Saturday, 14th December 2024

ಒಮ್ಮೊಮ್ಮೆ ನಾವು ಬರೆದಿದ್ದನ್ನು ನಾವೇ ತಿನ್ನಬೇಕಾಗುತ್ತದೆ !

– ವಿಶ್ವೇಶ್ವರ ಭಟ್

ಪತ್ರಿಕೋದ್ಯಮದಲ್ಲಿ ಒಂದು ಮಾತಿದೆ – ‘ಕ್ಷಮೆ ಕೇಳಲು ಸಿದ್ಧನಿರುವ ಸಂಪಾದಕ ಎಂಥ ಲೇಖನವನ್ನಾದರೂ ಪ್ರಕಟಿಸುತ್ತಾನೆ. ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುತ್ತಾನೆ.’

ಆದರೆ ಕ್ಷಮೆ ಕೇಳಿದರೆ ಅದರಂಥ ಅವಮಾನ ಮತ್ತೊಂದಿಲ್ಲ, ಅದು ತನ್ನ ಅಧೋಗತಿ ಎಂದೇ ಎಲ್ಲಾ ಸಂಪಾದಕರೂ ಬಯಸುತ್ತಾರೆ. ಹೀಗಾಗಿ ಯಾರೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಕ್ಷಮೆ ಯಾಚಿಸಿದರೆ ಅದು ವೈಯಕ್ತಿಕ ಹಿನ್ನೆಡೆ, ಘೋರ ಅಪಚಾರ ಎಂದೇ ಎಲ್ಲ ಸಂಪಾದಕರೂ ಭಾವಿಸುತ್ತಾರೆ. ಆದರೆ ರಿಸ್ಕ್ ತೆಗೆದುಕೊಳ್ಳದಿದ್ದರೆ, ನೀವು ಸಂಪಾದಕರೇ ಅಲ್ಲ. ಅಂಥವರು ಸೂರ್ಯ – ಚಂದ್ರರ ಬಗ್ಗೆ ಬರೆದುಕೊಂಡಿರಬಹುದಾದ ‘ಪಂಚಾಂಗ’ದ ಸಂಪಾದಕರಾಗಬಹುದು. ಕಾರಣ ಸೂರ್ಯ – ಚಂದ್ರರ ಬಗ್ಗೆ ಏನೇ ಬರೆದರೂ ಅವರು ಬಂದು ಸಂಪಾದಕರನ್ನು ಪ್ರಶ್ನಿಸುವುದಿಲ್ಲ. ಆದರೆ ಒಮ್ಮೊಮ್ಮೆ ಎಂಥಾ ಪ್ರಸಂಗ ಬರುತ್ತದೆ ಅಂದರೆ ನಮ್ಮ ಪದಗಳನ್ನು ನಾವೇ ಅಕ್ಷರಶಃ ತಿನ್ನಬೇಕಾಗುತ್ತದೆ. ಇದನ್ನು ಇನ್ನೂ ಕೆಟ್ಟದಾಗಿ ಹೇಳುವುದಾದರೆ, ನಾವು ಕಕ್ಕಿದ್ದನ್ನು ನಾವೇ ಎತ್ತಿ ಬಾಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ !

ಈ ಮಾತನ್ನು ಹೇಳಲು ಕಾರಣವಿದೆ. ಲಾಕ್ ಡೌನ್ ಕಾಲದಲ್ಲಿ , ನಾನು ನನ್ನಲ್ಲಿರುವ ಹಳೆಯ ಪತ್ರಿಕೆಗಳ ಸಂಗ್ರಹವನ್ನು ಹರಡಿಕೊಂಡು ಕುಳಿತಿದ್ದೆ. ತಕ್ಷಣ ನನ್ನ ಗಮನ ಸೆಳೆದ ಎರಡು ಪತ್ರಿಕೆಗಳನ್ನು ಎತ್ತಿಟ್ಟುಕೊಂಡೆ. ಮೊದಲನೆಯದು, ಸುಮಾರು ಮೂವತ್ತೊಂದು ವರ್ಷಗಳ (1989) ಹಳೆಯ ‘ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ’ ಮತ್ತು ಎರಡನೆಯದು ಸುಮಾರು ಮೂವತ್ತೇಳು ವರ್ಷಗಳ (1983) ಹಿಂದಿನ ‘ವಿಸ್ಡೆನ್ ಕ್ರಿಕೆಟ್ ಮಂತ್ಲಿ’ ಮ್ಯಾಗಜಿನ್.

