಳನ್ನು ಸಮರ್ಥಿಸುವುದರೊಂದಿಗೆ ಅವರ ಬೆಂಬಲಕ್ಕೆ ನಿಂತಿರುವುದು
ನಿಜಕ್ಕೂ ನಾಚಿಕಗೇಡು. ಇದನ್ನು ನಾಗರಿಕ ಸಮಾಜ ಎಂದಿಗೂ ಒಪ್ಪುವುದಿಲ್ಲ.

ಕಲ್ಲು ಹೊಡೆಯುವುದಿಲ್ಲ, ಬೆಂಕಿ ಹಚ್ಚುವುದಿಲ್ಲ, ನಮ್ಮದು ಶಾಂತಿಯುವ ಸತ್ಯಾಗ್ರಹ ಎಂದರಲ್ಲಾ ಚಂದ್ರಶೇಖರವರೇ, ಇದೇನಾ ಈ ನಿಮ್ಮ ಶಾಂತಿಯುತ ಪ್ರತಿಭಟನೆ? ಈ ಚಾಲಕನ ಸಾವಿಗೆ ನೀವೇ ನೇರ ಹೊಣೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ನಿಮ್ಮ ರಾಜಕೀಯ ಪ್ರತಿಷ್ಠೆಗೋಸ್ಕರ ಇವತ್ತು ರಾಜ್ಯದ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಸಾರಿಗೆ ನೌಕಾರರು ಬಲಿಪಶುವಾಗುತ್ತಿದ್ದಾರೆ. ಅಮಾಯಕ ಚಾಲಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ನಬಿರ್‌ಸೂಲ್ ಕುಟುಂಬ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡು ಇಂದು ಅನಾಥವಾಗಿದೆ. ಇವರೆಲ್ಲಾರ ನೋವು, ಶಾಪ ಖಂಡಿತ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ.