Thursday, 12th December 2024

ಮಾನವೀಯತೆ ಸಂವಿಧಾನದ ಆಶಯ

Dr B R Ambedkar

ಅಭಿಮತ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಭಾರತದ ಸಂವಿಧಾನವು 1949ರ ನವೆಂಬರ್ 26ರಂದು ಕಾನೂನಾ ತ್ಮಕವಾಗಿ ಅಂಗೀಕರಿಸಿ ದೇಶಕ್ಕೆ ಸಮರ್ಪಿಸಲಾಯಿತು.

ಭಾರತದ ಸಂವಿಧಾನದ ಪ್ರಸ್ತಾವನೆಯೆಂದರೆ ‘ನಾವು ಭಾರತದ ಜನತೆ ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತಾತ್ಮಕ, ಗಣರಾಜ್ಯವನ್ನಾಗಿ ಕಟ್ಟಲು, ಸಂಕಲ್ಪ ಮಾಡಿರುವುದಾಗಿರುತ್ತದೆ ಮತ್ತು ಅದರ ಎಲ್ಲಾ ನಾಗರಿಕರಿಗೆ
ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ವಿಚಾರ ಹಾಗೂ ಅಭಿವ್ಯಕ್ತಿ, ನಂಬುಗೆ ಹಾಗೂ ಇಷ್ಟಾಶಕ್ತಿಯನ್ನು ಪೂಜಿಸುವ ಸ್ವಾತಂತ್ರ್ಯವನ್ನು, ಸ್ಥಾನಮಾನ ಹಾಗೂ ಅವಕಾಶಗಳ ಸಮಾನತೆಯನ್ನು ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಗೌರವ ರಕ್ಷಣೆ ಹಾಗೂ ದೇಶದ ಏಕತೆ ಹಾಗೂ ಸಮಗ್ರತೆಯ ದೃಷ್ಠಿಯಿಂದ ಅವರೆಲ್ಲರ ನಡುವೆ ಭಾತೃತ್ವ ನಿರ್ಮಿಸುವ ಉದ್ದೇಶದಿಂದ 26ನೇ ನವೆಂಬರ್ 1949ರಂದು ನಮ್ಮ ಸಂವಿಧಾನಿಕ ಸಭೆಯಲ್ಲಿ ಅಂಗೀಕರಿಸಿ ಕಾನೂನು ಸಮ್ಮತವಾಗಿ ನಮಗಾಗಿ  ಸಂವಿಧಾನವನ್ನು ನೀಡಲ್ಪಟ್ಟಿತು.’

1950ರ ಜನವರಿ 26ರಂದು ಅದು ಆಚರಣೆಗೆ ಬಂದಿತು. ಸಂವಿಧಾನದ ಬಗ್ಗೆ ಅಂಬೇಡ್ಕರ್‌ರವರ ವಿಚಾರಧಾರೆಯೆಂದರೆ ಒಳ್ಳೆಯ ಸರಕಾರವು ಕಾನೂನು ಪಾಲನೆ ಮತ್ತು ಒಳ್ಳೆಯ ಆಡಳಿತಕ್ಕೆ ನಾಂದಿಯಾಗಬೇಕೆಂಬುದಾಗಿತ್ತು. ‘ಮನುಜ ಕುಲವೆಲ್ಲಾ ಒಂದೇ, ಯಾರ ಜಾತಿ ಧರ್ಮವನ್ನು ನಂಬಬೇಡ, ಮಾನವ ಧರ್ಮವೆಲ್ಲಾ ಒಂದೇ, ಅದರಲ್ಲಿ ಪ್ರೀತಿ ಇರಿಸಿ, ಗೌರವಿಸಿ ಎಂಬುದಾಗಿತ್ತು.’
ಅಂಬೇಡ್ಕರ್ ವಿರಚಿತ ಸಂವಿಧಾನ ಮಾನವ ಹಕ್ಕುಗಳ ರಕ್ಷಣೆಗೆ ಬದ್ಧವಾದ ಸಂವಿಧಾನವಾಗಿದೆ. ‘ಸಿಹಿಗಿಂತ ಕಹಿಯನ್ನೇ ಉಂಡ ಮಹಾನ್ ಕ್ರಾಂತಿಕಾರಿ ಹೋರಾಟಗಾರ ಅಂಬೇಡ್ಕರ್’ ಅವರ ನೇತೃತ್ವದಲ್ಲಿ ಬರೆದಿರುವ ಸಂವಿಧಾನದ ಮಹತ್ವದ ತಿರುಳಾದ ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಧ್ಯೇಯ ಧೋರಣೆಗಳು ಮಾನವೀಯ ಸಿದ್ಧಾಂತಕ್ಕೆ ಬದ್ಧವಾಗಿದೆ.

