ಅಭಿಮತ
ಸಿದ್ದು ಮಮದಾಪೂರ
ಆಧುನಿಕತೆಯ ಗಾಳಿ ಬೀಸುತ್ತಿದ್ದಂತೆ ಪರಿವರ್ತನೆಗಳಿಗೆ ಜಗದ ನಿಯಮಗಳಲ್ಲಿ ಬದಲಾವಣೆ ಯಾಗುತ್ತಿದ್ದಂತೆ ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದ ಮಹಿಳೆ ಇಂದು ಪುರುಷನ ಸರಿ ಸಮಾನವಾಗಿ ದುಡಿಯುತ್ತಿದ್ದಾಳೆ.
ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಹಲವರಿಗೆ ಮಾದರಿಯಾಗಿದ್ದಾಳೆ. ಇಷ್ಟೆ ಪರಿವರ್ತನೆಗಳ ನಡುವೆಯೂ ಕುಟುಂಬ ಮನೆ ಮಕ್ಕಳು ಸಮಾಜ ಕೆಲಸ ಎಲ್ಲವನ್ನೂ ಸಮಾನವಾಗಿ ತೂಗಿಸಿಕೊಂಡು ಹೋಗುತ್ತಿದ್ದಾಳೆ. ಈ ದೇಶದಲ್ಲಿ ಹಲವು ಮಹಾನ್ ಸಾಧಕರು ಜನಿಸಿದ್ದಾರೆ. ಅದರಲ್ಲಿ ಸಾಕಷ್ಟು ಮಹಿಳೆಯರ ಪಟ್ಟಿಯೂ ಇದೆ. ಬದಲಾದ ಕಾಲಕ್ಕೆ ಹೊಂದಿಕೊಂಡ ಮಹಿಳೆ ತನ್ನ ಅಸ್ಮಿತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಬದಲಾವಣೆಯನ್ನು ಒಪ್ಪಿಕೊಂಡಿದ್ದರೂ ಕೆಲವು ಮೂಲ ಸಮಸ್ಯೆಗಳನ್ನು ಮಹಿಳೆ ಎದುರಿಸುತ್ತಿದ್ದಾಳೆ.
ಬಲಿಷ್ಠ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾದುದು. ಒಬ್ಬ ಮಹಿಳೆ ತನ್ನ ಕುಟುಂಬದಲ್ಲಿ ತಾಯಿ, ಮಗಳು, ಸೊಸೆ ಎಂಬ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಾಳೆ. ಹಾಗೆಯೇ ಸಾಮಾಜಿಕ ವ್ಯವಹಾರಗಳ ಮೂಲಕ ಆರ್ಥಿಕ ಭದ್ರತೆಯನ್ನು ನೀಡಿ ಸಮಾಜದ ಅಭಿವೃದ್ಧಿಯ ಶಿಲ್ಪಿಯಾಗಿ ಮುಂದುವರಿಯುತ್ತಿದ್ದಾರೆ. ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಸರಿ ಸಮಾನರು. ಎಲ್ಲಿ ಮಹಿಳೆಯನ್ನು ಪೂಜಿಸುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾರೆ ಎನ್ನುವ ಭಾವನೆ ಗ್ರಂಥಗಳಲ್ಲಿ ಅಡಕವಾಗಿದೆ.
ಪ್ರತಿ ಮಗುವಿಗೆ ಮನೆಯೇ ಮೊದಲ ಪಾಠ ಶಾಲೆ. ಹಾಗೆಯೇ ತಾಯಿಯೇ ಮೊದಲ ಗುರು. ಮಹಿಳೆಯು ಒಂದು ಸಮುದಾಯದ ಹಾಗೂ ದೇಶದ ಅಭಿವೃದ್ಧಿಗೆ ಕಾರಣಕರ್ತಳಾಗುತ್ತಾಳೆ. ಅವರಿಗೆ ಸಿಗಬೇಕಾದ ಸ್ಥಾನಮಾನ, ಗೌರವ ಕೊಡುವುದು ಎಲ್ಲರ ಕರ್ತವ್ಯವಾಗಿದೆ. ಪ್ರತಿ ಮಹಿಳೆಯು ಸಾಮಾಜಿಕ ವ್ಯವಹಾರಗಳ ಮೂಲಕ ಆರ್ಥಿಕ ಭದ್ರತೆಯನ್ನು ಕಂಡುಕೊಳ್ಳುವಲ್ಲಿ ಮುಂದಾಗಬೇಕು. ಮಹಿಳೆಯರು ಶೈಕ್ಷಣಿಕ, ಕ್ರೀಡೆ, ರಾಜಕೀಯ,
ವಾಣಿಜ್ಯ, ವಿಜ್ಞಾನ, ಕೃಷಿ ಮತ್ತಿತರ ಕ್ಷೇತ್ರದಲ್ಲಿ ಮುಂದಿದ್ದಾರೆ.