‘ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ದ ಅಂದಿನ ಸಂಪಾದಕ ಪ್ರೀತಿಶ್ ನಂದಿ ಅವರು ಆ ವಾರ ಆ ಸ್ಟೋರಿ ಮಾಡಲು ನಿರ್ಧರಿಸಿದ್ದರು. ಅದಕ್ಕೂ ಎರಡು ವಾರಗಳ ಮೊದಲು, ಮನಮೋಹನ್ ದೇಸಾಯಿ ನಿರ್ದೇಶಿಸಿದ ಅಮಿತಾಬ್ ಬಚ್ಚನ್ ನಾಯಕನಾಗಿ ನಟಿಸಿದ ‘ಗಂಗಾ ಜಮುನಾ ಸರಸ್ವತಿ’ ಸಿನಿಮಾ ಬಿಡುಗಡೆ ಆಗಿತ್ತು. ಗಂಗಾ ಆಗಿ ಅಮಿತಾಬ್, ಜಮುನಾ ಪಾತ್ರದಲ್ಲಿ ಮೀನಾಕ್ಷಿ ಶೇಷಾದ್ರಿ ಮತ್ತು ಸರಸ್ವತಿಯಾಗಿ ಜಯಪ್ರದಾ ನಟಿಸಿದ ಚಿತ್ರವದು. ಮಿಥುನ್ ಚಕ್ರವರ್ತಿ, ಅಮರೇಶ್ ಪುರಿ, ಅರುಣಾ ಇರಾನಿ ಸಹ ಈ ಚಿತ್ರದಲ್ಲಿ ನಟಿಸಿದ್ದರು. ಸಿನಿಮಾ ಬಿಡುಗಡೆಯಾದ ಮೊದಲ ಮೂರು ದಿನ ಬಾಕ್ಸ್ ಆಫೀಸಿನಲ್ಲಿ ಭಾರಿ ಯಶಸ್ಸು ಕಂಡಿತು. ಆದರೆ ಎಲ್ಲಾ ಪತ್ರಿಕೆಗಳು ’ಇದೊಂದು ಸಾಮಾನ್ಯ ಚಿತ್ರ. ತಾಂತ್ರಿಕವಾಗಿ ಎಳಸಲು ಸಿನಿಮಾ’ ಎಂದು ವಿಮರ್ಶೆ ಬರೆದಿದ್ದರ ಪರಿಣಾಮ, ಎರಡನೇ ವಾರದಿಂದ ಚಿತ್ರ , ಗಳಿಕೆಯಲ್ಲಿ ತೀವ್ರ ಇಳಿಮುಖ ಕಂಡಿತು. ಮೂರನೇ ವಾರದಲ್ಲಿ ಆ ಸಿನಿಮಾ ಎಲ್ಲಾ ಚಿತ್ರ ಮಂದಿರಗಳಿಂದ ಎತ್ತಂಗಡಿಯಾಯಿತು.

ಅದು ಅಮಿತಾಬ್ ಮತ್ತು ಮನಮೋಹನ್ ದೇಸಾಯಿ ಜೋಡಿ ಉತ್ತುಂಗದಲ್ಲಿದ್ದ ಕಾಲ. ಯಾವಾಗ ಈ ಚಿತ್ರ ದಯನೀಯ ಸೋಲು ಕಂಡಿತೋ, ಆ ವಾರದ ಮುಖಪುಟಕ್ಕೆ ಇದೇ ಚಿತ್ರದ ಸಾಧನೆಯನ್ನಿಟ್ಟುಕೊಂಡು ಸ್ಟೋರಿ ಮಾಡಲು ಪ್ರೀತಿಶ್ ನಂದಿ ನಿರ್ಧರಿಸಿದರು. ನಂದಿ ಏನೇ ಮಾಡಲು ಅದನ್ನು ಅತ್ಯಂತ ಪರಿಣಾಮಕಾರಿಯಾಗಿ, ಮನಮುಟ್ಟುವಂತೆ ಮಾಡುವುದರಲ್ಲಿ ಎತ್ತಿದ ಕೈ. ಅವರದು ಒಂಥರಾ ಅಡ್ವರ್ಟೈಸಿಂಗ್ ಜರ್ನಲಿಸಂ. ಮುಖಪುಟ ಅಂದ್ರೆ ಜಾಹೀರಾತು ಆರ್ಟ್ ವರ್ಕ್ ಥರ ಇರುತ್ತಿತ್ತು. ಸದರಿ ಸಿನಿಮಾ ಸೋತ ಮಾತ್ರಕ್ಕೆ ಅಮಿತಾಬ್ ಅವರ ಸಿನಿಮಾ ವೃತ್ತಿಜೀವನವೇ ಅಂತ್ಯವಾಯಿತು ಎಂಬ ಅರ್ಥ ಬರುವ ರೀತಿಯಲ್ಲಿ ಬರೆದುಬಿಟ್ಟರು. ತಲೆತಗ್ಗಿಸಿದ ಅಮಿತಾಬ್ ಚಿತ್ರದ ಕೆಳಗಡೆ ದಪ್ಪಕ್ಷರಗಳಲ್ಲಿ FINISHED ! ಎಂಬ ಹೆಡ್ಡಿಂಗ್. ಅದರ ಕೆಳಭಾಗದಲ್ಲಿ With The Crash Of Ganga Jamunaa Saraswathi, Is It The End Of The Road For The Superstar ? ಎಂದು ಬರೆದುಬಿಟ್ಟರು. ಆ ಮುಖಪುಟವನ್ನು ಓದಿದರೆ ಒಳಗಿನ ವರದಿ ಓದಬೇಕಾದ ಅಗತ್ಯವೇ ಇರಲಿಲ್ಲ. ಆ ಒಂದು ಸಿನಿಮಾದ ಸೋಲು, ಸೂಪರ್ ಸ್ಟಾರ್ ಅಮಿತಾಬ್ ಅವರ ಸಿನಿಮಾ ಜೀವನದ ದಾರುಣ ಅಂತ್ಯ ಎಂಬ ರೀತಿಯಲ್ಲಿ ಬಣ್ಣಿಸಿ ಸುದೀರ್ಘ ವರದಿ ಪ್ರಕಟಿಸಿ ಬಿಟ್ಟರು !

