ಸಲಹೆ
ಡಾ.ಪ್ರುತು ನರೇಂದ್ರ ಧೇಕನೆ
ಜಾಗತಿಕ ಕಾಲಘಟ್ಟದಲ್ಲಿ ಅಭಿವೃದ್ಧಿಯೇ ಮೂಲ ಮಂತ್ರವೆಂದು ಜಪಿಸುತ್ತಾ ಶರವೇಗದಲ್ಲಿ ಓಡುತ್ತಿದ್ದ ಇಡೀ ಪ್ರಪಂಚವನ್ನು ಕರೋನಾ ಎಂಬ ಸಣ್ಣ ಸೋಂಕು ತಡೆದು ನಿಲ್ಲಿಸಿಬಿಟ್ಟಿದೆ.
ಆರೋಗ್ಯದ ಹೊರತು ಬೇರಾವುದು ಮುಖ್ಯವಲ್ಲ ಎಂಬುದು ಪ್ರತಿಯೊಬ್ಬರಿಗೂ ಮನವರಿಕೆಯಾಗ ತೊಡಗಿದೆ. (ಏಪ್ರಿಲ್ 7) ಇಂದು ವಿಶ್ವ ಆರೋಗ್ಯ ದಿನ. ಇಂದಾದರೂ ನಾವೆಲ್ಲಾ ಆರೋಗ್ಯವೇ ಭಾಗ್ಯ ಎಂಬ ನುಡಿಮುತ್ತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಕಳೆದ 50 ವರ್ಷದಿಂದ ಈ ದಿನದಂದು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುತ್ತಾ ಬಂದಿದೆ.
ಪ್ರತಿ ವರ್ಷ ಆರೋಗ್ಯದ ಮಹತ್ವ ಸಾರಲು ಒಂದೊಂದು ಘೋಷಾ ವಾಕ್ಯದೊಂದಿಗೆ ಈ ದಿನವನ್ನು ಅರ್ಥಪೂರ್ಣವನ್ನಾಗಿ ಆಚರಿಸುತ್ತಿತ್ತು. ಈ ವರ್ಷ ಕೂಡ ಉತ್ತಮ ಆರೋಗ್ಯಕರ ಜಗತ್ತನ್ನ ನಿರ್ಮಿಸುವುದು ಎಂಬ ಘೋಷಾವಾಕ್ಯದೊಂದಿಗೆ ವಿಶ್ವ ಆರೋಗ್ಯ ದಿನವನ್ನು ಆಚರಿಸುತ್ತಿದೆ. ಕಳೆದ ಒಂದು ವರ್ಷದಿಂದ ಕರೋನಾ ನಮ್ಮನ್ನೆಲ್ಲಾ ಕಾಡುತ್ತಿದೆ. ಈ ವೈರಸ್ ಹೋಗಲಾಡಿ ಸುವುದಕ್ಕಿಂತ ಇದೊಂದಿಗೆ ಆರೋಗ್ಯವಾಗಿರಲು ನಾವು ಮಾಡಬೇಕಾದ ಕೆಲಸಗಳೇನು ಎಂಬುದರತ್ತ ಗಮನಕೊಡಬೇಕು.
ವೈದ್ಯಕೀಯ ಸೌಲಭ್ಯದ ಜತೆಗೆ, ಉತ್ತಮ ಆರೋಗ್ಯ ರೂಪಿಸಿಕೊಳ್ಳುವುದು ನಮ್ಮದೇ ಜವಾಬ್ದಾರಿ. ಹೀಗಾಗಿ ಆಸ್ಪತ್ರೆಗೆ ತೆರಳುವು ದಕ್ಕಿಂತ, ಕರೋನಾ ಬಾರದಂತೆಯೇ ತಡೆಯುವುದು ಹೇಗೆ ಎಂಬುದರತ್ತ ನಾವೆಲ್ಲರೂ ಗಮನಹರಿಸಬೇಕು. ಆರೋಗ್ಯವೆಂದಾಕ್ಷಣ ದೈಹಿಕ ಆರೋಗ್ಯವಷ್ಟೇ ಅಲ್ಲ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ದೇಹದ ಉಷ್ಣತೆಯನ್ನು ನಿಯಂತ್ರಿ ಸುವಲ್ಲಿ ಮತ್ತು ಕೀಲುಗಳನ್ನ ನಯಗೊಳಿಸುವಲ್ಲಿ ನೀರಿನ ಸೇವನೆ ಪ್ರಮುಖ ಪಾತ್ರ ವಹಿಸುತ್ತದೆ.
