Thursday, 12th December 2024

ಮುಖರ್ಜಿಯವರು ಎಂದೆಂದಿಗೂ ಆದರ್ಶ

ಅಭಿಮತ

ಮಹೇಶ್ ತೆಂಗಿನಕಾಯಿ, ಬಿಜೆಪಿ ರಾಜ್ಯ ಪ್ರಧಾನ ಕಾರ‍್ಯದರ್ಶಿ

ಗೃಹ ಬಂಧನದಲ್ಲಿರಿಸಲ್ಪಟ್ಟಿದ್ದ ತನ್ನ ಮಗನ ಮರಣದ ಕುರಿತಾಗಿ ತಾಯಿಯೊಬ್ಬರು ಅನುಮಾನ ವ್ಯಕ್ತಪಡಿಸುತ್ತಾರೆ. ನನ್ನ ಮಗನ ಸಾವಿನ ಕುರಿತಾಗಿ ನನಗೆ ಅನುಮಾನಗಳಿವೆ. ಅವನಿಗೆ ಬಂಧನದಲ್ಲಿದ್ದಾಗ ಯಾವ ಕಾಯಿಲೆ ಬಂದಿತ್ತು ಮತ್ತು ಅದಕ್ಕೆ ಯಾವ ಚಿಕಿತ್ಸೆಯನ್ನು ನೀಡಲಾಯಿತು? ಇದು ರಾಜಕೀಯ ಉದ್ದೇಶ ಪೂರ್ವಕ ಕೃತ್ಯವೋ ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದು ಪ್ರಧಾನ ಮಂತ್ರಿಗೆ ಪತ್ರ ಬರೆಯುತ್ತಾರೆ.

ಆದರೆ ಆ ಪತ್ರಕ್ಕೆ ಯಾವುದೇ ಬೆಲೆಯನ್ನು ನೀಡದೆ ಕಸದ ಬುಟ್ಟಿಗೆ ಎಸೆಯಲಾಗುತ್ತದೆ. ಹೀಗೆ ಪತ್ರವನ್ನು ಬರೆದವರು ಜೋಗಮಾಯಾ ಮುಖರ್ಜಿ, ಸಂವಿಧಾನ
ಸಭೆಯಲ್ಲಿ ಪ್ರತಿಪಕ್ಷದ ಮೊದಲ ಸದಸ್ಯರಾದ ಶ್ರೀ ಶ್ಯಾಮ ಪ್ರಸಾದ ಮುಖರ್ಜಿಯವರ ತಾಯಿ. ಸಂಸತ್ತಿನ ಸಿಂಹ ಎಂದೇ ಪ್ರಸಿದ್ಧರಾದ ಶ್ಯಾಮ ಪ್ರಸಾದ್ ಮುಖರ್ಜಿಯವರು ೧೯೦೧ರಲ್ಲಿ ಪಶ್ಚಿಮ ಬಂಗಾಳದಲ್ಲಿ ಜನಿಸಿದರು.

ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ವಿಚಾರದಲ್ಲಿ ಮುಖರ್ಜಿಯವರ ಪಾತ್ರವು ಎಷ್ಟು ಹಿರಿದೋ, ಸ್ವಾತಂತ್ರ್ಯ ಪೂರ್ವದ ರಾಜಕೀಯದಲ್ಲೂ ಅವರ ಪಾತ್ರವು ಅಷ್ಟೇ ಹಿರಿದು. ತಮ್ಮ ಶೈಕ್ಷಣಿಕ ಜೀವನದುದ್ದಕ್ಕೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮುಖರ್ಜಿ ಅವರು ಕೋಲ್ಕತಾ ವಿಶ್ವ ವಿದ್ಯಾಲಯದಲ್ಲಿ ಪ್ರಥಮ ಸ್ಥಾನಿಯೂ ಹೌದು. ಬಂಗಾಳಿ ಭಾಷೆಯಲ್ಲಿ ಎಂ. ಎ, ಕಾನೂನು ಶಿಕ್ಷಣದಲ್ಲಿ ಪದವಿಯನ್ನು ಪಡೆದಿದ್ದ ಅವರು, ಬ್ಯಾರಿಸ್ಟರ್ ಪದವಿಯನ್ನೂ ಹೊಂದಿದ್ದರು.

