Friday, 13th December 2024

ದೆಹಲಿ ದಂಗೆ: ಅವರೇನು ರೈತರೋ ?

ಅಭಿಮತ

ಮಾರುತೇಶ್‌ ಅಗ್ರಾರ

72ನೇ ಗಣರಾಜ್ಯೋತ್ಸವ ಭಾರತದ ಇತಿಹಾಸದಲ್ಲಿ ಮರೆಯಲಾರದ ದುರಂತಕ್ಕೆ ಸಾಕ್ಷಿಯಾಯಿತು!

ಇನ್ನೇನು ದೆಹಲಿ ಜನರು ರಾಜ್ ಪಥ್‌ನಲ್ಲಿ ನಡೆದ ಗಣತಂತ್ರ ಹಬ್ಬದ ಕಾರ್ಯಕ್ರಮ ಮುಗಿಸಿ ಮನೆಕಡೆ ಹೆಜ್ಜೆ ಹಾಕುವ ಹೊತ್ತಿಗೆ, ಕೃಷಿ ಮಸೂದೆ ವಿರೋಧಿಸಿ ಮೋದಿ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲು ರೆಡಿಯಾಗಿದ್ದ ರೈತರ ಗುಂಪು ದಿಢೀರ್ ರೊಚ್ಚಿ ಗೆದ್ದ ಪರಿಣಾಮ ಇಡೀ ಪ್ರತಿಭಟನೆಯೇ ದಂಗೆಯ ರೂಪ ಪಡೆಯಿತು!

ಒಂದು ಕ್ಷಣ ದೆಹಲಿ ಮಂದಿ ಕಕ್ಕಾಬಿಕ್ಕಿಯಾಗಿ ಓಡಲಾರಂಭಿಸಿದರು! ಇದಕ್ಕೆ ಕಾರಣವಾಗಿದ್ದು ದೆಹಲಿಯಲ್ಲಿ ರೈತರೆಂದು ಹೇಳಿ ಕೊಂಡು ಪ್ರತಿಭಟನೆಗಿಳಿದವರ ಕೈಯಲ್ಲಿ ಖಡ್ಗ, ಗುರಾಣಿ, ಕಬ್ಬಿಣದ ರಾಡ್‌ಗಳು ಇದ್ದದ್ದು! ಪೊಲೀಸರನ್ನು ಹೆದರಿಸುವುದಕ್ಕಾಗಿ ರಸ್ತೆಯ ಮೇಲೆ ಅಡ್ಡಾದಿಡ್ಡಿ ಟ್ರ್ಯಾಕ್ಟರ್ ಓಡಿಸೋದು! ಟ್ರ್ಯಾಕ್ಟರ್‌ನಿಂದ ಸರಕಾರಿ ಬಸ್‌ಗೆ ಡಿಕ್ಕಿ ಹೊಡೆಸೋದು!

ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಪೊಲೀಸರ ಮೇಲೆಯೇ ಹಗೆ ಮುಂದಾಗೋದು! ಅಬ್ಬಬ್ಬಾ ಎಂಥೆಂಥಾ ದೃಶ್ಯಗಳು! ಇದು ದಂಗೆಯ ಮೊದಲ ಭಾಗದ ಸಾಹಸದ ಕಥೆ. ಅಂದಹಾಗೆ ಅವರೆಲ್ಲ ನಿಜವಾದ ರೈತರೇ ಆಗಿದ್ದು ಇಷ್ಟು ರಾದ್ಧಾಂತವಾಗಿದ್ದರೂ, ರೈತರು ಆಕ್ರೋಶಗೊಂಡಿದ್ದರ ಪರಿಣಾಮ ಇಷ್ಟೆ ಆಯಿತು ಎಂದು ಸುಮ್ಮನಾಗಬಹುದಿತ್ತು. ದೇಶದ ಜನರು ಕೂಡ ಆ ರೈತರ ಬೆನ್ನಿಗೆ ನಿಲ್ಲುತ್ತಿದ್ದರು.