ಅಂಬೇಡ್ಕರ್ ಹುಟ್ಟಿ ಬೆಳೆದ ಪರಿಸ್ಥಿತಿ, ಅನುಭವಿಸಿದ ಚಿತ್ರಹಿಂಸೆ, ತಾರತಮ್ಯ, ಅವಹೇಳನಗಳು ಮತ್ತು ಅವಮಾನಗಳು ಅವರ ಲೋಕಜ್ಞಾನದ ಅರಿವೆಗೆ ಕಾರಣವಾದುದಲ್ಲದೆ ಸಂವಿಧಾನದ ಪ್ರತಿಯೊಂದು ವ್ಯಾಖ್ಯಾನಕ್ಕೂ ಬಂಗಾರದ ಒಪ್ಪವನ್ನು ಕೊಡಲು
ಕಾಣಿಕೆಯಾಯಿತು. ಆದರೆ ಮಾಡಬಾರದ್ದನ್ನು ಮಾಡುವ ಆಡಳಿತಗಾರರು ಮತ್ತು ಆಳುವವರಿಂದ ಆಗಬಾರದ್ದು ಆಗುತ್ತಿದೆ. ಇದು ದುರಂತ, ದುರದೃಷ್ಟ ಮತ್ತು ವಿಷಾದನೀಯ.

ಭಾರತದ ಸಂವಿಧಾನವು ಅತ್ಯಂತ ಪರಿಪೂರ್ಣವಾದ ಶ್ರೇಷ್ಠ ಮತ್ತು ಜಗತ್ತಿನ ಅದ್ವಿತೀಯ ಗುಣ ಗಳಿಂದಾಧರಿಸಿದ ಶ್ರೇಷ್ಠ ಗ್ರಂಥ. ಭಾರತದ ಸಂವಿಧಾನದ ಪ್ರಸ್ತಾವನೆಯಂತೆ ದೇಶವನ್ನು ಸಾರ್ವಭೌಮ ಸಮಾಜವಾದಿ, ಜಾತ್ಯಾತೀತ, ಪ್ರಜಾಸತಾತ್ಮಕ, ಗಣರಾಜ್ಯ ವನ್ನಾಗಿ ಕಟ್ಟಲು ಸಂಕಲ್ಪ ಮಾಡಿದುದಲ್ಲದೆ ಪ್ರಜೆಗಳಿಗೆ ಕಾನೂನಾತ್ಮಕ ಸಂವಿಧಾನವನ್ನು ನೀಡಿದೆ. ದೇಶದ ಎಲ್ಲಾ ನಾಗರಿಕರಿಗೆ
ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಅಲ್ಲದೆ ಅಭಿವ್ಯಕ್ತಿ ನಂಬುಗೆ ಮತ್ತು ಇಚ್ಛಾಶಕ್ತಿಯನ್ನು ಪೂಜಿಸುವ ಸ್ಥಾನ ಮಾನ ಮತ್ತು ಅವಕಾಶಗಳ ಸಮಾನತೆಯನ್ನು ಕಲ್ಪಿಸಿದೆ.

ಸಂವಿಧಾನದ ಶ್ರೇಷ್ಠತೆ ಅದರ ವ್ಯಾಪ್ತಿಯಲ್ಲಿಯೇ ಉಳಿಯ ಬೇಕೆನ್ನುವ ದೃಷ್ಟಿಯಿಂದ ಯಾವುದೇ ಸರಕಾರ ತನ್ನ ಇಚ್ಛೆಗೆ ತಕ್ಕಂತೆ ಅದನ್ನು ಬದಲಾಯಿಸುವುದಕ್ಕೆ ಎಡೆ ಮಾಡಿಕೊಡದಂತೆ ಮುನ್ನೆಚ್ಚರಿಕೆ ವಹಿಸಿ ರಚಿಸಲಾದ ಮೌಲ್ಯಾಧಾರಿತ ಕೃತಿಗೆ ನಾವು ಅಂಬೇಡ್ಕರ್ ತಂಡಕ್ಕೆ ಸದಾ ಅಭಿನಂದನೆಯನ್ನು ಸಲ್ಲಿಸುತ್ತಿರಬೇಕು. ಪ್ರಪಂಚದ ಮೂಲ ಪ್ರಪ್ರಥಮ ಲಿಖಿತ ಸಂವಿಧಾನಕ್ಕೆ
110 ವರ್ಷವಾಗಿದೆ. ಅನೇಕ ರಾಷ್ಟ್ರಗಳಿಗೆ ಅದೇ ಮಾದರಿಯಾಗಿದೆ. ನಮ್ಮ ಪಾರ್ಲಿಮೆಂಟ್ ಅಥವಾ ಸಂಸತ್ ಮತ್ತು ಸರಕಾರದ ಸಂಯುಕ್ತ ವ್ಯವಸ್ಥೆಯು ಬ್ರಿಟಿಷ್ ಸಂಸತ್‌ನ ಮಾದರಿಯಲ್ಲಿದೆ. ಮೂಲಭೂತ ಹಕ್ಕುಗಳು ಮತ್ತು ಸುಪ್ರೀಂ ಕೋರ್ಟ್ ಅಮೆರಿಕಾ ದೇಶದ ಮಾದರಿ.

