Saturday, 14th December 2024

ಸೋಷಿಯಲ್ ಮೀಡಿಯಾಗಳಲ್ಲಿ ಪ್ರೀತಿ ಪ್ರೇಮದ ದುರ್ಬಳಕೆ

ಅಭಿಮತ

ಶ್ವೇತಾ ಪ್ರಸನ್ನ ಹೆಗಡೆ

ಪ್ರೀತಿ ಪ್ರೇಮ ಎರಡಕ್ಷರಗಳಿಗೆ ಪದಗಳಿಗೂ – ಭಾವಗಳಿಗೂ ನಿಲುಕದ ನಿಗೂಢ ಅರ್ಥವಿದೆ. ಮನಸ್ಸು – ಮನಸ್ಸುಗಳ ಸಮ್ಮಿಲನ ವಾಗಿದೆ. ಹುಟ್ಟಿದಾಗಿನಿಂದ ಸಾಯುವ ತನಕ ವಯಸ್ಸಿನ ನಿರ್ಬಂಧವಿಲ್ಲದೆ ಜೀವ – ಜೀವಗಳನ್ನು ಬೆಸೆಯುವ ಜೀವಾಮೃತವೂ ಹೌದು.

ಪ್ರೀತಿ – ಪ್ರೇಮ ಇದರ ನೈಜ ಅರ್ಥ ಸೋಷಿಯಲ್ ಮೀಡಿಯಾಗಳ ಮೂಲಕ ನೈತಿಕವಾಗಿ ಕುಸಿಯುತ್ತಿದೆ. ಕ್ಷಣಮಾತ್ರದಲ್ಲಿ ಕೈ ಗೆಟಕುವ ಸೋಷಿಯಲ್ ಮೀಡಿಯಾಗಳಲ್ಲಿ ಜಗತ್ತನ್ನೇ ಅಂಗೈಯಲ್ಲಿ ನೋಡುವ ಯುವಜನತೆಗೆ ಪ್ರೀತಿ – ಪ್ರೇಮ ದೋಖಾ  ಚನೆ ಎಲ್ಲವೂ ಕಾಮನ್ ಆಗಿದೆ. ಮನುಷ್ಯ ಸಂಘಜೀವಿ. ಎಲ್ಲರ ಜೊತೆಗೆ ಸಂವಹನವೆಂದರೆ ಇಷ್ಟ. ಲಕ್ಷ ಲಕ್ಷ ಮೈಲಿ ದೂರದಲ್ಲಿದ್ದವ ರನ್ನು ಕ್ಷಣ ಮಾತ್ರದಲ್ಲಿ ದೊರಕಿಸಿಕೊಡಬಲ್ಲ ಅದ್ಭುತ ಸಾಧ್ಯತೆ ಸೋಷಿಯಲ್ ಮೀಡಿಯಾಗಳಿಗಿದೆ.

ಯುವಜನತೆ ಇದಕ್ಕೆ ಮರುಳಾಗಿದ್ದಾರೆ. ಭ್ರಮಿಕರಾಗಿದ್ದಾರೆ.ದಿನದ ಬಹುಪಾಲು ಸಮಯವನ್ನು ಇತರರೊಂದಿಗೆ ಅನಗತ್ಯ ಸಂವಹನ ಮಾಡುವುದರಲ್ಲಿ ಸಮಯ ಕಳೆಯುವವರ ಸಂಖ್ಯೆ ಜಾಸ್ತಿಯಾಗಿದೆ. ದೀಪದ ಕೆಳಗೆ ಕತ್ತಲು ಎನ್ನುವಂತೆ ಸೋಷಿಯಲ್ ಮೀಡಿಯಾ ಹಲವರ ಪಾಲಿಗೆ ಶಾಪ. ಮುಖ ಪರಿಚಯವಿಲ್ಲದ ಜನರ ಜೊತೆ ಅವರ ಪ್ರೊಫೈಲ್ ನೋಡಿ, ಭಾವಚಿತ್ರ ನೋಡಿ ಮರುಳಾಗಿ, ಭ್ರಮೆಗೆ ಒಳಗಾಗಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಸಂವಹನ ಮಾಡುತ್ತಾ ಆಕರ್ಷಣೆಗೆ ಒಳಗಾಗುತ್ತಾರೆ. ನಂತರ ಮುಂದು ವರಿದ ಭಾಗವಾಗಿ ಸಂವಹನದ ನಂತರ ಪ್ರೀತಿಯ ಹೆಸರಿನಲ್ಲಿ ದೈಹಿಕವಾಗಿ ದುರ್ಬಳಕೆ ನಂತರ ದೋಖಾ, ಮೋಸ, ಹಣದ ವಂಚನೆ ಎಲ್ಲವೂ ನಡೆಯುತ್ತಿದೆ.

