Sunday, 15th December 2024

ಸ್ಟೈಲ್‌ ಕಿಂಗ್‌ಗೆ ದೊರೆತ ಫಾಲ್ಕೆ ಪ್ರಶಸ್ತಿ

ಅಭಿಮತ

ಗೊರೂರು ಶಿವೇಶ್

1977-1979ರ ದಿನಗಳು. ಕದ್ದು ಅರಕಲಗೂಡಿನಲ್ಲಿ, ಕಾಡಿ ನಮ್ಮೂರಿನಲ್ಲಿ, ಬೇಡಿ ಹಾಸನದಲ್ಲಿ ಸಿನಿಮಾ ನೋಡುತ್ತಿದ್ದ ದಿನಗಳು. ಅಣೆಕಟ್ಟಿನ ಕಾರಣದಿಂದಾಗಿ ನಮ್ಮೂರಿಗೆ ಬಂದ ಸಾವಿರಾರು ತಮಿಳಿಗರ ಕಾರಣದಿಂದಾಗಿ ಸಿನಿಮಾ ಟೆಂಟಿಗೆ ಬರುತ್ತಿದ್ದ ತಮಿಳು
ಸಿನಿಮಾಗಳು.

ಅವುಗಳಲ್ಲಿ ಹೊಡೆದಾಟಕ್ಕೆ ಪ್ರಸಿದ್ಧಿಯಾಗಿದ್ದ ಜೈಶಂಕರ್ ನಟಿಸಿದ ಎಂಗಪಾಟ್ಟನ್ ಸ್ವತ್ತು, ಗಂಗಾ ಮುಂತಾದ ಸಿನಿಮಾಗಳನ್ನು ನೋಡಿ ಆಮ, ತೆರಿಯಾದು ವಾಡ ಪೊಡಾ ಮುಂತಾದ ತಮಿಳು ಪದಗಳನ್ನು ಕಲಿತು ಅಂಗಡಿ ವ್ಯಾಪಾರಕ್ಕೆ ಬರುತ್ತಿದ್ದ ತಮಿಳಿಗರ ಮೇಲೆ ಪ್ರಯೋಗಿಸುತ್ತಿದ್ದ ದಿನಗಳು.

ಆ ಸಮಯಕ್ಕೆ ವಿಷ್ಣುವರ್ಧನ್ ನಟನೆಯ ಸಹೋದರರ ಸವಾಲ್, ಕಿಲಾಡಿ ಕಿಟ್ಟು, ಗಲಾಟೆ ಸಂಸಾರ ಅಶೋಕ್ ನಟಿಸಿದ ಕುಂಕುಮ ರಕ್ಷೆ ಅನಂತನಾಗ್ ಹೀರೋ ಆಗಿದ್ದ ಮಾತು ತಪ್ಪದ ಮಗ ಚಿತ್ರಗಳಲ್ಲಿ ನಟಿಸಿದ್ದ ಯುವಕನೋರ್ವನ ನಟನೆ ನಮ್ಮನ್ನು ಸೆಳೆದಿತ್ತು. ಅದುವೇ ರಜನಿಕಾಂತ್. ಅದು ಕೆಲವು ನಟರು ಸುಮ್ಮನೆ ನಮಗೆ ಇಷ್ಟವಾಗಿ ಬಿಡುತ್ತಾರೆ ಮತ್ತು ನಾವು ಅವರ ಅಭಿಮಾನಿಗಳಾಗಿ ಮಾರ್ಪಡುತ್ತೇವೆ.

ನಾವು ಅಭಿಮಾನಿಗಳಾಗಿ ಮಾರ್ಪಡಲು ಕಾರಣ ಅವರ ಸ್ಟೈಲ್. ಸರಸರನೆ ನಡೆದು ಕೋಟನ್ನು ಪಕ್ಕಕ್ಕೆ ಸರಿಸುವುದು, ಪಟಪಟನೆ ಮಾತನಾಡುವುದು, ಕಣ್ಣ ಗುಡ್ಡೆಯನ್ನು ಮೇಲಕ್ಕೆೆ ಸರಿಸುತ್ತಾ ದುಃಖಿಸುವುದು ಸಿಗರೇಟನ್ನು ಎಸೆದು ತುಟಿಯಲ್ಲಿ ಹಿಡಿಯುವುದು. ಹೀಗೆ ತಮ್ಮ ವಿಚಿತ್ರ ಮ್ಯಾನರಿಸಂಗಳಿಂದ ನಮ್ಮ ಮನಸ್ಸನ್ನು ಆಗಲೇ ಸೆಳೆದಿದ್ದರು. ಆದರೆ ಆ ಸಿನಿಮಾಗಳಲ್ಲಿ ಅವರದ್ದು ವಿಲನ್ ಇಲ್ಲವೇ ಎರಡನೇ ನಾಯಕನ ಪಾತ್ರ ಮತ್ತು ಸಹೋದರರ ಸವಾಲ್ ಬಿಟ್ಟು ಉಳಿದಾವ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಅಂತ ದೊಡ್ಡ ಸದ್ದು ಮಾಡಿರಲಿಲ್ಲ.

