Sunday, 15th December 2024

ಬಿಟ್ಟೆನೆಂದರೂ ಬಿಟ್ಟು ಬಿಡದೀ ಹುಟ್ಟುಗುಣ

ಅಭಿಮತ

ಡಾ.ಕೆ.ಪಿ.ಪುತ್ತೂರಾಯ

ಕೆಲವು ಗುಣಗಳೇ ಹಾಗೆ, ನಮ್ಮನ್ನು ಅಂಟಿಕೊಂಡಿರುತ್ತವೆ. ಇವನ್ನೇ ಹುಟ್ಟು ಗುಣಗಳೆಂದೂ ಕರೆಯಬಹುದು. ಇವು ದುರ್ಗುಣ ಗಳೆಂದು ನಮಗೆ ಗೊತ್ತಿದ್ದರೂ, ಹಾಗೂ ಅವುಗಳಿಂದ ದೂರವಿರಬೇಕೆಂದು ನಾವು ಬಯಸಿದರೂ, ಅಷ್ಟು ಸುಲಭದಲ್ಲಿ ಅವು ನಮ್ಮನ್ನು ಬಿಟ್ಟು ಹೋಗಲಾರವು.

ಬಾಯಿಯಲ್ಲಿ ನಾವು ಅದನ್ನು ಈಗ ಬಿಟ್ಟಿದ್ದೇವೆ ಎಂದು ಹೇಳಿದರೂ, ಆ ಗುಣ ಪ್ರಕಟವಾಗುತ್ತಲೇ ಮುಂದುವರಿಯುತ್ತಲೇ ಇರುತ್ತದೆ. ಇದಕ್ಕೆ ಹಲವಾರು ನಿದರ್ಶನಗಳಿವೆ. ಸಾಮಾನ್ಯವಾಗಿ ತಮ್ಮ ಜೀವಿತಾಕಾಲದಲ್ಲಿ ಒಮ್ಮೆಯಾದರೂ ಕಾಶಿಗೆ ಹೋಗಿ, ಅಲ್ಲಿಯ ಗಂಗಾನದಿಯಲ್ಲಿ ಸ್ನಾನಮಾಡಿ, ಕಾಶಿ ವಿಶ್ವನಾಥನ ದರ್ಶನ ಪಡೆದು ಬರಬೇಕೆಂಬುದು ಎಲ್ಲ ಹಿಂದುಗಳ ಅಭಿಲಾಷೆ. ಕಾರಣ ಹೀಗೆ ಮಾಡೋದರಿಂದ ತಮ್ಮ ಪಾಪಗಳ ಪರಿಹಾರವಾದೀತೆಂಬುದು ಅವರ ನಂಬಿಕೆ.

ಹೀಗೆ ಹೋದವರು, ಕಾಶಿಗೆ ಹೋದ ಸ್ಮರಣಾರ್ಥ ಅಲ್ಲಿಂದ ಹಿಂದಿರುಗುವ ವೇಳೆ, ತಮಗೆ ಅತ್ಯಂತ ಪ್ರಿಯವಾದ ಯಾವುದಾ ದರೊಂದು ವಸ್ತು ವಿಷಯ ಇಲ್ಲವೇ ತಾವು ಬಿಟ್ಟಿರಲಾಗದ ಯಾವುದಾದರೊಂದು ಚಾಳಿಯನ್ನು ಅಲ್ಲಿಯೇ ಬಿಟ್ಟು ಬರುವುದು
ವಾಡಿಕೆ. ಮತ್ತೆ ಅದನ್ನು ಜೀವನ ಪರ್ಯಂತ ಮರುಬಳಕೆ ಮಾಡುವಂತಿಲ್ಲ, ಕೆಲವರು ತಮಗೆ ಇಷ್ಟವಾದ ಹಣ್ಣು, ಹಂಪಲು ತರಕಾರಿ ಸಿಹಿ ತಿಂಡಿಗಳನ್ನು ತ್ಯಜಿಸಿದರೆ, ಇನ್ನು ಕೆಲವರು ತಮ್ಮಿಂದ ತಡೆ ಹಿಡಿಯಲಾಗದ, ನಿಭಾಯಿಸಲಾಗದ, ಕೆಟ್ಟ ಗುಣ ಸ್ವಭಾವಗಳನ್ನು ಬಿಟ್ಟು ಬರೋದುಂಟು.

ಒಂದು ಊರಿನಲ್ಲಿ ಒಬ್ಬರು ಮೇಷ್ಟರು ಇದ್ದರು. ಅವರು ಭಾರೀ ಮುಂಗೋಪಿ ಸ್ವಭಾವದವರಾಗಿದ್ದರು. ಸಣ್ಣಪುಟ್ಟ ವಿಚಾರ ಗಳಿಗೂ ಸಿಟ್ಟುಗೊಳ್ಳುತ್ತಿದ್ದರು. ಶಾಲೆಯ ಮಕ್ಕಳಿಗೆ ಮಾತ್ರವಲ್ಲ; ಮನೆಯಲ್ಲೂ ಅವರನ್ನು ಕಂಡರೆ ಎಲ್ಲರಿಗೂ ಭಯ. ಒಮ್ಮೆ ಕಾಶಿ ಯಾತ್ರೆಗೆ ಹೊರಟ ಇವರು ‘ಹಾಗೆ ಹೋದವನು ಏನನ್ನು ಬಿಟ್ಟು ಬರಲಿ?’ ಎಂದು ಮಡದಿಯನ್ನು ಕೇಳಿದಾಗ ‘ಸಿಟ್ಟನ್ನು ಬಿಟ್ಟು ಬನ್ನಿ’ ಎಂಬ ಸೂಚನೆಯನ್ನು ನೀಡುತ್ತಾಳೆ. ಅಂತೆಯೇ ಕಾಶಿಯಲ್ಲಿ ‘ ಇನ್ನು ಮುಂದೆ ನಾನು ಸಿಟ್ಟಿಗೇಳುವುದಿಲ್ಲ, ಸಿಟ್ಟನ್ನು ಇಲ್ಲೇ ಬಿಟ್ಟು ಬಿಟ್ಟಿದ್ದೇನೆ’ ಎಂಬ ಸಂಕಲ್ಪವನ್ನು ಮಾಡುತ್ತಾರೆ.