ಇಲ್ಲಿ ಮೋಸಕ್ಕೆ ಒಳಗಾಗುವುದು ಗಂಡು ಮತ್ತು ಹೆಣ್ಣು ಇಬ್ಬರೂ ಇರಬಹುದು. ಯಾರದ್ದು ಫೋಟೋ ಮತ್ತು ವಿಡಿಯೋಗಳನ್ನು
ಅಪ್ಲೋಡ್ ಮಾಡಿ, ಚಾಟಿಂಗ್ ಮಾಡಿ, ಹಣ ಮಾಡುವ ವ್ಯವಹಾರವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಆ ಪೋಸ್ಟ್‌ಗಳಿಗೆ ಹೆಚ್ಚು ಪ್ರತಿಕ್ರಿಯೆ ನೀಡುವವರನ್ನು ಸಂಪರ್ಕಿಸಿ ಬಣ್ಣಬಣ್ಣದ ಮಾತುಗಳಿಂದ ಮಾತನಾಡಿಸಿ ಮೋಸ ಮಾಡುವ ತರಹೇವಾರಿ ವಿಧಾನದ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಇನ್ನೂ ಹೆಚ್ಚಾಗಿ ವಿಧವೆಯರು, ಒಂಟಿಯಾಗಿರುವ ಮಹಿಳೆಯರು, ಸೂಕ್ಷ್ಮಮನಸ್ಸಿನ ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಜಾಲಾಡಿ ಅವರನ್ನು ಸಂಪರ್ಕಿಸಿ ಅವರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಿ, ಅದಕ್ಕೆ ತಕ್ಕಂತೆ ಅವರನ್ನ ಮರಳು ಮಾಡಿ ಭಾವನಾತ್ಮಕವಾಗಿ ದೈಹಿಕವಾಗಿ ಹಣಕಾಸಿನ ಮೋಸಕ್ಕೂ ಸೋಷಿಯಲ್ ಮೀಡಿಯಾಗಳ ಪ್ರಕರಣಗಳು ದಿನೇ ದಿನೇ ಜಾಸ್ತಿಯಾಗುತ್ತಿದೆ.

ಇದಕ್ಕೆ ಸಾಕ್ಷಿ ಎನ್ನುವಂತೆ ನಾವು ದಿನನಿತ್ಯ ನ್ಯೂಸ್ ಪೇಪರ್‌ಗಳಲ್ಲಿ ಮತ್ತು ವಾರ್ತೆಗಳಲ್ಲಿ ನೋಡುತ್ತಿರುತ್ತೇವೆ. ಮ್ಯಾಟ್ರಿಮೋನಿ ಅಥವಾ ಫೇಸ್ಬುಕ್ ಸ್ನೇಹಿತ ಸ್ನೇಹಿತೆ, ಇನ್ಸ್ಟಾಗ್ರಾಂ ಎಲ್ಲರಿಂದ ಮೋಸ ಹೋಗುತ್ತಿರುವುದು ಕಿರುಕುಳ ಅನುಭವಿಸುತ್ತಿರುವ ಅದೆಷ್ಟೋ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿ ಹೈಲಿಸ್ಟ್ ಆಗಿದೆ.ಅದರಲ್ಲೂ ಸೋಷಿಯಲ್ ಮೀಡಿಯಾಗಳ ಪ್ರಭಾವ ಯುವಜನಾಂಗದಲ್ಲಿ, ಹುಡುಗಿಯರದ್ದೇ ಪಾಲು ಜಾಸ್ತಿ ಎನ್ನುತ್ತಿವೆ ಸಂಶೋಧನೆಗಳು. ಐದು ತಾಸಿಗಿಂತಲೂ ಜಾಸ್ತಿ ಸಮಯ ಹುಡುಗಿಯರು ಸೋಷಿಯಲ್ ಮೀಡಿಯಾಗಳಲ್ಲಿ ಕಾಲ ಕಳೆಯುತ್ತಿರುವ ನಕಾರಾತ್ಮಕ ಸಂಗತಿಗಳು ಆತಂಕಕಾರಿ.