ಪಿಯುಸಿ ಹಂತಕ್ಕೆ ಬಂದಾಗ ಹಾಸನದ ಸಹ್ಯಾದ್ರಿ ಚಿತ್ರಮಂದಿರದಲ್ಲಿ ತಪ್ಪಿದ ತಾಳ ಚಿತ್ರ ನೋಡಿದ್ದೆ. ರೌಡಿ-ವೇಶ್ಯೆ ಪರಸ್ಪರ ಪ್ರೇಮಿಸಿ ತಮ್ಮ ವೃತ್ತಿಯನ್ನು ತ್ಯಜಿಸಿ ಸಮಾಜದಲ್ಲಿ ಹೊಸಬಾಳನು ನಡೆಸುವ ಕನಸು ಕಾಣುವ ಚಿತ್ರ ಅದು. ಸಂಕುಚಿತ ಹಾಗೂ ಸ್ವಾರ್ಥ ಪ್ರಧಾನ ಸಮಾಜದಲ್ಲಿ ಅವರು ತಮ್ಮ ಕನಸು ನನಸಾಗದೇ ವೃತ್ತಿಗೆ ಮರಳುವ ಚಿತ್ರ ನನ್ನನ್ನು ತುಂಬಾ ದಿನ ಕಾಡಿದ ಚಿತ್ರವೂ ಹೌದು .ಕೆ ಬಾಲಚಂದರ್ ನಿರ್ದೇಶಿಸಿದ ಸಿನಿಮಾದಲ್ಲಿ ಆಗಿನ ಕಾಲದ ಪ್ರಖ್ಯಾತ ನಟ ಕಮಲ್ ಹಾಸನ್ ವಿಟನಾಗಿ ನಟಿಸಿದ್ದು ನನಗೆ ಆ ಕಾಲಕ್ಕೆ ತುಂಬಾ ಆಶ್ಚರ್ಯವನ್ನುಂಟು ಮಾಡಿತ್ತು.

ಏಕೆಂದರೆ ನಾಯಕ ನಟರು ತಮ್ಮ ಇಮೇಜನ್ನು ಹೊರತುಪಡಿಸಿ ಇಮೇಜಿಗೆ ಧಕ್ಕೆ ತರುವ ಪಾತ್ರದಲ್ಲಿ ಅಭಿನಯಿಸಿದ ಕಾಲ ಅದು. ಆದರೆ ಆ ಸಿನಿಮಾವೂ ಕನ್ನಡದಲ್ಲಿ ಯಶಸ್ವಿಯಾಗಲಿಲ್ಲ. ಇಂಪೀರಿಯಲ್ ಸಿನಿಮಾ ಮಂದಿರದಲ್ಲಿ ಅನಿರೀಕ್ಷಿತವಾಗಿ ನೋಡಿದ ಸಿನಿಮಾ ತಾಯಿ ಮೀದ ಸತ್ಯಂ (ತಾಯಿಯ ಮೇಲೆ ಮಾಡಿದ ಆಣೆ). ಈ ಚಿತ್ರ ಇಂದಿಗೂ ನೆನಪಿರಲು ಕಾರಣ ಆ ಚಿತ್ರದಲ್ಲಿ ಕನ್ನಡದ ಆಗಿನ ಖ್ಯಾತರಾಗಿದ್ದ ಪ್ರಭಾಕರ್ ವಿಲನ್ ಆಗಿಯೂ ಅಂಬರೀಶ ನಾಯಕನ ಸ್ನೇಹಿತನಾಗಿ ಅದರಲ್ಲಿ ನಟಿಸಿದ್ದರು.

