Thursday, 12th December 2024

ಪ್ರಕೃತಿಯ ಶಕ್ತಿ ಅಗಾಧ

ಅಭಿಮತ

ಮಯೂರಲಕ್ಷ್ಮೀ

ಪ್ರಕೃತಿಯ ಒಂದೇ ಸ್ಪರ್ಶ ಸಾಕಲ್ಲವೇ ನಮ್ಮನ್ನು ಪರಿಪೂರ್ಣರಾಗಿಸಲು? ಗಾಳಿಯು ಬೆಳೆಯನ್ನು ಬಿತ್ತಿದರೆ, ಸೂರ್ಯನು ನೀರನ್ನು ಆಯನ್ನಾಗಿಸುತ್ತಾನೆ, ಮತ್ತದೇ ಗಾಳಿಯಿಂದ ಮೋಡಗಳು ವರ್ಷಧಾರೆಯನ್ನೇ ಭೂಮಿಗೆ ನೀಡುತ್ತದೆ. ಹೀಗೆ ಸುರಿವ ಮಳೆ ಬೆಳೆಯ ರೂಪ ತಾಳಿ ನಮಗೆ ಆಹಾರವಾಗುತ್ತದೆ.

ಇದು ಪ್ರಕೃತಿಯೂ ಮನುಷ್ಯನೂ ಹೊಂದಬೇಕಾದ ಅವಿನಾಭಾವ ಅನುಬಂಧ. ಪ್ರಕೃತಿಯ ಶಕ್ತಿ ಅಗಾಧ, ಅದನ್ನರಿತು ನಾವು ಧನ್ಯರಾಗಬೇಕು. “The happiest man is he who learns from nature the lesson of worship”.  ಎಮರ್ಸನ್ ಎಂಬ ೧೯ನೆಯ ಶತಮಾನದ ಕ, ತತ್ತ್ವಜ್ಞಾನಿ ನೇಚರ್ ಎಂಬ ಪ್ರಬಂಧದಲ್ಲಿ Transcendental ಅಚಿಂತ್ಯ ಭಾವದಿಂದ ಹೀಗೆ ಪ್ರಕೃತಿಯನ್ನು ವರ್ಣಿಸಿದ್ದಾರೆ.

ಪ್ರಕೃತಿಗೆ ಜಡತ್ವವಿಲ್ಲ, ತನ್ನದೇ ಆತ್ಮವನ್ನು ಹೊಂದಿರುವ ಅದು ಹರಿವ ನೀರಂತೆ ನಿರಂತರ, ಅದರ ಗುಣವೇ ಹಾಗೆ. ಸೃಷ್ಟಿಯ ಅದ್ಭುತ ಸೌಂದರ್ಯಕ್ಕೆ, ಅದರ ವೈಶಾಲ್ಯತೆಗೆ ಮನುಷ್ಯ ಶರಣಾಗಬೇಕು. ಪ್ರಕೃತಿಯು ಮನುಷ್ಯನಿಗೆ ನೀಡಿರುವ ಕೊಡುಗೆ ಅಪಾರ, ಆದರೆ ಮನುಷ್ಯನ ಸ್ವಾರ್ಥಪರತೆ ಅಸಹನೀಯ. ಇಂತಹ ಆತ್ಮಶಕ್ತಿಯುಳ್ಳ ಪ್ರಕೃತಿಯನ್ನು ಅಧ್ಯಾತ್ಮದ ಪ್ರತ್ಯೇಕತೆಯ ನೆಲೆಯಲ್ಲೇ
ಕಾಣಬೇಕು. ಜನ್ಮ ತಳೆವ ಮಗು ಮೊದಲ ತೊದಲ ನುಡಿಗಳನ್ನು ತಾಯಿಯಿಂದ ಕಲಿತರೆ ಪ್ರಕೃತಿಯು ಅವನ ಎರಡನೆಯ ಮಾತೆ. ಪ್ರಕೃತಿಯ ಮಡಿಲಲ್ಲಿ ಬೆಳೆದ ಮಾನವ ಪ್ರಕೃತಿಯ ನಾಶವನ್ನು ತಡೆಯದಾಗಿರುವುದು ವಿಷಾದ.