ಒಂಟಿತನ, ಅತೃಪ್ತಿ ಮತ್ತು ಪ್ರಭಾವಿ ವ್ಯಕ್ತಿಗಳ ಬಲೆಗೆ ಬೀಳುವುದು, ಬೆದರಿಕೆ ಮೋಸಕ್ಕೆ ಒಳಗಾಗುವುಸದು ಹುಡುಗಿಯರಲ್ಲಿ ಹೆಚ್ಚಾಗಿ ಕಾಣುತ್ತಿದೆ. ಡೈವರ್ಸ್ ಕೇಸ್‌ಗಳು ಹೆಚ್ಚಾಗಲು ಗಂಡ – ಹೆಂಡತಿಯ ನಡುವೆ ಮನಸ್ತಾಪ ಹೆಚ್ಚಾಗಲು ಸೋಷಿಯಲ್
ಮೀಡಿಯಾಗಳು ಒಂದು ರೀತಿಯಲ್ಲಿ ಕಾರಣ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ವ್ಯತಿರಿಕ್ತ ಪರಿಣಾಮಗಳಲ್ಲಿ ಗಾಸಿಪ್ಪುಗಳ ಸುಖಾಸುಮ್ಮನೆ ಸೃಷ್ಟಿಸುವುದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದು, ಇನ್ನೊಬ್ಬರ ಮನೋಸ್ಥಿತಿ ಕುಸಿಯುವಂತೆ ಮಾಡುವುದು, ರಾಜಕೀಯ ಕೆಸರಾಟಗಳು ಎಲ್ಲದಕ್ಕೂ ಸೋಷಿಯಲ್ ಮೀಡಿಯಾಗಳು ಕಾರಣವಾಗಿದೆ.

ಹಾಗಾದರೆ ಈ ಸೋಷಿಯಲ್ ಮೀಡಿಯಾಗಳ ವಂಚನೆಗಳಿಂದ ಪಾರಾಗುವುದು ಹೇಗೆ? ನಾವೇ ಸ್ವಯಂ ಮುಂದಾಗಬೇಕು. ಸಕಾರಾತ್ಮಕ ರೀತಿಯಲ್ಲಿ ಬಳಸುವುದನ್ನು ಕಲಿತರೆ ಮೋಸದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಬಹಳ ಕಡಿಮೆ. ಎಲ್ಲದರಲ್ಲೂ ಒಳ್ಳೆಯದು ಕೆಟ್ಟದ್ದು ಎರಡೂ ಇರುವುದು. ಹಿತಮಿತವಾಗಿ ಬಳಸುವುದರಿಂದ ಸೋಷಿಯಲ್ ಮೀಡಿಯಾಗಳ ಪ್ರಯೋಜನ ತೆಗೆದುಕೊಳ್ಳಬಹುದು.ಸೋಷಿಯಲ್ ಮೀಡಿಯಾಗಳನ್ನು ಬಳಸುವ ಮುನ್ನವೇ ನಮಗೆ ಒಂದು ಚೌಕಟ್ಟನ್ನು ಹಾಕಿಕೊಳ್ಳಬೇಕು.