ಅದು ಆಗ ನಾವು ಇಷ್ಟಪಡುತ್ತಿದ್ದ ಜೈಶಂಕರ್ ನಟಿಸುತ್ತಿದ್ದ ಮಾದರಿಯ ಸಿನಿಮಾ. ಕನ್ನಡದಲ್ಲಿ ಸಹನಟನಾಗಿ ನಟಿಸುತ್ತಿದ್ದ ನಟ ಈಗ ನಾಯಕನಾಗಿ ಮಿಂಚುತ್ತಿದ್ದನ್ನು ಕಂಡವ ಮುಂದೆ ಈತ ಖಂಡಿತ ದೊಡ್ಡಮಟ್ಟದ ನಟ ಆಗಬಹುದೆಂದು ಅಂದು ಕೊಂಡಿದ್ದೆ. ಮುಂದೆ ಅದೇ ಮಾದರಿಯ ಕಾಳಿ, ಮೂರತ್ತು ಕಾಲೈ.. ಸಿನಿಮಾಗಳು ಬಿಡುಗಡೆಯಾಗಿ ಯಶಸ್ವಿಯಾಗು ತ್ತಿದ್ದಂತೆ ನೋಡನೋಡುತ್ತಿದ್ದಂತೆ ತಮಿಳಿನಲ್ಲಿ ಯಾರು ನಿರೀಕ್ಷಿಸದಿದ್ದ ಮಟ್ಟಕ್ಕೆ ನಾಯಕನಟರಾಗಿ ಬೆಳೆದದ್ದು ಈಗ ಇತಿಹಾಸ.

ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡಕ್ಟರ್ ಆಗಿದ್ದ ಮರಾಠಿ ಮಾತೃಭಾಷೆಯ ಶಿವಾಜಿ ರಾವ್ ಗಾಯಕ್ ವಾಡ್ ರಜನಿಕಾಂತ್ ಆಗಿ ಕನ್ನಡದಲ್ಲಿ ಪುಟ್ಟಣ್ಣ ಕಣಗಾಲ್ ತಮಿಳಿನಲ್ಲಿ ಕೆ ಬಾಲ ಚಂದರ್ ಅವರಿಂದ ಪರಿಚಯಿಸಲ್ಪಟ್ಟರೂ ಅವರನ್ನು ನಿಜವಾಗಿಯೂ ಸ್ಟಾರ್‌ಡಂಗೆ ಕರೆದೊಯ್ದದ್ದು ಎಸ್‌ಪಿ ಮುತ್ತು ರಾಮನ್ ನಿರ್ದೇಶನದ ಇಪ್ಪತ್ತಕ್ಕೂ ಹೆಚ್ಚು ಹೊಡಿ ಬಡಿ ಚಿತ್ರಗಳು.

ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಜನಿಕಾಂತ ಯಶಸ್ಸು ಬರುತ್ತಿರುವುದು, ದೊರಕಿರುವುದು ತಮಿಳಿನಲ್ಲಿಯೇ ಎಂಬುದು ನಿಸ್ಸಂದೇಹ. ತಮಿಳಿಗರ ಒಂದು ವಿಶೇಷವೆಂದರೆ ನಮ್ಮಲ್ಲಿನ ಬಹುತೇಕ ನಟರು ಅವರ ಚಿತ್ರಗಳಲ್ಲಿ ನಟಿಸುವುದನ್ನು ಒಪ್ಪಿ ಅಪ್ಪಿ ಕೊಂಡಿರುವುದು. ತಾಯ್ ನಾಗೇಶ್, ಜಯಲಲಿತಾ, ಸರೋಜಾದೇವಿ, ಪ್ರಕಾಶ್ ರಾಜ್, ರಾಮಕೃಷ್ಣ ಮೊದಲಾದ
ನಟರು ತಮಿಳಿನಲ್ಲಿ ಮಿಂಚಿದ್ದಾರೆ. ಅನೇಕ ಪ್ರತಿಭಾವಂತ ನಟರನ್ನು ತಮಿಳಿಗೆ ಪರಿಚಯಿಸಿದ ಕೆ.ಬಾಲಚಂದರ್ ರಜನಿಕಾಂತ ಅವರನ್ನು ತಮಿಳಿಗೆ ಪರಿಚಯಿಸಿ ಅವರಿಗೆ ಮೂಂದ್ರು ಮುಡಿಚು, ಅವರ್ಗಳ್ ಮುಂತಾದ ಸಿನಿಮಾಗಳಲ್ಲಿ ಅವಕಾಶ ನೀಡಿದರು.

