Sunday, 15th December 2024

ವಿವೇಕಾನಂದರು ಮತ್ತು ಆತ್ಮನಿರ್ಭರ ಭಾರತ

ಅಭಿಮತ

ಸುದರ್ಶನ ಕೆ. – sudharshankannadiga@gmail.com

ಕರೋನಾ ಕಾಲದ ಬಿಕ್ಕಟ್ಟು ಪ್ರತಿಯೊಬ್ಬರ ಪಾಲಿಗೆ ಕಠಿಣ ಹಾಗೂ ಭವಿಷ್ಯದ ಊಹೆಗೂ ತೋಚದ ಮಾನಸಿಕ ಪರಿಸ್ಥಿತಿಗೆ ತಲುಪಿತ್ತು.

ಒಂದೆಡೆ ಕಾಯಿಲೆಗೆ ಪರಿಹಾರವಾಗಿ ಲಸಿಕೆಯ ಸಂಶೋಧನೆ ಹಾಗೂ ಮತ್ತೊಂದೆಡೆ ದೇಶದ ಆರ್ಥಿಕತೆಯ ಪತನ. ಇವೆರಡೂ ಅನಿಶ್ಚಿತತೆಗಳ ನಡುವೆ ದಿನಾಂಕ 12 ಮೇ 2020ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡುತ್ತಾ, ಆತ್ಮನಿರ್ಭರ ಭಾರತ (ಸ್ವಾವಲಂಭಿ ಭಾರತ)ಕ್ಕೆ ಕರೆಕೊಟ್ಟರು.

ಇದರರ್ಥ ಭಾರತ ಇತರ ದೇಶಗಳ ನಡುವೆ ವಹಿವಾಟುಗಳನ್ನು ನಿಷೇಧಿಸಿ ಕೇಂದ್ರಿಕೃತವಾಗುವುದಲ್ಲ, ಬದಲಾಗಿ ತನಗಿರುವ ಸಾಮರ್ಥ್ಯದಿಂದ ಜಗತ್ತಿಗೆ ಸರಬರಾಜು ಮಾಡಬಲ್ಲ ಮಟ್ಟಕ್ಕೆ ಬೆಳೆದು ಜಗತ್ತಿನ ನಾಯಕನ ಸ್ಥಾನಕ್ಕೇರುವುದು. ಇದಕ್ಕಾಗಿ ದೇಶದ
ವರ್ಷದ ಆರ್ಥಿಕತೆಯ ಶೇ.10ರಷ್ಟು (20ಲಕ್ಷ ಕೋಟಿ) ಹಣವನ್ನು ಈ ದಿಕ್ಕಿನ ಯೋಜನೆಗಳಿಗೆ ಸಹಕಾರಿಯಾಗುವ ಪ್ಯಾಕೇಜ್ ಘೋಷಿಸಿದರು. ಆದರೆ ಈ ರೀತಿಯ ಕರೆ ಇದೇ ಮೊದಲಲ್ಲ.

ಸುಮಾರು 125ವರ್ಷಗಳ ಹಿಂದೆ ಭಾರತೀಯ ಸಂತನೊಬ್ಬ ಅಮೆರಿಕದ ವಿಶ್ವವಿದ್ಯಾಲಯ ಗಳಲ್ಲಿ, ಚರ್ಚುಗಳಲ್ಲಿ “this is your century right now, but 21st century is indias century ಎಂದು ಹೇಳುತ್ತಿದ್ದ. ಅವರು ಬೇರಾರು ಅಲ್ಲ ಇಂದು (12 ಜನವರಿ) 158ನೇ ಜನ್ಮದಿನದಂದು ನೆನಪಿಸಿಕೊಳ್ಳಬೇಕಾದ ವೀರಸನ್ಯಾಸಿ ಸ್ವಾಮಿ ವಿವೇಕಾನಂದರು. ಇಂದು ನರೇಂದ್ರ ಮೋದಿಯವರೂ ಸಹ ಆತ್ಮನಿರ್ಭರ ಭಾರತದ ಘೋಷಣೆಯ ಭಾಗವಾಗಿ 21ನೇ ಶತಮಾನ ಭಾರತದ್ದು ಎಂದು ಹೇಳುತ್ತಿದ್ದಾರೆ. ಸ್ವಾವಲಂಬಿ ಭಾರತ ವೆಂದರೆ ಜಗತ್ತಿಗೆ ಬೇಕಾದ ವಸ್ತುಗಳನ್ನು ಪ್ರಾದೇಶಿಕವಾಗಿ ಸಿಗಬಹುದಾದ ವಸ್ತುಗಳನ್ನು ಬಳಸಿ, ಇಲ್ಲಿಯೇ ತಯಾರಿಸಿ ಸರಬರಾಜು ಮಾಡುವುದು. ರಫ್ತು ಹೆಚ್ಚಾದಂತೆ ಭಾರತದ ಆರ್ಥಿಕತೆ ದೃಢವಾಗುತ್ತದೆ.

ಆದರೆ ಇದು ಸುಲಭ ಸಾಧ್ಯವೇ? ಇಲ್ಲಿನ ತಯಾರಿಕಾ ಸಾಮರ್ಥ್ಯ ಹೆಚ್ಚಿಸಲು ಮತ್ತು ಅವುಗಳನ್ನು ಜಗತ್ತಿನ ‘ಬ್ರ್ಯಾಂಡ್’ ಮಾಡಲು ಕೇಂದ್ರ ಸರಕಾರದ ಅಥವಾ ಜನರ ಮುಂದಿರುವ ಸವಾಲುಗಳೆಂದರೆ ಭೂ ಮತ್ತು ಕಾರ್ಮಿಕ ಕಾನೂನುಗಳ ಸುಧಾರಣೆ, ಸರಬ ರಾಜು ಸರಪಳಿಯನ್ನು ಪಾರದರ್ಶಕ ಮತ್ತು ಗಟ್ಟಿಗೊಳಿಸುವುದು.

