Sunday, 15th December 2024

ಬಿಜೆಪಿ ಗೊಂದಲಕ್ಕೆ ತುಪ್ಪ ಸುರಿವ ಮಠಾಧಿಪತಿಗಳು

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ರಾಜ್ಯ ಬಿಜೆಪಿಯಲ್ಲಿ ಕಳೆದೊಂದು ತಿಂಗಳಿಂದ ರಾಜಕೀಯ ಬೆಳವಣಿಗೆಗಳ ಮೇಲೆ ಬೆಳವಣಿಗೆಗಳು ನಡೆಯುತ್ತಿವೆ. ಈ ಬೆಳವಣಿಗೆ ಗಳು ರಾಜ್ಯ ಮತ್ತು ದೆಹಲಿ ಕೇಂದ್ರೀಕೃತವಾಗಿಯೇ ನಡೆಯುತ್ತಿದೆ.

ನಾಯಕತ್ವ ಬದಲಾವಣೆ ಕುರಿತಂತೆ ಕೆಲ ಶಾಸಕರು ಬಹಿರಂಗವಾಗಿ ಅಸಮಾಧಾನ ಮತ್ತು ಹೇಳಿಕೆಗಳನ್ನು ನೀಡುತ್ತಿದ್ದರೆ, ಮತ್ತೆ ಕೆಲ ಮುಖ್ಯಮಂತ್ರಿ ಬೆಂಬಲಿಗ ಶಾಸಕರು ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಬಿಜೆಪಿ ಆರ್‌ಎಸ್‌ಎಸ್ ಹಿನ್ನೆಲೆಯ ಪಕ್ಷ ವಾಗಿರುವುದರಿಂದ ಇಂದು ಪಕ್ಷಕ್ಕೆ ಶಿಸ್ತು, ಸೈದ್ಧಾಂತಿಕತೆ, ವೈಚಾರಿಕತೆ ಹಿನ್ನೆಲೆ ಇರುವುದರಿಂದ ಏನೇ ಅಸಮಾಧಾನಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕೆಂಬ ನಿಯಮಗಳಿವೆ. ಪಕ್ಷದ ಇತ್ತೀಚಿನ ಬೆಳವಣಿಗೆಗಳಿಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕೇಂದ್ರದ ವರಿಷ್ಠರು ತಾತ್ಕಾಲಿಕ ಬ್ರೇಕ್ ಹಾಕಿದ್ದರು.

ಆದರೂ ಮತ್ತೆ ಕೆಲ ನಾಯಕರು ಲಂಗು ಲಗಾಮಿಲ್ಲದೆ ನಾಲಿಗೆ ಹರಿಬಿಡುತ್ತಿರುವುದು ಪಕ್ಷದ ವರ್ಚಸ್ಸಿಗೂ ಸಾಕಷ್ಟು ಧಕ್ಕೆ ಯುಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಡ್ಯಾಮೇಜ್ ಕಂಟ್ರೋಲ್‌ಗಾಗಿ ರಾಜ್ಯಕ್ಕೆ ಆಗಮಿಸ ಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಪಕ್ಷದ ಆಂತರಿಕ ಮತ್ತು ಬಾಹ್ಯ ವಿಚಾರಗಳನ್ನು ಪಕ್ಷದ ಕೋರ್ ಕಮಿಟಿ ಅಥವಾ ಕೇಂದ್ರೀಯ ಸಮಿತಿಯ ಪ್ರಮುಖರು ನಿಭಾಯಿಸಲು ಸಮರ್ಥರಿದ್ದರೂ ಕೆಲವೊಂದು ಮಠಾಧಿಪತಿಗಳು ಪಕ್ಷದ ವಿಚಾರಗಳಲ್ಲಿ ಮೂಗು ತೂರಿಸುವುದು, ಬಹಿರಂಗ ಹೇಳಿಕೆಗಳನ್ನು ನೀಡುವುದು, ಆಜ್ಞೆ ಮಾಡುವುದು, ಜಾತಿ, ಸಮುದಾಯವನ್ನು ಎಳೆದು ತರುವುದು, ಕೇಂದ್ರದ ಮೇಲೆ ಒತ್ತಡಗಳನ್ನು ತರುವ ವಿದ್ಯಮಾನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ನಡೆಯುತ್ತಿದೆ.

ತಮ್ಮ ಸಮುದಾಯದ ಮಠಮಾನ್ಯಗಳಿಗೆ ಹೆಚ್ಚಿನ ಅನುದಾನಗಳನ್ನು ನೀಡಿ ಕೆಲ ಮಠಾಧಿಪತಿಗಳನ್ನು ಮುಖ್ಯಮಂತ್ರಿಗಳು ಕೂಡ ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದು, ಈ ಋಣ ಸಂದಾಯಕ್ಕಾಗಿಯೇ ಕೆಲ ಸ್ವಾಮೀಜಿಗಳು ಬಹಿರಂಗವಾಗಿಯೇ ಮುಖ್ಯಮಂತ್ರಿ ಪರ ಬ್ಯಾಟ್ ಬೀಸುತ್ತಿರುವುದಲ್ಲದೆ ಪಕ್ಷಕ್ಕೂ ಮುಜುಗರ ತಂದೊಡ್ಡುತ್ತಿದ್ದಾರೆ.

ಪಕ್ಷಗಳು ಅದರದ್ದೇ ಆದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಮಠ ಮಾನ್ಯಗಳು ಕೇವಲ ಸಲಹೆ ಸೂಚನೆಗಳನ್ನಷ್ಟೇ ನೀಡಬೇಕೆ ಹೊರತು ಆಜ್ಞೆ ಮಾಡಬಾರದು. ಪ್ರಸ್ತುತ ಮುಖ್ಯಮಂತ್ರಿ ಪರವಾಗಿ ಮಠಮಾನ್ಯಗಳು ಮೂಗು ತೂರಿಸಿದಷ್ಟು ಬೇರೆ ಯಾವುದೇ ರಾಜಕೀಯ ನಾಯಕರು ಅಥವಾ ಪಕ್ಷಗಳಿಗೆ ಈ ಪರಿಯ ಹಸ್ತಕ್ಷೇಪ ನಡೆಸಿದ ನಿದರ್ಶನ ರಾಜ್ಯ ರಾಜಕೀಯದಲ್ಲಿಲ್ಲ.