Saturday, 14th December 2024

ಮುಸುರಿ ಕೃಷ್ಣಮೂರ್ತಿ ರಸ್ತೆ ನಾಮಕರಣ

ಅಭಿವ್ಯಕ್ತಿ

ನಾಗವೇಣಿ ಹೆಗಡೆ ಶಿರಸಿ

ಕನ್ನಡ ಚಲನ ಚಿತ್ರರಂಗ ಕಂಡ ಇಂಥ ಪ್ರತಿಭಾವಂತ ಹಾಸ್ಯನಟ, ನಿರ್ಮಾಪಕ, ನಿರ್ದೇಶಕ, ಸಂಭಾಷಣಾಕಾರ, ಸಂಗೀತಗಾರ ಗಾಯಕರಾದ ನಟ ಚಾಣಕ್ಯ ಬಿರುದು ಪಡೆದ ಮುಸುರಿ ಕೃಷ್ಣಮೂರ್ತಿ ಇವರ ಚಿತ್ರರಂಗದ ಸೇವೆಯನ್ನು ಮನಗಂಡ ಸರಕಾರ 2015ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಂಗೇರಿ ರಿಂಗ್ ರಸ್ತೆಯಲ್ಲಿರುವ ವಿಶ್ವವಿದ್ಯಾಲಯದಿಂದ – ಒಕ್ಕಲಿಗರ ಸಂಘದ ಕೊಟ್ಟಿಗೆ ಪಾಳ್ಯದವರೆಗೂ ಸುಮಾರು ಆರು ಕಿ.ಮೀ. ರಸ್ತೆಗೆ ನಾಮಕರಣ ಮಾಡಲು ಆದೇಶ ನೀಡಿದ್ದರೂ ಸಹ ಸ್ಥಳೀಯ ರಾಜಕಾರಣಿಗಳು ಸಹಕಾರ ನೀಡದೆ 5 ವರ್ಷಗಳಿಂದಲೂ ಸತಾಯಿಸುತ್ತಲೇ, ಇಂದಿಗೂ ಕಾಲ ತಳ್ಳುತ್ತಲೇ ಇರುವುದು ವಿಷಾದ ನೀಯ.

ಕೃಷ್ಣಮೂರ್ತಿ ಎಂಬ ಹೆಸರಿನ ಬಾಲಕ ಮುಸುರಿ ಕೃಷ್ಣಮೂರ್ತಿಯಾದದ್ದೇ ದೊಡ್ಡ ಸಾಧನೆ. ತನ್ನ ಬಾಲ್ಯದಲ್ಲಿಯೇ ದೊಡ್ಡ ಸಂಗೀತಗಾರರ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರುವಂತೆ ಮಾಡಿಕೊಂಡ ಇವರ ಪ್ರತಿಭೆ ಮುಂದೆ ಇವರನ್ನು ಬಹಳ ಎತ್ತರಕ್ಕೆ
ಕೊಂಡೊಯ್ಯಿತು. ಮೈಸೂರು ಬಳಿಯ ಬೆಟ್ಟದಪುರದಲ್ಲಿ 1930ರ ಮಾರ್ಚ್ 10ರಂದು ಜನಿಸಿದ ಕೃಷ್ಣಮೂರ್ತಿಯವರು ಬಾಲ್ಯದಲ್ಲಿಯೇ ಅಭಿನಯ ಮತ್ತು ಹಾಡುಗಾರಿಕೆಯತ್ತ ಒಲವು ಮೂಡಿಸಿಕೊಂಡವರು.