ಸಂಯುಕ್ತ ಗಣತಂತ್ರ ರಾಷ್ಟ್ರದ ರೀತಿ ನೀತಿ ಕೆನಡಾ ದೇಶದ ವಿಧಾನ. ಅಧಿಕಾರ ವಿಕೇಂದ್ರಿಕರಣ ಆದೇಶಗಳ ನಿರ್ದೇಶನ ಐರಿಷ್, ಆಸ್ಟ್ರೇಲಿಯ ಮತ್ತು ಸ್ಪೇನ್ ಮಾದರಿಯನ್ನು ಹೋಲುತ್ತದೆ. ಈ ಎಲ್ಲಾ ಸಂವಿಧಾನಗಳ ಒಳಿತುಗಳನ್ನು ಸ್ವೀಕರಿಸಿ ಭಾರತೀಯ ಸಂಸ್ಕೃತಿಗೆ ಪೋಣಿಸಿ ಬರೆದು ಕೇವಲ 280 ಪುಟಗಳಲ್ಲಿ ಮುದ್ರಿತವಾಗಿರುವ ನಮ್ಮ ಲಿಖಿತ ಸಂವಿಧಾನ ಪವಿತ್ರ ಗ್ರಂಥವೇ ಸರಿ. ಅಂಬೇಡ್ಕರ್‌ರವರು ಭವಿಷ್ಯದ ಯೋಜನೆ ಮತ್ತು ಯೋಚನೆಗಳ ಬಗ್ಗೆ ನಿರ್ದಿಷ್ಟ ಭವಿಷ್ಯವನ್ನು ನುಡಿದಿದ್ದರು. ಅದೇನೆಂದರೆ ‘ಈ ಸಂವಿಧಾನ ಸರಿಯಾಗಿ ಜಾರಿಯಾಗದಿದ್ದರೆ ಸಂವಿಧಾನವನ್ನು ದೂರಬೇಡಿ.

ಜಾರಿಗೊಳಿಸುವವರನ್ನೇ ದೂರಬೇಕು’. ಖಡಾ ಖಂಡಿತವಾಗಿ ಹೇಳಿದ ಮಾತು. ಮುಂದುವರಿಯುತ್ತಾ ಸ್ವತಂತ್ರ್ಯ ಭಾರತದ ಜನ ನನ್ನನ್ನು ‘ಸಂವಿಧಾನ ಶಿಲ್ಪಿ’ಯೆಂದು ಕರೆಯುತ್ತಾರೆ. ಆದರೆ ನಾನೊಂದು ಬಾಡಿಗೆಯ ಕುದುರೆ. ನನಗೆ ಇಷ್ಟವಿಲ್ಲದ್ದನ್ನು ಸಂವಿ ಧಾನದಲ್ಲಿ ಅಳವಡಿಸುವ ಪ್ರಮೇಯವೂ ಬಂದೊದಗಿತ್ತು. ಅವರು ಅಂದು ಕಳವಳಗೊಂಡ ವಿಚಾರಗಳು ಇಂದು ಸತ್ಯವಾ ಗುತ್ತಿವೆ. ಅಳತೆ ಇಲ್ಲದಿದ್ದರೆ ಔಷಧಿ ಕೂಡಾ ವಿಷವಾಗುತ್ತದೆ ಎಂಬ ತೀರ್ಮಾನದ ಸಿದ್ಧಾಂತವನ್ನು ಸರಳವಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾವು ಯಾವತ್ತೂ ಕಾರ್ಯಾಂಗ ಮತ್ತು ಶಾಸಕಾಂಗದ ಕಾರ್ಯ ನಿರ್ವಹಣೆಯನ್ನು ವಿಮರ್ಶಿಸ ಬೇಕೇ ಹೊರತು ಯಾವ ಕಾರಣಕ್ಕೂ ಸಂವಿಧಾನ ವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಪರಾಮರ್ಷಿಸ ಬಾರದು. ಅಲ್ಲದೆ ನಾವು ಅಕ್ಷರಕ್ಕೂ ಆಚರಣೆಗೂ ನಿಕಟ ಮೈತ್ರಿ ಮತ್ತು ಸಾಮರಸ್ಯವಿದೆಯೇ ಎಂಬುದನ್ನು ಪರಾಮರ್ಶಿಸಬೇಕು.

