ಅಭಿಮತ
ಬಾಲಾಜಿ ಕುಂಬಾರ
ಕುಂಬಾರ ಗುಂಡಯ್ಯ ಮತ್ತು ಕೇತಲಾದೇವಿ ದಂಪತಿಯ ಸಮಾಧಿಗಳು ಭಾಲ್ಕಿಯ ಕುಂಭೇಶ್ವರ ದೇವಾಲಯದ ಆವರಣದಲ್ಲಿವೆ.
ಅದನ್ನು ‘ಶರಣರ ಸ್ಮಾಾರಕ’ವಾಗಿ ರೂಪಿಸುವುದು ಸ್ಥಳೀಯರ ಬೇಡಿಕೆಯಿದೆ. ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಸಮಕಾಲೀನ ಶಿವಶರಣೆ ಕೇತಲದೇವಿಯು ಶರಣ ಕುಂಬಾರ ಗುಂಡಯ್ಯನವರ ಧರ್ಮಪತ್ನಿ. ಕುಂಬಾರ ಗುಂಡಯ್ಯ ಮತ್ತು
ಕೇತಲದೇವಿ ಶರಣ ಜೀವಿಗಳು ಮೂಲತಃ ಬೀದರ ಜಿಲ್ಲೆಯ ಭಾಲ್ಕಿ ಪಟ್ಟಣದವರು.
ಬಸವ ಕಲ್ಯಾಣದಿಂದ ನಲವತ್ತು ಕಿ.ಮೀ. ದೂರದಲ್ಲಿರುವ ಭಾಲ್ಕಿಯು ತನ್ನದೇ ಆದ ಐತಿಹಾಸಿಕ ಪರಂಪರೆ ಹೊಂದಿರುವ ತಾಲೂಕು ಕೇಂದ್ರ ಕೂಡ ಹೌದು. ಶರಣೆ ಕೇತಲಾದೇವಿಯ ಆರಾಧ್ಯ ದೈವ ‘ಕುಂಭೇಶ್ವರ’. ಇಂದಿಗೂ ಭಾಲ್ಕಿಯ ಕುಂಬಾರಗಲ್ಲಿಯ ಕೋಟೆ ಒಳಗಡೆ ‘ಕುಂಭೇಶ್ವರ ದೇವಾಲಯ’ ಇದೆ. ಗುಂಡಯ್ಯನವರ ಕುಲ ಕಸುಬು ಮಡಿಕೆ, ಕುಡಿಕೆ, ಹಣತೆ, ಇತ್ಯಾದಿ ಮಣ್ಣಿನ ಕಲಾಕೃತಿಗಳನ್ನು ಸಿದ್ದಪಡಿಸುವುದು.
ನಿಷ್ಠೆಯ ಕಾಯಕ ಮೂಲಕವೇ ಜೀವನ ನಡೆಸಿದ ದಂಪತಿಗಳು ದುಡಿಮೆಗೆ ಮೊದಲ ಆದ್ಯತೆ ನೀಡಿದರು. ಹೀಗಾಗಿ ಎಲ್ಲಾ ಶರಣರು ಗುಂಡಯ್ಯನವರಿಗೆ ‘ನಿಷ್ಠೆಯ ಕಾಯಕ ಶರಣ’ ‘ಕಾಯಕ ಯೋಗಿ’ ಹೀಗೆ ಹಲವು ನಾಮಗಳಿಂದ ಕರೆಯುತ್ತಿದ್ದರು. ಸತ್ಯ ಶುದ್ಧ ಕಾಯಕ, ದಾಸೋಹ ಮನೋಭಾವ ಹೊಂದಿರುವ ಅವರು ನಡೆ ನುಡಿ ಸಿದ್ಧಾಂತದಲ್ಲಿ ಪರಿಶುದ್ಧರಾಗಿ ಭಕ್ತಿಯಲ್ಲಿಯೇ ದೇವರನ್ನು ಕಂಡುಕೊಳ್ಳಲು ಪ್ರಯತ್ನಿಸಿದರು.
ಸಮಾನತೆ ಸಂಕೇತಿಸುವ ಅನುಭವ ಮಂಟಪದಲ್ಲಿ ಭಾಗವಹಿಸಲು ಎಲ್ಲಾ ಶರಣರಿಗೆ ಮುಕ್ತ ಅವಕಾಶವಿತ್ತು. ಜಾತಿ, ಮತ, ಪಂಥ, ಲಿಂಗ ತಾರತಮ್ಯ ಎನ್ನದೇ ಎಲ್ಲಾ ವಚನಕಾರರು ತಮ್ಮ ತಮ್ಮ ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸುವ ವ್ಯಕ್ತಿ ಸ್ವಾತಂತ್ರ್ಯ ಅಂದೇ ಪಡೆದುಕೊಂಡಿದ್ದರು. ಈ ಸಾಮಾಜಿಕ ಸುಧಾರಣೆಯ ಚಳುವಳಿಯಲ್ಲಿ ಕೇತಲಾದೇವಿ ಹಾಗೂ ಕೇತಲಾದೇವಿ ದಂಪತಿಗಳು ಭಾಗಿ ಯಾಗಿದ್ದರು.
