Thursday, 12th December 2024

ಜಾತಿ ಮೀಸಲಾತಿಗಾಗಿ ಹೋರಾಟ ಮಾಡುವುದು ಸನ್ಯಾಸಿಗಳ ಕೆಲಸವಲ್ಲ

ಅಭಿವ್ಯಕ್ತಿ

ಡಾ.ಆರೂಢ ಭಾರತೀ ಸ್ವಾಮೀಜಿ

ತಂದೆ – ತಾಯಿ ಬಂಧು – ಬಾಂಧವರ ಹಂಗನ್ನು ತೊರೆದು, ಉಡಿದಾರ ಕತ್ತರಿಸಿ, ದೀಕ್ಷೆ ತೊಟ್ಟು, ಕಷಾಯ ಕೌಪೀನ ವಿಭೂತಿ ರುದ್ರಾಕ್ಷಿ ಕುಂಕುಮ ಪಾದುಕೆ ಧರಿಸುವ ಸನ್ಯಾಸಿಗೆ ಕುಲ ಜಾತಿ ಇಲ್ಲ. ಚಾಂಡಾಲನಿಗೂ ತಲೆಬಾಗಿದವರು ಶಂಕರರು.

ಹತ್ತು ಹಲವಾರು ಕುಲದವರಿಗೆ ಲಿಂಗದೀಕ್ಷೆ ನೀಡಿ, ಅಂತರ್ಜಾತೀಯ ವಿವಾಹ ಮಾಡಿಸಿ, ಕುಲ ಜಾತಿಯ ಭೇದ ಅಳಿಸಿ,
ಸಮಾನತೆಯ ಮಾನವಧರ್ಮವನ್ನು ಬೋಽಸಿದವರು ಬಸವಣ್ಣನವರು. ಯಾವುದೇ ಧರ್ಮ ಗುರುಗಳು ಯಾವುದೇ ಕುಲ ಜಾತಿಯ ಸ್ವತ್ತಲ್ಲ. ಅವರು ಸಮಾಜದ ಸ್ವತ್ತು. ಜಾತಿಗೊಬ್ಬ ಗುರು, ಪೀಠ ಮಠಾಧಿಪತಿಯ ವ್ಯವಸ್ಥೆಯೇ ತಪ್ಪು. ಒಂದು ವೇಳೆ ಅನಿವಾರ್ಯವೆನಿಸಿದರೆ ಇರಲಿ. ಆದರೆ ಸನ್ಯಾಸಿಗಳು ಮಠಾಧಿಪತಿಗಳು ಜಾತಿಪರ ಹೋರಾಟಕ್ಕೆ ನೇರವಾಗಿ ಧುಮುಕುವುದು, ಹಾಗೆ ಮಾಡಲು ಜನರು ಅವರ ಮೇಲೆ ಒತ್ತಡ ಹೇರುವುದು ಸರಿಯಲ್ಲ.

ಸನ್ಯಾಸಿಗಳು ಮಾಡಬೇಕಾದ ಕರ್ತವ್ಯ ಪೂಜೆ ಜಪ ತಪ ಧ್ಯಾನ ಅಧ್ಯಯನ ಧರ್ಮ ಹಾಗೂ ತತ್ತ್ವಬೋಧನೆ ಮತ್ತು ಸಾಮಾಜಿಕ ಜನಜಾಗೃತಿ. ಕುಲ ಜಾತಿ ಸಮುದಾಯದ ಹಿತದ ಪರ, ಅನ್ಯಾಯದ ವಿರುದ್ಧ ಹೋರಾಟಕ್ಕಾಗಿ ಕುಲ ಜಾತಿ ಸಮುದಾಯದ ಜನನಾಯಕರು, ಜನ ಪ್ರತಿನಿಧಿಗಳು ಇದ್ದಾರೆ. ಬೇಕಿದ್ದರೆ ಆಯಾ ಪೀಠದ ಮಠಾಧೀಶರು, ಆಯಾ ಜನಾಂಗದ ನಾಯಕರಿಗೆ, ಜನ ಪ್ರತಿನಿಧಿಗಳಿಗೆ ಹೋರಾಟದ ಮಾರ್ಗದರ್ಶನ ಆಶೀರ್ವಾದ ನೀಡಲಿ. ಅದರ ಹೊರತಾಗಿ ನೇರವಾಗಿ ತಾವೇ ಬೀದಿಗಿಳಿದು ಹೋರಾಟ ಮಾಡುವುದು, ಧರಣಿ ಉಪವಾಸ ಸತ್ಯಾಗ್ರಹ ನಡೆಸುವುದು, ಬೆದರಿಕೆಯೊಡ್ಡುವುದು, ಸಾಯುವ ಹೆದರಿಕೆ ಹಾಕುವುದು ಸರಿಯಲ್ಲ.

ಇತ್ತೀಚೆಗೆ ಅನೇಕ ಮಠಾಧಿಪತಿಗಳು ಇಂಥ ಪ್ರವೃತ್ತಿ ಪ್ರದರ್ಶಿಸುತ್ತಿರುವುದು ನೋವಿನ ಸಂಗತಿ. ಇದೀಗ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀಜಯ ಮೃತ್ಯುಂಜಯ ಸ್ವಾಮೀಜಿಯವರು ಮೀಸಲಾತಿಗಾಗಿ ಸ್ವತಃ ತಾವೇ ಭಾಗವಹಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿರುವುದು ಬೇಸರ ತಂದಿದೆ.