ತೆರಿಗೆ ಪದ್ಧತಿಯ ಸರಳೀಕರಣ. ಮೂಲಸೌಕರ್ಯದ ಅಭಿವೃದ್ಧಿ.ಕೌಶಲ್ಯಯುತ ಮಾನವ ಸಂಪನ್ಮೂಲ. ಆರ್ಥಿಕತೆಯ ಪಾರದರ್ಶಕತೆ ಮತ್ತು ದೃಢತೆ ಹೂಡಿಕೆಗೆ ಬೆಂಬಲ. ಈ ಮೇಲಿನವುಗಳು ದೇಶದ ಒಟ್ಟು ಸಮಾಜದ ಏಕಶ್ರಮದಿಂದ ಮಾತ್ರಸಾಧ್ಯ. ಸ್ವಹಿತಾಸಕ್ತಿಗಿಂತ ದೇಶದ ಹಿತ ಮುಖ್ಯವಾಗಬೇಕು. ಹಾಗೂ ಸ್ವಹಿತವು ದೇಶದ ಹಿತಕ್ಕೆ ಕೈಜೋಡಿಸಬೇಕು. ಇದನ್ನೇ ಉದ್ದೇಶಿಸಿ ತಮ್ಮ ಎಲ್ಲಾ ಭಾಷಣಗಳಲ್ಲಿಯೂ ಸ್ವಾಮಿ ವಿವೇಕಾನಂದರು ‘ಏಕತೆ’ಯ ಮಾತನ್ನು ಪ್ರತಿಪಾದಿಸುತ್ತಿದ್ದರು. ಜನರ ಗುರಿ, ಮೆದುಳು ಹಾಗೂ ಶ್ರಮ ಒಂದೇ ದಿಕ್ಕಿನ ಕಡೆಗೆ ನಡೆಯಬೇಕು.

ಈಗಿನ ಕಾರ್ಪೋರೇಟ್ ಕಂಪನಿಗಳಲ್ಲಿ ಕಾಣುವಂತೆ ಗುರಿಮುಟ್ಟುವ ದಾರಿ ಮತ್ತು ವಿಧಾನಗಳು ಬೇರೆಯಾದರೂ ಗುರಿ ಒಂದೇ ಆಗಿರಬೇಕು. ಸ್ವಾವಲಂಬಿಯಾಗುವತ್ತ ಮೊದಲ ಹೆಜ್ಜೆಯೆಂದರೆ ಭಾರತೀಯ ಇತಿಹಾಸದ ಭವ್ಯ ಪರಂಪರೆಯನ್ನು ಒಪ್ಪಿಕೊಂಡು ಹೆಮ್ಮೆಪಡುವುದು ಪಾಶ್ಚಿಮಾತ್ಯರ ಅಂಧ ಅನುಕರಣೆಯಲ್ಲ. ಹಾಗೆಂದ ಮಾತ್ರಕ್ಕೆ ಪಾಶ್ಚಿಮಾತ್ಯ ದೇಶಗಳ ವೈರತ್ವ ಸಾಽಸುವಲ್ಲಿ,
ಬದಲಿಗೆ ಅವರಿಂದ ಕಲಿಯೋಣ. ಆದರೆ ಅಂಧ ಅನುಕರಣೆ ಬೇಡ ಎಂದು ಸ್ವಾಮೀಜಿ ಹೇಳುತ್ತಾರೆ.

ಸ್ವಾವಲಂಬಿ ಭಾರತವೆಂದರೆ ಕೇವಲ ಭೌತಿಕವಾಗಿ ಕಾಣುವ ವಸ್ತುಗಳ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವುದಲ್ಲ, ನರೇಂದ್ರ ಮೋದಿಯವರು ಹೇಳುವಂತೆ ‘ಭಾರತ ಸ್ವಾವಲಂಬನೆ ಸಾಧಿಸುವುದು ಜನರ ಯೋಚನೆ ಮತ್ತು ಯೋಜನೆಗಳಲ್ಲಿ ಸ್ವಾವಲಂಬಿಗಳಾದಾಗ ಮಾತ್ರ. ಇದನ್ನೇ ಸ್ವಾಮಿ ವಿವೇಕಾನಂದರೂ ಸಹ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಕೇವಲ ಹೆಚ್ಚೆಚ್ಚು ಮಾಹಿತಿಗಳನ್ನು ಮೆದುಳಿನಲ್ಲಿ ಸಂಗ್ರಹಿಸಿಕೊಳ್ಳುವ ಜೀರ್ಣವಾಗದ ವಿಚಾರಗಳಲ್ಲ.

ಬದಲಿಗೆ ಜೀವನ ನಿರ್ಮಾಣ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುವ ಆಲೋಚನೆಗಳನ್ನು ಸೃಷ್ಟಿಸಬಲ್ಲ ಸಾಮರ್ಥ್ಯ ತುಂಬು ವುದು ಹಾಗೂ ಅದರಿಂದ ಶಿಕ್ಷಣವು ರಾಷ್ಟ್ರೀಯ ಹಿತಾಸಕ್ತಿಯ ಜತೆಗೆ ನಡೆಯಬೇಕು ಎಂದದ್ದು.