ನಮ್ಮ ಪ್ರಜಾಪ್ರಭುತ್ವದ ಅಳಿವು ಉಳಿವಿನ ಹಿಂದೆ ನೂರಾರು ವರ್ಷಗಳ ತ್ಯಾಗ ಬಲಿದಾನಗಳ ಇತಿಹಾಸವಿದೆ. ಈ ದೇಶ ಪ್ರಜಾ ಪ್ರಭುತ್ವ ಗಣರಾಜ್ಯವಾಗಿ ಬೆಳೆದಿರುವುದು ಸ್ಮರಣಾರ್ಹ ಮತ್ತು ಚರಿತ್ರಾರ್ಹ. ಅದಲ್ಲದೇ ವಿವಿಧ ಭಾಷೆ, ಸಂಸ್ಕೃತಿ, ಧರ್ಮಗಳನ್ನು ಹೊಂದಿದ್ದರೂ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ತೋರಿಸಿದೆ. ಪ್ರಸ್ತುತ ನಮ್ಮಲ್ಲಿ ಬೇರೂರಿರುವ ದೌರ್ಬಲ್ಯದ ಶಕುನವೆಂದರೆ ವಿಶಾಲವಾದ ಅರ್ಥವಿರುವ ಧರ್ಮವನ್ನು ಆಂಗ್ಲಭಾಷೆಯಲ್ಲಿ ‘ರಿಲಿಜನ್’ ಮತ ಎಂದು ಅರ್ಥೈಸಿಕೊಂಡಿರುವುದು ನಮ್ಮ ರಾಷ್ಟ್ರಕ್ಕೆ ಅಪಾರ ಹಾನಿಯಾಗಿದೆ. ಮೂಲಭೂತ ತಿರುಳು.

‘ವಸುದೈವ ಕುಟುಂಬಕಂ’ ಎಂಬ ಮಾತೇ ಧರ್ಮದ ತಿರುಳು. ಧರ್ಮವನ್ನು ಮನುಷ್ಯನ ಒಳಿತಿಗಾಗಿ ಇವೆಯಷ್ಟೇ ಹೊರತು ಶೋಷಣೆಗೆ ಗುರಿಪಡಿಸುವುದಕ್ಕಲ್ಲ ಎಂಬುದು ಅಂಬೇಡ್ಕರ್ ದೃಢ ನಿರ್ಧಾರವಾಗಿತ್ತು. ಪ್ರಜಾಪ್ರಭುತ್ವಕ್ಕಿರುವ ಅನೇಕ ವ್ಯಾಖ್ಯಾನ ಗಳಲ್ಲಿ ಅಬ್ರಾಹಂ ಲಿಂಕನ್‌ರವರ ದೃಷ್ಠಿಕೋನದ ಪ್ರಕಾರ ಸರಕಾರ ಎಂದರೆ ಪ್ರಜೆಗಳಿಂದ, ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿ ಗೋಸ್ಕರ ಆದರೆ ‘ಅಂಬೇಡ್ಕರ್ ವ್ಯಾಖ್ಯಾನದ ಪ್ರಕಾರ ರಕ್ತಪಾತವಿಲ್ಲದೆ, ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಸರಕಾರದ ಒಂದು ಸ್ವರೂಪ ಮತ್ತು ಕ್ರಮ ಬದ್ಧತೆಯೇ ಪ್ರಜಾಪ್ರಭುತ್ವದ ಅಂಬೇಡ್ಕರ್ ತತ್ವಗಳು’ ರಾಜಕೀಯ ನಿಲುವುಗಳು ಆರ್ಥಿಕ ಮತ್ತು ಧರ್ಮ ನಿಷ್ಠೆಗಳು ಅವರ ಪ್ರಜಾಪ್ರಭುತ್ವದ ಕಲ್ಪನೆಯಿಂದ  ರೂಪುಗೊಂಡಿದೆ.

ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಪ್ರಜ್ಞಾವಂತ ಪ್ರಜೆಗಳ ಪಾತ್ರವೇ ದೊಡ್ಡದು. ಚುನಾಯಿತ ಪ್ರತಿನಿಧಿಗಳು ಜನರಿಂದ ನೇರವಾಗಿ ಆರಿಸಿ ಬರುವುದರಿಂದ ಜನ ಸಾಮಾನ್ಯರ ಕಷ್ಟ ಸುಖಗಳ ಅನುಭವ ಅವರಿಗಿರಬೇಕು ಎಂಬ ಅಭಿಪ್ರಾಯ ಅವರದ್ದಾಗಿತ್ತು. ಪ್ರಜಾ ಪ್ರಭುತ್ವ ಮಾದರಿಯಲ್ಲಿ ಅನುವಂಶೀಯ ಆಡಳಿತವಿರಕೂಡದು. ಎಲ್ಲಾ ನಾಯಕರು ಚುನಾವಣೆಗಳನ್ನು ಎದುರಿಸುವ ಮೂಲಕ ಸಾಮಾನ್ಯ ಜನಗಳಿಂದ ಒಪ್ಪಿಗೆ ಪಡೆಯಬೇಕು. ಪ್ರಜಾಪ್ರಭುತ್ವ ಯಶಸ್ವಿ ಯಾಗಬೇಕಾದರೆ ಸರಕಾರವು ದೇಶದ ಸಮಸ್ತ ಶೋಷಿತರ ಸಂಕಷ್ಟಗಳನ್ನು ದೂರ ಮಾಡಬೇಕಲ್ಲದೇ ಅವರ ಹಿತಾಸಕ್ತಿಗಳನ್ನು ರಕ್ಷಿಸಬೇಕಾಗುತ್ತದೆ.

ಸಮಾನತೆ ಮತ್ತು ಭಾತೃತ್ವದ ತಳಹದಿಗೆ ಒತ್ತು ನೀಡಿದ್ದ ಅಂಬೇಡ್ಕರ್ ‘ರಾಜಕಾರಣದಲ್ಲಿ ನಾವು ಒಬ್ಬನಿಗೆ ಒಂದು ಮತ, ಆ ಮತಕ್ಕೆ ಒಂದು ಮೌಲ್ಯ ಎಂಬ ತತ್ವವನ್ನು ಒಪ್ಪಿಕೊಂಡಿದ್ದೇವೆ. ಆದರೆ ಸಾಮಾಜಿಕ, ಆರ್ಥಿಕ, ವ್ಯವಸ್ಥೆಯಲ್ಲಿ ಒಬ್ಬ ಮನುಷ್ಯನಿಗೆ ಒಂದು ಮೌಲ್ಯವೆಂಬ ತತ್ವವನ್ನು ತಿರಸ್ಕರಿಸುತ್ತಲೇ ಬಂದಿದ್ದೇವೆ’. ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಮತ್ತು ಸಾಮಾಜಿಕ ನ್ಯಾಯವು ದೇಶದ ಅಭಿವೃದ್ಧಿಯ ತಳಹದಿ ಯಾಗಬೇಕು ಎಂಬುದು ಅವರ ತೀಕ್ಷ್ಣ ಮತ್ತು ಧೃಢವಾದ ಪ್ರತಿಪಾದನೆ ಯಾಗಿತ್ತು. ಪ್ರಜಾಪಭುತ್ವದ ವ್ಯವಸ್ಥೆೆಯಲ್ಲಿ ಸರಕಾರಗಳು ದೇಶದಲ್ಲಿರುವ ಸಮಸ್ಯೆಗಳನ್ನು ಮರೆಮಾಚಿ ವೈಭವೀ ಕರಣದ ಚಿತ್ರಣಗಳನ್ನು ಮಾತ್ರ ಜನರ ಮುಂದಿಟ್ಟರೆ ಸಮಾಜ ಮತ್ತು ದೇಶದ ಬದಲಾವಣೆ ಮತ್ತು ಅಭಿವೃದ್ಧಿ ಅಸಾಧ್ಯ.

