ಅನಿಸಿಕೆ
ಮಹಾಂತೇಶ ಮಾಗನೂರ
ಬೆಂಗಳೂರು ಇನ್ನೂ ಕರೋನಾ ಭಯದಿಂದ ಮುಕ್ತಿ ಹೊಂದಿಲ್ಲ. ದಿನಕ್ಕೆ ಸಾವಿರಾರು ಪಾಸಿಟಿವ್ ಪ್ರಕರಣಗಳು. ಇನ್ನೂ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಇಲ್ಲಿ ಬದುಕುಳಿದಿದೆ ಎಂತಲೇ ಹೇಳಬಹುದು.
ಕಳೆದ ಒಂದೆರಡು ವಾರ ಉತ್ತರ ಕರ್ನಾಟಕದ ಕೆಲವು ನಗರ, ಪಟ್ಟಣಗಳಲ್ಲಿನ ಜನಸಂದಣಿ ನೋಡಿ ಮೊದಲ ನೋಟಕ್ಕೆ ಗಾಭರಿಯಾದದ್ದು ನಿಜ. ಯಾರ ಮೊಗದಲ್ಲೂ ಮಾಸ್ಕ್ ಇಲ್ಲ, ಮುಖದ ತುಂಬೆ ಹಬ್ಬದ ಸಂತಸ. ಕರೋನಾ ಇಲ್ಲಿ ಬಂದೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಸ್ಥಿತಿ. ನಿಜಕ್ಕೂ ಇದು ಒಳ್ಳೆಯ ವಿಚಾರವಾದರೂ, ಜಾಗ್ರತೆ ಬಹುಮುಖ್ಯ.
ಬೇರೆ ದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಸಾಂಕ್ರಾಮಿಕ ರೋಗ ಎರಡನೇ ಬಾರಿ ಬಂದು ಅಪ್ಪಳಿ ಸುತ್ತಿದೆ. ಅತೀವ ಭಯಪಡುವ ವಿಷಯವಲ್ಲವೆನಿಸಿದರೂ, ನಿರ್ಲಕ್ಷಿಸುವುದು ತಪ್ಪು. ಕಾರ್ಯನಿಮಿತ್ತ ಅಂಗಡಿ ಮುಂಗಟ್ಟುಗಳಿಗೆ, ಬ್ಯಾಂಕುಗಳಿಗೆ ಭೇಟಿಕೊಟ್ಟಾಗ ನೋಡಿದ್ದು ಆರೋಗ್ಯದ ಬಗ್ಗೆ ಜನರ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು.
ನಾನು ಮುಖಕ್ಕೆ ಮಾಸ್ಕ್ ಧರಿಸಿ ಓಡಾಡು ವುದನ್ನು ಜನ ವಿಚಿತ್ರ ದೃಷ್ಟಿಯಿಂದ ನೋಡಿ ಮುಜುಗರ ಮಾಡಿದ್ದು ಉಂಟು. ಕೆಲವೆಡೆ ಇನ್ನೂ ಒಳಗೆ ಪ್ರವೇಶಿಸಲು ಮಾಸ್ಕ್ ಕಡ್ಡಾಯ ಎಂಬ ಫಲಕಗಳು ನೇತಾಡುತ್ತಿರುವುದು ಸಂತಸದ ವಿಷಯವಾದರೂ, ಕಾರ್ಯ ರೂಪಕ್ಕೆ ತರುವಲ್ಲಿ ಜನಸಾಮಾನ್ಯರ ನಿಷ್ಕಾಳಜಿಯ ಬಗ್ಗೆ ಬೇಸರ ಮೂಡುತ್ತದೆ. ಮೊದಲೇ ಮಾಸ್ಕ್ ಇಲ್ಲ, ಜತೆಗೆ ಗಾಯದ ಮೇಲೆ ಬರೆಯಂತೆ, ಒಬ್ಬರ ಮೇಲೆ ಒಬ್ಬರು ಬೀಳುವಂತೆ ನಿಂತು ವ್ಯವಹಾರ ನಡೆಸುವ ಜನರಿಗೆ ತಿಳಿವಳಿಕೆಯ ಅಗತ್ಯ ತುಂಬಾ ಇದೆ.
ನಾನು ಹೋದ ಕಡೆ ಎಲ್ಲೂ ಸ್ಯಾನಿಟೈಸರ್ ಬಳಕೆ ಇಲ್ಲವೇ ಇಲ್ಲ. ಇದು ಎಲ್ಲವೂ ಸರಿ ಇಲ್ಲ ಎಂಬ ನಕಾರಾತ್ಮಕ ಧೂರಣೆ ಅಲ್ಲ,
ಮಿಗಿಲಾಗಿ ಜನರಲ್ಲಿ ಆರೋಗ್ಯದ ಬಗ್ಗೆ ತಿಳಿವಳಿಕೆ ಮೂಡಿಸುವ ಪ್ರಯತ್ನವಾಗಬೇಕು.ಇನ್ನು ಬೀದಿ ಬದಿಯ ವ್ಯಾಪಾರ ಯಥಾ ಸ್ಥಿತಿಗೆ ಮರಳಿದ್ದು, ಅಲ್ಲಲ್ಲಿ ಬಜ್ಜಿ, ಬೋಂಡ, ತಿಂಡಿಗಳ ವ್ಯಾಪಾರ ಎಂದಿನಂತೆ ಭರದಿಂದ ನಡೆಯುತ್ತಿದೆ.
ತಯಾರಿಸಿ ಇಟ್ಟಿದ್ದ ಭಜ್ಜಿಗಳನ್ನು ಬಿಸಿಯಾಗಿವೆಯೆ ಎಂದು ಮುಟ್ಟಿ ಮುಟ್ಟಿ ನೋಡಿ ಖರೀದಿ ಮಾಡುವ ಜನರಿಗೆ ಯಾವ ರೀತಿ ಯಲ್ಲಿ ಆರೋಗ್ಯದ ಪಾಠ ಹೇಳಬೇಕು ಎಂಬುದೇ ದೊಡ್ಡ ಪ್ರಶ್ನೆ. ಹಳ್ಳಿ ಮತ್ತು ಪಟ್ಟಣಗಳಲ್ಲಿ ಜನ ಒಳ್ಳೆಯ ಪರಿಸರದಲ್ಲಿ ಬೆಳೆದು ಸದೃಢ ಮತ್ತು ಆರೋಗ್ಯಕರ ಜೀವನವಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ವಲ್ಪ ಜಾಗರೂಕತೆ ಮತ್ತು ನಿಯಮಗಳ ಪಾಲನೆ ಅತ್ಯಗತ್ಯ.