ಮನುಷ್ಯ ಮಾತುಗಳ ಮೂಲಕ ಸಂವಹನ ಮಾಡಿದರೆ ಪ್ರಕೃತಿಯದು ಭೂಮಿಗೀತೆ. ಅದೆಲ್ಲೋ ಕಾಡಿನಲ್ಲಿ ಕಲ್ಲುಗಳ ನಡುವೆ ಹರಿವ ನೀರು ನೀರವ ಮೌನ ಕಲಕಿ ನಾನಿಲ್ಲಿರುವೆ! ಎಂದು ಆಲಾಪಿಸುತ್ತದೆ.ಪ್ರಕೃತಿಯ ಒಂದೇ ಒಂದು ಸ್ಪರ್ಶ ಈ ಪ್ರಪಂಚವನ್ನೇ ಬಂಧಿಸುತ್ತದೆ ಎಂದಿದ್ದಾರೆ ವಿಲಿಯಂ ಷೇಕ್ಸ್‌ಪಿಯರ್. ಸಾಗುವ ಹಾದಿ ದೂರವಾದರೂ ಇರುವೆಗಳು ಸಾಲಿನಲ್ಲಿಯೇ ಸಂಚರಿಸುವ ಶಿಸ್ತನ್ನು ಅವುತಳಿಗೆ ಕಲಿಸಿದವರ‍್ಯಾರು? ಮನುಷ್ಯನಿಗೂ ಪ್ರಕೃತಿಯ ಪ್ರಾಣಿಪಕ್ಷಿಗಳಿಗೂ ಇರುವ ಒಂದೇ ವ್ಯತ್ಯಾಸವೆಂದರೆ ಮನುಷ್ಯ ಸ್ವಾರ್ಥಿ, ಪ್ರಾಣಿಪಕ್ಷಿಗಳು ನಿಸ್ವಾರ್ಥಿಗಳು.

ಅತ್ಯಂತ ರುಚಿಯಾದ ಹಣ್ಣನ್ನು ಆಯ್ದು ಅರ್ಧದಷ್ಟು ಹಣ್ಣು ತಿನ್ನುವ ಅಳಿಲು ಮನುಷ್ಯನೆಲ್ಲಿ ತಿನ್ನುವನೋ ಎನ್ನುವ ಆತಂಕ ಸೂಯೆಗಳಿಲ್ಲದೆ ತನ್ನ ಪಾಡಿಗೆ ತಾನು ಹೊರಟುಹೋಗುವಂತೆ ಅನ್ಯರಿಗೂ ಉಳಿಸುವುದನ್ನು ನಾವು ಕಲಿಯಬೇಕಲ್ಲವೇ? ಪ್ರಕೃತಿ ಯಿಂದ ನಾವು ಕಲಿತದ್ದೇನು? ಪ್ರಕೃತಿಗೆ ನಾವು ಕೊಟ್ಟದ್ದೇನು? ಭೋಗ ಜೀವನದಿಂದ ಪ್ರಕೃತಿಯ ವಿನಾಶಕ್ಕೆ ಕಾರಣನಾದ ಮನುಷ್ಯ ನೆಲ, ಜಲ ಮತ್ತು ಗಾಳಿಯಲ್ಲಿ ವಿಷ ತುಂಬಿದ.

ಇಂದು ಗುಣಪಡಿಸಲಾಗದ ಮಹಾಮಾರಿಗೆ ತುತ್ತಾಗಿ ವಿಶ್ವವೇ ತಲ್ಲಣಿಸಿಹೋಗಿದೆ. ಮನುಷ್ಯನಿಂದ ಮನುಷ್ಯನಿಗೆ ಭೀಕರ ರೋಗ ಹರಡುತ್ತಿದೆ, ಆದರೆ ಪ್ರಾಣಿಪಕ್ಷಿಗಳಿಗೆ ಅಂತಹ ಅಪಾಯವೇಕಿಲ್ಲ? ತನ್ನ ಮನೆಯಿಂದ ಹೊರಬರಲೂ ಮನುಷ್ಯ ಹೆದರುತ್ತಿದ್ದಾನೆ. ಆದರೆ ಪ್ರಾಣಿಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ನಿಸ್ವಾರ್ಥನಾಗಿ ಬದುಕಿ ಸಕಲ ಪ್ರಾಣಿಗಳಿಗೆ ದಯೆ ತೋರಿ ಸಂಯಮ ದಿಂದಿರು ಎನ್ನುವ ಸಂದೇಶವನ್ನು ಸಾರುವ ಪ್ರಕೃತಿಯ ಕರೆಗೆ ನಾವು ಓಗೊಡಬೇಕು. ಇನ್ನೂ ಅಪಾರವಾಗಿರುವ ವನಸಿರಿಗಳ ಸಂರಕ್ಷಣೆಗೆ ಮುಂದಾಗಿ, ಮನೆ ಮನೆಗಳಲ್ಲಿ ಗಿಡಮರಗಳನ್ನು ಬೆಳೆಸಿ ಪಕ್ಷಿಸಂಕುಲವನ್ನು ಪೋಷಿಸಬೇಕು.

ಬದುಕೆಂದರೆ ಮನುಷ್ಯರು ಒಟ್ಟಾಗಿ ಒಗ್ಗಟ್ಟಿನಿಂದ ಜೀವಿಸುವುದಲ್ಲಾ, ಪ್ರಕೃತಿಯೊಡನೆ ಬೆರೆತು ಯೋಗಿಯಂತೆ ಜೀವಿಸುವುದು.