ಅದನ್ನು ನೋಡಿದ ಅಮಿತಾಬ್ ಸ್ವತಃ ಕಲ್ಲವಿಲರಾದರು. ಸಂಪಾದಕರಿಗೆ ಫೋನ್ ಮಾಡಿದರೆ, ನಂದಿ ಲೈನ್ ಗೆ ಬರಲಿಲ್ಲ. ಅದು ಆ ಪತ್ರಿಕೆಯ ಉತ್ತುಂಗದ ಕಾಲ. ಅಮಿತಾಬ್ ವೃತ್ತಿ ಜೀವನಕ್ಕೆ ತಾನು ಮಾರಕನಾದೆ ಎಂಬ ಅಪರಾಧಿ ಪ್ರಜ್ಞೆ ಕಾಡಿದ್ದರಿಂದ, ಇನ್ನು ಮುಂದೆ ತಾವು ಯಾವ ಸಿನಿಮಾವನ್ನೂ ನಿರ್ದೇಶಿಸುವುದಿಲ್ಲ ಎಂದು ದೇಸಾಯಿ ತಮ್ಮ ಸ್ನೇಹಿತರ ಮುಂದೆ ಹೇಳಿದರು. ದುರ್ದೈವವೆಂದರೆ ಅದೇ ಅವರ ಕೊನೆಯ ಚಿತ್ರವಾಯಿತು. ಚಿತ್ರರಂಗದಲ್ಲಿದ್ದ ದೇಸಾಯಿ ಮತ್ತು ಅಮಿತಾಬ್ ವಿರೋಧಿಗಳು ‘ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ದ ಹತ್ತು ಸಾವಿರ ಪ್ರತಿಗಳನ್ನು ಹೆಚ್ಚುವರಿಯಾಗಿ ಮುದ್ರಿಸಿ ಮುಂಬೈಯಲ್ಲಿ ಹಂಚಿದರು. ಒಂದು ಸಿನಿಮಾ ನಿರ್ಮಾಣ ಸಂಸ್ಥೆ ಪತ್ರಿಕೆಯ ಮುಖಪುಟವನ್ನೇ ಪೋಸ್ಟರ್ ಮಾಡಿಸಿ ಮುಂಬೈ ಬೀದಿಗಳಲ್ಲಿ ಅಂಟಿಸಿ ವಿಕೃತ ಆನಂದ ಅನುಭವಿಸಿತು. ಅವರಿಗೆ ಈ ಜೋಡಿಯನ್ನು ಹೇಗಾದರೂ ಮಾಡಿ ಮುರಿಯಬೇಕು ಎಂಬುದು ಉದ್ದೇಶವಾಗಿತ್ತು. ಆ ಸಂಚಿಕೆಯಲ್ಲಿ ನಂದಿ ಅವರು, ಹಿಂದಿ ಚಿತ್ರರಂಗದ ಒಬ್ಬ ಯಶಸ್ವಿ ನಿರ್ದೇಶಕ ಮತ್ತು ಸೂಪರ್ ಸ್ಟಾರ್ ವೃತ್ತಿ ಜೀವನಕ್ಕೆ ಅಂತ್ಯ ಹಾಡಲು ಬಯಸಿದ್ದರು ಎಂದು ಯಾರಾದರೂ ಭಾವಿಸಿದರೆ, ನಿಜ ಎಂದು ತಿಳಿಯಲು ಅನೇಕ ನಿದರ್ಶನಗಳನ್ನು ಒದಗಿಸಿದ್ದರು.