ಕೃಷ್ಣಮೂರ್ತಿ ತನ್ನ 9ನೆಯ ವಯಸ್ಸಿನಲ್ಲಿದ್ದಾಗ ಮೈಸೂರು ಮಹಾರಾಜರ ಆಸ್ಥಾನದಲ್ಲಿ ನಡೆಯುವ ದಸರಾ ಉತ್ಸವಕ್ಕೆ ಮನೆ ಯಲ್ಲಿ ಹೇಳದೇ ಹೋಗಿಬಿಟ್ಟಿರುತ್ತಾನೆ. ಈ ಸಂದರ್ಭದಲ್ಲಿ ದರ್ಬಾರಿನಲ್ಲಿ ಮಹಾರಾಜರು ಸಂಗೀತ ವಿದ್ವಾಂಸರಿಗಾಗಿ ಸಂಗೀತ ಕಚೇರಿ ಏರ್ಪಡಿಸಿದ್ದಾಗ ಅದರಲ್ಲಿ ತಾನೂ ಹಾಡುವೆನೆಂದು ಎದ್ದು ನಿಂತ ಬಾಲಕನನ್ನು ಜನ ತಡೆಯುವಾಗ ಆಗಿನ ಮಹಾರಾಜ ರಾದ ಕೃಷ್ಣರಾಜೇಂದ್ರ ಒಡೆಯರ್ ಅವರು ‘ಆ ಹುಡುಗನನ್ನು ಇಲ್ಲಿ ಕಳಿಸಿ’ ಎಂದು ಕರೆದು ಅವಕಾಶ ಮಾಡಿ ಕೊಟ್ಟರು. ಆಗ ಆ ಬಾಲಕನ ಕಂಠದಿಂದ ಹೊರಬಂದ ಗಾಯನ ಕೇಳಿ ಮಹಾರಾಜರು ಬೆರಗಾದರಂತೆ.

ಈ ಹುಡುಗ ಆಗಿನ ಪ್ರಸಿದ್ಧ ಗಾಯಕರಾಗಿದ್ದ ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಅವರಷ್ಟೇ ಸೊಗಸಾಗಿ ಹಾಡಿದ್ದಾನೆ ಎಂದು ಅವರದೇ ಹೆಸರಿನ ಮುಸುರಿ ಎಂಬ ಹೆಸರನ್ನು ಆ ಬಾಲಕನಿಗೆ ಬಿರುದಾಗಿ ನೀಡಿ ‘ಇಂದಿನಿಂದ ನೀನು ಮುಸುರಿ ಕೃಷ್ಣಮೂರ್ತಿ ಯಾಗಿ ಹೆಸರಾಗು ಎಂದು ಸನ್ಮಾನಿಸಿ ಹಾರೈಸಿದ್ದಲ್ಲದೇ ಸ್ವತಃ ಮಹಾರಾಜರೇ ಕೃಷ್ಣಮೂರ್ತಿಯವರಿಗೆ ರೇಶ್ಮೆ ಶಾಲು, ಹಣ್ಣಿನ ಬುಟ್ಟಿ , ಗೌರವಧನ ಕೊಟ್ಟು ಅವರ ಜತೆಗೆ ಸೈನಿಕರನ್ನು ಕಳಿಸಿ ಅವರನ್ನು ರಾಜಮರ್ಯಾದೆಯಿಂದ ಮನೆಯವರೆಗೂ ಕಳಿಸಿಕೊಟ್ಟಿದ್ದಾರೆಂದರೆ ಇದು ಕೃಷ್ಣಮೂರ್ತಿಯವರ ಮಹಾನ್ ಸಾಧನೆಯೇ ಆಗಿತ್ತು.