ಸರ್ವಾಧಿಕಾರ ತತ್ತ್ವ, ವಂಶಪಾರಂಪರ್ಯ, ಕುಟುಂಬ ರಾಜಕಾರಣಕ್ಕೆ ಕುಮ್ಮಕ್ಕನ್ನು ನೀಡಿ ಪುಷ್ಠಿ ನೀಡುವುದು ತರವಲ್ಲ. ಸಂಸತ್‌ಗೆ ಹೋಗುವವರು ಅಸಂವಿಧಾನಿಕ ಭಾಷೆಯನ್ನು ಬಳಸುವುದು ತರವಲ್ಲ. ಮತದಾನ ಕೇವಲ ಹಕ್ಕಲ್ಲ, ಕರ್ತವ್ಯವೂ ಹೌದು ಹಾಗೂ ಅನಿವಾರ್ಯ. ಮತದಾನದ ಹಕ್ಕಿಗೆ ಸಂಬಂಧಿಸಿದಂತೆ ಲಿಂಗ, ಸಂಪತ್ತು, ವಿದ್ಯಾರ್ಹತೆ ಇವುಗಳನ್ನು ಆದರಿಸಿ,
ಯಾವುದೇ ತಾರತಮ್ಯವಿಲ್ಲ, ಸ್ತ್ರೀ ಪುರುಷರಿಗೆ ಸಂವಿಧಾನ ನೀಡಿರುವ ಸಮಾನ ಅವಕಾಶ. ದೇಶದ ಭವಿಷ್ಯ ಮತ್ತು ಭಾವೀ ಜನಾಂಗದ ಭವಿಷ್ಯವೂ ಕೂಡಾ ನಮ್ಮೆಲ್ಲರ ಪ್ರತಿಯೊಂದು ಮತದಲ್ಲಿಯೂ ಅಡಗಿದೆ. ಈ ಒಂದು ಮತಕ್ಕೆ ದೇಶದ ಇತಿಹಾಸ ವನ್ನೇ ಬದಲಿಸುವ ಶಕ್ತಿ ಇದೆ.

‘ಸಮಾಜ ಮತ್ತು ದೇಶದ ಅಭ್ಯುದಯಕ್ಕೆ ಕಾರಣವಾದ ಏಕೈಕ ಕಾರ್ಯ ಚುನಾವಣೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನ ತನ್ನ ಪ್ರಜೆಗಳಿಗೆ ನೀಡಿದ ಬಹು ದೊಡ್ಡ ಕೊಡುಗೆ ಮತದಾನ’. ದೇಶದ ಏಳಿಗೆಗೆ ನಮ್ಮ ಕೈಯಲ್ಲಿರುವ ಶಕ್ತಿಯುತ ಆಯುಧ. ಪ್ರಜಾಸತ್ತಾತ್ಮಕವಾದ ಸರಕಾರ ರಚನೆಯಲ್ಲಿ ಪ್ರತಿಯೊಂದು ಮತವೂ ಮಹತ್ವದ ಪಾತ್ರವನ್ನು ವಹಿಸುತ್ತದೆ. ಯಾವ ಕಾರಣಕ್ಕೂ ವಿವೇಚನಾರಹಿತರಾಗಿ ಮೂಲಭೂತ ವಾದಿಗಳಂತೆ ಧರ್ಮಾಂಧರಾಗಿ, ಮತಭ್ರಾಂತ ರೀತಿಗೆ ಪರಿವರ್ತನೆ ಮಾಡದೇ ಇರಬೇಕಾಗಿರುವುದು ಇಂದಿನ ಅಗತ್ಯ ಮತ್ತು ಅನಿವಾರ್ಯ.

ಸಂವಿಧಾನ ನೀಡಿದ ಹಕ್ಕಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ದೇಶ ಮುಂದುವರಿಯಲು ಈ ಕರ್ತವ್ಯವನ್ನು ಪಾಲಿಸಬೇಕು. ‘ಅತ್ಯಂತ ಕಳವಳಕಾರಿ ಅಪಾಯಕಾರಿ ವಿಚಾರವೆಂದರೆ ನಗರ ಪ್ರದೇಶದ ವಿದ್ಯಾವಂತ, ಸಮೃದ್ಧ, ಅರ್ಹ ಯುವಕರಲ್ಲಿ
ದೇಶ ಪ್ರೇಮವಿದೆ. ಆದರೆ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ’. ಅವರ ನಿರುತ್ಸಾಹಕ್ಕೆ ಕಣದಲ್ಲಿರುವ ಅಸಮರ್ಥ ಅಭ್ಯರ್ಥಿಗಳ ಬಗ್ಗೆೆ ಇರುವ ಬೇಸರ ಮತ್ತು ಅತೃಪ್ತಿ ಮುಖ್ಯ ಕಾರಣವೆಂಬುದು ಒಂದು ಅಧಿಕೃತ ಹೇಳಿಕೆ ಮತ್ತು ಪ್ರಕಟಣೆ. ಆದರೆ ಪ್ರತಿಯೊಬ್ಬ ಪ್ರಜೆಯೂ ಮತಚಲಾವಣೆಯ ಬಗ್ಗೆ ನಿರ್ಧಾರ ಮಾಡುವಾಗ ‘ಪ್ರಥಮ ಆದ್ಯತೆ ರಾಷ್ಟ್ರ ಪ್ರೇಮವಾಗಿರಬೇಕು.