ಈ ಸಂಚಿಕೆಗೆ ಓದುಗರಿಂದ ಅತ್ಯಂತ ಬಿರುಸಿನ ಮತ್ತು ಆಕ್ರೋಶದ ಪ್ರತಿಕ್ರಿಯೆಗಳು ಬಂದವು. ಒಂದು ಸಿನಿಮಾದ ಸೋಲು ಯಶಸ್ವಿ ನಾಯಕ ನಟನ ವೃತ್ತಿ ಜೀವನದ ಕೊನೆ ಅಲ್ಲ ಎಂದು ಸಹಸ್ರಾರು ಓದುಗರು ಪತ್ರ ಬರೆದರು. ಪತ್ರಿಕೆಯ ನಿಲುವನ್ನು ಖಂಡಿಸಿದರು. ಅಮಿತಾಬ್ ಅವರ ಅಭಿಮಾನಿಗಳಂತೂ ಪತ್ರಿಕಾ ಕಚೇರಿಗೆ ಲಗ್ಗೆ ಹಾಕುವುದಾಗಿ ಬೆದರಿಸಿದರು. ಅಲ್ಲಲ್ಲಿ ಪತ್ರಿಕೆಗಳ ಪ್ರತಿಗಳನ್ನು ಸುಡಲಾಯಿತು. ಕೆಲವರಂತೂ ನಂದಿ ಇದಕ್ಕೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ‘ಓದುಗರಿಗೆ ಅವರ ಅಭಿಪ್ರಾಯ ಹೇಳುವ ಅಧಿಕಾರವಿದೆ. ಅವರ ಅಭಿಪ್ರಾಯವನ್ನು ಮನ್ನಿಸುತ್ತೇನೆ. ಆದರೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದು ನಂದಿ ಪತ್ರಿಕೆಯಲ್ಲಿಯೇ ಬರೆದರು. ಅಮಿತಾಬ್ ಅವರ ಬದುಕು FINISH ಮಾಡಲು ಅಥವಾ ಫಿನಿಷ್ ಆಗಿದೆಯೆಂದು ಷರಾ ಬರೆಯಲು ಆ ನಂದಿ ಯಾರು ಎಂದು ಪತ್ನಿ ಜಯಾ ಬಾಧುರಿ ಪ್ರಶ್ನಿಸಿದರು. ಅಂತೂ ಈ ಒಂದು ಸಂಚಿಕೆ ಇನ್ನಿಲ್ಲದ ತೀವ್ರ ವಿವಾದವನ್ನು ಸೃಷ್ಟಿಸಿತು.

ಆ ಮುಖಪುಟ ವರದಿಯಿಂದ ಅಕ್ಷರಶಃ ಅಮಿತಾಬ್ ಮತ್ತು ದೇಸಾಯಿ ಆಕ್ರೋಶಗೊಂಡಿದ್ದರು. ಸಾಮಾನ್ಯವಾಗಿ ಎಂದೂ ವಿಚಲಿತರಾಗದ ಸೂಪರ್ ಸ್ಟಾರ್ ಆ ಸಂಚಿಕೆ ನೋಡಿ ಕುದ್ದು ಹೋಗಿದ್ದರು. ಹೇಗಾದರೂ ಮಾಡಿ, ಪತ್ರಿಕೆಯ ಸಂಪಾದಕನಿಗೆ ಪಾಠ ಕಲಿಸಲೇಬೇಕು ಎಂದು ನಿರ್ಧರಿಸಿದರು. ಹಾಗಂತ ಯಾವುದೇ ವಾಮ ಮಾರ್ಗ ಅನುಸರಿಸುವುದು ಅವರಿಗೆ ಇಷ್ಟವಿರಲಿಲ್ಲ. ಆ ಸಿನಿಮಾ ಮೂಲಕವೇ ಉತ್ತರಿಸಬೇಕು ಎಂದು ನಿರ್ಧರಿಸಿದರು. ಸಿನಿಮಾ ನಿರ್ಮಾಪಕ ಎಸ್.ರಾಮನಾಥನ್ ಮತ್ತು ನಿರ್ದೇಶಕ ದೇಸಾಯಿ ಜತೆ ಎರಡು ದಿನ ಚರ್ಚಿಸಿದರು. ಚಿತ್ರಕಥೆ ಬರೆದ ಪ್ರಯಾಗ್ ರಾಜ್ ಮತ್ತು ಸಂಭಾಷಣೆ ಬರೆದ ಖಾದರ್ ಖಾನ್ ಅವರ ಜತೆಯೂ ಸಮಾಲೋಚನೆ ಮಾಡಿದರು. ಅಮಿತಾಬ್ ತೀರ್ಮಾನಕ್ಕೆ ರಾಮನಾಥನ್ ಸಮ್ಮತಿಸಿದರು.

ಇಡೀ ಚಿತ್ರದಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿ, ತಾಂತ್ರಿಕ ದೋಷ – ಕೊರತೆಯನ್ನು ಸರಿಪಡಿಸಿ ಸಿನಿಮಾವನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ನಿರ್ಧರಿಸಿದರು. ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಪಂಕಜ್ ಉದಾಸ್, ಸುರೇಶ ವಾಡ್ಕರ್, ಸಾಧನಾ ಸರ್ಗಮ್ ಹಾಡಿದ ಹತ್ತು ಹಾಡುಗಳು ಸಿನಿಮಾದ ಹೈಲೈಟ್ಸ್ ಎಂಬಂತೆ ಪ್ರಚಾರ ಮಾಡಲಾಯಿತು. ಇದೊಂದು ಅಪ್ಪಟ ಕೌಟುಂಬಿಕ ಸಿನಿಮಾ ಎಂಬಂತೆ ಜಾಹೀರಾತು ನೀಡಲಾಯಿತು. ಮುಂದಿನ ವರ್ಷವೇ ಈ ಚಿತ್ರವನ್ನು ಬಿಡುಗಡೆ ಮಾಡಿದರು. ಈ ಚಿತ್ರದ ಬಗ್ಗೆ ಕೆಟ್ಟದಾಗಿ ಬರೆದವರೆಲ್ಲ ತಮ್ಮ ಮುಖಗಳನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು, ಆ ರೀತಿ ಸಿನಿಮಾ ಯಶಸ್ಸು ಕಂಡಿತು. ಮೊದಲ ಎರಡು ವಾರಗಳಲ್ಲಿ, ಹಿಂದಿನ ಸಲ ಬಿಡುಗಡೆಯಾದಾಗ ಗಳಿಸಿದ್ದಕ್ಕಿಂತ ಶೇ.ನಲವತ್ತರಷ್ಟು ಹೆಚ್ಚು ಗಳಿಕೆಯನ್ನು ಕಂಡಿತು.