ಆ ಕಾಲಕ್ಕೆ ಕಮಲ್ ಹಾಸನ್ ನಾಯಕನಾಗಿ ರಜನಿಕಾಂತ್ ವಿಲನ್ ಹಾಗೂ ಸ್ನೇಹಿತನಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕಾದಲ್‌ಕ್‌ ನೇರಮಿಲ್ಲೈ ಚಿತ್ರದ ನಿರ್ದೇಶಕ ಶ್ರೀಧರ್ ತಮ್ಮ ಇಳುಮೈ ಉಂಜಲಾಡಗಿರದ್ ಚಿತ್ರೀಕರಣದ ಸಂದರ್ಭದಲ್ಲಿ ರಜನಿಕಾಂತ್ ಪ್ರತಿಭೆ ಕಂಡು ಇನ್ನು ಕೇವಲ ಐದು ವರ್ಷಗಳಲ್ಲಿ ಕಮಲ ಹಾಸನ್ ಅವರನ್ನು ಇವರು ಬೀಟ್ ಮಾಡುತ್ತಾರೆ ಎಂದು ಹೇಳಿದ್ದರಂತೆ. ಆಗ ಕಮಲ ಹಾಸನ್ ಸಂಭಾವನೆ ಒಂದು ಕಾಲು ಲಕ್ಷವಾದರೆ ರಜನಿಕಾಂತ್ ಸಂಭಾವನೆ 25 ಸಾವಿರ. ಮುಂದೆ ಅದು ನಿಜವಾಯಿತು. ಇಡೀ ಏಷ್ಯಾಾದಲ್ಲಿ ಜಾಕಿಚಾನ್ ನಂತರ ಅತಿ ದೊಡ್ಡ ಸಂಭಾವನೆ ಪಡೆದ ನಟ ಎಂಬ ಕೀರ್ತಿ ಅವರಿಗೆ ದಕ್ಕಿತು.

ಅವರ ಎಂದಿರನ್ ಅಪಾರ ವೆಚ್ಚದ ಚಿತ್ರ ಹಾಗೂ ದೊಡ್ಡಮಟ್ಟದ ಗಳಿಕೆ ಪಡೆದುಕೊಂಡ ಚಿತ್ರ. ಅಷ್ಟೇ ಏಕೆ ಅವರ ನಟನೆಯ ಇತ್ತೀಚಿನ ಚಿತ್ರಗಳು ಗಳಿಕೆಯಲ್ಲಿ ನೂರು ಕೋಟಿಗಳನ್ನು ದಾಟಿರುವವೇ. ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಅದರಲ್ಲೂ ತಮಿಳಿಗರು ಹೆಚ್ಚಿರುವ ಸಿಲೋನ್, ಸಿಂಗಪುರ, ಮಲೇಶಿಯಾ ಅಷ್ಟೇ ಅಲ್ಲದೆ ಜಪಾನ್, ಚೀನಾದಲ್ಲೂ ಅವರ ಸಿನಿಮಾಗಳಿಗೆ ಮಾರ್ಕೆಟ್ ಇರುವುದು ವಿಶೇಷ. ವೃತ್ತಿಜೀವನದ ಉತ್ತರದಲ್ಲಿ ಉತ್ತರಾರ್ಧದಲ್ಲಿ ಆಧ್ಯಾತ್ಮದ ಕಡೆಗೆ ಹೊರಳಿದ ರಜನಿಕಾಂತ್ ಆಗಾಗ್ಗೆ ಹಿಮಾಲಯದ ತಪ್ಪಲಿಗೆ ಏಕಾಂತ ಬಯಸಿ ಹೋಗುವುದುಂಟು.

ಇಂಥ ನಟನಿಗೆ ದಾದಾಸಾಹೇಬ್ ಫಾಲ್ಕೆಪ್ರಶಸ್ತಿ ಬಂದಿದೆ. ಅವರ ಅಭಿಮಾನಿಗಳಿಗೆ ವೀಕ್ಷಕರಿಗೆ ಸಂತಸ. ಆದರೆ ಬಂದ ಸಂದರ್ಭ ಕುರಿತು ವಿವಾದ ಹರಿದಾಡುತ್ತಿವೆ. ಇರಲಿ. ಅಭಿಮಾನಿಸಿದ ನಟನಿಗೆ ಪ್ರಶಸ್ತಿ ಸಂದರ್ಭ. ಮರಾಠಿಗರಿಗೆ ಇವರು ನಮ್ಮ ಭಾಷೆಯವ ನೆಂದು, ಕನ್ನಡಿಗರಿಗೆ ಬೆಂಗಳೂರಿಗರೆಂದು, ತಮಿಳರಿಗೆ ನಮ್ಮಲ್ಲಿ ಬೆಳೆದ ನಟನೆಂದು ಹೆಮ್ಮೆ. ಆದರೆ ಕಲೆ ಭಾಷೆ ಮೀರಿದ್ದು ಎಂಬುದು ನಿಜ.