ದ್ವಿತೀಯ ಆದ್ಯತೆ ಪಕ್ಷನಿಷ್ಠೆ, ತದನಂತರ ಅಭ್ಯರ್ಥಿ ಮತ್ತು ಧನ ದೌಲತ್ತಿಗೆ ಪ್ರಾಶಸ್ತ್ಯವನ್ನು ಕೊಡದೆ ಅದು ಗೌಣವಾಗಿರಬೇಕು’.
ಅಂತೆಯೇ ದೇಶವನ್ನು ಪ್ರೀತಿಸುವ ಯಾವ ಪ್ರಜೆಯೂ ಅನ್ಯಾಯವನ್ನು ಸಹಿಸದೆ ಪವಿತ್ರವಾದ ಮತದಾನದ ಕರ್ತವ್ಯದಿಂದ ದೂರ ಉಳಿಯಬಾರದು. ಸಂವಿಧಾನವು ಭಾರತೀಯ ಪ್ರಜೆಗಳಿಗೆ ಹಕ್ಕನ್ನು ಕೊಟ್ಟಿರುವಂತೆ ಕರ್ತವ್ಯಗಳನ್ನು ವಿಧಿಸಿದೆ. ನಾವು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಬೇಕು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹಮ್ಮಿಕೊಂಡ ಆದರ್ಶಗಳನ್ನು ಪಾಲಿಸಬೇಕು. ದೇಶದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಎತ್ತಿಹಿಡಿಯಬೇಕು ಮತ್ತು ರಕ್ಷಿಸಬೇಕು. ಅವಶ್ಯಕತೆ ಇದ್ದರೆ ರಾಷ್ಟ್ರರಕ್ಷಣೆ ಮತ್ತು ಸೇವೆಗೆ ಸಿದ್ಧರಿರಬೇಕು.

ಭಾತೃತ್ವ ಭಾವನೆ ಮತ್ತು ಸ್ತ್ರೀಯರಲ್ಲಿ ಅಗೌರವದಿಂದ ನಡೆದುಕೊಳ್ಳಬಾರದು. ವಿಭಿನ್ನ ಸಂಸ್ಕೃತಿಯನ್ನು ರಕ್ಷಿಸಬೇಕು. ಪರಿಸರ ಮತ್ತು ವನ್ಯಜೀವಿ ರಕ್ಷಣೆ, ವೈಜ್ಞಾನಿಕ ದೃಷ್ಠಿ, ಮಾನವೀಯತೆ ಸುಧಾರಣೆಯಲ್ಲಿ ಆಸಕ್ತಿ ತೋರಬೇಕು. ಹಿಂಸಾ ಪ್ರವೃತ್ತಿಯಿಂದ ದೂರವಿರಬೇಕು. ವ್ಯಕ್ತಿಗತ ಮತ್ತು ಸಾಂಕ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಆದರೆ ಇಂದು ಅನೇಕ ಸ್ಥರಗಳಲ್ಲಿ ನಾವು
ಕೇವಲ ಹಕ್ಕುಗಳಿಗಾಗಿ ಹೋರಾಡಿ ಕರ್ತವ್ಯಗಳನ್ನು ಮರೆತಿರುವುದು ದುರಂತ ಮತ್ತು ದುರದೃಷ್ಟ. ಇವೆಲ್ಲವನ್ನು ಕ್ರೋಢೀ ಕರಿಸುವಾಗ ಸಂವಿಧಾನದ ಪ್ರಸ್ತಾವನೆ, ಉದ್ದೇಶ ಮತ್ತು ಅರ್ಥವೇನೆಂದರೆ ನಮ್ಮ ಸಂವಿಧಾನ ಜನರಿಂದ, ಜನರಿಗಾಗಿ ನೀಡಲ್ಪಟ್ಟಿದ್ದು ಎಂಬುದು ಸ್ಪಷ್ಟವಾಗುತ್ತದೆ.

ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಕಟ್ಟುವುದು
ಸಂವಿಧಾನದ ಉದ್ದೇಶ. ಸಾರ್ವಭೌಮ ರಾಷ್ಟ್ರವೆಂದರೆ ಇದೊಂದು ಸ್ವತಂತ್ರ ರಾಷ್ಟ್ರವಾಗಿದ್ದು ಯಾವುದೇ ಅನ್ಯ ದೇಶಗಳ ನಿಯಂತ್ರಣಕ್ಕೆ ಒಳಪಟ್ಟಿಲ್ಲ. ‘ಸಮಾಜವಾದಿ ಎಂಬ ಪದ ಸಮಾನತೆಯನ್ನು ಸೂಚಿಸುತ್ತದೆ. ಭಾರತದ ಪ್ರತಿಯೊಬ್ಬ ಸ್ತ್ರೀ, ಪುರುಷರಿಗೆ ಸಮಾನತೆ ಮತ್ತು ಗೌರವದಿಂದ ಜೀವಿಸುವ ಹಕ್ಕು ಇರುವುದು ಖಚಿತಾಗುತ್ತದೆ. ಜಾತ್ಯತೀತ ಎಂಬ ಪದದ ಅರ್ಥ ಸರಕಾರವು ಯಾವುದೇ ಜಾತಿ ಅಥವಾ ಧರ್ಮವನ್ನು ರಾಷ್ಟ್ರದ ಧರ್ಮ ಅಥವಾ ಜಾತಿಯನ್ನಾಗಿ ಬಿಂಬಿಸಬಾರದು.