ಈ ರೀತಿಯ ಯಶಸ್ಸನ್ನು ಕಾಣಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಎಲ್ಲಾ ಪತ್ರಿಕೆಗಳೂ ಅಮಿತಾಬ್ ತಮ್ಮ ಸೂಪರ್ ಸ್ಟಾರ್ ಪಟ್ಟವನ್ನು ವಿವಾದಾತೀತವಾಗಿ ಕಾಪಾಡಿಕೊಂಡಿದ್ದಾರೆ ಎಂದು ಬರೆದವು. ಇದರಿಂದ ನಂದಿ ಅವರ ಬುಡಕ್ಕೆ ಬಿಸಿ ತಟ್ಟಿತು. FINISHED ಎಂದು ಬರೆದಿದ್ದೀರಲ್ಲ, ಈಗೇನಂತೀರಾ? ಎಂದು ಓದುಗರು ಚುಚ್ಚಿ ಬರೆಯಲಾರಂಭಿಸಿದರು. ನಂದಿ ಅವರಿಗೆ ಬೇರೆ ದಾರಿ ಇರಲಿಲ್ಲ. ತಮ್ಮ ಮುಖಪುಟ ಲೇಖನವನ್ನು ವಾಪಸ್ ಪಡೆದಿರುವುದಾಗಿ ಬರೆದರು. ನಂದಿ ಅವರು ತಾವು ಬರೆದಿದ್ದನ್ನು ತಿನ್ನಬೇಕಾದ, ಕಕ್ಕಿದ್ದನ್ನು (ಬರೆದಿದ್ದನ್ನು) ಪುನಃ ಸೇವಿಸಬೇಕಾದ ಅತ್ಯಂತ ಕೆಟ್ಟ ಮತ್ತು ತೀವ್ರ ಮುಜುಗರದ ಪರಿಸ್ಥಿತಿ ಎದುರಿಸಬೇಕಾಗಿ ಬಂದಿತು. ಮುಂಬೈಯ ಕೆಲವು ಟ್ಯಾಬ್ಲಾಯ್ಡ್ ಪತ್ರಿಕೆಗಳು ‘Nandy Is FINISHED!’ ಎಂದು ಬರೆದವು.

ಎರಡನೆಯ ಪ್ರಸಂಗ..