ಮನೆಯ ಹೆಣ್ಣು ಮಕ್ಕಳಿಗೆ ಕೊಡುವ ಶಿಕ್ಷಣದಿಂದ ಕುಟುಂಬ ಉತ್ತಮ ಸ್ಥಿತಿಯಲ್ಲಿರಲು ಸಾಧ್ಯ. ಪ್ರತಿಯೊಬ್ಬರೂ ಮಹಿಳೆಯ ಮನಸ್ಥಿತಿಯನ್ನು
ಅರಿತುಕೊಳ್ಳಬೇಕು. ಸತಿ ಸಹಗಮನದಂಥ ಆಚರಣೆಗಳು ತೊಲಗಿದ್ದರೂ ಸಹ ಬಾಲ್ಯವಿವಾಹ, ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆಯಂತಹ ಪಿಡುಗುಗಳು ಅಲ್ಲಲ್ಲಿ ಕಂಡುಬರುತ್ತಿವೆ. ವರದಕ್ಷಿಣೆ ಪಡೆಯುವುದಾಗಲಿ, ಕೊಡುವುದಾಗಲಿ ಮಾಡಬಾರದು. ಆಸ್ತಿಯಲ್ಲಿ ಸಹ ಮಹಿಳೆಯರಿಗೆ ಸಮಾನ ಹಕ್ಕಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿಯಬೇಕಿದೆ.
ದೇಶದಲ್ಲಿ ಪ್ರತಿ ೧೦೦ ಮಹಿಳೆಯರಲ್ಲಿ ಒಬ್ಬರಿಗೆ ದೌರ್ಜನ್ಯ ನಡೆಯುತ್ತಿದೆ. ಆದರೆ ಯಾರೂ ಅದನ್ನು ಬಹಿರಂಗ ಪಡಿಸುತ್ತಿಲ್ಲ. ಇಂತಹ ಸಂದರ್ಭ ದಲ್ಲಿ ಇಲಾಖೆ ಹಾಗೂ ಮಹಿಳಾ ಸಂಘಟನೆಗಳ ನೆರವು ಪಡೆದುಕೊಳ್ಳುವಂತಾಗಬೇಕು. ಪ್ರತಿ ಮಹಿಳೆಯು ಸಹಭಾಗಿತ್ವದಲ್ಲಿ ಬದುಕುವಂತೆ ಆಗಬೇಕು. ಭಾರತದಲ್ಲಿ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಿರಂತರವಾಗಿ ನಡೆಯುತ್ತಿದ್ದು ಭ್ರೂಣ ಹತ್ಯೆ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ವಿದ್ಯಾವಂತರು ಈ ಕೃತ್ಯದಲ್ಲಿ ಹೆಚ್ಚಾಗಿ ತೊಡಗಿರುವುದು ವಿಷಾದಕರ ಸಂಗತಿ.
ಪುರುಷರು ಮಹಿಳೆಯರ ಮೇಲೆ ನಡೆಸುವ ದೈಹಿಕ, ಮಾನಸಿಕ ಕಿರುಕುಳಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಮಾನವ ಸಾಗಾಣಿಕೆ ದೇಶದಲ್ಲಿ ದೊಡ್ಡ ವ್ಯಾಪಾರಗಳಲ್ಲಿ ಒಂದಾಗಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಸಹ ಮನುಷ್ಯರು ಎಂಬ ಕನಿಷ್ಠ ಸೂಕ್ಷ್ಮತೆ ಯನ್ನು ಬೆಳೆಸಿಕೊಳ್ಳಬೇಕು.