Sunday, 15th December 2024

ಮಾತು, ಬರಹ, ಚಿಂತನೆಯಲ್ಲಿ ಹೊಸತನ

ಅಭಿಮತ

ಸುಜಯ ಆರ್‌.ಕೊಣ್ಣೂರ್‌

ಇದು ನನ್ನದೇ ದಿನ ಎಂದು ಹಸನ್ಮುಖಳಾಗಿ ದಿನದ ಶುಭಾರಂಭ ಮಾಡಿಕೊಳ್ಳುವ ನನ್ನ ದಿನಚರಿಯಲ್ಲಿ ಎಷ್ಟೋ ಹೊಸ ಸೇರ್ಪಡೆಗಳಿಗೆ ಕಾರಣರಾದವರು ನನ್ನ ನೆಚ್ಚಿನ ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ಟರು.

ಒಬ್ಬ ವ್ಯಕ್ತಿ ತನ್ನ ಜೀವನ, ಕನಸು ಎಲ್ಲವನ್ನೂ ಸಮರ್ಥವಾಗಿ ಕಟ್ಟಿಕೊಳ್ಳಬೇಕೆಂದರೆ ಅವನಿಗೆ ಎಷ್ಟೇ ಕಷ್ಟವಾದರೂ ಅದೇ ಜಾಡನ್ನು ಹಿಡಿದು ಸಾಧಿಸುವ ಛಲ ಇರಬೇಕು. ಆಗ ಆ ಪರಿಶ್ರಮಕ್ಕೆ ಫಲ ಸಿಗುತ್ತದೆ. ಜೀವನದ ಪ್ರತೀ ಹಂತವನ್ನೂ ಅನುಭವಿಸ ಬೇಕು. ಪ್ರತೀಕ್ಷಣವೂ ನನ್ನದು, ಅದರಲ್ಲಿ ಕೆಟ್ಟದಿನ, ಬೇಸರ, ಸುಸ್ತು ಇವುಗಳಿಗೆ ಅವಕಾಶವಿಲ್ಲದಂತೆ ಆ ದಿನವನ್ನು ಸಂಪೂರ್ಣ ನಮ್ಮದಾಗಿಸಿಕೊಳ್ಳಬೇಕು.

ಇದಕ್ಕೆ ಮಾದರಿಯಾಗಿ ನನ್ನ ಕಣ್ಮುಂದೆ ನಿಲ್ಲುವ ವ್ಯಕ್ತಿ ವಿಶ್ವೇಶ್ವರ ಭಟ್. ಅವರು ಪತ್ರಿಕೋದ್ಯಮದಲ್ಲಿ ತಮ್ಮನ್ನು ಗುರುತರವಾಗಿ
ಗುರುತಿಸಿಕೊಂಡವರು. ಅವರ ಮಾತುಗಳಲ್ಲಿ, ಬರವಣಿಗೆಯಲ್ಲಿ ಎಂದೂ ಹೊಸತನವೇ. ಹಾಸ್ಯಪ್ರಜ್ಞೆ, ಅಕ್ಷರಗಳೊಂದಿಗೆ ಆಟ ವಾಡುವ ಆ ಜಾಣತನ, ಬುದ್ಧಿವಂತಿಕೆ ಎಲ್ಲವೂ ಮಿಳಿತವಾಗಿರುತ್ತವೆ. ಅವರ ಬಾಲ್ಯದ ದಿನಗಳಲ್ಲಿ ಅವರ ಅಜ್ಜನ ಮನೆ ಯಲ್ಲಿ, ಅಜ್ಜನಿಗಾಗಿ ಪತ್ರಿಕೆ ಓದುವ ಅಭ್ಯಾಸ, ಹವ್ಯಾಸವಾಗಿ, ಅದೇ ಜೀವನದ ಅಕ್ಷರ ದಾಹವನ್ನು ಹೆಚ್ಚಿಸಿದ್ದನ್ನು ಕೇಳಿದಾಗ, ಮನುಷ್ಯ ಒಂದು ನಿಶ್ಚಿತ ಗುರಿಯನ್ನು ಮೊದಲೇ ಗುರುತಿಸಿಕೊಂಡರೆ, ಆ ಜಾಡು ಹಿಡಿದು ದಾರಿ ತುಳಿಯಲು ಅನುಕೂಲ ವಾಗುವುದು.