ನನ್ನ ಮುಂದಿರುವ ಮತ್ತೊಂದು ಪತ್ರಿಕೆ ಈಗಾಗಲೇ ಹೇಳಿದ, ಸುಮಾರು ಮೂವತ್ತೇಳು ವರ್ಷಗಳ (1983) ಹಿಂದಿನ ‘ವಿಸ್ಡೆನ್ ಕ್ರಿಕೆಟ್ ಮಂತ್ಲಿ’ ಮ್ಯಾಗಜಿನ್. ಕ್ರಿಕೆಟ್ ಜಗತ್ತಿನಲ್ಲಿ ಈ ಪತ್ರಿಕೆಗೆ ಅದರದ್ದೇ ಆದ ಪ್ರಭಾವವಿದೆ. ಈ ಕಾರಣದಿಂದ ಗೌರವ ಮತ್ತು ಆದರಕ್ಕೆ ಪಾತ್ರವಾಗಿದೆ. ಎಲ್ಲಾ ಕ್ರಿಕೆಟ್ ಆಟಗಾರರೂ ಈ ಪತ್ರಿಕೆಯ ಮುಖಪುಟದಲ್ಲಿ ಕಂಗೊಳಿಸಬೇಕು, ತಮ್ಮ ಬಗ್ಗೆ ಪತ್ರಿಕೆಯ ಸಂಪಾದಕರು ಒಮ್ಮೆಯಾದರೂ ಹೊಗಳಿ ಬರೆಯಬೇಕು ಎಂದು ಆಸೆಪಡುತ್ತಾರೆ. ‘ವಿಸ್ಡೆನ್ ಕ್ರಿಕೆಟ್ ಮಂತ್ಲಿ’ ಮ್ಯಾಗಜಿನ್ ನಲ್ಲಿ ಪ್ರಕಟವಾದದ್ದೆಲ್ಲ ವೇದವಾಕ್ಯ ಎಂಬ ಭಾವನೆ ಈಗಲೂ ಇದೆ. ಆ ಪತ್ರಿಕೆಯ ಸಂಪಾದಕ ಡೇವಿಡ್ ಫ್ರಿತ್, 1983 ರ ಕ್ರಿಕೆಟ್ ವರ್ಲ್ಡ್ ಕಪ್ ಪಂದ್ಯ ನಡೆಯಲು ಕೆಲವು ದಿನಗಳಿದ್ದಾಗ, ಒಂದು ಸುದೀರ್ಘ ಲೇಖನ ಬರೆದಿದ್ದರು. ಆ ವರ್ಲ್ಡ್ ಕಪ್ ನಲ್ಲಿ ಯಾವ ಯಾವ ದೇಶಗಳ ಸ್ಥಿತಿ ಹೇಗಿವೆ, ಕೊನೆಯಲ್ಲಿ ಯಾವ ದೇಶ ಕಪ್ ಗಿಟ್ಟಿಸಬಹುದು ಎಂಬ ಬಗ್ಗೆ ಬರೆಯುತ್ತಾ, ಭಾರತ ಇಡೀ ಟೂರ್ನಮೆಂಟಿನಲ್ಲಿ ಒಂದೂ ಪಂದ್ಯ ಗೆಲ್ಲುವುದು ಡೌಟು ಎಂದು ಬರೆದಿದ್ದರು. ಅದಕ್ಕೆ ಅವರು ಸಮರ್ಥನೆಯನ್ನು ನೀಡಿದ್ದರು. 1975 ರಲ್ಲಿ ಭಾರತ (ಪೂರ್ವ ಆಫ್ರಿಕಾ ವಿರುದ್ಧ) ಒಂದೇ ಒಂದು ಪಂದ್ಯದಲ್ಲಿ ಗೆದ್ದಿತ್ತು. 1979 ರ ವರ್ಲ್ಡ್ ಕಪ್ ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಭಾರತ ಸೋತಿತ್ತು. ಶ್ರೀಲಂಕಾ ವಿರುದ್ಧ ಸಹ ಭಾರತಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಿರುವಾಗ ಈ ಸಲದ ವರ್ಲ್ಡ್ ಕಪ್ ನಲ್ಲಿ ಭಾರತದ ಸ್ಥಿತಿ ಮೊದಲಿನಂತೆಯೇ ಇದೆ, ಹೀಗಾಗಿ ಭಾರತಕ್ಕೆ ಕಪ್ ಮರೀಚಿಕೆಯೇ ಎಂದು ಬರೆದಿದ್ದರು. ಅಷ್ಟೇ ಅಲ್ಲ, ಭಾರತಕ್ಕೆ ಕೊನೆಯಿಂದ ಎರಡನೇ ಸ್ಥಾನವನ್ನು ನೀಡಿದ್ದರು.

ಆದರೆ ನಾಟಕೀಯ ಎಂಬಂತೆ, ಎಲ್ಲರ ಲೆಕ್ಕಾಚಾರಗಳನ್ನು ಹುಸಿಗೊಳಿಸಿ, ಆ ವರ್ಷದ ವರ್ಲ್ಡ್ ಕಪ್ ನಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಗೆಲುವು ಸಾಧಿಸಿ, ಕಪ್ ತನ್ನದಾಗಿಸಿಕೊಂಡಿತು. ‘ವಿಸ್ಡೆನ್ ಕ್ರಿಕೆಟ್ ಮಂತ್ಲಿ’ ಮ್ಯಾಗಜಿನ್ ಭವಿಷ್ಯವಾಣಿ ಸಂಪೂರ್ಣ ಸುಳ್ಳಾಯಿತು. ಒಂದು ವೇಳೆ ಆ ವರದಿಯನ್ನು ಪತ್ರಿಕೆಯ ವರದಿಗಾರ ಬರೆದಿದ್ದರೆ, ಅದರ ಹೊಣೆಯನ್ನು ಅವನ ತಲೆಗೆ ಕಟ್ಟಬಹುದಿತ್ತು. ಹೇಳಿ ಕೇಳಿ ಸಂಪಾದಕರೇ ಬರೆದ ಲೇಖನವದು. ಇದಕ್ಕಿಂತ ಮುಖಭಂಗ ಬೇರೇನಿದೆ ? ಡೇವಿಡ್ ಫ್ರಿತ್ ಗಂತೂ ಇದು ನುಂಗಲಾರದ ತುತ್ತಾಗಿತ್ತು. ಪತ್ರಿಕೆಯ ಭವಿಷ್ಯವಾಣಿ ಸುಳ್ಳಾಗಿದ್ದಕ್ಕೆ ಅನೇಕರು ಕೆಟ್ಟದಾಗಿ ಪ್ರತಿಕ್ರಿಯಿಸಿದರು. ಕೆಲವರಂತೂ ನೀವೇಕೆ ಪತ್ರಿಕೆಯನ್ನು ಮುಚ್ಚಬಾರದು ಎಂದು ಚುಚ್ಚಿದರು. ಇದು ಪತ್ರಿಕೆಯ ವಿಶ್ವಾಸಾರ್ಹತೆಗೆ ಮಾರಕವಾದ ವರದಿ ಎಂದೂ ಬರೆದರು.