ಕೋಲ್ಕತಾ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿದ್ದ ತಂದೆಗೆ ಕೋಲ್ಕತಾ ವಿಶ್ವವಿದ್ಯಾಲಯದ ಸಿನಿಕೇತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಸಹಾಯವನ್ನು ಮಾಡಿದ್ದ ಅನುಭವವನ್ನು ಹೊಂದಿದ್ದ ಮುಖರ್ಜಿಯವರು ೧೯೩೪ನೇ ಇಸವಿಯಲ್ಲಿ ಕೋಲ್ಕತಾ ವಿಶ್ವ ವಿದ್ಯಾಲಯದ ಉಪಕುಲಪತಿಯಾಗಿ ನಿಯೋಜನೆ ಪಡೆದಾಗ ಅವರ ವಯಸ್ಸು ಕೇವಲ ಮೂವತ್ತ ಮೂರು ವರ್ಷ. ಭಾರತೀಯ ಶಿಕ್ಷಣ ಪದ್ಧತಿ ಸಂಪೂರ್ಣ ನಶಿಸಿ ಆಧುನಿಕ ಆಂಗ್ಲಭಾಷಾಮಯವಾದ ಶಿಕ್ಷಣ ಪದ್ಧತಿಯೇ
ರಾರಾಜಿಸುತ್ತಿದ್ದ ವಿಶ್ವವಿದ್ಯಾಲಯದಲ್ಲಿ ಭಾರತೀಯ ಭಾಷೆಗಳಿಗೆ ಅಸ್ತಿತ್ವವೇ ಇಲ್ಲದಂಥ ವಾತಾವರಣವು ನಿರ್ಮಾಣವಾಗಿತ್ತು.

ಬಂಗಾಳದ ವಿದ್ಯಾರ್ಥಿಗಳಿಗೆ ತಮ್ಮ ಮಾತೃಭಾಷೆಯಾದ ಬಂಗಾಲಿಯಲ್ಲಿ ಶಿಕ್ಷಣವನ್ನು ಪಡೆಯುವುದು ಸಾಧ್ಯವೇ ಇರಲಿಲ್ಲ. ಇಂಥ ಸಂದರ್ಭದಲ್ಲಿ ಉಪಕುಲಪತಿ ಗಳಾಗಿದ್ದ ಶ್ಯಾಮ ಪ್ರಸಾದ್ ಮುಖರ್ಜಿ, ಅಲ್ಲಿನ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿಯವರೆಗೆ ಮಾತೃಭಾಷೆಯಾದ ಬಂಗಾಲಿಯಲಿ ಶಿಕ್ಷಣ ಪಡೆಯಲು ಅವಕಾಶ ವಾಗುವಂತೆ ವಿಶ್ವ ವಿದ್ಯಾಲಯ ಕಾಯಿದೆಯಲ್ಲಿ ಮಾನ್ಯತೆಯನ್ನು ಕೊಡಿಸುತ್ತಾರೆ. ವಿಶ್ವ ವಿದ್ಯಾಲಯದಲ್ಲಿ ಬಂಗಾಲಿ ಭಾಷೆಗೆ ಪ್ರಾಧಾನ್ಯತೆ ನೀಡುವ ಉದ್ದೇಶದಿಂದ ರವೀಂದ್ರನಾಥ್ ಠಾಗೋರರನ್ನು ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕೆ ಆಹ್ವಾನಿಸಿ ಬಂಗಾಲಿ ಭಾಷೆಯಲ್ಲಿ ಭಾಷಣ ಮಾಡಿಸುತ್ತಾರೆ.

