Thursday, 12th December 2024

ಸಂಘಟನೆಯಲ್ಲಿ ವ್ಯಕ್ತಿಪೂಜೆ ಪೂರಕವಲ್ಲ

ಅನಿಸಿಕೆ

ಮಂಜುನಾಥ್ ಸು.ಮ

ಭಾಜಪದಲ್ಲಿ ಮೋದಿಯ ನಂತರ ಯಾರು? ಕಾಂಗ್ರೆಸ್‌ನಲ್ಲಿ ಸೋನಿಯಾ, ರಾಹುಲ್ ನಂತರ ಯಾರು?. ಯಾವುದೇ ರಾಜಕೀಯ ಪಕ್ಷ, ಧಾರ್ಮಿಕ ಸಂಘಟನೆ, ಸಾಮಾಜಿಕ ಸಂಘಟನೆ, ಕೆಲವೊಂದು ರಾಜವಂಶಗಳ ಆಡಳಿತ, ಮುಂತಾದ ಕಡೆಗಳಲ್ಲಿ ಈ ಅಂಶ ವನ್ನು ಮುನ್ನೆಲೆಗೆ ತಾರದಿರುವ ಕಾರಣ ಕಾಲದೊಂದಿಗೆ ಆ ಸಂಘಟನೆಗಳೂ ಕಳೆದುಹೋಗುತ್ತವೆ ಎಂಬುದು ಸತ್ಯವಾದ ಮಾತು.

ಏಕೆಂದರೆ ಆಯಾ ಸಂಘಟನೆಗಳಲ್ಲಿ ಉನ್ನತಿಯನ್ನು ಸಾಧಿಸಿದ ಒಬ್ಬ ವ್ಯಕ್ತಿಯನ್ನು ಪೂಜಿಸುತ್ತಾ ಸಾಗುತ್ತಾರೆ. ಆ ಕಾರಣದಿಂದಲೇ ನನ್ನ ಸ್ನೇಹಿತರ ಪ್ರಶ್ನೆ ಗಂಭೀರವೇ ಆಗಿತ್ತು. ಈ ನಿಟ್ಟಿನಲ್ಲಿ ವಟವೃಕ್ಷದಂತೆ ಬೆಳೆದು ತನ್ನ ವಿಶಾಲತೆಯನ್ನು ಹೆಚ್ಚಿಸಿಕೊಳ್ಳು ತ್ತಿರುವ ಆರ್‌ಎಸ್‌ಎಸ್ ಸಂಘಟನೆಯ ನಿಲುವು ಏನಿದ್ದಿರಬಹುದು? ನನ್ನ ಸ್ನೇಹಿತರು ಎಸೆದ ಇದೇ ಪ್ರಶ್ನೆ ಆರ್‌ಎಸ್‌ಎಸ್ ಸಂಸ್ಥಾಪಕರಾದ ಡಾಕ್ಟರ್ ಜೀ ನಿಧನದ ನಂತರ ಉದ್ಭವವಾಗಿತ್ತು.

ಸಂಘದ ಹಿತೈಷಿಗಳಾದ ಸಂಜೀವ್ ಕಾಮತ್ ಅವರು ಆರ್‌ಎಸ್‌ಎಸ್‌ನಲ್ಲಿ ನಾಯಕತ್ವದ ಅಭಾವದಿಂದ ಸಂಘದ ಭವಿಷ್ಯವು ಕತ್ತಲೆಮಯವಾಗುತ್ತದೆ ಎಂದಿದ್ದರು. ಇದೇ ಯೋಚನೆಯನ್ನು ವಿರೋಧಿಗಳೂ ಮಾಡಿದ್ದಿರಬಹುದು. ಆದರೆ, ನಾವಿಂದು ಕಾಣು ತ್ತಿರುವುದಾದರೂ ಏನು? ತೊಂಬತ್ತೈದು ವರ್ಷಗಳ ನಂತರವೂ ನಂದಾದೀಪದಂತೆ ಪ್ರಜ್ವಲಿಸಿ ಇತರೆ ದೀಪಗಳನ್ನು ಬೆಳಗಿಸಿ ಭಾರತೀಯ ಸಮಾಜವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯವಲ್ಲಿ ಮತ್ತು ಸಮಾಜದ ಅಂತಃಸತ್ವವನ್ನು ಹೆಚ್ಚಿಸಿ ಆತ್ಮಗೌರವ ವನ್ನು ವೃದ್ಧಿಸುತ್ತಿರುವ ಸಂಘವನ್ನು!