ಕಾಶಿಯಿಂದ ಹಿಂತಿರುಗಿದ ಇವರನ್ನು ಶಾಲಾ ಮಕ್ಕಳು ಒಬ್ಬೊಬ್ಬರಾಗಿಯೇ ಕೇಳಲಾರಂಭಿಸಿದರು. ‘ಕಾಶಿಗೆ ಹೋಗಿ ಏನನ್ನು ಬಿಟ್ಟು ಬಂದಿರಿ ಸಾರ್?’ ‘ಸಿಟ್ಟನ್ನು ಬಿಟ್ಟು ಬಂದಿರುವೆನಪ್ಪಾ’ ಎಂದು ಒಬ್ಬನಿಗೆ ಹೇಳಿದರು. ಅಷ್ಟರಲ್ಲಿ ಇನ್ನೊಬ್ಬ ಹುಡುಗ ಇದೇ ಪ್ರಶ್ನೆಯನ್ನು ಕೇಳಲು ಅವನಿಗೂ ಇದೇ ಉತ್ತರವನ್ನು ನೀಡಿದರು. ಈ ಸುದ್ದಿ ಶಾಲೆಯಲ್ಲಿ ಹರಡುತ್ತಲೇ ಇನ್ನಷ್ಟು
ಸಹೋದ್ಯೋಗಿಗಳು, ಮಕ್ಕಳು ಮತ್ತೆ ಮತ್ತೆ ಇದೇ ಪ್ರಶ್ನೆಯನ್ನು ಕೇಳಲಾರಂಭಿಸಿದರು.

ಕೆಲವರಂತೂ ‘ನಿಮಗೆ ಇದು ಹೇಗೆ ಸಾಧ್ಯ?’ ಎಂದು ಹೇಳುತ್ತಾ ಇವರನ್ನು ಚುಡಾಯಿಸಿದರೆ, ಕೆಲವರು ನಿಜವಾಗಿಯೂ ನೀವು ಸಿಟ್ಟು ಮಾಡೋದನ್ನು ಬಿಟ್ಟು ಬಿಟ್ಟರೇನು ಸಾರ್?’ ಎಂದು ಕೇಳಲು ತಾಳ್ಮೆ ತಪ್ಪಿದ ಮೇಷ್ಟರು ಹಾಗೆ ಕೇಳಿದ ಹುಡುಗನಿಗೆ ಕಣ್ಣು ಕೆಂಪಗೆ ಮಾಡಿಕೊಂಡು ‘ಎಷ್ಟು ಸಲ ಇದೇ ಪ್ರಶ್ನೆಯನ್ನು ಕೇಳ್ತಾ ಇದ್ದೀಯಾ, ನಿನಗೆ ಬುದ್ಧಿ ಗಿದ್ಧಿ ಇದೆಯಾ ಕತ್ತೆ’ ಎಂದು ಹೇಳುತ್ತಾ ಕಪಾಳಕ್ಕೆ ಎರಡು ಬಿಗಿದು ಕಳುಹಿಸಿದರು. ತಾತ್ಪರ್ಯ ಇಷ್ಟೆ. ಇವರು ಸಿಟ್ಟನ್ನು ಗೆದ್ದವರಾಗಿರಲಿಲ್ಲ.

ಸಿಟ್ಟಿಗೆದ್ದವರಾಗಿದ್ದರು. ಅಧಿಕಾರದ ವ್ಯಾಮೋಹ, ಭ್ರಷ್ಟಾಚಾರ, ಜಾತೀಯತೆ, ಮತಾಂಧತೆ, ಕುಡಿತ, ಜೂಜು, ಕಳ್ಳತನ, ವೇಶ್ಯಾವಾಟಿಕೆ, ಮೋಹ, ಅಸೂಯೆ, ಅತಿಆಸೆ, ಸ್ವಪ್ರಶಂಸೆ, ಪರನಿಂದನೆ. ತುಲನೆ, ಮೇಲರಿಮೆ, ಕೀಳರಿಮೆ, ಹೊಟ್ಟೆಕಿಚ್ಚು, ಹಠ -ಚರ್ಚೆ, ಪ್ರಚಾರ ಪ್ರಿಯತೆ, ಮತ್ಸರ, ಮೂಢನಂಬಿಕೆ, ಮುಂತಾದ ಯಾವುದೇ ದುರ್ಬುದ್ಧಿ ದುರ್ಗುಣಗಳಿಂದ ಬಿಡುಗಡೆ ಹೊಂದಲು ಬರೇ ಸಂಕಲ್ಪವೊಂದೇ ಸಾಲದು. ಆಚರಣೆಯೂ ಬೇಕು. ದೃಢ ನಿರ್ಧಾರವೂ ಬೇಕು; ಇಚ್ಛಾಶಕ್ತಿಯೂ ಬೇಕು.