ಆದರೆ ರೈತರೆಂದು ಹೇಳಿಕೊಂಡು ಕಾನೂನನ್ನು ಕೈಗೆ ತಗೊಂಡು ಪೊಲೀಸರ ಮೇಲೆಯೇ ಹ ಮಾಡೋದು, ಸಾರ್ವಜನಿಕ
ಆಸ್ತಿಪಾಸ್ತಿಗಳನ್ನ ನಾಶಮಾಡೋದು ಸರೀನಾ? ಅದೆಲ್ಲ ಕಾಮನ್ ಎನ್ನೋಣ. ಈಗ ಎರಡನೇ ಭಾಗಕ್ಕೆ ಬರೋಣ, ನಿಜವಾದ
ರೈತನಾದವನು ಯಾವತ್ತಾದರೂ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುತ್ತಾನಾ? ರಾಷ್ಟ್ರ ಧ್ವಜವನ್ನ ಕಿತ್ತುಕೊಂಡು ಮನಸೋ ಇಚ್ಛೆ ಬಿಸಾಕ್ತಾನಾ? ಕೈಯಲ್ಲಿದ್ದ ರಾಷ್ಟ್ರ ಧ್ವಜದಿಂದ ಮತ್ತೊಬ್ಬರನ್ನ ಹೊಡೆಯುವ ಮನಸ್ಸು ಮಾಡ್ತಾನಾ? ಅವನು ಈ ದೇಶದ
ನಿಜವಾದ ಅನ್ನದಾತನೆ ಆಗಿದ್ದರೆ ಕೆಂಪುಕೋಟೆಯ ಮೇಲೆ ನಮ್ಮ ರಾಷ್ಟ್ರ ಧ್ವಜವನ್ನ ಬಿಟ್ಟು ಬೇರೆ ಬಾವುಟವನ್ನ ಹಾರಾಡಿಸುವ
ದಾಷ್ಟ್ಯ ತೋರುತ್ತಾನಾ? ನಾಚಿಕೆಗೇಡಿನ ಸಂಗತಿಯೆಂದರೆ ಇವೆಲ್ಲವೂ ದೆಹಲಿಯ ಬೀದಿಗಳಲ್ಲಿ ರಾರಾಜಿಸಿದವು!

ಇದು ಭಾಗ ಎರಡರ ರಣರೋಚಕ ದೃಶ್ಯಗಳು ಎನ್ನಬಹುದು. ಒಂದು ವೇಳೆ ಇದೆಲ್ಲವನ್ನು ಮಾಡಿದ್ದು ರೈತನೇ ಎನ್ನುವುದಾದರೆ
ಆತನನ್ನು ನಮ್ಮ ಅನ್ನದಾತ ಎನ್ನಬೇಕೋ? ಅಥವಾ ದೇಶದ್ರೋಹಿ ಎಂದು ಕರೆಯಬೇಕೋ? ಯಾಕೆಂದರೆ ದೆಹಲಿಯಲ್ಲಿ ನಡೆದ ರೈತ ದಂಗೆಯನ್ನ ಗಮನಿಸಿದರೆ ನಿಜಕ್ಕೂ ಇವರು ನಮ್ಮ ರೈತರಾ? ನಮ್ಮ ಅನ್ನದಾತರು ಈಗೆ ನಡೆದುಕೊಳ್ಳುತ್ತಾರಾ? ನಮ್ಮ ರೈತರು ಸ್ವತಃ ನಮ್ಮ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುವಷ್ಟು ಪುಂಡರಾದರಾ? ಅನಿಸುತ್ತದೆ.

ಹಾಗಾಗಿಯೇ ರೈತ ಹೋರಾಟಗಾರ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಯೋಗೇಂದ್ರ ಯಾದವ್ ದಿಲ್ಲಿ ದುರಂತದ ಬಗ್ಗೆ ಅತೀವ ವಿಷಾದ ವ್ಯಕ್ತಪಡಿಸಿ, ಪ್ರತಿಭಟನೆಯಲ್ಲಿ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವುದಕ್ಕೆ ಹಾಗೂ ರೈತರ ಪರೇಡ್ ದಾರಿ ತಪ್ಪಿದ್ದಕ್ಕೆ ಅತೀವ ಬೇಸರವಾಗಿದೆ. ಮತ್ತು ಪ್ರತಿಭಟನೆಯ ಜವಾಬ್ದಾರಿ ಹೊತ್ತಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ
ಎಂದಿದ್ದಾರೆ. ಇನ್ನು ಕೆಲವರು ಮಾಧ್ಯಮಗಳಲ್ಲಿ ಕುಳಿತುಕೊಂಡು ದೆಹಲಿ ದಂಗೆಯನ್ನು ಹಾಗೂ ಕೆಂಪು ಕೋಟೆ ಮೇಲೆ ಅನ್ಯ
ಧ್ವಜವನ್ನ ಹಾರಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ಅಂಥವರ ತಲೆಯಲ್ಲಿ ಬುದ್ಧಿ ಬದಲು ಲದ್ದಿಯೇನಾದರೂ ಇದೆಯಾ? ಅನಿಸುತ್ತದೆ. ಯಾಕೆಂದರೆ ಕೆಂಪುಕೋಟೆಯ ಮೇಲೆ ನಮ್ಮ ರಾಷ್ಟ್ರ ಧ್ವಜವನ್ನ ಬಿಟ್ಟು ಬೇರೆ ಯಾವ ಧ್ವಜವನ್ನು ಹಾರಿಸಬಾರದೆಂಬ ನಿಯಮವಿದೆ. ಈ ನಿಯಮದ ಪರಿಜ್ಞಾನವೇ ಇಲ್ಲದ ಸೋಕಾಲ್ಡ ನಾಯಕರು ತಮ್ಮ ಮೂಗಿನ ನೇರಕ್ಕೆ ಮಾತನಾಡಿ ರೈತರ ವೇಷದಲ್ಲಿ ಬಂದಿದ್ದ ಆ ದುರುಳ ಮತ್ತು ದೇಶದ್ರೋಹಿ ಗಳನ್ನ ಸಮರ್ಥಿಸಿಕೊಳ್ಳುವ ದರ್ದೆಕೇ? ಆದರೆ ಒಕ್ಕಲುತನವನ್ನೇ ತಮ್ಮ ಜೀವಾಳ ಮಾಡಿಕೊಂಡ ಹಾಗೂ ಭೂಮಿ ತಾಯಿಯೇ ತನ್ನ ಹೆತ್ತಮ್ಮ ಎಂದುಕೊಂಡ ಯಾವೊಬ್ಬ ರೈತನಾಗಲಿ, ದೇಶ ಮೊದಲು ಎನ್ನುವ ಜನರಾಗಲಿ, ರಾಷ್ಟ್ರಾಭಿಮಾನ ತೋರುವ ರಾಜಕೀಯ ನಾಯಕರಾಗಲಿ ಯಾರೂ ಕೂಡ ದೆಹಲಿ ದಂಗೆಯನ್ನು ಸಮರ್ಥಿಸುವುದಿಲ್ಲ!