ಅವರ ಸಮಯ ಪ್ರಜ್ಞೆ, ಸಮಯಕ್ಕೆ ಅವರು ಕೊಡುವ ಮಹತ್ವ, ಸಮಯವನ್ನು ಹೊಂದಿಸಿಕೊಳ್ಳುವ ಚಾಕಚಕ್ಯತೆ ಒಮ್ಮೊಮ್ಮೆ ನಮ್ಮನ್ನು ಬೆರಗುಗೊಳಿಸುತ್ತದೆ. ಹೊಸ ತಂತ್ರಜ್ಞಾನಕ್ಕೆ ತಮ್ಮನ್ನು ಅಳವಡಿಸಿಕೊಂಡು, ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಿ ಕೊಂಡು ಹೋಗುವ ರೀತಿ, ಹೊಸ ಕಾಲಮಾನದವರಿಗೂ ಅಚ್ಚರಿ ಎನಿಸುತ್ತದೆ. ಮನುಷ್ಯನಿಗೆ ಶಿಸ್ತುಬದ್ಧ ಜೀವನ ಶೈಲಿಯಿಂದ ಎಷ್ಟೊಂದು ಅನುಕೂಲವಾಗುತ್ತದೆ ಎಂಬುದನ್ನು ಅವರ ಮಾತುಗಳ ಕೇಳಬೇಕು. ಹಾಗೆಯೇ ಒಳ್ಳೆಯ ವಾಗ್ಮಿ ಕೂಡ. ಅವರು ಸಭೆಗಳಲ್ಲಿ ಮಾತನಾಡುವಾಗ, ಅವರ ಮಾತಿನ ಶೈಲಿಯಲ್ಲಿ ನಮ್ಮನ್ನು ಒಂದು ಚಂದದ ಕಲ್ಪನಾ ಲೋಕಕ್ಕೆ ಕೊಂಡೊಯ್ಯು ತ್ತಾರೆ.

ವೈ.ಎನ್.ಕೆ ಅವರನ್ನು ಎಷ್ಟೋ ವಿಷಯಗಳಿಗೆ ಮಾದರಿಯಾಗಿಟ್ಟುಕೊಂಡ ಅವರ ಒಂದು ಸಾಲಿನ ವಕ್ರತುಂಡೋಕ್ತಿ, ಕಚಗುಳಿ
ಇಡುವ ಭಟ್ಟರ್ ಸ್ಕಾಚ್, ಜೀವನದ ದಾರಿಗೆ ದೀವಿಗೆಯಂತಿರುವ ದಾರಿದೀಪೋಕ್ತಿ ಮುಂತಾದವು ಪತ್ರಿಕೆಯ ಸೊಬಗನ್ನು ಹೆಚ್ಚಿಸು ತ್ತವೆ. ಇತ್ತೀಚಿನ ಪತ್ರಕರ್ತರ ಸದ್ಯ ಶೋಧನೆಗಳಲ್ಲಿ ಅವರು ಪತ್ರಕರ್ತರ, ಬರಹಗಾರರ ಮತ್ತು ಇನ್ನಿತರ ವಿಷಯಗಳನ್ನು ಪರಿ ಚಯಿಸುತ್ತಿದ್ದಾರೆ. ಅದೂ ಕೂಡ ತಪ್ಪದೇ ಓದಬೇಕಾದ ಚಿಕ್ಕ ಚೊಕ್ಕ ಅಂಕಣ. ಈಗಿನ ಇ-ಯುಗದಲ್ಲಿ ಪ್ರಪಂಚವೇ ಮುಷ್ಟಿ ಯಲ್ಲಿ. ಯಾವ ವಿಷಯದ ಬಗ್ಗೆ ಬೇಕಾದರೂ ಕ್ಷಣಾರ್ಧದಲ್ಲಿ ತಿಳಿದುಕೊಳ್ಳಬಹುದು. ಈ ಕಾಲಮಾನದಲ್ಲಿ ಪತ್ರಿಕೆಬಯನ್ನು ನಡೆಸುವುದು ಸುಲಭದ ಮಾತಲ್ಲ. ಹೊಸತನಬಇಲ್ಲದಿದ್ದರೆ ಪತ್ರಿಕೆಯನ್ನು ಓದುಗ ತಿರಸ್ಕರಿಸುತ್ತಾನೆ. ಹೊಸ ಹೊಸ ಬರಹಗಾರ ರನ್ನು ಪರಿಚಯಿಸುತ್ತಾ, ಎಲ್ಲರಿಗೂ ಬರೆಯುವ ಹವ್ಯಾಸವನ್ನು ಹುರಿದುಂಬಿಸುತ್ತಾರೆ. ಹೊಸಯುಗದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕದಿದ್ದಲ್ಲಿ ನಾವು ಹಳಬರಾಗಿ ಬಿಡುತ್ತೇವೆ. ಆ ಓಘಕ್ಕೆ ನಾವು ಓ ಗೊಡಲೇ ಬೇಕು.