ನಮ್ಮ ದೇಹ ಶೇ.70ರಷ್ಟು ನೀರಿನಿಂದಲೇ ಕೂಡಿರುತ್ತದೆ, ಹೀಗಾಗಿ ನೀರು ಸೇವನೆ ಅತ್ಯವಶ್ಯಕ. ಬೇಸಿಗೆಯಾದ್ದರಿಂದ ದೇಹ ನಿರ್ಜಲೀಕರಣಗೊಳ್ಳುವುದನ್ನು ತಡೆಯಬಹುದು. ಜತೆಗೆ, ನೀರು ಸೇವನೆಯಿಂದ ಬಹುತೇಕ ಕಾಯಿಲೆಗಳಿಂದ ದೂರ ಇರಬಹುದು. ಹೀಗಾಗಿ ನೀರು ಕುಡಿಯುವುದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ, ಪ್ರತಿದಿನ ಕನಿಷ್ಠ 8 ಗ್ಲಾಸ್ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ನೀರು ಕುಡಿಯುವುದನ್ನೇ ಮರೆಯುತ್ತೇನೆಂದರೆ, ನೆನಪಿಸುವುದಕ್ಕಾಗಿಯೇ ಒಂದಷ್ಟು ಮೊಬೈಲ್ ಆಪ್‌ಗಳು, ನೀರು ಕುಡಿಯುವುದನ್ನು ರಿಮೈಂಡ್ ಮಾಡಲೆಂದೇ ವಿನ್ಯಾಸಗೊಳಿಸಲಾಗಿದೆ.
ಅದರ ಪ್ರಯೋಜನ ಪಡೆದುಕೊಳ್ಳಿ. ಕೂರುವ ಭಂಗಿಯೂ ಮುಖ್ಯ. ಕರೋನಾ ಮಹಿಮೆಯಿಂದ ಬಹುತೇಕರು ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಮನೆಯಲ್ಲಿ ಕೆಲಸ ಮಾಡುವುದೆಂದರೆ, ನಮ್ಮಿಚ್ಛೆಯಂತೆ ಕೂತುಕೊಂಡು ಕೆಲಸ ಮಾಡುತ್ತೇವೆ. ಇದರಿಂದ ಬೆನ್ನು ನೋವು ಹೆಚ್ಚು ಬಾಧಿಸುವುದರಲ್ಲಿ ಅನುಮಾನವಿಲ್ಲ. ನಾವು ಹೆಚ್ಚು ಸಮಯ ಹೇಗೆ ಕೂರುತ್ತೇವೆ ಎನ್ನುವುದರಿಂದಲೂ ನಮ್ಮ ಆರೋಗ್ಯ ನಿಂತಿರುತ್ತದೆ. ಹೀಗಾಗಿ ಮನೆಯಲ್ಲಿ ಕೆಲಸ ಮಾಡುವ ಭಂಗಿ ಯಾವಾಗಲೂ ಸರಿಯಾಗಿಯೇ ಇರಬೇಕು, ಇಲ್ಲವಾದಲ್ಲಿ ಹಲವು ರೋಗಗಳಿಗೆ ನಾವೇ ಆಹ್ವಾನ ಕೊಟ್ಟಂತಾಗುತ್ತದೆ.
ನಮ್ಮ ದೇಹಕ್ಕೆ ನಿಯಮಿತ ವ್ಯಾಯಾಮ ಅತ್ಯಂತ ಅವಶ್ಯಕ. ಏಕೆಂದರೆ ನಮ್ಮ ಸುಂದರ ದೇಹ, ಆರೋಗ್ಯವಾಗಿದ್ದರಷ್ಟೇ ನೋಡಲು ಚೆಂದ.ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಸೇವನೆ ಅತಿ ಮುಖ್ಯ. ಆದಷ್ಟು ಜಂಕ್ ಫುಡ್‌ನಿಂದ ದೂರವಿರಿ. ದೈಹಿಕ ಆರೋಗ್ಯಕ್ಕೆ ಸರಿಸಮವಾಗಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕ. ಮಾನಸಿಕ ಆರೋಗ್ಯಕ್ಕೆ ಧ್ಯಾನ ಮದ್ದು. ದಿನದಲ್ಲಿ 10 ನಿಮಿಷಗಳ ಕಾಲ ಧ್ಯಾನ ಮಾಡಿದರೂ ನಿಮ್ಮ ಮನಸ್ಸಿಗೆ ವ್ಯಾಯಾಮವಾಗಲಿದೆ.
ಇಡೀ ದಿನದಲ್ಲಿ ಖುಷಿಯಾಗಿರಲು 10 ನಿಮಿಷ ಮೀಸಲಿಡಬಹುದಲ್ಲವೇ. ಇವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮಾಡಲೇ ಬೇಕಾದ, ಅನುಸರಿಸಲೇ ಬೇಕಾದ ಕೆಲವು ಸಲಹೆ. ಕರೋನಾ ಭಯ ಇಡೀ ಜಗತ್ತನ್ನೇ ಆವರಿಸಿಕೊಂಡಿದೆ. ಕರೋನಾ ಗೆಲ್ಲಲು ನಮ್ಮ ಬಳಿ ಇರುವ ಈ ಅಸ್ತ್ರವನ್ನು ನಾವು ಬಳಸಿ, ಈ ಯುದ್ಧದಲ್ಲಿ ಗೆಲ್ಲೋಣ.