ಆದರೆ ಅಮೆರಿಕದ ನ್ಯೂಜೆರ್ಸಿಯಿಂದ ಮಾನ್ ಸಿಂಗ್ ಎಂಬಾತ ಬರೆದ ಪತ್ರವನ್ನು ‘ವಿಸ್ಡೆನ್ ಕ್ರಿಕೆಟ್ ಮಂತ್ಲಿ’ ಮ್ಯಾಗಜಿನ್ ಪ್ರಕಟಿಸಿತು. ಅದರಲ್ಲಿ ಸಿಂಗ್ ಅವರು ಬರೆದಿದ್ದರು – ‘ಕ್ರಿಕೆಟ್ಟೇ ಗೊತ್ತಿಲ್ಲದ ದೇಶದಲ್ಲಿ ವಾಸಿಸುವ ನಾನು, ಈ ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಸುದ್ದಿಯನ್ನು ಬ್ರಿಟಿಷ್ ಜರ್ನಲ್ ಮತ್ತು ಪತ್ರಿಕೆಗಳ ಮೂಲಕ ತಿಳಿದುಕೊಳ್ಳುತ್ತೇನೆ. ನಾನು ನಿಮ್ಮ ಪ್ರತಿಸ್ಪರ್ಧಿ ಪತ್ರಿಕೆಯ ಚಂದಾದಾರನಾಗಿದ್ದೆ. ಆದರೆ ಅದು ಪೂರ್ವಗ್ರಹಪೀಡಿತ ವರದಿ ಪ್ರಕಟಿಸುವುದು ಮನವರಿಕೆಯಾದ ನಂತರ ಅದನ್ನು ಓದುವುದನ್ನು ಬಿಟ್ಟು ನಿಮ್ಮ ಪತ್ರಿಕೆಗೆ ಬದಲಾದೆ. ಆದರೆ ಈಗ ನನಗೆ ಅನಿಸುತ್ತಿದೆ, ನಿಮ್ಮ ಪತ್ರಿಕೆಯೂ ಅದೇ ಪೂರ್ವಗ್ರಹದಿಂದ ಬಳಲುತ್ತಿದೆ ಎಂದು. ಯಾವ ತಂಡದ ಪರ – ವಿರುದ್ಧ ನಿಲುವು ತಾಳದೇ, ಸತ್ಯನಿಷ್ಠ ವರದಿಗಾರಿಕೆಯನ್ನು ನಾನು ಇಷ್ಟಪಡುತ್ತೇನೆ. ನಾನು ಸಂಪಾದಕ ಫ್ರಿತ್ ಅವರು ವರ್ಲ್ಡ್ ಕಪ್ ಆರಂಭವಾಗುವುದಕ್ಕೆ ಮುನ್ನ ಬರೆದ ವರದಿಯನ್ನು ಪ್ರಸ್ತಾಪಿಸುತ್ತಿದ್ದೇನೆ. ಅವರು ಭಾರತ ತಂಡವನ್ನು ಬಗ್ಗೆ ಕೆಟ್ಟದಾಗಿ ಚಿತ್ರಿಸಿದರಷ್ಟೇ ಅಲ್ಲ, ವರ್ಲ್ಡ್ ಕಪ್ ಪಂದ್ಯಗಳಿಂದ ಭಾರತವನ್ನು ಹಿಂದಕ್ಕೆ ಕರೆಯಿಸಬೇಕು ಎಂದೂ ಬರೆದರು. 1948 ರಲ್ಲಿ ಇಂಗ್ಲೆಂಡ್ ತಂಡವನ್ನು ಆಸ್ಟ್ರೇಲಿಯಾ ಕೇವಲ 52 ರನ್ ಗಳಿಗೆ ಔಟ್ ಮಾಡಿತು. ಆಗ ಯಾರೂ ಸಹ ಇನ್ನು ಮುಂದೆ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಆಡ ಕೂಡದೆಂದು ಹೇಳಲಿಲ್ಲ. ಇದೇ ವರ್ಷ ನಡೆದ ಏಕದಿನದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡನ್ನು ಸೋಲಿಸಿರುವುದು ಗೊತ್ತಿದ್ದರೂ, ಭಾರತ ತಂಡವನ್ನು ಟೂರ್ನಮೆಂಟ್ ನಿಂದ ವಾಪಸ್ ಕರೆಯಿಸಿಕೊಳ್ಳಬೇಕು ಎಂಬ ಫ್ರಿತ್ ವಾದವನ್ನು ಒಪ್ಪಲಾಗುವುದಿಲ್ಲ. ಫ್ರಿತ್ ಅವರು ಯಾವ ತಂಡದ ಬಗ್ಗೆ ಕೆಟ್ಟದಾಗಿ ಬರೆದಿದ್ದಾರೋ, ಯಾವ ತಂಡವನ್ನು ಟೂರ್ನಮೆಂಟ್ ನಿಂದ ಹೊರಗಿಡಬೇಕು ಎಂದು ಬರೆದಿದ್ದಾರೋ, ಆ ತಂಡ ಇಂದು ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನ್ನು ಸೋಲಿಸಿ ವರ್ಲ್ಡ್ ಕಪ್ ಗೆದ್ದಿದೆ. ‘ವಿಸ್ಡೆನ್ ಕ್ರಿಕೆಟ್ ಮಂತ್ಲಿ’ ಮ್ಯಾಗಜಿನ್ ಭಾರತ ತಂಡದ ಬಗ್ಗೆ ಬರೆದ ಆಕ್ಷೇಪಾರ್ಹ ಸಾಲುಗಳನ್ನು ನಾನು ಈ ಪತ್ರದೊಂದಿಗೆ ಮಾರ್ಕ್ ಮಾಡಿ ಲಗತ್ತಿಸಿದ್ದೇನೆ. ಉತ್ತಮ ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಮತ್ತು ಕ್ರೀಡಾ ಮನೋಭಾವವನ್ನು ಮೆರೆಯುವುದಕ್ಕಾಗಿ, ಫ್ರಿತ್ ಅವರು ತಾವು ಬರೆದ ವರದಿಯನ್ನು ತಿನ್ನಬೇಕೆಂದು ಒತ್ತಾಯಿಸುತ್ತೇನೆ. ಬೇಕಾದರೆ ಅವರು ರುಚಿಗಾಗಿ ಚಾಕಲೇಟ್ ಅಥವಾ ಉಪ್ಪು-ಖಾರವನ್ನು ಸವರಿಕೊಳ್ಳಲಿ. ತಮ್ಮ ಅಕ್ಷರ ಅಥವಾ ವರದಿಯನ್ನು ಸೇವಿಸುವ ಫೋಟೋವನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಧೈರ್ಯವನ್ನು ಅವರು ಮೆರೆಯಲಿ. ಹಾಗೆ ಮಾಡಿದರೆ ನಾನು ಆ ಪತ್ರಿಕೆ ಓದುವುದನ್ನು ಮುಂದುವರಿಸುತ್ತೇನೆ ಮತ್ತು ಅವರನ್ನು ಗೌರವದಿಂದ ಕಾಣುತ್ತೇನೆ. ಫ್ರಿತ್ ಅವರ ಹಾಗೆ ನಾನೂ ಸಹ ಭಾರತ ಕಪ್ ಗೆಲ್ಲಬಹುದು ಎಂದು ಅಂದುಕೊಂಡಿರಲಿಲ್ಲ. ಆದರೆ ಅಷ್ಟಕ್ಕೇ ಭಾರತವನ್ನು ಟೂರ್ನಮೆಂಟ್ ನಿಂದ ಹೊರಹಾಕಬೇಕು ಎಂಬ ಉದ್ಧಟತನದ, ಕೀಳು ಅಭಿರುಚಿಯ, ಧಾಷ್ಟ್ಯದ ಮಾತುಗಳನ್ನು ಫ್ರಿತ್ ಅವರಿಂದ ನಿರೀಕ್ಷಿಸಿರಲಿಲ್ಲ. ಅದೇನೇ ಇರಲಿ, ತಾವು ಬರೆದ ಕೆಟ್ಟ ವರದಿಯನ್ನು ತಿನ್ನುವುದರ ಮೂಲಕ, ಫ್ರಿತ್ ಅವರು ಉತ್ತಮ ಕ್ರೀಡಾ ಮನೋಭಾವನೆಯನ್ನು ಮೆರೆದು ಪ್ರಾಯಶ್ಚಿತ ಮಾಡಿಕೊಳ್ಳಬೇಕು. ಅಂಥ ಎದೆಗಾರಿಕೆಯನ್ನು ಸಂಪಾದಕರು ಪ್ರದರ್ಶಿಸುವರೇ ?’