ಪ್ರೌಢಶಾಲೆಯಲ್ಲಿ ಓದುತ್ತಿzಗಲೇ ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ಚಾಮುಂಡೇಶ್ವರಿ ನಾಟಕ ಸಂಸ್ಥೆಯಲ್ಲಿ ಅವಕಾಶ ಪಡೆದು ಕೊಂಡು, ಕೆಲಕಾಲದ ನಂತರ ಗುಬ್ಬಿ ವೀರಣ್ಣನವರ ನಾಟಕ ಕಂಪನಿಗೆ ಸೇರಿ, ತದನಂತರ ಹಿರಣ್ಣಯ್ಯನವರ ನಾಟಕ ಮಂಡಳಿಯೂ ಸೇರಿದಂತೆ ಹಲವಾರು ನಾಟಕ ಕಂಪನಿಗಳಲ್ಲಿ ರಂಗಕರ್ಮಿಯಾಗಿ ಕಲಾ ಪ್ರದರ್ಶನ ಮಾಡಿದ ಇವರು ಹಿರಣ್ಣಯ್ಯನವರ ಸಂಸ್ಥೆಯಡಿಯಲ್ಲಿ ಪಿಟೀಲು ಚೌಡಯ್ಯನವರ ನೇತೃತ್ವದಲ್ಲಿ 1942ರಲ್ಲಿ ತಯಾರಾದ ವಾಣಿ ಎಂಬ ಚಲನಚಿತ್ರದಲ್ಲಿ ಬಾಲನಟನಾಗಿ ಅಲ್ಲದೇ ಹಾಡನ್ನು ಕೂಡ ತಾವೇ ಹಾಡಿಕೊಂಡು ಅಭಿನಯಿಸುವ ಮೂಲಕ ಬೆಳ್ಳಿತೆರೆ ಪ್ರವೇಶಿಸಿದವರು.

ನಂತರದ ದಿನಗಳಲ್ಲಿ ಬೆಸ್ಟ್ ಕ್ಲಾಸಿಕಲ್ ಸಿಂಗರ್ ಆಗಿದ್ದ ಇವರು 1955ರಲ್ಲಿ ಕೋಕಿಲವಾಣಿ ಅನ್ನುವ ಸಿನೆಮಾ ನಿರ್ದೇಶನ
ಮಾಡಿದ್ದರು. ಸಿ.ವಿ.ರಾಜು ಅವರ ಬಳಿ ಸಂಕಲನ ಕೆಲಸವನ್ನೂ ಕಲಿತ ಮುಸುರಿ ಕೃಷ್ಣಮೂರ್ತಿ, ಅವರ ಬಳಿಯೇ ಸಹಾಯಕ ಸಂಕಲನಕಾರರಾಗಿ ಕೆಲವು ಚಿತ್ರಗಳಿಗೆ ಕಾರ್ಯನಿರ್ವಹಿಸಿದ್ದಲ್ಲದೇ ತಮ್ಮದೇ ಬಗೆಯ ವಿಶಿಷ್ಟ ಸಂಭಾಷಣೆಯಿಂದ ಹಾಸ್ಯ ಪಾತ್ರಗಳಲ್ಲಿ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದರು.

ನಂತರ ಖಳನಟನ ಪಾತ್ರಗಳಲ್ಲಿಯೂ, ಷಕನಟನ ಪಾತ್ರಗಳಲ್ಲಿಯೂ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ದ್ದಲ್ಲದೇ, 1981ರಲ್ಲಿ ಶ್ರೀನಾಥ್, ಜಯಮಾಲಾ ಅಭಿನಯಿಸಿರುವ ನಂಬರ್ ಐದು ಎಕ್ಕ ಚಿತ್ರವನ್ನು ನಿರ್ಮಿಸಿ ಹಾಡಿದ್ದಲ್ಲದೇ ಸಂಭಾಷಣೆಯನ್ನು ಕೂಡ ಇವರೇ ಬರೆದಿದ್ದು ವಿಶೇಷ. ಇವರ ಅಭಿನಯ ಹಾಗೂ ಚಿತ್ರರಂಗದಲ್ಲಿನ ಇವರ ಸಾಧನೆ ಗುರುತಿಸಿ 1982ರಲ್ಲಿ ನಟ ಚಾಣಕ್ಯ ಎಂಬ ಬಿರುದನ್ನು ಕೂಡ ಪಡೆದಿದ್ದಾರೆನ್ನಲು ನಮಗೆ ಹೆಮ್ಮೆ ಅನ್ನಿಸುತ್ತದೆ.