ಗಣರಾಜ್ಯವೆಂದರೆ ಸರಕಾರದ ಮುಖ್ಯಸ್ಥ ಜನರಿಂದ ಆಯ್ಕೆಯಾದ ವ್ಯಕ್ತಿಯಾಗಿರಬೇಕೇ ಹೊರತು ವಂಶಪಾರಂಪಾರಿಕವಾಗಿ ಆ
ಸ್ಥಾನವನ್ನು ಅಲಂಕರಿಸಬಾರದು.’ ನಮ್ಮ ಸಂವಿಧಾನ ಅಭೂತಪೂರ್ವವಾಗಿದೆ. ಪ್ರತಿಯೊಬ್ಬ ನಾಗರಿಕನೂ ಸಂವಿಧಾನದ ಚೌಕಟ್ಟಿನಲ್ಲಿ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಪಾಲಿಸಿ ಸಂವಿಧಾನವನ್ನು ಗೌರವಿಸುವುದು ಆದ್ಯತೆಯಾಗ ಬೇಕು. ತನ್ಮೂಲಕ
ಸ್ವಸ್ಥ ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಭಾಗೀದಾರರಾಗಬೇಕಾಗಿದೆ. ಭಾರತದ ಭವಿಷ್ಯ ಯಾವ ದಿಕ್ಕಿಗೆ ಸಾಗಬೇಕೆಂಬು ದನ್ನು ನಾವೇ ನಿರ್ಧರಿಸಬೇಕಾಗಿದೆ. ಪ್ರಜಾಪ್ರಭುತ್ವವನ್ನು ಪವಿತ್ರಗೊಳಿಸಬೇಕಾಗಿದೆ. ಕಾನೂನು ಮತ್ತು ನಿಯಮ ಉಲ್ಲಂಘನೆಗಳು ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ಶತ್ರುಗಳಾಗಿವೆ.

ಹಕ್ಕುಗಳು ಮತ್ತು ಕರ್ತವ್ಯಗಳು ಸರಿಯಾಗಿ ಚಾಲನೆಯಾದರೆ ಮಾತ್ರ ಪ್ರಜಾಪ್ರಭುತ್ವ ಊರ್ಜಿತವಾಗುತ್ತದೆ. ಭಾರತ ತನ್ನದೇ ಆದ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ರಚಿಸಿ ಕಾನೂನು ಬದ್ಧಗೊಳಿಸಿ ಪ್ರಜಾಸತಾತ್ಮಕ ಗಣರಾಜ್ಯವಾಯಿತು. ಆದರೆ  ಭಾರತೀಯ ರಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವಲ್ಲಿ ಗಮನಾರ್ಹ ಸಾಧನೆ ಮಾಡುವಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜಕಾರಣ ಧ್ರುವೀಕರಣ ವಾಗುವಂತೆ ಭಾಸವಾಗುತ್ತಿದೆ. ಪ್ರಜಾತಂತ್ರದ ನಾಲ್ಕನೇ ಆಧಾರಸ್ತಂಭ ಪತ್ರಿಕಾರಂಗ ಮತ್ತು ದೃಶ್ಯ ಮತ್ತು ಸಂಹವನ ಮಾಧ್ಯಮ ನಿಷ್ಪಕ್ಷಪಾತ ವಾದಾಗ ಪ್ರಜಾಪ್ರಭುತ್ವಕ್ಕೆ ಮೆರುಗು ಬರುತ್ತದೆ.

ಇನ್ನೊಂದು ಪ್ರಾಮುಖ್ಯ ವಿಚಾರ ನಮ್ಮ ದೇಶದಲ್ಲಿ ‘ಧರ್ಮಕ್ಕೆ ರಾಜಕೀಯ ಬರಬಾರದು. ರಾಜಕೀಯಕ್ಕೆ ಧರ್ಮ ಬರಬೇಕು’.