ಅಭಿಮತ
ಗಿರಿಜಾಶಂಕರ್ ಜಿ.ಎಸ್.ಇಡೇಹಳ್ಳಿ
ಕರ್ನಾಟಕದ ಇತಿಹಾಸದಲ್ಲಿ ಸಮಾಜಕ್ಕೆ ಮಠಪರಂಪರೆಗಳ ಕೊಡುಗೆ ಅಪಾರವಾಗಿದೆ. ಜನಜೀವನ ಕಂಗಾಲಾದಾಗ, ಪ್ರಕೃತಿ ಮುನಿದಾಗ, ಇನ್ನೂ ಅನೇಕ ಸಂದರ್ಭಗಳಲ್ಲಿ ನಾಡಿನ ಹಲವಾರು ಮಠಗಳು ಸ್ಪಂದನೆ ನೀಡಿರುವುದನ್ನು ನೋಡಿದ್ದೇವೆ.
ಪ್ರವಾಹ, ಬರ ಹಾಗೂ ಇನ್ನಿತರೆ ಹಲವಾರು ಪ್ರಕೃತಿ ವಿಕೋಪಗಳಾದಾಗ ಮಠಗಳು ಸಾವಿರಾರು ಜನರಿಗೆ ಪ್ರಸಾದ, ಬಟ್ಟೆ, ಆಶ್ರಯ, ಆರೈಕೆಯನ್ನು ನೀಡಿವೆ. ಮತ್ತೆ ಈಗ ಕರೋನಾ ಸಂಕಷ್ಟದಲ್ಲಿ ಮಠಮಾನ್ಯಗಳು ಅಂಥ ನೋವಿಗೆ ಸ್ಪಂದಿಸುವ ತುರ್ತು
ಅಗತ್ಯವಿದೆ. ಕರೋನಾ ಹೆಮ್ಮಾರಿ ಜಗತ್ತನ್ನೇ ಹೈರಾಣಾಗಿಸಿದೆ. ಯಾರೂ ಊಹಿಸಲಾರದ ಕೆಟ್ಟ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇಲ್ಲಿಯವರೆಗೂ ಸರಕಾರಗಳೂ ಸಹ ಆರೋಗ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಲ್ಪವೇ. ನಮ್ಮ ಇಲ್ಲಿಯವರೆಗಿನ ಎಲ್ಲಾ ಸರಕಾರಗಳು ‘ಯುದ್ಧ ಕಾಲದಲ್ಲಿ ಶಸ್ತ್ರಭ್ಯಾಸ’ ಎನ್ನುವಂಥ ಧೋರಣೆಯನ್ನು ಹೊಂದಿವೆ.
ಹೀಗಾಗಿ ‘ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡಾಗ ಬಾವಿ ತೋಡುವ ಪರಿಸ್ಥಿತಿ’ ನಿರ್ಮಾಣವಾಗಿದೆ. ಇಲ್ಲಿಯವರೆಗೂ ನಮ್ಮಲ್ಲಿ ಸಾವಿರಾರು ಜನರಿಗೆ ಏಕಕಾಲಕ್ಕೆ ಚಿಕಿತ್ಸೆ ಕೊಡುವ ಆಸ್ಪತ್ರೆಗಳು ನಮ್ಮಲಿಲ್ಲ. ಕೆಲವೇ ಆಸ್ಪತ್ರೆಗಳು ಇದ್ದರೂ ಅದಕ್ಕೆ ಬೇಕಾದ ಸೌಲಭ್ಯಗಳು ವಿರಳಾತಿವಿರಳ. ಕಟ್ಟಡಗಳಿದ್ದರೆ ಸೂಕ್ತ ರೀತಿಯಲ್ಲಿ ವೈದ್ಯರು, ನರ್ಸ್‌ಗಳು ಇಲ್ಲ. ವೈದ್ಯರು ಇದ್ದರೂ ಬೆಡ್ ಇಲ್ಲ, ಬೆಡ್
ಇದ್ದರೆ ಆಕ್ಸಿಜನ್ ಇಲ್ಲ, ಆಕ್ಸಿಜನ್ ಇದ್ದರೆ ಮತ್ತೇನೋ ಆರೋಗ್ಯಕ್ಕೆ ಸಂಬಂಧಿಸಿದ ಉಪಕರಣಗಳು ಇರುವುದಿಲ್ಲ.
ಹೀಗಾಗಿ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಾಡಿನ ಎಲ್ಲಾ ಮಠ ಮಾನ್ಯಗಳು, ಸಂಘಸಂಸ್ಥೆಗಳು ನೆರವಿಗೆ ಧಾವಿಸಬೇಕಾಗಿದೆ. ಹೀಗಾಗಿ ಮಠಗಳಿಗೆ ಸೇರಿದ ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು, ಶಾಲಾ ಕಾಲೇಜುಗಳು, ವಸತಿ ನಿಲಯಗಳಲ್ಲಿ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಶ್ರಯ ನೀಡುವಂತಾದರೆ ಒಂದಿಷ್ಟು ಸರಕಾರಕ್ಕೆ ಹೊರೆ ಕಡಿಮೆ ಆದೀತು. ಇಂಥ ಕಾರ್ಯಗಳಿಗೆ ಮಠಾಽಶರು ಮುಂದೆ ಬಂದರೆ ದೇಣಿಗೆ ನೀಡುವ ದಾನಿಗಳೂ ಸಹ ಕೈಜೋಡಿಸುವುದರಲ್ಲಿ ಎರಡು ಮಾತಿಲ್ಲ.
ಹೀಗಾಗಿ ಸ್ವಾಮಿಗಳು ಇಂಥ ಕಾಯಕಕ್ಕೆ ನೆರವಾದರೆ ಸೋಂಕಿತರಿಗೂ ಆತ್ಮಬಲ, ಮನೋಬಲ, ಆತ್ಮಸ್ಥೆರ್ಯ ತುಂಬಿದಂತಾ ಗುತ್ತದೆ. ಈಗಾಗಲೇ ನಾಡಿನ ಸಿರಿಗೆರೆಯ ತರಳಬಾಳು ಮಠ, ತುಮಕೂರಿನ ಸಿದ್ಧಗಂಗಾ ಮಠ, ಕೊಪ್ಪಳದ ಗವಿಮಠ, ಆದಿಚುಂಚನ ಗಿರಿ ಮಠ ಸೇರಿದಂತೆ ಕೆಲವು ಮಠಗಳು ವೈದ್ಯ ದಾಸೋಹಕ್ಕೆ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ. ಹಾಗೆಯೇ ನಾಡಿನ ಎಲ್ಲಾ ಮಠಗಳು ಹಬ್ಬ, ಜಾತ್ರೆ, ಉತ್ಸವ, ಪ್ರವಚನ, ಮೀಸಲಾತಿ ಹೋರಾಟ! ಹಾಗೂ ಇನ್ನಿತರ ಕಾರ್ಯಗಳಿಗೆ ಸೀಮಿತವಾಗದೇ ಇಂಥ ಸಾರ್ಥಕ ಕಾರ್ಯಗಳಿಗೆ ತೊಡಗಿಸಿಕೊಳ್ಳುವುದು ತೀರಾ ಅಗತ್ಯವಿದೆ.