ಆರಂಭ ಶೂರತ್ವ ಮೆರೆದು ಕಣ್ಮರೆಯಾದ ಅದೆಷ್ಟೋ ಸಂಘಟನೆಗಳ ನಡುವೆ ವಿರಾಜಮಾನವಾಗಿ ಬೆಳಗುತ್ತಿದೆ ಸಂಘ. ಪ್ರಪಂಚದ ಅತಿ ದೊಡ್ಡ ಸಾಮಾಜಿಕ ಸಂಘಟನೆ ಎಂಬ ಹೆಗ್ಗಳಿಕೆ ಸಂಘದ್ದಾಗಿದೆ. ಇದಕ್ಕೆಲ್ಲಾ ಕಾರಣವೇನು ಎಂದು ವಿಶ್ಲೇಷಿಸಿದರೆ ಸಿಗುವ ಉತ್ತರ ತುಂಬಾ ಸರಳವಾದದ್ದು. ವ್ಯಕ್ತಿಗಿಂತ ಸಿದ್ಧಾಂತಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಇದಕ್ಕೆ ಕಾರಣವಾಗಿದೆ.

ಡಾಕ್ಟರ್ ಜೀ ಅವರು ‘ವ್ಯಕ್ತಿಪೂಜೆ ರಹಿತ ಸಮಾಜ ನಿರ್ಮಾಣ’ದ ಕನಸು ಕಂಡಿದ್ದರು. ‘ಒಂದು ಸಮಾಜ ದುರ್ಬಲವಾಗಲು ವ್ಯಕ್ತಿಪೂಜೆಯೇ ಕಾರಣ’ ಎಂಬುದು ಅವರ ಬಲವಾದ ನಂಬಿಕೆ. ‘ವ್ಯಕ್ತಿವಾದದ ಹೆಚ್ಚಳದಿಂದ ರಾಷ್ಟ್ರವಾದ ಕಡಿಮೆಯಾಗುತ್ತದೆ’ ಎಂಬ ಅವರ ನಂಬಿಕೆಯನ್ನು ಸಂಘ ಇಂದಿಗೂ ಉಳಿಸಿ ಬೆಳೆಸಿಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ಡಾಕ್ಟರ್ ಜೀ ಕೇವಲ ಭಾಷಣದಿಂದ ಮಾತ್ರ ಪ್ರೇರಣೆ ನೀಡಲು ಬಯಸಲಿಲ್ಲ. ಅವರು ತಮ್ಮ ಕೊನೆಯ ಉಸಿರಿನವರೆಗೂ ಕೃತಿಯಂತೆ ಮಾತು ಎಂಬು ದನ್ನು ತಮ್ಮ ನಡವಳಿಕೆಯ ಮೂಲಕ ತೋರಿಸಿ ಕಾರ್ಯಕರ್ತರಿಗೆ ಆದರ್ಶವಾದರು.