ಸತ್ಯ ಶುದ್ಧ ಕಾಯಕ ಬದುಕು ಗುಂಡಯ್ಯನವರ ಚೈತನ್ಯ ವೃದ್ಧಿಗೆ ಕಾರಣವಾಯಿತು. ತನ್ನ ವೃತ್ತಿಯನ್ನೇ ನಂಬಿ ಬದುಕಿದ ಗುಂಡಯ್ಯನವರಿಗೆ ಕಾಯಕ ತತ್ತ್ವಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು. ಗುಂಡಯ್ಯನವರು ಕೂಡ ವಚನಗಳು ರಚಿಸಿರಬಹುದು, ಆದರೆ ಅವರ ಯಾವುದೇ ವಚನಗಳು ಇಂದು ಲಭ್ಯವಿಲ್ಲ. ಆದರೂ ಅವರ ಸತ್ಯ ಶುದ್ಧವಾದ ಕಾಯಕ, ನಿಷ್ಠೆಯ ಭಕ್ತಿ ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ. ಗುಂಡಯ್ಯನವರ ಪುಣ್ಯಸ್ತ್ರೀ ಕೇತಲದೇವಿ ಗಂಡನ ನಿಷ್ಠೆೆಯ ಕಾಯಕ, ಭಕ್ತಿ ಭಾವವನ್ನು ಮೆಚ್ಚಿ ಬದುಕಿದರು.
ಕಾಯಕದಲ್ಲಿಯೇ ದೇವರನ್ನು ಕಂಡುಕೊಳ್ಳಲು ‘ಸಮರಸ ಜೀವನ’ ನಡೆಸಿದ ಶರಣ ದಂಪತಿಗಳು ಪ್ರಸ್ತುತ ಸಮಾಜಕ್ಕೆ ಆದರ್ಶ ವಾಗಿದ್ದಾರೆ. ಕೇತಲಾದೇವಿಯವರು ‘ಕುಂಭೇಶ್ವರ ’ ಅಥವಾ ‘ಕುಂಭೇಶ್ವರ ಲಿಂಗ’ ಎನ್ನುವ ವಚನಾಂಕಿತದಲ್ಲಿ ರಚಿಸಿರುವ ಎರಡು
ವಚನಗಳು ಮಾತ್ರ ನಮಗೆ ಉಪಲಬ್ಧವಾಗಿವೆ.
ಕೇತಲದೇವಿಯವರು ಒಂದು ವಚನದಲ್ಲಿ ತಮ್ಮ ವೃತ್ತಿಯನ್ನು ಪರಿಭಾಷೆಯಾಗಿ ಬಳಸಿ ಚಿಂತನೆಯನ್ನು ಅಭಿವ್ಯಕ್ತಿಗೊಳಿಸಿ ದ್ದಾರೆ. ಮತ್ತೊಂದು ವಚನದಲ್ಲಿ ಲಿಂಗವಂತರ ನಡೆ – ನುಡಿ, ಆಚರಣೆ ತತ್ತ್ವದ ಬಗ್ಗೆ ತುಂಬಾ ಮಾರ್ಮಿಕವಾಗಿ ವಿಶ್ಲೇಷಿಸಿದ್ದಾರೆ. ಕಾಯಕದ ಮಹತ್ವ, ಜೀವನಾನುಭವ ಒಳಗೊಂಡಿರುವ ಕೇತಲಾದೇವಿಯವರ ಎರಡು ವಚನಗಳು ಪ್ರಸ್ತುತ ಸಮಾಜಕ್ಕೆ ಅನನ್ಯ ಸಂದೇಶ ನೀಡುವ ಮಹತ್ವದ ವಚನಗಳು. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎನ್ನುವ ತತ್ತ್ವವನ್ನು ಕೇತಲ ದೇವಿಯವರು ಬದುಕಿನುದ್ದಕ್ಕೂ ಅಳವಡಿಸಿಕೊಂಡಿದ್ದರು.
ಹೀಗಾಗಿಯೇ ಅವರ ಬದುಕು – ಕಾಯಕ – ತತ್ತ್ವ ಮಹೋನ್ನತವಾದದ್ದು. ಉತ್ತಮ ಬದುಕು ರೂಪಿಸಿಕೊಳ್ಳಬೇಕಾದರೆ ದೂರ ದೃಷ್ಟಿ, ಅರಿವಿನ ಪ್ರಜ್ಞೆ ತುಂಬಾ ಅವಶ್ಯವಾಗಿದೆ ಎಂದು ಶರಣರು ತಿಳಿಸುತ್ತಾರೆ. ಇಂಥ ಶರಣರ ಸಮಾಧಿಗಳನ್ನು ಸ್ಮಾರಕ ವನ್ನಾಗಿಸಿ, ಈ ಶರಣರಿಗೆ ಗೌರವ ಸೂಚಿಸಬೇಕಿದೆ.