ಪ್ರಪಂಚ ಪರ್ಯಟನೆ ಜತೆ ಜತೆಗೆ, ಅದರ ಸೊಬಗನ್ನು ತಮ್ಮ ಕಣ್ಣಿನ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಅದನ್ನು ಓದುಗರಿಗೆ ಉಣ ಬಡಿಸುತ್ತಾರೆ. ಪುಸ್ತಕಗಳ ಭಂಡಾರವನ್ನು ಹಿಂದಿಟ್ಟುಕೊಂಡು, ಅಕ್ಷರಗಳ ಧಾರೆಯನ್ನು ಹರಿಸುತ್ತಾರೆ. ಅವರ ಇಂದಿನ ಸಪ್ನಾ ಬುಕ್ ಹೌಸ್‌ನ ದೊಡ್ಡೇಗೌಡರ ಜೊತೆಗಿನ ಸಂವಾದ ಕೇಳ್ತಾ ಕೇಳ್ತಾ ಅವರ ಬಗ್ಗೆ ನನ್ನ ಮನಸ್ಸಿನಲ್ಲಿದ್ದ ಚಿತ್ರಣ ಇನ್ನೂ ಬೃಹದಾ ಕಾರವಾಗಿ ಬೆಳೆದು ನಿಂತಿತು. ವಿಶ್ವಾಸವೇ ವಿಶ್ವ ಇದು ಅವರ ಧ್ಯೇಯವಾಕ್ಯ. ನಿಂದನೆ, ಅಪಹಾಸ್ಯ, ಟೀಕೆಗಳೆಲ್ಲವನ್ನೂ ಸಮಾನ ಮನಸ್ಕರಾಗಿ ಸ್ವೀಕರಿಸಿ, ಅಕ್ಷರಗಳ ಅಕ್ಕರೆಯನ್ನು ನಿರಂತರವಾಗಿ ಬೆಳೆಸಿಕೊಂಡು ಹೋಗುತ್ತಿರುವ, ಕನ್ನಡದ ಹೆಮ್ಮೆಯ ಪುತ್ರ. ಮುzದ ಅಕ್ಷರ ಮಾಲೆಯನ್ನು ಪೋಣಿಸಿ ಬರೆವ ಅವರ ಕೈ ಬರಹ ಕೂಡಾ ಅಷ್ಟೇ ಆಕರ್ಷಕ.

ಜೀವನದ ಸಂಘರ್ಷಗಳು, ಅನುಭವಗಳನ್ನು ಮೆಟ್ಟಿಲಾಗಿಸಿಕೊಂಡು, ಮೇಲೆ ಹತ್ತಿ, ಆ ಅಮೃತದ ಹನಿಗಳನ್ನು ಶಾಯಿಯಾಗಿಸಿ ಕೊಂಡು, ತಮ್ಮ ಬರವಣಿಗೆಯಿಂದ ನಮಗೆ ರಸಾಮೃತ ಉಣಿಸುತ್ತಿರುವ ಪತ್ರಕರ್ತ ವಿಶ್ವೇಶ್ವರ ಭಟ್ಟರ ಕೀರ್ತಿ ವಿಶ್ವಕ್ಕೆ ಹರಡಲಿ ಎಂಬ ಆಶಯದೊಂದಿಗೆ… ನಿಮ್ಮ ಪ್ರೀತಿಯ ಓದುಗಳು.