ಮಾತ್ರವಲ್ಲದೆ ಬಂಗಾಳಿ ಭಾಷ ವಿಭಾಗದ ಪ್ರಾಧ್ಯಾಪಕರಾಗಿ ನೇಮಿಸುತ್ತಾರೆ. ಇಷ್ಟು ಮಾತ್ರವಲ್ಲದೆ ವಿಶ್ವ ವಿದ್ಯಾಲಯದ ಮುಖಾಂತರ ಅನೇಕ ಬಂಗಾಲಿ ಸಾಹಿತ್ಯದ ಕೈಪಿಡಿಗಳನ್ನು ಮುದ್ರಿಸಲಾಗುತ್ತದೆ. ಬಂಗಾಲಿ ಮಾತ್ರವಲ್ಲದೆ, ಹಿಂದಿ ಉರ್ದು ಮತ್ತು ಆಸ್ಸಾಮಿ ಮುಂತಾದ ಭಾರತೀಯ ಭಾಷೆಗಳಿಗೂ ವಿಶ್ವ ವಿದ್ಯಾಲಯದಲ್ಲಿ ಅವಕಾಶವನ್ನು ನೀಡಲಾಗುತ್ತದೆ. ಚೀನಾ ಮತ್ತು ಟಿಬೆಟಿಯನ್ ವಿದ್ಯಾರ್ಥಿಗಳಿಗೂ ಅವಕಾಶ ನೀಡುವ ಮೂಲಕ ಏಷ್ಯಾದ ಸಂಸ್ಕೃತಿಯನ್ನು ಒಗ್ಗೂಡಿಸುವ ಪ್ರಯತ್ನವನ್ನೂ ಮಾಡುತ್ತಾರೆ.

ಕೃಷಿಯನ್ನೂ ಕೂಡ ಒಂದು ಕಲಿಕಾ ವಿಷಯವನ್ನಾಗಿ ಆಯ್ದುಕೊಂಡು ಡಿಪ್ಲೋಮಾ ಪದವಿಯನ್ನು ನೀಡುವ ಹೊಸ ಆಲೋಚನೆಯನ್ನು ಪ್ರಯತ್ನಿಸುತ್ತಾರೆ. ಇಷ್ಟು ಮಾತ್ರವಲ್ಲದೆ ಅನುತ್ತೀರ್ಣರಾದ ವಿದ್ಯಾರ್ಥಿಗಳು ಎರಡನೇ ಬಾರಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಪದ್ಧತಿಯನ್ನೂ ಅಳವಡಿಸುತ್ತಾರೆ. ದೇಶದ ಭವಿಷ್ಯವನ್ನು ನಿರ್ಮಿಸುವ ಯುವ ಜನರ ಸರ್ವತೋಮುಖ ಅಭಿವೃದ್ಧಿಯ ಕುರಿತಾಗಿ ಶ್ಯಾಮಪ್ರಸಾದರು ಹೆಚ್ಚಿನ ಕಾಳಜಿಯನ್ನು ಹೊಂದಿದ್ದರು. ಇದೇ ಕಾರಣಕ್ಕಾಗಿ ಅವರು ವಿಶ್ವ
ವಿದ್ಯಾಲಯದಲ್ಲಿ ಆಧುನಿಕ ಮತ್ತು ತಾಂತ್ರಿಕ ತರಬೇತಿಗಳನ್ನೂ ನೀಡುವತ್ತ ಶ್ರಮಿಸುತ್ತಾರೆ. ಸೈನ್ಯಕ್ಕೆ ಭರ್ತಿ ಹೊಂದುವ ಇಚ್ಛೆಯನ್ನು ಹೊಂದಿರುವ ವಿದ್ಯಾರ್ಥಿ ಗಳಿಗಾಗಿ ತರಬೇತಿಯನ್ನು ನೀಡುವುದು ಮಾತ್ರವಲ್ಲದೆ ಭಾರತೀಯ ವಾಯುಪಡೆಯ ಸಹಯೋಗದೊಂದಿಗೆ ಇಂಟರ್ನ್ಶಿಪ್‌ಗಳನ್ನೂ ನೀಡಲು ಪ್ರಾರಂಭಿಸುತ್ತಾರೆ. ಶಿಕ್ಷಕರ ತರಬೇತಿ ಮತ್ತು ಮಹಿಳೆಯರ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡುವ ಉದ್ದೇಶದಿಂದ ಹೋಮ್ ಸೈನ್ಸ್ ತರಗತಿಗೂ ಉತ್ತೇಜನವನ್ನು ನೀಡುತ್ತಾರೆ.

ಯುವ ವರ್ಗದ ಶಿಕ್ಷಣ ವ್ಯವಸ್ಥೆಯು ಸರಿಯಾದ ದಿಶೆಯಲ್ಲಿ ಸಾಗಿದಾಗ ಮಾತ್ರ ರಾಷ್ಟ್ರದ ಭವಿಷ್ಯ ಉತ್ತಮವಾಗಲು ಸಾಧ್ಯ ಎಂಬುದು ಮುಖರ್ಜಿಯವರ ಬಲವಾದ ನಂಬಿಕೆಯಾಗಿತ್ತು.