ಹಾಗಾಗಿಯೇ ರಾಷ್ಟ್ರಾದ್ಯಂತ ದೆಹಲಿ ರೈತ ದಂಗೆಯ ಬಗ್ಗೆ ಜನಸಾಮಾನ್ಯರು ಟೀಕೆ ವ್ಯಕ್ತಪಡಿಸಿzರೆ. ನಿಜ ಹೇಳಬೇಕೆಂದರೆ ನಮ್ಮ ನಿಜವಾದ ರೈತರಾರು ಆ ದಂಗೆಯ ರೂವಾರಿಗಳಾಗಿರೋದಿಕ್ಕೆ ಸಾಧ್ಯವೇ ಇಲ್ಲ! ಯಾಕೆಂದರೆ ಭಾರತದಂಥ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರದಲ್ಲಿ ಇಲ್ಲಿಯವರೆಗೂ ಅದೇಷ್ಟೋ ರೈತ ಪ್ರತಿಭಟನೆಗಳು ನಡೆದಿವೆ. ಹಾಗೂ ದೇಶದ ಯಾವುದೋ ಒಂದು ಮೂಲೆಯಲ್ಲಿ ಒಂದಿಂದು ಕಾರಣಕ್ಕಾಗಿ ಪ್ರತಿ ನಿತ್ಯ ರೈತ ಪ್ರತಿಭಟನೆಗಳು ನಡೆಯುತ್ತಲೂ ಇವೆ. ಆದರೆ ಯಾವತ್ತಿಗೂ ಕೂಡ ರೈತ ದೇಶಕ್ಕೆ ಅವಮಾನವಾಗುವ ರೀತಿ ನಡೆದುಕೊಂಡಿಲ್ಲ.

ರಾಷ್ಟ್ರ ಧ್ವಜವನ್ನೇ ಉಡಾಫೆಯಿಂದ ಕಿತ್ತೆಸೆದ ಉದಾಹರಣೆ ಇಲ್ಲ. ಕೆಂಪುಕೋಟೆಯ ಮೇಲೆ ಅನ್ಯ ಧ್ವಜ ಹಾರಿಸಿದ ಕುರುಹು ಸಹ ನಮ್ಮಲ್ಲಿಲ್ಲ. ಹಾಗಾಗಿ ನಮ್ಮ ರೈತರು ಇಂಥ ನೀಚ ಕೃತ್ಯ ಎಸಗಿಲ್ಲ ಎಂಬುದು ನಮಗೆ ಗೊತ್ತಿದೆ. ಯಾಕೆಂದರೆ ದೇಶದ ಬೆನ್ನೆಲುಬೇ ರೈತ ಎನ್ನುವುದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಅಂಥದ್ದರಲ್ಲಿ ನಮ್ಮ ರೈತರು ದೇಶದ್ರೋಹದ ಕೃತ್ಯ ಎಸಗುತ್ತಾರೆ ಎನ್ನುವು ದನ್ನು ಯಾರಾದರೂ ನಂಬಲು ಸಾಧ್ಯವೇ?