ಡೇವಿಡ್ ಫ್ರಿತ್ ಗೆ ಬೇರೆ ದಾರಿಯೇ ಇರಲಿಲ್ಲ. ಮಾನ್ ಸಿಂಗ್ ಪತ್ರದ ಜತೆಗೆ ತನ್ನ ವರದಿಯನ್ನು ತಿನ್ನುತ್ತಿರುವ ಫೋಟೋವನ್ನು ಪತ್ರಿಕೆಯಲ್ಲಿ ಪ್ರಕಟಿಸಿ, ಅಸಾಧಾರಣ ಕ್ರೀಡಾ ಮನೋಭಾವ ಮೆರೆದು, ‘ಉಪ್ಪು ತಿಂದವನು ನೀರು ಕುಡಿಯಲೇಬೇಕು’ ಎಂಬುದನ್ನು ಒಪ್ಪಿಕೊಂಡ. ‘Eating our own words’ ಅಂದ್ರೆ ಇದೇ ಎಂದು ತನ್ನನ್ನೇ ಗೇಲಿ ಮಾಡಿಕೊಂಡ.

ಈ ಎರಡು ಸಂಚಿಕೆಗಳನ್ನು ಜೋಪಾನವಾಗಿ ಎತ್ತಿಟ್ಟುಕೊಂಡೆ. ಇವು ನಮಗೆ ತೋರುದೀಪಗಳಾಗಬೇಕು !