1940ರ ಜೂನ್‌ನಲ್ಲಿ ಡಾಕ್ಟರ್ ಜೀ ಅವರ ಮೃತ್ಯುವಾಯಿತು. ಅವರ ದ್ವಿತೀಯ ಮಾಸಿಕ ಶ್ರಾದ್ಧದ ಸಂದರ್ಭದಲ್ಲಿ ಸಂಘದ ದ್ವಿತೀಯ ಸರಸಂಘಚಾಲಕರಾದ ಶ್ರೀ ಗುರೂಜಿಯವರ ಮಾತು ಮತ್ತು ಕೃತಿಗಳು ಸಂಘಕ್ಕೆ ದಿಕ್ಸೂಚಿಯಂತಿವೆ. ಡಾಕ್ಟರ್ ಜೀ ನಮ್ಮ ನಡುವೆ ಇಲ್ಲದಿರುವುದು ನಮಗೆ ವೇದನೆ ತರುವಂಥದ್ದೇ ಆಗಿದೆ. ಆದರೆ ಅವರ ಅನುಪಸ್ಥಿತಿ ನಮಗೆ ಯಾವುದೇ ಗಾಬರಿ ಯನ್ನು ಉಂಟುಮಾಡಬಾರದು. ಏಕೆಂದರೆ ಸಂಘ ಇದುವರೆಗೆ ಎಂದೂ ವ್ಯಕ್ತಿಪೂಜೆಯನ್ನು ಪುರಸ್ಕರಿಸಿಲ್ಲ ಮತ್ತು ಮುಂದೆಯೂ ಮಾಡುವುದಿಲ್ಲ. ಸಂಘ ಎಂದಿಗೂ ಡಾಕ್ಟರ್ ಜೀ ಅಥವಾ ಗುರೂಜೀ ಅವರ ಪೂಜೆಗೆ ಆದ್ಯತೆ ನೀಡಲೇ ಇಲ್ಲ. ಅಂದು ಅವರು ಹಾಕಿಕೊಟ್ಟ ಸಿದ್ಧಾಂತದ ಭದ್ರ ಬುನಾದಿಯ ಮೇಲೆ ಸ್ವತಂತ್ರವಾಗಿ ಕಾಲಕ್ಕೆ ಅನುಗುಣವಾಗಿ ಸುಭದ್ರ ಕಟ್ಟಡ ನಿರ್ಮಿಸುವ ಕಾಯಕದಲ್ಲಿ ಅಸಂಖ್ಯ ಕಾರ್ಯಕರ್ತರು ನಿರತರಾಗಿದ್ದಾರೆ.

ಇಲ್ಲಿ ಯಾರ ಪೂಜೆಗೂ ಆದ್ಯತೆಯಿಲ್ಲ. ಸ್ವಯಂ ಕಾರ್ಯಕರ್ತನೇ ಇದನ್ನು ಬಯಸುವುದಿಲ್ಲ. ಅವರ ಮನದಲ್ಲಿ ಇರುವುದು ಕೇವಲ ತಾಯಿ ಭಾರತಿಯನ್ನು ಪರಮವೈಭವ ಸ್ಥಿತಿಗೆ ಕೊಂಡೊಯ್ಯುವ ಶ್ರೇಷ್ಠ ಬಯಕೆಯೊಂದೆ. ಹಾಗಾಗಿಯೇ ಸಂಘದ ಕಾರ್ಯಕರ್ತರು ಪೂಜೆಗೈಯುವುದು ತಾಯಿ ಭಾರತಿಯನ್ನು ಮಾತ್ರ. ಯಾರಾದರೂ ಕಾರ್ಯಕರ್ತನಿಗೆ ತಾನು ಪೂಜಿಸಲ್ಪಡು ವವನು ಎಂಬ ಸಣ್ಣ ಅಹಮಿಕೆಯ ಭಾವ ಬಂದರೆ ಅದು ವೈಯಕ್ತಿಕ ಲೋಪವೇ ಹೊರತು ಸಂಘದ್ದು ಅಲ್ಲವೇ ಅಲ್ಲ. ಮತ್ತು ಆ ಲೋಪಕ್ಕೆ ಕಾಲವೇ ಸೂಕ್ತ ಪರಿಹಾರ ಸೂಚಿಸುತ್ತದೆ.